ನಮ್ಮ ಶಾಲೆಯು ಎಲ್ಲ ಶಾಲೆಗಳಂತಲ್ಲ. ನಾವು ಅಂದುಕೊಂಡಂತೆ ಎಲ್ ಆಕಾರದಲ್ಲೋ, ಓ ಆಕಾರದಲ್ಲೋ,ಹೆಚ್ ಆಕಾರದಲ್ಲೋ ಅಥವಾ ಯೂ ಆಕಾರದಲ್ಲೋ ಅಲ್ಲದ ಅಲ್ಲಲ್ಲಿ ಚಿಕ್ಕ ಮಕ್ಕಳು ಗೋಲಿ ಆಡುವಾಗ ಜೋಡಿಸಿಟ್ಟ ಗೋಲಿಗಳಂತೆ ಅಲ್ಲೊಂದು ಇಲ್ಲೊಂದು ಇರುವ ತರಗತಿ ಕೋಣೆಗಳು. ಮೂರು ತರಗತಿ ಕೋಣೆಗಳ ನಡುವೆ ಎರಡು ರಥ ಬೀದಿಗಳು. ಉಳಿದ ಮೂರು ತರಗತಿಗಳು 300 ಮೀ ಅಂತರದ ಸ್ಮಶಾನದ ಸಮೀಪ, ಹಳ್ಳದ ದಂಡೆಯ ಮೇಲೆ. ಅಲ್ಲಿಂದಿಲ್ಲಿಗೆ ತಿರುಗಾಡುವುದರೊಳಗೆ ಹೆಚ್ಚು ಕಡಿಮೆ ಐದತ್ತು ನಿಮಿಷ ವ್ಯರ್ಥ. ಮಳೆಗಾಲದಲ್ಲಂತೂ ನಮ್ಮೆಲ್ಲರ ಪಾಡು ಹೇಳತೀರದು. ಅನೇಕ ಸಲ ಮಕ್ಕಳು ಹಾಗೂ ಶಿಕ್ಷಕರು ಜಾರಿ ಬಿದ್ದದ್ದೂ ಉಂಟು. ಪಾಠೋಪಕರಣಗಳನ್ನು ಹೊತ್ತೊಯ್ಯುವ ಸಂದರ್ಭದಲ್ಲಂತೂ ಅಲ್ಲೇ ಮಲಗಿದ್ದ ನಾಯಿಗಳಿಗೆ ಎಕ್ಸ್ಟ್ರಾ ಡ್ಯೂಟಿ. ಹಿಂದೆ ಸರಿಯುತ್ತ ಬೊಗಳಿದ್ದೇ ಬೊಗಳಿದ್ದು. ಅದರ ಮಾಲೀಕ ಮಾತ್ರ ಅದು ಬೊಗಳುವಷ್ಟು ಹೊತ್ತು ಕಿವುಡನಾಗೇ ಇರುತ್ತಿದ್ದ.
"ನಾಯಿ ಹಿಡಿದು ಕೊಳ್ಳಯ್ಯ.." ಅಂತ ಜೋರಾಗಿ ಕೂಗಿದಾಗ,
"ಅದೇನ್ ಕಡ್ಯಾಂಗಿಲ್ಲ ಬುಡ್ರಿ ಮಾಸ್ತರ್ರ.." ಅಂತ ಹಲ್ಲು ಕಿರಿಯುತ್ತಿದ್ದಾತ. ಆ ಐದತ್ತು ನಿಮಿಷದಲ್ಲಿ ನಮಗಂತೂ ನಖಶಿಖಾಂತ ಕೋಪ.
