ಪ್ರಮುಖ ಸಂದೇಶ

ಎಲ್ಲ ಶಿಕ್ಷಕರು ತಮ್ಮ ವರ್ಕ್ ಫ್ರಂ ಹೋಮ್ ಕೆಲಸಗಳನ್ನು ತಮ್ಮ ವೈಯಕ್ತಿಕ ಬ್ಲಾಗ್ ಗೆ ಅಪಲೋಡ್ ಮಾಡುವುದು ಕಡ್ಡಾಯ. ಮುಖ್ಯಶಿಕ್ಷಕರು ತಮ್ಮ ಶಾಲಾ ಬ್ಲಾಗ್ ರಚಿಸಿ ಅದರಲ್ಲಿ ತಮ್ಮ ಶಿಕ್ಷಕರ ಬ್ಲಾಗ್‌ಗಳನ್ನು ಲಿಂಕ್ ಮಾಡುವುದು.

Thursday, 13 June 2019

ಫೇಸ್‌ಬುಕ್ ಪಾಠಟಿಪ್ಪಣಿ-14 : ಅರಳದ ಹೂವು ಈ ಲಕ್ಷ್ಮಣ...


ತರಗತಿಯೊಳಗೆ ಆತ ಸದಾ ಹಿಂದೆ ಕುಳಿತುಕೊಳ್ಳುತ್ತಿದ್ದ. ಕೆದರಿದ ಕೂದಲುಗಳ ಆಸೆ ಕಂಗಳ ಹುಡುಗ. ತನ್ನನ್ನು ಗದರುವವರ ಜೊತೆ ಬಯಸದೇ ಏಕಾಂಗಿಯಾಗಿರುತ್ತಿದ್ದ ಆತ, ಶಿಕ್ಷಕರೊಂದಿಗೆ ಮಾತ್ರ ಬಹಳವೇ ಆತ್ಮೀಯತೆಯಿಂದ ಇರುತ್ತಿದ್ದ. ಪ್ರತಿ ದಿನವೂ ಶಾಲೆಗೆ ತಪ್ಪದೇ ಬರುತ್ತಿದ್ದನಾದರೂ ತರಗತಿಯ ಚಟುವಟಿಕೆಗಳಲ್ಲಿ ಆತನದ್ದು ಅತೀವ ನಿರಾಸಕ್ತಿ. ನಾಲ್ಕೈದು ಸಲ ಹೇಳಿದಾಗ ಒಂದು ಬಾರಿ ಅವನಿಗೆ ಅರ್ಥವಾಗುತ್ತಿತ್ತು. ನಿಧಾನ ಗತಿಯ ಕಲಿಕೆಯಿರುವ ವಿದ್ಯಾರ್ಥಿ ಅಂತ ಮೇಲೆ ನೋಡಿದರೆ ಗೊತ್ತಾಗುತ್ತಿತ್ತು. ಇಂಥ ವಿದ್ಯಾರ್ಥಿಗಳು ಕೆಲವೇ ಕೆಲವರು ತರಗತಿಗಳಲ್ಲಿದ್ದರೂ ಈತ ಮಾತ್ರ ಅತೀವ ನಿಧಾನಗತಿ ತೋರುತ್ತಿದ್ದ. ಇಂಥವರ ಮೇಲೆ ಕ್ರಿಯಾ ಸಂಶೋಧನೆ ಮಾಡಬೇಕೂಂತ ನಾನು ಸಿದ್ಧನಾದೆ. ನಮ್ಮ ಇಲಾಖೆ ಸೂಚಿಸಿದಂತೆ ಕ್ರಿಯಾ ಸಂಶೋಧನೆಯ ರೂಪುರೇಷೆ ಸಿದ್ಧಗೊಳಿಸಿ ಆತನನ್ನು ಸೂಕ್ಷ್ಮವಾಗಿ ತರಗತಿಯಲ್ಲಿ ಅವಲೋಕಿಸಿದಾಗ ಅವನಿಗೆ ಡಿಸ್ಲೆಕ್ಸಿಯಾ ಎಂಬ ಸಣ್ಣ ಕಲಿಕಾ ನ್ಯೂನತೆ ಇತ್ತು. ನನಗೆ ಆಗ ನೆನಪಾಗಿದ್ದು ಅಮೀರ್ ಖಾನ್ ಅಭಿನಯದ 'ತಾರೆ ಜಮೀನ್ ಪರ್' ಚಲನಚಿತ್ರ. ಇದೊಂದು ಸುಲಭವಾದ ಕಲಿಕಾ ನ್ಯೂನತೆ. ನಾನೂ ಅಮೀರ್ ಖಾನ್ ನಂತೆ ಇವನನ್ನು ಕಡಿಮೆ ಅವಧಿಯಲ್ಲಿ ತಿದ್ದಬಲ್ಲೆ ಎಂದುಕೊಂಡಿದ್ದೆ. ಆದರೆ ಎಲ್ಲವೂ ತಲೆಕೆಳಗಾಯಿತು. ಈತನ ಹಿನ್ನೆಲೆಯೇ ಬೇರೆಯಾಗಿತ್ತು.

ಈತನ ಹೆಸರು ಲಕ್ಷ್ಮಣ. ಈತನ ತಂದೆ ಚಂದಪ್ಪ, ದಿನಗೂಲಿಯವ. ಜಾತಿಯಿಂದ ದಲಿತ. ಇತರರ ಮನೆಯ ಸುಣ್ಣ ಬಣ್ಣ ಮಾಡುವುದರ ಜೊತೆಗೆ ಅಡವಿ ಕೆಲಸ,ಹೊಲದ ಕೆಲಸ ಯಾವುದೇ ಕೆಲಸ ಸಿಕ್ಕರೂ ಅತೀ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದ. ನಾಲ್ಕು ಮಕ್ಕಳಲ್ಲಿ ಲಕ್ಷ್ಮಣ ಎರಡನೆಯವ. ಮನೆಯಲ್ಲಿ ತೀರಾ ಬಡತನ. ಕೆಲವು ಸಲ ದೂರದ ಮುಂಬಯಿಗೆ ಗುಳೇ ಹೋಗಿ ಹೊಟ್ಟೆ ಕಟ್ಟಿಕೊಂಡಿದ್ದುಂಟು. ಹೀಗಿರುವಾಗ ಲಕ್ಷ್ಮಣನೂ ಕೆಲ ಸಲ ಕೂಲಿಗೆ ಹೋಗುತ್ತಿದ್ದುಂಟು. ಆದರೆ ಚಂದಪ್ಪನಿಗೆ ತಿಳಿ ಹೇಳಿದ್ದರಿಂದ ಆತ ಲಕ್ಷ್ಮಣನನ್ನು ರಜೆ ಹೊರತು ಪಡಿಸಿ ಕೂಲಿಗೆ ಕಳಿಸುತ್ತಿರಲಿಲ್ಲ.

