ಹಳ್ಳಿಯ ಸರ್ಕಾರಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಮ್ಮಂತಹ ಶಿಕ್ಷಕರಿಗೆ ಅನೇಕ ಅನುಕೂಲಗಳಿವೆ. ಹಳ್ಳಿಗಳಲ್ಲಿನ ಜನರು ನಮ್ಮೊಂದಿಗೆ ವ್ಯವಹರಿಸುವಾಗ ಪ್ರತಿಫಲಾಪೇಕ್ಷೆ ಇಲ್ಲದೇ ಮುಕ್ತವಾಗಿ ಮಾತಾಗುತ್ತಾರೆ. ದೇವರ ಮುಂದೆ ನಿವೇದಿಸಿಕೊಳ್ಳುವಂತೆ ಎಲ್ಲವನ್ನೂ ನಮ್ಮೊಂದಿಗೆ ಹಂಚಿಕೊಳ್ಳುತ್ತಾರೆ. ಹಿರಿ ಮಗಳ ಚೊಚ್ಚಲ ಬಾಣಂತನವನ್ನು ಅಮೂಲಾಗ್ರವಾಗಿ ವಿವರಿಸುವುದರೊಂದಿಗೆ ನಮ್ಮ ಕುಲ ಗೋತ್ರದ ವರೆಗೂ ವಿಚಾರಿಸಿ ವಧು ವರಾನ್ವೇಷಣೆ ಕೂಡ ಮಾಡುತ್ತಾರೆ.
ತಾವು ಬೆಳೆದ ಫಸಲಿನಲ್ಲಿ ಒಂದಿಷ್ಟು ನೀಡಿ ದಾನಶೂರತನ ಮೆರೆಯುತ್ತಾರೆ. ತಮ್ಮ ಮನೆಯ ಶುಭಸಮಾರಂಭಗಳಿಗೆ ಜಾತ್ರೆ ಜಾಗರಣೆಗಳಿಗೆ ನಮ್ಮನ್ನು ಆಹ್ವಾನಿಸಿ ಆದರಿಸುತ್ತಾರೆ. ನಮ್ಮ ಮನೆಯ ಸಮಾರಂಭಗಳಿಗೂ ಗಾಡಿ ಕಟ್ಟಿ(ಮಾಡಿ)ಕೊಂಡು ಆಗಮಿಸಿ ಆಶೀರ್ವದಿಸುತ್ತಾರೆ.
'ಪಾಪ..! ಸಿಟಿಲಿ ಬೆಳೆದವರು.. ಹೊಲಪಲ ಗೊತ್ತಿಲ್ಲ..ತುಸು ಕಾಳು ಕಡಿ, ಹಣ್ಣು ಕಾಯಿ,ಹಾಲು-ಹೈನು ತಿನ್ನಲಿ' ಅಂತ ಹಾರೈಸುತ್ತಾರೆ. ಹೀಗಾಗಿ ಹಳ್ಳಿಮೇಷ್ಟ್ರುಗಳಿಗೆ ಗ್ರಾಮದ ಜನರಿಂದ ತುಸು ಪಾರುಪತ್ಯ ಜಾಸ್ತಿನೇ.