ಆಗ ಉತ್ತಮ ಮರಗಳಿರುವ, ಶಾಲಾ ತೋಟವಿರುವ ಹಾಗೂ ಉದ್ಯಾನವನವಿರುವ ಶಾಲೆಗಳಿಗೆ ಹಸಿರು ಶಾಲೆ/ಪರಿಸರ ಮಿತ್ರ ಎಂಬ ಪ್ರಶಸ್ತಿ ನೀಡುತ್ತಿದ್ದರು. ನಮ್ಮ ಸಿ.ಆರ್.ಪಿ ಅವರು ಸಂದರ್ಶನ ನೀಡಿದಾಗ "ಶಾಲೆಯಲ್ಲಿ ಸಸಿ ನೆಟ್ಟು ಹೂದೋಟ ಮಾಡಿ" ಎಂದು ಪದೇ ಪದೇ ಹೇಳುತ್ತಿದ್ದರು. ಆದರೆ ಶಾಲಾ ಆಟದ ಮೈದಾನವಿರಲಿಲ್ಲ. ಬೀದಿಯಿರುವ ಶಾಲಾ ಕೋಣೆಗಳ ಮುಂದೆ ಸಸಿ ನೆಡುವಂತಿರಲಿಲ್ಲ. ಒಂದೇ ಕಡೆ ತರಗತಿ ಕೋಣೆಗಳಿದ್ದು ಮುಂದೆ ಒಂದಿಷ್ಟು ಸಸಿ ನೆಡಲು ಜಾಗವಿದ್ದರೂ ಬೇಸಿಗೆ ಕಾಲದಲ್ಲಿ ಅವುಗಳಿಗೆ ನೀರಿರದೆ ಒಣಗಿ ಹೋದ ಪ್ರಸಂಗವನ್ನೊಮ್ಮೆ ನಮ್ಮ ಮುಖ್ಯೋಪಾಧ್ಯಾಯರು ಹೇಳಿದ್ದರು. ಹಾಗೂ ಮುಂದುವರೆದು ಸಸಿಗಳನ್ನು ನೆಟ್ಟು ನಾಲ್ಕಡಿ ಬೆಳೆಸುವ ಹೊತ್ತಿಗೆ ಬೇಸಿಗೆ ರಜೆ ಬರುತ್ತಿತ್ತು.. ರಜೆ ಮುಗಿಸಿ ಬರುವುದರೊಳಗಾಗಿ ಆ ಗಿಡ ನೀರಿಲ್ಲದೆ ಬಾಯಾರಿ ಸಾಯುತ್ತಿತ್ತು ಅಥವಾ ಅಲ್ಲಿನ ಬಡಪಾಯಿ ದನಕರುಗಳಿಗೆ ಆಹಾರವಾಗಿರುತ್ತಿತ್ತು.
ಇನ್ನೊಂದು ಕಾರಣ ಹೇಳುವುದಾದರೆ ಮೇಲಿನ ಸ್ಮಶಾನದ ಸಮೀಪದ ತರಗತಿ ಕೋಣೆಗಳಿಗೆ ಕಂಪೌಂಡ್ ಇದ್ದರೂ ಅಲ್ಲಿ ಗಿಡ ಬೆಳೆಯಲು ಮಣ್ಣಿಲ್ಲದೆ ಫರ್ಸಿ ಕಲ್ಲುಗಳಿರುವ ಗರ್ಚು ನೆಲ.. ಅಲ್ಲಿ ಸಸಿಗಳು ಗಿಡವಾಗಲು ಸಾಧ್ಯವೇ ಇರಲಿಲ್ಲ.. ನಾವು ಪ್ರತಿ ವರ್ಷ ಜೂನ್ 5 ರ ಒಳಗಾಗಿ ಅರಣ್ಯ ಇಲಾಖೆಯಿಂದ ಐದಾರು ಬೇವು, ಹೊಂಗೆ, ಪೇರಲ ಮುಂತಾದ ಸಸಿಗಳನ್ನು ತಂದು ನೆಟ್ಟು ಬೀಗುತ್ತಿದ್ದೆವು. ಆಗ ನಮ್ಮ ಸಂಭ್ರಮವನ್ನು ಕಂಡ ಅಲ್ಲಿನ ಮಂದಿ,
"ಕಲ್ಲಾಗ ಏನ್ ಗಿಡ ಬೆಳಸ್ತೀರಿ..? ಕೆಳಗ ಗರ್ಚ್ ತುಂಬ್ಯಾದ.. ಅದಕ ಹೇಳೂದ್, ಸ್ಟೇಷನ್ ಮಾಸ್ತರ್ ಗ ನಿದ್ದಿ ಇಲ್ಲ; ಕನ್ನಡ ಸಾಲಿ ಮಾಸ್ತರ್ ಗ ಬುದ್ಧಿ ಇಲ್ಲ ಅಂತ.."