ಲಕ್ಷ್ಮಣ ಅಕ್ಷರಗಳನ್ನು ಗುರುತಿಸುವಲ್ಲಿ ಎಡವುತ್ತಿದ್ದ. ಕನ್ನಡದಲ್ಲಿ ಗ,ಸ,ತ,ಡ,ಶ,ಟ, ಮುಂತಾದ ಅಕ್ಷರಗಳು ಈತನ ಬರವಣಿಗೆಯಲ್ಲಿ ಪಾರ್ಶ್ವವಿಪರ್ಯಾಯಕ್ಕೆ ಒಳಪಡುತ್ತಿದ್ದವು. ಇಂಗ್ಲಿಷ್ ಅಕ್ಷರಗಳ ಸ್ಥಿತಿಯಂತೂ ಕನ್ನಡಕ್ಕಿಂತ ಭಿನ್ನವಾಗಿತ್ತು. ಇವನ ಈ ನ್ಯೂನತೆ ಹೋಗಲಾಡಿಸಲು ಕಾಪಿ ಬರಹ ಮಾಡಿಸಬೇಕೆಂದು ಕೊಂಡೆ. ಅದರಂತೆ ನಾನು ಅವನ ಕೈ ಹಿಡಿದೇ ಬರೆಸಲು ಪ್ರಾರಂಭಿಸಿದೆ. ಮೊದಮೊದಲು ಆತ ತುಂಬ ಸಂಕೋಚಪಟ್ಟುಕೊಳ್ಳುತ್ತಿದ್ದ. ಬರಬರುತ್ತ ಸರಾಗವಾಗಿ ಬರೆಯತೊಡಗಿದ‌. ಆದರೂ ನಾನು ಅವನ ಕೈ ಬೆರಳು ಹಿಡಿದಾಗ ಮತ್ತೇ ಆತ ಬೆಪ್ಪಾಗಿ ನೋಡುತ್ತಿದ್ದ.

ಒಂದು ದಿನ ಕಾಪಿ ಪುಸ್ತಕದಲ್ಲಿ ಈತ ತಪ್ಪಾಗಿ ಬರೆಯುತ್ತಿದ್ದ ಅಕ್ಷರಗಳನ್ನು ನಾನು ಅವನ ಕೈಬೆರಳು ಹಿಡಿದು ಬರೆಸಲನುವಾದೆ. ಆಗ ಆತ
"ಸರ್ ನೀವ್ ಸ್ವಾಮಗೋಳ್ರೀ?" ಅಂತ ಅಂದ.
ನಾನು "ಹೌದು" ಅಂದೆ.
"ಸರ್ ಸ್ವಾಮಗೋಳ ನಮ್ಮ ಮಂದೀನ ಮುಟ್ಟಸ್ಕೊಳ್ಳಾಂಗಿಲ್ರಿ" ಅಂದ ಆತ.
ನನಗೆ ಒಂದು ಕ್ಷಣ ಆಶ್ಚರ್ಯ ಗಾಗೂ ತಬ್ಬಿಬ್ಬಾಯಿತು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಂತಹ ವಿಷಣ್ಣ ಭಾವನೆಗಳನ್ನ ಅದ್ಹೇಗೆ ಹುಟ್ಟು ಹಾಕುತ್ತಾರೋ ಗೊತ್ತಿಲ್ಲ..
ಅದಕ್ಕೆ ನಾನು,
"ಲಕ್ಷ್ಮಣ, ಅದೆಲ್ಲ ತಪ್ಪು.. ನಾ ನಿಂಗ ಮುಟ್ಟಿನಿಲ್ಲೊ.. ಏನೂ ತಪ್ಪಿಲ್ಲ..ನಾವೆಲ್ಲ ಮನಷ್ಯಾರು.. ಜಾತಿಗೀತಿ ಏನೂ ಮಾಡಬಾರ್ದು.. ಹಿಂಗೆಲ್ಲ ಇನ್ನೊಮ್ಮೆ ಮಾತಾಡ್ಬಾರ್ದು..ನೀ ಸರಿಯಾಗಿ ಅಕ್ಷರ ಬರೆಯೊದ್ ಮಾತ್ರ ಕಲಿ" ಅಂತ್ಹೇಳಿದೆ. ಅಂದಿನ ಅಶ್ಪೃಶ್ಯತೆ ಇಂದಿಲ್ಲವಾದರೂ ಪಟ್ಟ ಬದ್ಧ ಹಿತಾಸಕ್ತಿಗಳು ಹೇಗೆಲ್ಲಾ ಜಾತಿಜಾತಿಗಳ ನಡುವೆ ವಿಷಮತೆ ಬಿತ್ತುತ್ತಿವೆಯಲ್ಲ ಅಂತ ನೋವೂ ಆಯಿತು. ನನ್ನ ಕ್ರಿಯಾ ಸಂಶೋಧನೆಯ ಫಲವಾಗಿ ಉಳಿದ ವಿದ್ಯಾರ್ಥಿಗಳಿಗೆ ಪರಿಹಾರ ಸಿಕ್ಕಿತಾದರೂ ಲಕ್ಷ್ಮಣ ಮಾತ್ರ ಸವಾಲಾಗಿದ್ದ. ಆದರೆ ಬರಬರುತ್ತ ಲಕ್ಷ್ಮಣ ಎಷ್ಟು ಬದಲಾದನೆಂದರೆ ಎಂಟನೆಯ ತರಗತಿವರೆಗೂ ಇಡೀ ಶಾಲೆಯ ಸ್ವಚ್ಛತೆ, ಭದ್ರತೆ ಅವನದೇ. ಶಾಲಾ ಲೈಬ್ರರಿಯಿಂದ ಪುಸ್ತಕಗಳನ್ನೂ ಓದಲು ಒಯ್ಯುತ್ತಿದ್ದ. ವಿಜ್ಞಾನದಲ್ಲಿನ ಪ್ರತೋಗಗಳಿಗೆ ಉಪಕರಣಗಳನ್ನು ಜೋಡಿಸುತ್ತಿದ್ದ‌. ಓದಿನಲ್ಲಿ ತುಸುವೇ ತುಸು ಪ್ರಗತಿಯಾದರೂ ನಿಧಾನ ಕಲಿಕೆ ಆತನದ್ದಾಗಿತ್ತು.. ಈಗೀಗ ಕೆಲವೇ ಕೆಲವು ಇಂಗ್ಲಿಷ್ ಅಕ್ಷರಗಳನ್ನು ಬರೆಯಲು ಮಾತ್ರ ಅವನು ಹರಸಾಹಸ ಪಡುತ್ತಿದ್ದ. ಜಾತಿ ಬಗ್ಗೆ ಅವನಲ್ಲಿ ಯಾವ ಸಂದೇಹವೂ ಇರಲಿಲ್ಲ. ಶಾಲೆಯಲ್ಲಿ ತನ್ನ ಏಕಾಂಗಿತನ ಕಳೆದುಕೊಂಡು ಎಲ್ಲರೊಂದಿಗೆ ಬೆರೆತು ಆಟವಾಡುತ್ತಿದ್ದ. ತನ್ನ ಕುಟುಂಬದ ಬಗ್ಗೆ ಅತೀವ ಪ್ರೀತಿ ಹೊಂದಿದ್ದ ಆತ "ಸರ್ ನಮ್ಮಪ್ಪ ಭಾಳ ಕುಡಿತಾನ್ರೀ.. ಈ ಸಲ ಮಳಿ ಇಲ್ರಿ..ಬಂಬಯಿಗೋಗ್ಬೇಕು. ಸಾಲ ಮಾಡ್ಯಾಣ್ರಿ..ನಾ ಚಂದ್ ಓದಿ ನೋಕರಿ ಮಾಡ್ತೇನ್ರಿ"
ಅಂತ ಆಗಾಗ ಭಾವುಕನಾಗಿ ಹೇಳುತ್ತಿದ್ದ. ಹಾಗೇ ಆತ ಮಾತನಾಡುವಾಗ ನನಗೆ ನನ್ನ ಬಾಲ್ಯವೇ ಕಣ್ಣಮುಂದೆ ಬರುತ್ತಿತ್ತು. ನಾನು ಶಾಲೆಯಿಂದ ಬೀಳ್ಕೊಡುವಾಗ ಆತ ಪೆಚ್ಚುಮೋರೆ ಮಾಡಿಕೊಂಡಿದ್ದ.
"ಸರ್, ಮತ್ತ ಇಲ್ಲೇ ಬರ್ರಿ ಸರ್" ಅಂತ ಬೀಳ್ಕೊಟ್ಟಿದ್ದ.