ಹೀಗಿರುವಾಗ ನಮ್ಮ ಶಾಲೆಯ ಮುಂದಿನ ಹೊಲದಲ್ಲಿ ಒಂದು ಬೋರೆ ಹಣ್ಣಿನ(ಬಾರಿ ಕಾಯಿ) ಗಿಡವಿತ್ತು. ಕೆಲ ವಿದ್ಯಾರ್ಥಿಗಳು ಮಧ್ಯಾಹ್ನ ಊಟ ಮುಗಿಸಿ ಆ ಗಿಡಕ್ಕೆ ಕಲ್ಲು ಬೀರಿ ಹಣ್ಣುಗಳನ್ನು ಜೇಬಿನಲ್ಲಿಳಿಸಿ ಶಾಲೆಗೆ ಹಾಜರಾಗುತ್ತಿದ್ದರು. ತರಗತಿ ಪ್ರಾರಂಭದ ಮುನ್ನ ಅವರು ತಿಂದ ಬೋರೆ ಹಣ್ಣುಗಳು ತನ್ನ ತಿರುಳು ಕಳೆದುಕೊಂಡು ಬೀಜವಾಗಿ ಬೆಂಚಿನ ಅಂಚಿಗೋ, ಬೆಂಚಿನ ಸುತ್ತಲೋ ಬಿದ್ದಿರುತ್ತಿದ್ದವು. ಬೆಳಿಗ್ಗೆ ಅವನ್ನು ಗುಡಿಸಲು ಬೇರೆ ವಿದ್ಯಾರ್ಥಿಗಳು(ಅಥವಾ ಅದೇ ವಿದ್ಯಾರ್ಥಿಗಳು) ಹರಸಾಹಸ ಪಡುತ್ತಿದ್ದರು. ಎಷ್ಟು ಸಲ ಹೇಳಿದರೂ ಬೈದರೂ ಇದು ಮಾತ್ರ ಬದಲಾಗಲಿಲ್ಲ.. ಕೊನೆಗೆ ಕಿಟಕಿಯಾಚೆ ಎಸೆಯಲು ಹೋಗಿ ಮತ್ತೊಬ್ಬರ ಬೆಂಚಿನ ಸುತ್ತಲೂ ಬೀಳುತ್ತಿದ್ದವು. ಇದರಿಂದ ಬರಬರುತ್ತ ತರಗತಿ ಪ್ರಕ್ರಿಯೆಗೆ ತೊಂದರೆಯಾಗತೊಡಗಿತು. ಅಲ್ಲದೇ ಹೊಲದ ಮಾಲೀಕರೂ ಸಹ ಪದೇ ಪದೇ ತಾಕೀತು ಮಾಡಲಾರಂಭಿಸಿದರು. "ನೀವು ಮಾಸ್ತರಿಕಿ ಮಾಡ್ತಿದ್ದೀರೋ ಇಲ್ಲ ನಿದ್ದಿ ಮಾಡ್ತಿದ್ದೀರೋ. ಚುಕ್ಕೋಳು ಹೊಲಕ್ ಬಂದ ಗಿಡ ಎಲ್ಲ ಹಾಳ ಮಾಡಾತಾರ" ಅಂತ ನಮಗೇ ಬೈದು ಹೋಗುತ್ತಿದ್ದರು.
"ನಿಮಗ ಬೇಕಾದ್ರ ಹೇಳ್ರಿ ನಾವ ಕಿತ್ತಿ ಕೊಡ್ತೇವ್..ಆದ್ರ ಎಲ್ಲ ಚುಕ್ಕೋಳನ ಬಿಡಬ್ಯಾಡ್ರಿ" ಅಂತ ಅವರ ಅಂಬೋಣ. ಹೀಗಾಗಿ ಒಂದು ನಿಯಮ ಮಾಡಲಾಯಿತು. ಊಟದ ಅವಧಿಯಲ್ಲಿ ಮಾತ್ರ ಬೋರೆ ಹಣ್ಣು ತಿನ್ನುವುದು ಮತ್ತು ತರಗತಿ ಕೋಣೆಯಲ್ಲಿ ಒಂದೂ ಬೀಜ ಉಳಿಯದಂತೆ ಸ್ವಚ್ಛಗೊಳಿಸುವುದು. ಕೆಲವೇ ವಿದ್ಯಾರ್ಥಿಗಳು ಹೊಲದ ಮಾಲೀಕರಿಂದ ಹಣ್ಣು ಪಡೆದು ಅದರಲ್ಲೇ ನಾಲ್ಕಾರು ಹಣ್ಣುಗಳನ್ನು ತರಗತಿಯ ಇತರ ವಿದ್ಯಾರ್ಥಿಗಳಿಗೂ ಹಾಗೂ ಕೆಲ ಹಣ್ಣುಗಳನ್ನು ಶಿಕ್ಷಕರಿಗೂ ನೀಡಿ ತಿನ್ನುವುದು. ಏಕೆಂದರೆ ಇದರಿಂದ ಎಲ್ಲ ವಿದ್ಯಾರ್ಥಿಗಳೂ ಬೋರೆ ಹಣ್ಣಿನ ಗಿಡಕ್ಕೆ ಹೋಗಿ ತರಲೆ ಮಾಡುವುದು ತಪ್ಪುತ್ತಿತ್ತು.
