ಶಾಲೆಗಳಲ್ಲಿ ಪೂರಕ ಓದಿಗಾಗಿ ಗ್ರಂಥಾಲಯವಿರಬೇಕು ಎಂಬುದು ಈ ಹಿಂದೆ ಎನ್.ಸಿ.ಎಫ್ ಆಶಯಗಳಲ್ಲೊಂದಾಗಿತ್ತು. ಅದರಂತೆ ಆರ್.ಟಿ.ಇ ಕಾಯ್ದೆ ಅನುಸಾರ ಪ್ರತಿ ಶಾಲೆಯಲ್ಲಿ ಕಡ್ಡಾಯವಾಗಿ ಒಂದು ಗ್ರಂಥಾಲಯವಿರಬೇಕು. ನಮ್ಮ ರಾಜ್ಯದ ಬಹುತೇಕ ಶಾಲೆಗಳಲ್ಲಿ ಗ್ರಂಥಾಲಯ ಸಕ್ರಿಯವಾಗಿದೆ. ಆದರೆ ಸರ್ಕಾರಿ ಶಾಲೆಗಳ ವಿಷಯಕ್ಕೆ ಬಂದಾಗ ಸ್ವಲ್ಪ ಯೋಚಿಸುವಂತಾಗಿದೆ. ಗ್ರಂಥಾಲಯ ಮಾಹಿತಿ ಕೇಳಿದಾಗ ಇದ್ದೂ ಇಲ್ಲದಂತೆ ಅಥವಾ ಇಲ್ಲದೆಯೂ ಇದ್ದಂತೆ ಮಾಹಿತಿ ನೀಡಲಾಗುತ್ತದೆ. ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ ನನಗೆ ಸರಿಯಾಗಿ ನೆನಪಿದೆ. ನಮಗೆ ಪುಸ್ತಕಗಳನ್ನು ಮನೆಗೆ ಓದಲು ಕೊಡುತ್ತಿದ್ದರು. ಒಬ್ಬ ಶಿಕ್ಷಕರು ನಿಯಮಿತವಾಗಿ ಈ ಪ್ರಕ್ರಿಯೆಯನ್ನು ನಿರ್ವಹಿಸುತ್ತಿದ್ದರು. ಹಾಗೇ ನಾವು ಪಡೆದುಕೊಂಡ ಪುಸ್ತಕಗಳಲ್ಲಿ ಬಹುಪಾಲು ರಾಷ್ಟ್ರ ನಾಯಕರ ಜೀವನ ಚರಿತ್ರೆಗಳಾಗಿರುತ್ತಿದ್ದವು. ಉಳಿದಂತೆ ಕತೆ ಪುಸ್ತಕಗಳು. ಸದ್ಯ ನಮ್ಮ ಸರ್ಕಾರಿ ಶಾಲೆಗಳಲ್ಲಿ ಗ್ರಂಥಾಲಯದ ಸದ್ಬಳಕೆಯನ್ನು ಸಾರುವ 'ತೆಗೆ ಪುಸ್ತಕ ಹೊರಗೆ' ಎಂಬ ಇಪ್ಪತ್ತು ಅಂಶಗಳ ಕಾರ್ಯಕ್ರಮಗಳಲ್ಲೊಂದಾಗ ಅಂಶವು ಮಾಸಿ ಹೋಗಿದೆ.