ಮೊನ್ನೆ ಅದೇ ಶಾಲೆಯ ನನ್ನ ಸಹೋದ್ಯೋಗಿಗಳು ಭೇಟಿಯಾಗಿ ನಡೆದ ಅವಘಡದ ಬಗ್ಗೆ ಹೇಳಿದಾಗ ನನಗೆ ನಂಬಲಾಗಲಿಲ್ಲ. ಗ್ರಾಮದ ಬಂಧುಗಳ ಮದುವೆಯ ದಿನ  ಮದುವೆಗೆ ಬಂದ ಲಕ್ಷ್ಮಣ ಅಲ್ಲಿಯೇ ನಿಂತು ಅವೈಜ್ಞಾನಿಕ ಕನೆಕ್ಷನ್ ನಿಂದಾಗಿ ಹಿಡಿದ ತಂತಿಯಲ್ಲಿ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ದುರ್ಮರಣಕ್ಕೀಡಾಗ ಸಂಗತಿ ಕೇಳಿ ಎದೆ ಭಾರವಾಯಿತು‌. ಕಣ್ಣುಗಳಿಂದ ಆಶ್ರುಧಾರೆ ತಡೆಯಲಾಗಲಿಲ್ಲ. ದೇವರನ್ನೂ ಕ್ಷಮಿಸಲಾಗಲಿಲ್ಲ.. ಈಗಲೂ ಅನೇಕ ಸಲ ಲಕ್ಷ್ಮಣ ಇನ್ನೂ ಅಲ್ಲಿಯೇ ಆಡಿಕೊಂಡಿದ್ದಾನೆ ಎನ್ನುವಂತೆ ಅನ್ನಿಸುತ್ತದೆ. ಅವನ  ನೆನಪುಗಳ ಮೆರವಣಿಗೆ ಮತ್ತೇ ಮತ್ತೇ ಹೃದಯವನ್ನು ಹನಿಸುತ್ತದೆ...ಅರಳದ ಹೂವಾಗಿ ಲಕ್ಷ್ಮಣ ಸದಾ ನೆನಪಾಗುತ್ತಿದ್ದಾನೆ.

©ಲೇಖಕರು : ಸಚಿನ್‌ಕುಮಾರ ಬ.ಹಿರೇಮಠ

Thursday, 6 June 2019

ಫೇಸ್‌ಬುಕ್ ಪಾಠ ಟಿಪ್ಪಣಿ - 13 ಕಲ್ಲು ಕರಗಿದ ಸಮಯ...



ನಮ್ಮ ಶಾಲೆಯು ಎಲ್ಲ ಶಾಲೆಗಳಂತಲ್ಲ. ನಾವು ಅಂದುಕೊಂಡಂತೆ ಎಲ್ ಆಕಾರದಲ್ಲೋ, ಓ ಆಕಾರದಲ್ಲೋ,ಹೆಚ್ ಆಕಾರದಲ್ಲೋ‌ ಅಥವಾ ಯೂ ಆಕಾರದಲ್ಲೋ ಅಲ್ಲದ ಅಲ್ಲಲ್ಲಿ ಚಿಕ್ಕ ಮಕ್ಕಳು ಗೋಲಿ‌‌ ಆಡುವಾಗ ಜೋಡಿಸಿಟ್ಟ ಗೋಲಿಗಳಂತೆ ಅಲ್ಲೊಂದು ಇಲ್ಲೊಂದು ಇರುವ ತರಗತಿ ಕೋಣೆಗಳು. ಮೂರು ತರಗತಿ ಕೋಣೆಗಳ ನಡುವೆ ಎರಡು ರಥ ಬೀದಿಗಳು. ಉಳಿದ ಮೂರು ತರಗತಿಗಳು 300 ಮೀ ಅಂತರದ ಸ್ಮಶಾನದ ಸಮೀಪ, ಹಳ್ಳದ ದಂಡೆಯ ಮೇಲೆ. ಅಲ್ಲಿಂದಿಲ್ಲಿಗೆ ತಿರುಗಾಡುವುದರೊಳಗೆ ಹೆಚ್ಚು ಕಡಿಮೆ ಐದತ್ತು ನಿಮಿಷ ವ್ಯರ್ಥ. ಮಳೆಗಾಲದಲ್ಲಂತೂ ನಮ್ಮೆಲ್ಲರ ಪಾಡು ಹೇಳತೀರದು. ಅನೇಕ ಸಲ ಮಕ್ಕಳು ಹಾಗೂ ಶಿಕ್ಷಕರು ಜಾರಿ ಬಿದ್ದದ್ದೂ ಉಂಟು. ಪಾಠೋಪಕರಣಗಳನ್ನು ಹೊತ್ತೊಯ್ಯುವ ಸಂದರ್ಭದಲ್ಲಂತೂ ಅಲ್ಲೇ ಮಲಗಿದ್ದ ನಾಯಿಗಳಿಗೆ ಎಕ್ಸ್ಟ್ರಾ ಡ್ಯೂಟಿ. ಹಿಂದೆ ಸರಿಯುತ್ತ ಬೊಗಳಿದ್ದೇ ಬೊಗಳಿದ್ದು. ಅದರ ಮಾಲೀಕ ಮಾತ್ರ ಅದು ಬೊಗಳುವಷ್ಟು  ಹೊತ್ತು ಕಿವುಡನಾಗೇ ಇರುತ್ತಿದ್ದ.
"ನಾಯಿ ಹಿಡಿದು ಕೊಳ್ಳಯ್ಯ.." ಅಂತ ಜೋರಾಗಿ ಕೂಗಿದಾಗ,
"ಅದೇನ್ ಕಡ್ಯಾಂಗಿಲ್ಲ ಬುಡ್ರಿ ಮಾಸ್ತರ್ರ.." ಅಂತ ಹಲ್ಲು ಕಿರಿಯುತ್ತಿದ್ದಾತ. ಆ ಐದತ್ತು ನಿಮಿಷದಲ್ಲಿ ನಮಗಂತೂ ನಖಶಿಖಾಂತ ಕೋಪ.