ಹೀಯಾಳಿಸಿದರೋ ಬೈದರೋ ನಮಗಂತೂ ತಿಳಿಲಿಲ್ಲ..ಅದರಲ್ಲಿ ಈ ಗಿಡ ಬೆಳಸಲೇ ಬೇಕು ಅಂತ ಹುಚ್ಚು ಹೊಕ್ಕಿದ್ದು ನಮ್ಮಹಿರಿಯ ಸಹೋದ್ಯೋಗಿ ಶಿಕ್ಷಕರಾದ ಶ್ರೀ ಗೋಣೆಪ್ಪ ಸರ್ ಗೆ. ಬಾಟನಿ ಓದಿದ್ದ ನನಗೆ ಸಸಿಗಳನ್ನ ಈ ಕಲ್ಲುನೆಲದಲ್ಲಿ ಗಿಡ ಮಾಡುವುದು ಹೇಗೆ ಎಂಬ ಪ್ರ್ಯಾಕ್ಟಿಕಲ್ ಜ್ಞಾನವಿರಲಿಲ್ಲ..
"ಸರ್ ಇದನ್ನ ಇಲ್ಲಿಗೆ ಬಿಡೋಣ್ರಿ.." ಅಂತಂದೆ.
ಅದಕ್ಕ ಗೋಣೆಪ್ಪ ಸರ್ ಅಂದರು,
"ಸರ್ ಮಾಡುವ ಮನಸ್ಸಿದ್ರ ಕಲ್ಲ ಕೂಡ ಕರಗತೈತಿ ಸರ್....ಈ ಸಲ ಸಸಿ ನೆಟ್ಟು ಗಿಡ ಬೆಳಸೋಣ" ಅಂತಂದರು..
ಅಕ್ಟೋಬರ್ ರಜೆಯ ಹೊತ್ತಿಗೆ ಅದೇ ಗರ್ಚುಗಲ್ಲುಗಳಿರುವ ಜಾಗದಲ್ಲಿ ಸಸಿ ನೆಟ್ಟು ಕಾಪಾಡುವ ಕೆಲಸ ಶುರುವಾಯಿತು. ಅವರ ಪ್ರಕಾರ ಈ ಗರ್ಚುಗಲ್ಲುಗಳಿರುವ ನೆಲದಲ್ಲಿ ಗುಂಡಿ ತೋಡಿಚಮಣ್ಣು ಹಾಕಿ ಸಸಿ ನೆಟ್ಟರೆ ಸಸಿಗಳು ಚೆನ್ನಾಗಿ ಬೆಳೆಯುತ್ತವೆ ಎಂಬುದು. ನಾನು ತರಗತಿಯಲ್ಲಿ ಮರಗಿಡಗಳಿಂದ ನಮ್ಮಂತಹ ಜೀವಿಗಳಿಗಾಗುವ ಪ್ರಯೋಜನಗಳು ಹಾಗೂ ಪರಿಸರ ಸಂರಕ್ಷಣೆಯ ಕುರಿತು ಮಾತಾಗುತ್ತಿದ್ದೆ. ಅಲ್ಲಿಯೇ ಅರಣ್ಯ ಇಲಾಖೆಯಲ್ಲಿ ವಾಚರ್ ಆಗಿ ಕೆಲಸ ಮಾಡುತ್ತಿದ್ದ ಹಿರಿಯರೂ ಆದ ಸಿದ್ದಪ್ಪ ಎಂಬುವವರನ್ನು ಸಂಪರ್ಕಿಸಿ ಸುಮಾರು 50 ಸಸಿಗಳನ್ನು ನೀಡುವಂತೆ ವಿನಂತಿಸಿದೆವು. ಅಕ್ಟೋಬರ್ ಮೊದಲ ವಾರದಲ್ಲಿ ಸಸಿಗಳು ಬಂದವು.