ಆದರೆ ಮುಂದಿನ ವಾರದಲ್ಲಿ ಎಲ್ಲವೂ ತಲೆಕೆಳಗಾಯಿತು. ಕೆಲ ವಿದ್ಯಾರ್ಥಿಗಳು ಸೀದಾ ಹೋಗಿ "ನಮ್ಮ ಸರ್ರಿಗೆ ಬಾರಿಕಾಯಿ ಬೇಕಂತ್ರಿ..ಛೋಲೋ ಹಣ್ಣನೂ ಆರಿಸಿ ತೊಗೋತೀವ್ರಿ" ಅಂತ ಮಾಲೀಕರಿಗೆ ಹೇಳಿ ಅರ್ಧ ಕೆಜಿ ವರೆಗೆ ಬೋರೆ ಹಣ್ಣು ತಂದು ಎಲ್ಲವನ್ನೂ ತಾವೇ ತಿಂದು ಖಾಲಿ ಮಾಡಲು ಶುರು ಮಾಡಿದರು. ನಾವು ಆಗಾಗ ಆ ಮಾಲೀಕ ಕಂಡಾಗ "ಏನ್ರೀ ಈಗೇನ್ ತೊಂದ್ರಿಲ್ಲಲ..?" ಅಂತಂದಾಗ ಆ ಮಾಲೀಕ "ಹೇ.. ಚುಕ್ಕೋಳ ಭಾಳ ಶಾಣ್ಯಾ ಆಗ್ಯಾವ್ರೀ.. ಮೊದ್ಲಿನ್ಹಂಗ್ ಈಗ ಎಲ್ಲಾರು ಬರೂದಿಲ್ಲ..ಅಂದ್ಹಂಗ ನಮ್ಮ ಬಾರಿ ಕಾಯಿ ಹೆಂಗದಾವ್ರೀ?" ಅಂತಂದ್ರು. ನಾವು "ನಾವೇನು ತಿಂದಿಲ್ಲ..ಚುಕ್ಕೋಳ ಬಂದ್ರ ನಾಕ್ ಹಣ್ಣ ಕೊಡ್ರಿ.. ನಮಗೇನ್ ಬ್ಯಾಡ್ರಿ" ಅಂತಂದೆ.
"ಅರೇ.. ನೀವs ಹೇಳಿರೆಂತ ದಿನ ಬಂದ ಒಯ್ತಾರಲ್ರೀ.. ನಿಮಗs ಕೊಟ್ಟಿಲ್ಲೇನ್ರೀ" ಆತ ಅಂದ.