ಇದಕ್ಕೆ ಕಾರಣಗಳೂ ಉಂಟು. ಸ್ಥಳಾವಕಾಶದ ಕೊರತೆ. ಏಕೋಪಾಧ್ಯಯ ಶಾಲೆಗಳಿರುವುದು. ಕಾರ್ಯಬಾಹುಳ್ಯದ ಒತ್ತಡ, ನಿರ್ವಹಣೆಯ ಅರಿವಿಲ್ಲದಿರುವುದು ಇತ್ಯಾದಿ. ಆದರೆ ಪರಿಣಾಮಕಾರಿ ಅನುಷ್ಠಾನ ಎಂತಹ ಬದಲಾವಣೆ ತರಬಲ್ಲುದು ಎಂಬುದು ಊಹೆಗೂ ನಿಲುಕದ್ದು. ನಮ್ಮ ಶಾಲೆಯ ಕತೆಯೂ ಹೀಗೆ ಆಗಿತ್ತು. ಸ್ಥಳಾವಕಾಶದ ಕೊರತೆ ಇರುವ ಕಾರಣ ಸುಮಾರು ಪುಸ್ತಕಗಳನ್ನು ಒಂದು ಅಲ್ಮೇರಾದಲ್ಲಿ ಭದ್ರವಾಗಿಡಲಾಗಿತ್ತು. ಮುಖ್ಯಗುರುಗಳ ಸುಪರ್ದಿಯಲ್ಲಿದ್ದ ಪುಸ್ತಕಗಳು ವರುಷಗಳ ವರೆಗೂ ಧೂಳುಂಡಿದ್ದವು. 2012 ರಲ್ಲಿ ಶಿಕ್ಷಣ ಇಲಾಖೆ ಶಾಲಾ ಶ್ರದ್ಧಾ ವಾಚನಾಲಯ ಎಂಬ ವಿಶಿಷ್ಠ ಕಾರ್ಯಕ್ರಮ ಪರಿಚಯಿಸುವುದರ ಮೂಲಕ ಶಾಲೆಗಳಲ್ಲಿನ ಗ್ರಂಥಾಲಯಗಳಿಗೆ ಮರು ಜೀವ ನೀಡಿತ್ತು. ಈ ನಿಟ್ಟಿನಲ್ಲಿ ನಮ್ಮ ಮುಖ್ಯಗುರುಗಳ ಗ್ರಂಥಾಲಯ ನಿರ್ವಹಣೆಯನ್ನು ನನಗೆ ವಹಿಸಿಕೊಟ್ಟರು. ಮೊದಲಬಾರಿಗೆ ಗ್ರಂಥಾಲಯ ನಿರ್ವಹಣಾ ವಹಿ ಜೀವ ಪಡೆಯಿತು.
ಗ್ರಂಥಾಲಯ ಪುಸ್ತಕ ಖರೀದಿಗಾಗಿ ಸರ್ವ ಶಿಕ್ಷಣ ಅಭಿಯಾನದಡಿಯಲ್ಲಿ ಪ್ರತಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ 10,000 ರೂ ಗಳ ಅನುದಾನ ಜಮೆ ಮಾಡಲಾಗಿತ್ತು. ಎಸ್.ಡಿ.ಎಂ.ಸಿ ಅವರ ಅನುಮೋದನೆಯಿಂದಿಗೆ ಒಂದು ದಿನ ಕಲಬುರಗಿಯ ವಿವಿಧ ಪುಸ್ತಕ ಮಳಿಗೆಗಳನ್ನು ಸಂಪರ್ಕಿಸಿ ನಾವು ಕೊಳ್ಳಲು ಬಯಸಿದ್ದ ಪುಸ್ತಕಗಳ ಪಟ್ಟಿ ನೀಡಲಾಯಿತು. ಭಾಗಶಃ ಲಭ್ಯವಿರುವ ಮಳಿಗೆಯಿಂದ ಸುಮಾರು 1000 ಪುಸ್ತಕಗಳನ್ನು ಖರೀದಿಸಲಾಯಿತು. ಒಂದು ಭಾನುವಾರ ಎಲ್ಲ ಶಿಕ್ಷಕರು ಹಾಗೂ 7 ನೆಯ ತರಗತಿ ವಿದ್ಯಾರ್ಥಿಗಳ ಸೇರಿ ಎಲ್ಲ ಪುಸ್ತಕಗಳನ್ನು ಕ್ಷೇತ್ರದನುಸಾರ ಪ್ರತ್ಯೇಕಿಸಿದೆವು.