ಅವುಗಳಲ್ಲಿ ಹೊಂಗೆ, ಬೇವು, ಪೇರಲ, ಬಾದಾಮಿ, ಸೇವಂತಿಗೆ, ದಾಸವಾಳ ಮುಂತಾದ ಸಸಿಗಳಿದ್ದವು. ಹಿರಿಯ ತರಗತಿ ವಿದ್ಯಾರ್ಥಿಗಳಿಗೆ ನೀರು ತರುವ ಜವಾಬ್ದಾರಿ. ಗೋಣೆಪ್ಪ ಸರ್ ಅವರು ಸ್ವತಃ ಶಾಲಾ ಆವರಣದಲ್ಲಿ 30-35 ಗುಂಡಿ ತೋಡಿದರು. ನಾನು ಹಾಗೂ ನಮ್ಮ ಇನ್ನೊಬ್ಬ ಶಿಕ್ಷಕರಾದ ಶ್ರೀ ಮಂಜುನಾಥ ಅವರು ಪಕ್ಕದ ಹೊಲದಲ್ಲಿರುವ ಮಣ್ಣನ್ನು ಗುಂಡಿಯೊಳಗೆ ಹಾಕಿ ವ್ಯವಸ್ಥೆಗೊಳಿಸಿದೆವು. ಹಳೆಯ ವಿದ್ಯಾರ್ಥಿಗಳಿಂದ ಮತ್ತೆ 15-20. ಗುಂಡಿ ತೋಡಿಸಿ ಮಣ್ಣು ಹಾಕಿ ಸಿದ್ಧಗೊಳಿಸಿದೆವು. 50 ಸಸಿ ನೆಟ್ಟೆವು. ಉಳಿದ ವಿದ್ಯಾರ್ಥಿಗಳು ನೀರುಣಿದರು.5,6,7 ವಿದ್ಯಾರ್ಥಿಗಳಿಗೆ ಒಬ್ಬರಿಗೆ ಒಂದು ಸಸಿಯನ್ನು ಗುರುತು ಮಾಡಿ ಅದು ಬಾಡದಂತೆ ಹಾಗೂ ಉತ್ತಮವಾಗಿ ಬೆಳೆಸುವ ಜವಾಬ್ದಾರಿ ನೀಡಲಾಯಿತು. ಬೇಸಿಗೆಯಲ್ಲಿ ಸ್ವತಃ ಗೋಣೆಪ್ಪ ಸರ್ ಅಲ್ಲಿಯೇ ಉಳಿದುಕೊಂಡು ಆ ಎಲ್ಲ ಸಸಿಗಳು ನೀರುಣ್ಣುವಂತೆ ಮಾಡಿದರು. ಮುಂದೆ ಮಳೆಗಾಲದಲ್ಲಿ ಚೆನ್ನಾಗಿ ಮಳೆ ಸುರಿದು ಎರಡನೆಯ ವರ್ಷದಲ್ಲಿ 40 ಸಸಿಗಳು ಚೆನ್ನಾಗಿ ಬೆಳೆಯಲಾರಂಭಿಸಿದವು. ವಿದ್ಯಾರ್ಥಿಗಳೂ ಸಹ ತಮಗೆ ನೀಡಿದಂತ ಸಸಿಗಳನ್ನು ತಮ್ಮದೇ ಎನ್ನುವಂತೆ ಪೋಷಿಸತೊಡಗಿದರು. ಆ ಸಸಿಗಳ ಹಾಗೂ ಅವರ ನಡುವೆ ಒಂದು ಅವಿನಾಭಾವ ಸಂಬಂಧ ಬೆಳೆಯಿತು. ಅದರ ಫಲವೇನೋ ಮೂರು ವರ್ಷದಲ್ಲಿ ಆ ಎಲ್ಲ ಸಸಿಗಳು ನಮ್ಮ ಹೆಗಲಿನವರೆಗೂ ಬೆಳೆದಿದ್ದವು.