ಆಗ ಉತ್ತಮ ಮರಗಳಿರುವ, ಶಾಲಾ ತೋಟವಿರುವ ಹಾಗೂ ಉದ್ಯಾನವನವಿರುವ ಶಾಲೆಗಳಿಗೆ ಹಸಿರು ಶಾಲೆ/ಪರಿಸರ ಮಿತ್ರ ಎಂಬ ಪ್ರಶಸ್ತಿ ನೀಡುತ್ತಿದ್ದರು. ನಮ್ಮ ಸಿ.ಆರ್.ಪಿ ಅವರು ಸಂದರ್ಶನ ನೀಡಿದಾಗ "ಶಾಲೆಯಲ್ಲಿ ಸಸಿ ನೆಟ್ಟು ಹೂದೋಟ ಮಾಡಿ" ಎಂದು ಪದೇ ಪದೇ ಹೇಳುತ್ತಿದ್ದರು. ಆದರೆ ಶಾಲಾ ಆಟದ ಮೈದಾನವಿರಲಿಲ್ಲ. ಬೀದಿಯಿರುವ ಶಾಲಾ ಕೋಣೆಗಳ ಮುಂದೆ ಸಸಿ ನೆಡುವಂತಿರಲಿಲ್ಲ. ಒಂದೇ ಕಡೆ ತರಗತಿ ಕೋಣೆಗಳಿದ್ದು ಮುಂದೆ ಒಂದಿಷ್ಟು ಸಸಿ ನೆಡಲು ಜಾಗವಿದ್ದರೂ ಬೇಸಿಗೆ ಕಾಲದಲ್ಲಿ ಅವುಗಳಿಗೆ ನೀರಿರದೆ ಒಣಗಿ ಹೋದ ಪ್ರಸಂಗವನ್ನೊಮ್ಮೆ ನಮ್ಮ ಮುಖ್ಯೋಪಾಧ್ಯಾಯರು ಹೇಳಿದ್ದರು. ಹಾಗೂ ಮುಂದುವರೆದು ಸಸಿಗಳನ್ನು ನೆಟ್ಟು ನಾಲ್ಕಡಿ ಬೆಳೆಸುವ ಹೊತ್ತಿಗೆ ಬೇಸಿಗೆ ರಜೆ ಬರುತ್ತಿತ್ತು.. ರಜೆ ಮುಗಿಸಿ ಬರುವುದರೊಳಗಾಗಿ ಆ ಗಿಡ ನೀರಿಲ್ಲದೆ ಬಾಯಾರಿ ಸಾಯುತ್ತಿತ್ತು  ಅಥವಾ ಅಲ್ಲಿನ ಬಡಪಾಯಿ ದನಕರುಗಳಿಗೆ ಆಹಾರವಾಗಿರುತ್ತಿತ್ತು.

ಇನ್ನೊಂದು ಕಾರಣ ಹೇಳುವುದಾದರೆ ಮೇಲಿನ ಸ್ಮಶಾನದ ಸಮೀಪದ ತರಗತಿ ಕೋಣೆಗಳಿಗೆ ಕಂಪೌಂಡ್ ಇದ್ದರೂ ಅಲ್ಲಿ ಗಿಡ ಬೆಳೆಯಲು ಮಣ್ಣಿಲ್ಲದೆ ಫರ್ಸಿ ಕಲ್ಲುಗಳಿರುವ ಗರ್ಚು ನೆಲ.. ಅಲ್ಲಿ ಸಸಿಗಳು ಗಿಡವಾಗಲು ಸಾಧ್ಯವೇ ಇರಲಿಲ್ಲ.. ನಾವು ಪ್ರತಿ ವರ್ಷ ಜೂನ್ 5 ರ ಒಳಗಾಗಿ ಅರಣ್ಯ ಇಲಾಖೆಯಿಂದ ಐದಾರು ಬೇವು, ಹೊಂಗೆ, ಪೇರಲ ಮುಂತಾದ ಸಸಿಗಳನ್ನು ತಂದು ನೆಟ್ಟು ಬೀಗುತ್ತಿದ್ದೆವು. ಆಗ ನಮ್ಮ ಸಂಭ್ರಮವನ್ನು ಕಂಡ ಅಲ್ಲಿನ ಮಂದಿ,
"ಕಲ್ಲಾಗ ಏನ್ ಗಿಡ ಬೆಳಸ್ತೀರಿ..? ಕೆಳಗ ಗರ್ಚ್ ತುಂಬ್ಯಾದ.. ಅದಕ ಹೇಳೂದ್, ಸ್ಟೇಷನ್ ಮಾಸ್ತರ್ ಗ ನಿದ್ದಿ ಇಲ್ಲ; ಕನ್ನಡ ಸಾಲಿ ಮಾಸ್ತರ್ ಗ ಬುದ್ಧಿ ಇಲ್ಲ ಅಂತ.."
ಹೀಯಾಳಿಸಿದರೋ ಬೈದರೋ ನಮಗಂತೂ ತಿಳಿಲಿಲ್ಲ..ಅದರಲ್ಲಿ ಈ ಗಿಡ ಬೆಳಸಲೇ ಬೇಕು ಅಂತ ಹುಚ್ಚು ಹೊಕ್ಕಿದ್ದು ನಮ್ಮ‌ಹಿರಿಯ ಸಹೋದ್ಯೋಗಿ ಶಿಕ್ಷಕರಾದ ಶ್ರೀ ಗೋಣೆಪ್ಪ ಸರ್ ಗೆ. ಬಾಟನಿ ಓದಿದ್ದ ನನಗೆ ಸಸಿಗಳನ್ನ ಈ ಕಲ್ಲುನೆಲದಲ್ಲಿ ಗಿಡ ಮಾಡುವುದು ಹೇಗೆ ಎಂಬ ಪ್ರ್ಯಾಕ್ಟಿಕಲ್ ಜ್ಞಾನವಿರಲಿಲ್ಲ..

"ಸರ್ ಇದನ್ನ ಇಲ್ಲಿಗೆ ಬಿಡೋಣ್ರಿ.." ಅಂತಂದೆ.
ಅದಕ್ಕ ಗೋಣೆಪ್ಪ ಸರ್ ಅಂದರು,
"ಸರ್ ಮಾಡುವ ಮನಸ್ಸಿದ್ರ ಕಲ್ಲ ಕೂಡ ಕರಗತೈತಿ ಸರ್....ಈ ಸಲ ಸಸಿ ನೆಟ್ಟು ಗಿಡ ಬೆಳಸೋಣ" ಅಂತಂದರು..