ನಮಗೆ ಈಗ ಎಲ್ಲ ಅರ್ಥವಾಗತೊಡಗಿತು. ನಮ್ಮ ಹೆಸರು ಹೇಳಿ ಇವರು ದಿನಾ ಬೋರೆಹಣ್ಣು ಅಧಿಕೃತವಾಗಿ ಕದಿಯುತ್ತಿದ್ದಾರೆ ಅಂತ. ನಿಯಮಗಳು ಇರುವುದೇ ಉಲ್ಲಂಘಿಸುವುದಕ್ಕೆ ಎಂಬ ಆಂಗ್ಲ ಸೂಕ್ತಿಯಂತೆ ಈ ತರಲೆ ವಿದ್ಯಾರ್ಥಿಗಳು ನಮ್ಮ ಹೆಸರು ಹೇಳಿ ತಾವು ಹಣ್ಣು ತಿಂದು ತೇಗುತ್ತಿದ್ದರು. ಸದ್ಯದ ಪರಿಸ್ಥಿತಿಯೂ ಹಾಗೇ ಇದೆ. ಯಾರದೋ ಹೆಸರು ಹೇಳಿ ತಮ್ಮ ಕೆಲಸ ಮುಗಿಸಿಕೊಂಡು ಹೋಗುವ ಜನ ಒಂದು ಕಡೆ. ಯಾರ ಹೆಸರಿನ ಹಂಗಿಲ್ಲದೇ ಬದುಕುವ ಜನ ಇನ್ನೊಂದು ಕಡೆ. ಶಾಲೆಯ ಕೆಲ ನಿಯಮಗಳು ವಿದ್ಯಾರ್ಥಿಗಳನ್ನು ಸಂಪೂರ್ಣವಾಗಿ ಕಟ್ಟಿಹಾಕಲಾರವು. ಅವರ ಪ್ರಕಾರ ಅವರ ಆಸೆಯನ್ನು ಈಡೇರಿಸಿಕೊಳ್ಳಲು ನಮ್ಮ ಹೆಸರು ಸಹಾಯ ಮಾಡಿತಷ್ಟೇ. ನಮ್ಮ ಪ್ರಕಾರ ಅವರು ಬೋರೆ ಹಣ್ಣಿನ ಕಳ್ಳರು. ಅವರ ಪ್ರಕಾರ ಬೋರೆ ಹಣ್ಣು ತಿನ್ನಲೋಸುಗ ಒಂದು ರಕ್ಷಣಾತ್ಮಕ ಕಲೆಯ ಕಲಾಕಾರರು.
ಇಷ್ಟೆಲ್ಲ ಗೊತ್ತಾದ ಮೇಲೂ ನಾವು ಅವರನ್ನು ಬೈಯಲಿಲ್ಲ.. ಏಕೆಂದರೆ ಬಾಲ್ಯದ ಸವಿಗಳಲ್ಲೊಂದು ಅಪರೂಪ ಎಂಬ ಈ ಕಳ್ಳತನ ಇರಲೇಬೇಕು. ಕದ್ದು ತಿಂದರೂ ಮುದ್ದು ಮನಸಿನ ಮಕ್ಕಳ ಬೈಯ್ಯುವದಾದರೂ ಹೇಗೆ.? ನಾವೇನೂ ಕದ್ದಿಲ್ವ..? ಹೋಳಿ ಹುಣ್ಣಿಮೆಯಲ್ಲಿ ಕಾಮಣ್ಣನ ದಹಿಸಲು ಓಣಿಯ ಕುರುಳು ಕಟ್ಟಿಗೆ ಕದ್ದಿದ್ದೇವೆ. ಪಕ್ಕದ ಗೆಳೆಯನ ಉತ್ತರ ಪತ್ರಿಕೆಯಿಂದ ಉತ್ತರಗಳನ್ನು ಕದ್ದಿದ್ದೇವೆ. ಯಾರೂ ಇಲ್ಲದನ್ನೂ ಗಮನಿಸಿ ಕಡಲೆ ಸೊಪ್ಪು(ಸುಲಿಗಾಯಿ) ಕದ್ದಿದ್ದೇವೆ. ಆದರೆ ಆರೋಪ ನಮ್ಮ ಮೇಲಿಲ್ಲ.. ಬಂದರೂ ಕೇಳಲ್ಲ..ಹಾಗೇ ಶಾಲಾ ಜೀವನ. ಆದರೆ ನಮ್ಮ ಹೆಸರು ಹೇಳಿ ನಮಗೂ ಕೊಡದೇ ಎಲ್ಲ ಬೋರೆ ಹಣ್ಣು ತಿಂದ ಬೋರೆ ಹಣ್ಣಿನ ಕಳ್ಳರನ್ನು ಕ್ಷಮಿಸಬೇಕೆ? ಬೇಡವೇ? ಗೊತ್ತಾಗುತ್ತಿಲ್ಲ..
©ಲೇಖಕರು :ಸಚಿನ್ ಕುಮಾರ ಬ.ಹಿರೇಮಠ
No comments:
Post a Comment