ಇದರ ತಾತ್ಪರ್ಯ ಇಷ್ಟೇ. ಶಿಕ್ಷಕರು ಯಾವುದೇ ಒಂದು ಕಾರ್ಯವನ್ನು ಮನಸಾಪೂರ್ವಕ ಮಾಡಿದಲ್ಲಿ ಆ ಕಾರ್ಯ ಎಷ್ಟೇ ಕಠಿಣವಿದ್ದರೂ ಹೂ ಎತ್ತಿದಷ್ಟೇ ಸರಳ. ಪರಿಸರ ಕಾಳಜಿ ಈಗಿನ ತುರ್ತು. ಮಕ್ಕಳಿಗೆ ಪರಿಸರ ಪ್ರಜ್ಞೆ, ಪರಿಸರ ಪ್ರೀತಿ ಬೆಳೆಸಿ ಅವರು ಆ ಪರಿಸರದೊಂದಿಗೆ ಹೇಗೆ ಹೊಂದಿಕೊಂಡು ಹೋಗಬೇಕೆಂಬುದನ್ನು ಪಾಠದ ಭಾಗವಾಗಿಯೇ ಕಲಿಸಬೇಕು. ವನಮಹೋತ್ಸವ, ವನ ಭೋಜನ, ಶೈಕ್ಷಣಿಕ ಪ್ರವಾಸದಂತಹ ನೈಜ ಅನುಭವ ನೀಡಿದರೆ ಆ ವಿದ್ಯಾರ್ಥಿ ನಿಜವಾಗಲೂ ಪರಿಸರವನ್ನು ಪ್ರೀತಿಸಲಾರಂಭಿಸುತ್ತಾನೆ. ಹೀಗೆ ವಿದ್ಯಾರ್ಥಿಗಳಲ್ಲಿ ನೈಜ ಅನುಭವದ ಮೂಲಕ ಹುಟ್ಟುವ ಆಸಕ್ತಿ,ಆ ಆಸಕ್ತಿ ಹುಟ್ಟಿಸುವ ಪ್ರೀತಿ ಇದೆಯಲ್ಲ,ಅದು ಅಸಾಧ್ಯವನ್ನು ಸಾಧ್ಯವಾಗಿಸುತ್ತದೆ. 40 ಗಿಡಗಳಿಂದ ನಮ್ಮ ಶಾಲೆ ಸದಾಕಾಲ ಕಂಗೊಳಿಸತೊಡಗಿತು. ಕೆಲ ದಿನಗಳ ನಂತರ ಮಾನ್ಯ ಬಿ.ಇ.ಓ ಅವರು ಸಂದರ್ಶಿಸಿ ಮೆಚ್ಚುಗೆ ಕೂಡ ವ್ಯಕ್ತಪಡಿಸಿದರು. ಪರಿಸರ ಮಿತ್ರ ಪ್ರಶಸ್ತಿ ಪಡೆಯುವ ಮಟ್ಟಿಗೆ ನಮ್ಮ ಶಾಲೆ ಬದಲಾಗಲಿಲ್ಲ. ಆದರೆ ಪ್ರೀತಿಯಿಂದ ಬೆಳೆಸಿದ ಆ ಸಸಿಗಳ ಹಾಗೂ ನಮ್ಮ ವಿದ್ಯಾರ್ಥಿಗಳ ನಡುವೆ ಯಾವುದೇ ವ್ಯತ್ಯಾಸ ತೋರಲಿಲ್ಲ..ಕಲಿಸಲು ಹೋಗಿ ಕಲಿತಿದ್ದಾಯಿತು.ರಾಷ್ಟ್ರ ಕವಿ ಜಿ.ಎಸ್.ಎಸ್ ಅವರ ಕವಿತೆಯಲ್ಲಿನ ಈ ಸಾಲು ಸದಾ ನಮ್ಮನ್ನು ಕಾಡಬೇಕು..ಪ್ರೀತಿ ಇಲ್ಲದ ಮೇಲೆ ಹೂವು ಅರಳಿತು ಹೇಗೆ..? ಮುಂದುವರೆದು
ಕಲ್ಲು ಕರಗಿತು ಹೇಗೆ..?
©ಲೇಖಕರು : ಸಚಿನ್ ಕುಮಾರ ಬ.ಹಿರೇಮಠ
No comments:
Post a Comment