ಅಕ್ಟೋಬರ್ ರಜೆಯ ಹೊತ್ತಿಗೆ ಅದೇ ಗರ್ಚುಗಲ್ಲುಗಳಿರುವ ಜಾಗದಲ್ಲಿ ಸಸಿ ನೆಟ್ಟು ಕಾಪಾಡುವ ಕೆಲಸ ಶುರುವಾಯಿತು. ಅವರ ಪ್ರಕಾರ ಈ ಗರ್ಚುಗಲ್ಲುಗಳಿರುವ ನೆಲದಲ್ಲಿ ಗುಂಡಿ ತೋಡಿಚಮಣ್ಣು ಹಾಕಿ ಸಸಿ ನೆಟ್ಟರೆ ಸಸಿಗಳು ಚೆನ್ನಾಗಿ ಬೆಳೆಯುತ್ತವೆ ಎಂಬುದು. ನಾನು ತರಗತಿಯಲ್ಲಿ ಮರಗಿಡಗಳಿಂದ ನಮ್ಮಂತಹ ಜೀವಿಗಳಿಗಾಗುವ ಪ್ರಯೋಜನಗಳು ಹಾಗೂ ಪರಿಸರ  ಸಂರಕ್ಷಣೆಯ ಕುರಿತು ಮಾತಾಗುತ್ತಿದ್ದೆ. ಅಲ್ಲಿಯೇ ಅರಣ್ಯ ಇಲಾಖೆಯಲ್ಲಿ ವಾಚರ್ ಆಗಿ ಕೆಲಸ ಮಾಡುತ್ತಿದ್ದ ಹಿರಿಯರೂ ಆದ ಸಿದ್ದಪ್ಪ ಎಂಬುವವರನ್ನು ಸಂಪರ್ಕಿಸಿ ಸುಮಾರು 50 ಸಸಿಗಳನ್ನು ನೀಡುವಂತೆ ವಿನಂತಿಸಿದೆವು. ಅಕ್ಟೋಬರ್ ಮೊದಲ ವಾರದಲ್ಲಿ ಸಸಿಗಳು ಬಂದವು.ಅವುಗಳಲ್ಲಿ ಹೊಂಗೆ, ಬೇವು, ಪೇರಲ, ಬಾದಾಮಿ, ಸೇವಂತಿಗೆ, ದಾಸವಾಳ ಮುಂತಾದ ಸಸಿಗಳಿದ್ದವು. ಹಿರಿಯ ತರಗತಿ ವಿದ್ಯಾರ್ಥಿಗಳಿಗೆ ನೀರು ತರುವ ಜವಾಬ್ದಾರಿ. ಗೋಣೆಪ್ಪ ಸರ್ ಅವರು ಸ್ವತಃ ಶಾಲಾ ಆವರಣದಲ್ಲಿ 30-35 ಗುಂಡಿ ತೋಡಿದರು. ನಾನು ಹಾಗೂ ನಮ್ಮ ಇನ್ನೊಬ್ಬ ಶಿಕ್ಷಕರಾದ ಶ್ರೀ ಮಂಜುನಾಥ ಅವರು ಪಕ್ಕದ ಹೊಲದಲ್ಲಿರುವ ಮಣ್ಣನ್ನು ಗುಂಡಿಯೊಳಗೆ ಹಾಕಿ ವ್ಯವಸ್ಥೆಗೊಳಿಸಿದೆವು‌. ಹಳೆಯ ವಿದ್ಯಾರ್ಥಿಗಳಿಂದ ಮತ್ತೆ 15-20. ಗುಂಡಿ ತೋಡಿಸಿ ಮಣ್ಣು ಹಾಕಿ ಸಿದ್ಧಗೊಳಿಸಿದೆವು. 50 ಸಸಿ ನೆಟ್ಟೆವು. ಉಳಿದ ವಿದ್ಯಾರ್ಥಿಗಳು ನೀರುಣಿದರು.5,6,7 ವಿದ್ಯಾರ್ಥಿಗಳಿಗೆ ಒಬ್ಬರಿಗೆ ಒಂದು ಸಸಿಯನ್ನು ಗುರುತು ಮಾಡಿ ಅದು ಬಾಡದಂತೆ ಹಾಗೂ ಉತ್ತಮವಾಗಿ ಬೆಳೆಸುವ ಜವಾಬ್ದಾರಿ ನೀಡಲಾಯಿತು. ಬೇಸಿಗೆಯಲ್ಲಿ ಸ್ವತಃ ಗೋಣೆಪ್ಪ ಸರ್ ಅಲ್ಲಿಯೇ ಉಳಿದುಕೊಂಡು ಆ ಎಲ್ಲ ಸಸಿಗಳು ನೀರುಣ್ಣುವಂತೆ ಮಾಡಿದರು. ಮುಂದೆ ಮಳೆಗಾಲದಲ್ಲಿ ಚೆನ್ನಾಗಿ ಮಳೆ ಸುರಿದು ಎರಡನೆಯ ವರ್ಷದಲ್ಲಿ 40 ಸಸಿಗಳು ಚೆನ್ನಾಗಿ ಬೆಳೆಯಲಾರಂಭಿಸಿದವು. ವಿದ್ಯಾರ್ಥಿಗಳೂ ಸಹ ತಮಗೆ ನೀಡಿದಂತ ಸಸಿಗಳನ್ನು ತಮ್ಮದೇ ಎನ್ನುವಂತೆ ಪೋಷಿಸತೊಡಗಿದರು. ಆ ಸಸಿಗಳ ಹಾಗೂ ಅವರ ನಡುವೆ ಒಂದು ಅವಿನಾಭಾವ ಸಂಬಂಧ ಬೆಳೆಯಿತು. ಅದರ ಫಲವೇನೋ ಮೂರು ವರ್ಷದಲ್ಲಿ ಆ ಎಲ್ಲ‌ ಸಸಿಗಳು ನಮ್ಮ ಹೆಗಲಿನವರೆಗೂ ಬೆಳೆದಿದ್ದವು.