ಕಥಾ ಪುಸ್ತಕಗಳು
ಪ್ರಬಂಧಗಳು
ಜೀವನ ಚರಿತ್ರೆಗಳು
ಕವಿತೆ ಸಂಕಲನಗಳು
ಕಾಮಿಕ್ಸ್
ವಿಜ್ಞಾನ ಬರಹಗಳು
ಇಂಗ್ಲಿಷ್ ಗ್ರಾಮರ್
ಆರೋಗ್ಯ ಪುಸ್ರಕಗಳು
ವಚನ ಸಂಗ್ರಹ
ನುಡಿಮುತ್ತುಗಳು
ಸಂದರ್ಭ ಸೇವೆ ಪುಸ್ತಕಗಳು
ಹೀಗೆ ವಿಭಾಗಿಸಿ ಇದ್ದ ಒಂದೇ ಒಂದು ಅಲ್ಮೇರಾದಲ್ಲಿ ಜೋಡಿಸಿಡಲಾಯಿತು. ಇದರಿಂದ ದೊಡ್ಡ ದೊಡ್ಡ ಗ್ರಂಥಾಲಯಗಳಲ್ಲಿ ಹೇಗೆ ಕೃತಿ ವಿಂಗಡಣೆಯಾಗುತ್ತದೆ ಎಂಬುದನ್ನು ವಿದ್ಯಾರ್ಥಿಗಳು ಅರಿತುಕೊಂಡಂತಾಯಿತು. ಸಂದರ್ಭ ಸೇವೆ ಪುಸ್ತಕಗಳನ್ನು ಹೊರತು ಪಡಿಸಿ ಉಳಿದ ಪುಸ್ತಕಗಳನ್ನು ಮಕ್ಕಳಿಗೆ ಓದಲು ನೀಡುವ ನಿರ್ಧಾರ ಮಾಡಲಾಯಿತು. ಪ್ರತಿ ಸೋಮವಾರ ನಾಲ್ಕನೆಯ ತರಗತಿ ವಿದ್ಯಾರ್ಥಿಗಳಿಗೆ,ಮಂಗಳವಾರ ಐದನೆಯ ತರಗತಿ ವಿದ್ಯಾರ್ಥಿಗಳಿಗೆ ಹೀಗೆ ಶುಕ್ರವಾರದ ವರೆಗೂ ವಿವಿಧ ತರಗತಿಗೆ ಪುಸ್ತಕ ನೀಡುವುದು. ಅಲ್ಲಿಂದ ಒಂದು ವಾರದ ವರಗೆ ಓದಿ ಮರಳಿಸಲು ಸೂಚಿಸಲಾಯಿತು. ಶನಿವಾರ ತಾವು ಓದಿದ ಪುಸ್ತಕದ ಮೇಲೆ ಚರ್ಚೆ ಮಾಡುವ ಅವಕಾಶ.ಪುಸ್ತಕ ಮರಳಿ ನೀಡುವಾಗ ಆ ಪುಸ್ತಕದ ಕುರಿತಾದ ಮೆಚ್ಚುಗೆ/ವಿಮರ್ಶೆ ರೂಪದ ಬರೆಹವನ್ನು ವಿದ್ಯಾರ್ಥಿಗಳು ನೀಡಬೇಕಿತ್ತು. ಇದರಿಂದ ವಿದ್ಯಾರ್ಥಿಗಳ ವರ್ತನೆ ಕೂಡ ಬದಲಾಗತೊಡಗಿತು. ಏನೂ ಓದಲಾಗದ ವಿದ್ಯಾರ್ಥಿಗಳು ಪ್ರಯತ್ನವಾದಿಗಳಾದರು. ಓದಿದವರು ಅಭಿಪ್ರಾಯ ವ್ಯಕ್ತಪಡಿಸ ತೊಡಗಿದರು. ಇದೆಲ್ಲದರ ಪರಿಣಾಮ ನಾವು ನಮ್ಮ ಶಾಲೆಯಿಂದ ಚಿಣ್ಣರ ಚಿತ್ತಾರ ಎಂಬ ಮಾಸಪತ್ರಿಕೆ ಹಾಗೂ ಇಂಚರ ಎಂಬ ಗೋಡೆ ಪತ್ರಿಕೆ ತಯಾರಿಸಲು ಸಾಧ್ಯವಾಯಿತು. ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಓದಿಕೊಳ್ಳಲು ಪ್ರತ್ಯೇಕವಾದ ಗ್ರಂಥಾಲಯ ಇಲ್ಲ. ಆದರೆ ಮುಖ್ಯಗುರುಗಳ ಕೊಠಡಿಯ ಒಂದು ಭಾಗದಲ್ಲಿ ಈ ಪುಸ್ತಕ ಕೊಡು ಕೊಳ್ಳುವಿಕೆ ಹಾಗೂ ಓದು ಆರಂಭವಾಗಿತ್ತು. ಪ್ರಾಥಮಿಕ ಹಂತದ ವಿದ್ಯಾರ್ಥಿಗಳಿಗೆ ಕತೆ ಮತ್ತು ಕಾಮಿಕ್ಸ್ ಇಷ್ಟವಾದರೆ ಹಿರಿಯ ಪ್ರಾಥಮಿಕ ಹಂತದ ವಿದ್ಯಾರ್ಥಿಗಳಿಗೆ ಜೀವನ ಚರಿತ್ರೆ ಹಾಗೂ ಪ್ರಬಂಧಗಳು ಇಷ್ಟವಾಗುತ್ತಿದ್ದವು. ನಾನು ರಜೆಯಲ್ಲಿದ್ದಾಗ ವಿದ್ಯಾರ್ಥಿ ಮಂತ್ರಿಮಂಡಲದ ಮಂತ್ರಿಯೊಬ್ಬ ಹಿರಿಯ ಶಿಕ್ಷಕರ ಸಹಾಯದೊಂದಿಗೆ ಗ್ರಂಥ ವಿತರಣಾ ವಹಿಯ ನಿರ್ವಹಣೆ ಮಾಡುತ್ತಿದ್ದ. ಓದುವ ಕಲೆಯ ಬಗ್ಗೆ ಪ್ರತಿ ವಾರ ಚರ್ಚೆಯಾಗುತ್ತಿತ್ತು. ತೀರಾ ಓದಲು ಬಾರದ ವಿದ್ಯಾರ್ಥಿಗಳಿಗೆ ಅಕ್ಷರ ಫೌಂಡೇಷನ್ನಿನವರು ಸರಬುರಾಜು ಮಾಡಿದ್ದ ಓದುವೆ ನಾನು ಎಂಬ ಕಲಿಕಾ ಕಾರ್ಡ್ ಗಳನ್ನು ನೀಡಿ ಓದಿಸಲಾಗುತ್ತಿತ್ತು. ಮುಂದುವರೆದು ಗ್ರಾಮದಲ್ಲಿನ ಮಾಜಿ ವಿದ್ಯಾರ್ಥಿಗಳಿಗೂ ಹಾಗೂ ಕೆಲ ಗ್ರಾಮದ ಯುವಕರಿಗೂ ನಮ್ಮ ಶಾಲಾ ಗ್ರಂಥಾಲಯ ಸದ್ಬಳಕೆಯಾಗತೊಡಗಿತು. ದಿನ ನಿತ್ಯ ಎರಡು ತರಹದ ನಿಯತಕಾಲಿಕೆಗಳು, ಬಾಲ ವಿಜ್ಞಾನ, ಜೀವನ ಶಿಕ್ಷಣ, ಶಿಕ್ಷಣ ವಾರ್ತೆ,ಶಿಕ್ಷಣ ಶಿಲ್ಪಿ ಮುಂತಾದ ಮಾಸಪತ್ರಿಕೆಗಳು ನಮ್ಮ ಶಾಲಾ ಗ್ರಂಥಾಲಯದಲ್ಲಿದ್ದವು.
ಇಲ್ಲಿ ಹೇಳುವುದಿಷ್ಟೆ. ನಾವು ಶಿಕ್ಷಕರು ಮಕ್ಕಳ ಓದಿಗೆ ಒಂದು ವೇದಿಕೆ ಸೃಷ್ಟಿ ಮಾಡಿಕೊಟ್ಟರೆ ಸಾಕು. ವಿದ್ಯಾರ್ಥಿಗಳು ಸರಾಗವಾಗಿ ಸಾಗಿಬಿಡುತ್ತಾರೆ. ಒಂದಿಷ್ಟು ಸಮಯ ಹೊಂದಾಣಿಕೆ ಮಾಡಿಕೊಂಡು ಇಂತಹ ಕಾರ್ಯಕ್ರಮಗಳನ್ನು ಜೀವಂತವಾಗಿಟ್ಟರೆ ಬಹಳ ಪರಿಣಾಮಕಾರಿ ಫಲಿತಾಂಶ ಪಢಯಬಹುದಾಗಿದೆ. ಬಹಳಷ್ಟು ಸಲ ಪ್ರಯತ್ನಗಳು ಫಲ ನೀಡುವುದಿಲ್ಲ. ಆದರೆ ನಂಬಿ ಕೆಟ್ಟವರಿಲ್ಲ..
@ಲೇಖಕರು : ಸಚಿನ್ ಕುಮಾರ ಹಿರೇಮಠ
No comments:
Post a Comment