ಇದರ ತಾತ್ಪರ್ಯ ಇಷ್ಟೇ. ಶಿಕ್ಷಕರು ಯಾವುದೇ ಒಂದು ಕಾರ್ಯವನ್ನು ಮನಸಾಪೂರ್ವಕ ಮಾಡಿದಲ್ಲಿ ಆ ಕಾರ್ಯ ಎಷ್ಟೇ ಕಠಿಣವಿದ್ದರೂ ಹೂ ಎತ್ತಿದಷ್ಟೇ ಸರಳ. ಪರಿಸರ ಕಾಳಜಿ ಈಗಿನ ತುರ್ತು. ಮಕ್ಕಳಿಗೆ ಪರಿಸರ ಪ್ರಜ್ಞೆ, ಪರಿಸರ ಪ್ರೀತಿ ಬೆಳೆಸಿ ಅವರು ಆ ಪರಿಸರದೊಂದಿಗೆ ಹೇಗೆ ಹೊಂದಿಕೊಂಡು ಹೋಗಬೇಕೆಂಬುದನ್ನು ಪಾಠದ ಭಾಗವಾಗಿಯೇ ಕಲಿಸಬೇಕು. ವನಮಹೋತ್ಸವ, ವನ ಭೋಜನ, ಶೈಕ್ಷಣಿಕ ಪ್ರವಾಸದಂತಹ ನೈಜ ಅನುಭವ ನೀಡಿದರೆ ಆ ವಿದ್ಯಾರ್ಥಿ ನಿಜವಾಗಲೂ ಪರಿಸರವನ್ನು ಪ್ರೀತಿಸಲಾರಂಭಿಸುತ್ತಾನೆ. ಹೀಗೆ ವಿದ್ಯಾರ್ಥಿಗಳಲ್ಲಿ ನೈಜ ಅನುಭವದ ಮೂಲಕ ಹುಟ್ಟುವ ಆಸಕ್ತಿ,ಆ ಆಸಕ್ತಿ ಹುಟ್ಟಿಸುವ ಪ್ರೀತಿ ಇದೆಯಲ್ಲ,ಅದು ಅಸಾಧ್ಯವನ್ನು ಸಾಧ್ಯವಾಗಿಸುತ್ತದೆ. 40 ಗಿಡಗಳಿಂದ ನಮ್ಮ ಶಾಲೆ ಸದಾಕಾಲ ಕಂಗೊಳಿಸತೊಡಗಿತು. ಕೆಲ ದಿನಗಳ ನಂತರ ಮಾನ್ಯ ಬಿ.ಇ.ಓ ಅವರು ಸಂದರ್ಶಿಸಿ ಮೆಚ್ಚುಗೆ ಕೂಡ ವ್ಯಕ್ತಪಡಿಸಿದರು. ಪರಿಸರ ಮಿತ್ರ ಪ್ರಶಸ್ತಿ ಪಡೆಯುವ ಮಟ್ಟಿಗೆ ನಮ್ಮ ಶಾಲೆ ಬದಲಾಗಲಿಲ್ಲ. ಆದರೆ ಪ್ರೀತಿಯಿಂದ ಬೆಳೆಸಿದ ಆ ಸಸಿಗಳ ಹಾಗೂ ನಮ್ಮ ವಿದ್ಯಾರ್ಥಿಗಳ ನಡುವೆ ಯಾವುದೇ ವ್ಯತ್ಯಾಸ ತೋರಲಿಲ್ಲ‌‌..ಕಲಿಸಲು ಹೋಗಿ ಕಲಿತಿದ್ದಾಯಿತು.ರಾಷ್ಟ್ರ ಕವಿ ಜಿ.ಎಸ್.ಎಸ್ ಅವರ ಕವಿತೆಯಲ್ಲಿನ ಈ ಸಾಲು ಸದಾ ನಮ್ಮನ್ನು ಕಾಡಬೇಕು..ಪ್ರೀತಿ ಇಲ್ಲದ ಮೇಲೆ ಹೂವು ಅರಳಿತು ಹೇಗೆ..? ಮುಂದುವರೆದು
ಕಲ್ಲು ಕರಗಿತು ಹೇಗೆ..?

©ಲೇಖಕರು : ಸಚಿನ್ ಕುಮಾರ ಬ.ಹಿರೇಮಠ

ಫೇಸ್‌ಬುಕ್ ಪಾಠಟಿಪ್ಪಣಿ - 12 ಮತ್ತೆ ಶುರುವಾಯಿತು ಶಾಲಾ ಶ್ರದ್ಧಾ ವಾಚನಾಲಯ




ಶಾಲೆಗಳಲ್ಲಿ ಪೂರಕ ಓದಿಗಾಗಿ ಗ್ರಂಥಾಲಯವಿರಬೇಕು ಎಂಬುದು ಈ ಹಿಂದೆ ಎನ್.ಸಿ.ಎಫ್ ಆಶಯಗಳಲ್ಲೊಂದಾಗಿತ್ತು. ಅದರಂತೆ ಆರ್.ಟಿ.ಇ ಕಾಯ್ದೆ ಅನುಸಾರ ಪ್ರತಿ ಶಾಲೆಯಲ್ಲಿ ಕಡ್ಡಾಯವಾಗಿ ಒಂದು ಗ್ರಂಥಾಲಯವಿರಬೇಕು. ನಮ್ಮ ರಾಜ್ಯದ ಬಹುತೇಕ ಶಾಲೆಗಳಲ್ಲಿ ಗ್ರಂಥಾಲಯ ಸಕ್ರಿಯವಾಗಿದೆ. ಆದರೆ ಸರ್ಕಾರಿ ಶಾಲೆಗಳ ವಿಷಯಕ್ಕೆ ಬಂದಾಗ ಸ್ವಲ್ಪ ಯೋಚಿಸುವಂತಾಗಿದೆ. ಗ್ರಂಥಾಲಯ ಮಾಹಿತಿ ಕೇಳಿದಾಗ ಇದ್ದೂ ಇಲ್ಲದಂತೆ ಅಥವಾ ಇಲ್ಲದೆಯೂ ಇದ್ದಂತೆ ಮಾಹಿತಿ ನೀಡಲಾಗುತ್ತದೆ. ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ ನನಗೆ ಸರಿಯಾಗಿ ನೆನಪಿದೆ. ನಮಗೆ ಪುಸ್ತಕಗಳನ್ನು ಮನೆಗೆ ಓದಲು ಕೊಡುತ್ತಿದ್ದರು. ಒಬ್ಬ ಶಿಕ್ಷಕರು ನಿಯಮಿತವಾಗಿ ಈ ಪ್ರಕ್ರಿಯೆಯನ್ನು ನಿರ್ವಹಿಸುತ್ತಿದ್ದರು. ಹಾಗೇ ನಾವು ಪಡೆದುಕೊಂಡ ಪುಸ್ತಕಗಳಲ್ಲಿ ಬಹುಪಾಲು ರಾಷ್ಟ್ರ ನಾಯಕರ ಜೀವನ ಚರಿತ್ರೆಗಳಾಗಿರುತ್ತಿದ್ದವು. ಉಳಿದಂತೆ ಕತೆ ಪುಸ್ತಕಗಳು. ಸದ್ಯ ನಮ್ಮ ಸರ್ಕಾರಿ ಶಾಲೆಗಳಲ್ಲಿ ಗ್ರಂಥಾಲಯದ ಸದ್ಬಳಕೆಯನ್ನು ಸಾರುವ 'ತೆಗೆ ಪುಸ್ತಕ ಹೊರಗೆ' ಎಂಬ ಇಪ್ಪತ್ತು ಅಂಶಗಳ ಕಾರ್ಯಕ್ರಮಗಳಲ್ಲೊಂದಾಗ ಅಂಶವು ಮಾಸಿ ಹೋಗಿದೆ‌.

ಇದಕ್ಕೆ ಕಾರಣಗಳೂ ಉಂಟು. ಸ್ಥಳಾವಕಾಶದ ಕೊರತೆ. ಏಕೋಪಾಧ್ಯಯ ಶಾಲೆಗಳಿರುವುದು. ಕಾರ್ಯಬಾಹುಳ್ಯದ ಒತ್ತಡ, ನಿರ್ವಹಣೆಯ ಅರಿವಿಲ್ಲದಿರುವುದು ಇತ್ಯಾದಿ. ಆದರೆ ಪರಿಣಾಮಕಾರಿ ಅನುಷ್ಠಾನ  ಎಂತಹ ಬದಲಾವಣೆ ತರಬಲ್ಲುದು ಎಂಬುದು ಊಹೆಗೂ ನಿಲುಕದ್ದು. ನಮ್ಮ ಶಾಲೆಯ ಕತೆಯೂ ಹೀಗೆ ಆಗಿತ್ತು. ಸ್ಥಳಾವಕಾಶದ ಕೊರತೆ ಇರುವ ಕಾರಣ ಸುಮಾರು ಪುಸ್ತಕಗಳನ್ನು ಒಂದು ಅಲ್ಮೇರಾದಲ್ಲಿ ಭದ್ರವಾಗಿಡಲಾಗಿತ್ತು. ಮುಖ್ಯಗುರುಗಳ ಸುಪರ್ದಿಯಲ್ಲಿದ್ದ ಪುಸ್ತಕಗಳು ವರುಷಗಳ ವರೆಗೂ ಧೂಳುಂಡಿದ್ದವು. 2012 ರಲ್ಲಿ ಶಿಕ್ಷಣ ಇಲಾಖೆ ಶಾಲಾ ಶ್ರದ್ಧಾ ವಾಚನಾಲಯ ಎಂಬ ವಿಶಿಷ್ಠ ಕಾರ್ಯಕ್ರಮ ಪರಿಚಯಿಸುವುದರ ಮೂಲಕ ಶಾಲೆಗಳಲ್ಲಿನ ಗ್ರಂಥಾಲಯಗಳಿಗೆ ಮರು ಜೀವ ನೀಡಿತ್ತು. ಈ ನಿಟ್ಟಿನಲ್ಲಿ ನಮ್ಮ ಮುಖ್ಯಗುರುಗಳ ಗ್ರಂಥಾಲಯ ನಿರ್ವಹಣೆಯನ್ನು ನನಗೆ ವಹಿಸಿಕೊಟ್ಟರು. ಮೊದಲಬಾರಿಗೆ ಗ್ರಂಥಾಲಯ ನಿರ್ವಹಣಾ ವಹಿ ಜೀವ ಪಡೆಯಿತು.

ಗ್ರಂಥಾಲಯ ಪುಸ್ತಕ ಖರೀದಿಗಾಗಿ ಸರ್ವ ಶಿಕ್ಷಣ ಅಭಿಯಾನದಡಿಯಲ್ಲಿ ಪ್ರತಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ 10,000 ರೂ ಗಳ ಅನುದಾನ ಜಮೆ ಮಾಡಲಾಗಿತ್ತು. ಎಸ್.ಡಿ.ಎಂ.ಸಿ ಅವರ ಅನುಮೋದನೆಯಿಂದಿಗೆ ಒಂದು ದಿನ ಕಲಬುರಗಿಯ  ವಿವಿಧ ಪುಸ್ತಕ ಮಳಿಗೆಗಳನ್ನು ಸಂಪರ್ಕಿಸಿ ನಾವು ಕೊಳ್ಳಲು ಬಯಸಿದ್ದ ಪುಸ್ತಕಗಳ ಪಟ್ಟಿ ನೀಡಲಾಯಿತು. ಭಾಗಶಃ ಲಭ್ಯವಿರುವ ಮಳಿಗೆಯಿಂದ ಸುಮಾರು 1000 ಪುಸ್ತಕಗಳನ್ನು ಖರೀದಿಸಲಾಯಿತು. ಒಂದು ಭಾನುವಾರ ಎಲ್ಲ ಶಿಕ್ಷಕರು ಹಾಗೂ 7 ನೆಯ ತರಗತಿ ವಿದ್ಯಾರ್ಥಿಗಳ ಸೇರಿ ಎಲ್ಲ ಪುಸ್ತಕಗಳನ್ನು ಕ್ಷೇತ್ರದನುಸಾರ ಪ್ರತ್ಯೇಕಿಸಿದೆವು.

ಕಥಾ ಪುಸ್ತಕಗಳು
ಪ್ರಬಂಧಗಳು
ಜೀವನ ಚರಿತ್ರೆಗಳು
ಕವಿತೆ ಸಂಕಲನಗಳು
ಕಾಮಿಕ್ಸ್
ವಿಜ್ಞಾನ ಬರಹಗಳು
ಇಂಗ್ಲಿಷ್ ಗ್ರಾಮರ್
ಆರೋಗ್ಯ ಪುಸ್ರಕಗಳು
ವಚನ ಸಂಗ್ರಹ
ನುಡಿಮುತ್ತುಗಳು
ಸಂದರ್ಭ ಸೇವೆ ಪುಸ್ತಕಗಳು

ಹೀಗೆ ವಿಭಾಗಿಸಿ ಇದ್ದ ಒಂದೇ ಒಂದು ಅಲ್ಮೇರಾದಲ್ಲಿ ಜೋಡಿಸಿಡಲಾಯಿತು. ಇದರಿಂದ ದೊಡ್ಡ ದೊಡ್ಡ ಗ್ರಂಥಾಲಯಗಳಲ್ಲಿ ಹೇಗೆ ಕೃತಿ ವಿಂಗಡಣೆಯಾಗುತ್ತದೆ ಎಂಬುದನ್ನು ವಿದ್ಯಾರ್ಥಿಗಳು ಅರಿತುಕೊಂಡಂತಾಯಿತು. ಸಂದರ್ಭ ಸೇವೆ ಪುಸ್ತಕಗಳನ್ನು ಹೊರತು ಪಡಿಸಿ ಉಳಿದ ಪುಸ್ತಕಗಳನ್ನು ಮಕ್ಕಳಿಗೆ ಓದಲು ನೀಡುವ ನಿರ್ಧಾರ ಮಾಡಲಾಯಿತು. ಪ್ರತಿ ಸೋಮವಾರ ನಾಲ್ಕನೆಯ ತರಗತಿ ವಿದ್ಯಾರ್ಥಿಗಳಿಗೆ,ಮಂಗಳವಾರ ಐದನೆಯ ತರಗತಿ ವಿದ್ಯಾರ್ಥಿಗಳಿಗೆ ಹೀಗೆ ಶುಕ್ರವಾರದ ವರೆಗೂ ವಿವಿಧ ತರಗತಿಗೆ ಪುಸ್ತಕ ನೀಡುವುದು. ಅಲ್ಲಿಂದ ಒಂದು ವಾರದ ವರಗೆ ಓದಿ ಮರಳಿಸಲು ಸೂಚಿಸಲಾಯಿತು. ಶನಿವಾರ ತಾವು ಓದಿದ ಪುಸ್ತಕದ ಮೇಲೆ ಚರ್ಚೆ ಮಾಡುವ ಅವಕಾಶ.ಪುಸ್ತಕ ಮರಳಿ ನೀಡುವಾಗ ಆ ಪುಸ್ತಕದ ಕುರಿತಾದ ಮೆಚ್ಚುಗೆ/ವಿಮರ್ಶೆ ರೂಪದ ಬರೆಹವನ್ನು ವಿದ್ಯಾರ್ಥಿಗಳು ನೀಡಬೇಕಿತ್ತು.  ಇದರಿಂದ ವಿದ್ಯಾರ್ಥಿಗಳ ವರ್ತನೆ ಕೂಡ ಬದಲಾಗತೊಡಗಿತು. ಏನೂ ಓದಲಾಗದ ವಿದ್ಯಾರ್ಥಿಗಳು ಪ್ರಯತ್ನವಾದಿಗಳಾದರು. ಓದಿದವರು ಅಭಿಪ್ರಾಯ ವ್ಯಕ್ತಪಡಿಸ ತೊಡಗಿದರು. ಇದೆಲ್ಲದರ ಪರಿಣಾಮ ನಾವು ನಮ್ಮ ಶಾಲೆಯಿಂದ ಚಿಣ್ಣರ ಚಿತ್ತಾರ ಎಂಬ ಮಾಸಪತ್ರಿಕೆ ಹಾಗೂ ಇಂಚರ ಎಂಬ ಗೋಡೆ ಪತ್ರಿಕೆ ತಯಾರಿಸಲು ಸಾಧ್ಯವಾಯಿತು. ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಓದಿಕೊಳ್ಳಲು ಪ್ರತ್ಯೇಕವಾದ ಗ್ರಂಥಾಲಯ ಇಲ್ಲ. ಆದರೆ ಮುಖ್ಯಗುರುಗಳ ಕೊಠಡಿಯ ಒಂದು ಭಾಗದಲ್ಲಿ ಈ ಪುಸ್ತಕ ಕೊಡು ಕೊಳ್ಳುವಿಕೆ ಹಾಗೂ ಓದು ಆರಂಭವಾಗಿತ್ತು. ಪ್ರಾಥಮಿಕ ಹಂತದ ವಿದ್ಯಾರ್ಥಿಗಳಿಗೆ ಕತೆ ಮತ್ತು ಕಾಮಿಕ್ಸ್ ಇಷ್ಟವಾದರೆ ಹಿರಿಯ ಪ್ರಾಥಮಿಕ ಹಂತದ ವಿದ್ಯಾರ್ಥಿಗಳಿಗೆ ಜೀವನ ಚರಿತ್ರೆ ಹಾಗೂ ಪ್ರಬಂಧಗಳು ಇಷ್ಟವಾಗುತ್ತಿದ್ದವು. ನಾನು ರಜೆಯಲ್ಲಿದ್ದಾಗ ವಿದ್ಯಾರ್ಥಿ ಮಂತ್ರಿಮಂಡಲದ ಮಂತ್ರಿಯೊಬ್ಬ ಹಿರಿಯ ಶಿಕ್ಷಕರ ಸಹಾಯದೊಂದಿಗೆ ಗ್ರಂಥ ವಿತರಣಾ ವಹಿಯ ನಿರ್ವಹಣೆ ಮಾಡುತ್ತಿದ್ದ. ಓದುವ ಕಲೆಯ ಬಗ್ಗೆ ಪ್ರತಿ ವಾರ ಚರ್ಚೆಯಾಗುತ್ತಿತ್ತು. ತೀರಾ ಓದಲು ಬಾರದ ವಿದ್ಯಾರ್ಥಿಗಳಿಗೆ ಅಕ್ಷರ ಫೌಂಡೇಷನ್ನಿನವರು ಸರಬುರಾಜು ಮಾಡಿದ್ದ ಓದುವೆ ನಾನು ಎಂಬ ಕಲಿಕಾ ಕಾರ್ಡ್ ಗಳನ್ನು ನೀಡಿ ಓದಿಸಲಾಗುತ್ತಿತ್ತು. ಮುಂದುವರೆದು ಗ್ರಾಮದಲ್ಲಿನ ಮಾಜಿ ವಿದ್ಯಾರ್ಥಿಗಳಿಗೂ ಹಾಗೂ ಕೆಲ ಗ್ರಾಮದ ಯುವಕರಿಗೂ ನಮ್ಮ ಶಾಲಾ ಗ್ರಂಥಾಲಯ ಸದ್ಬಳಕೆಯಾಗತೊಡಗಿತು. ದಿನ ನಿತ್ಯ ಎರಡು ತರಹದ ನಿಯತಕಾಲಿಕೆಗಳು, ಬಾಲ ವಿಜ್ಞಾನ, ಜೀವನ ಶಿಕ್ಷಣ, ಶಿಕ್ಷಣ ವಾರ್ತೆ,ಶಿಕ್ಷಣ ಶಿಲ್ಪಿ ಮುಂತಾದ ಮಾಸಪತ್ರಿಕೆಗಳು ನಮ್ಮ ಶಾಲಾ ಗ್ರಂಥಾಲಯದಲ್ಲಿದ್ದವು.

ಇಲ್ಲಿ ಹೇಳುವುದಿಷ್ಟೆ. ನಾವು ಶಿಕ್ಷಕರು ಮಕ್ಕಳ ಓದಿಗೆ ಒಂದು ವೇದಿಕೆ ಸೃಷ್ಟಿ ಮಾಡಿಕೊಟ್ಟರೆ ಸಾಕು. ವಿದ್ಯಾರ್ಥಿಗಳು ಸರಾಗವಾಗಿ ಸಾಗಿಬಿಡುತ್ತಾರೆ. ಒಂದಿಷ್ಟು ಸಮಯ ಹೊಂದಾಣಿಕೆ ಮಾಡಿಕೊಂಡು ಇಂತಹ ಕಾರ್ಯಕ್ರಮಗಳನ್ನು ಜೀವಂತವಾಗಿಟ್ಟರೆ ಬಹಳ ಪರಿಣಾಮಕಾರಿ ಫಲಿತಾಂಶ ಪಢಯಬಹುದಾಗಿದೆ.  ಬಹಳಷ್ಟು ಸಲ ಪ್ರಯತ್ನಗಳು ಫಲ ನೀಡುವುದಿಲ್ಲ. ಆದರೆ ನಂಬಿ ಕೆಟ್ಟವರಿಲ್ಲ..

@ಲೇಖಕರು : ಸಚಿನ್ ಕುಮಾರ ಹಿರೇಮಠ