ಪ್ರಮುಖ ಸಂದೇಶ

ಎಲ್ಲ ಶಿಕ್ಷಕರು ತಮ್ಮ ವರ್ಕ್ ಫ್ರಂ ಹೋಮ್ ಕೆಲಸಗಳನ್ನು ತಮ್ಮ ವೈಯಕ್ತಿಕ ಬ್ಲಾಗ್ ಗೆ ಅಪಲೋಡ್ ಮಾಡುವುದು ಕಡ್ಡಾಯ. ಮುಖ್ಯಶಿಕ್ಷಕರು ತಮ್ಮ ಶಾಲಾ ಬ್ಲಾಗ್ ರಚಿಸಿ ಅದರಲ್ಲಿ ತಮ್ಮ ಶಿಕ್ಷಕರ ಬ್ಲಾಗ್‌ಗಳನ್ನು ಲಿಂಕ್ ಮಾಡುವುದು.

Tuesday, 30 April 2019

ಫೇಸ್ ಬುಕ್ ಪಾಠಟಿಪ್ಪಣಿ-೯ : ಲಕ್ಷ್ಮೀ ಎಂಬ ಗೋಪಾಲಕಿ


ಆ ಪುಟ್ಟ ಹುಡುಗಿಯ ಮುದ್ದು ಮುಖ ಈಗಲೂ ನೆನಪಿದೆ. ಬಹುಶಃ ಅವಳ ಭೇಟಿ ನನ್ನ ವೃತ್ತಿ ಬದುಕಿನ ಮಹತ್ತರ ತಿರುವಿಗೆ ಕಾರಣ ಎಂದರೂ ತಪ್ಪಾಗಲಾರದು. ನಲಿ ಕಲಿ ತರಗತಿಗೆ ದಾಖಲಾದಾಗ ಅಷ್ಟೇನೂ ಹಚ್ಚಿಕೊಳ್ಳದ ಅವಳು ಹಿರಿಯ ತರಗತಿಗೆ ಬಂದಾಗ ಗುರು ಶಿಷ್ಯ ಸಂಪ್ರದಾಯಕ್ಕೆ ಅವಳೊಂದು ಹೊಸ ಭಾಷ್ಯ ಬರೆದು ಹೋಗಿದ್ದಳು.
ಅವಳ ಹೆಸರು ಲಕ್ಷ್ಮೀ. ಸಾಕ್ಷಾತ್ ಶ್ರೀ ಲಕ್ಷ್ಮೀಯ ಕಳೆ ಮುಖದಲ್ಲಿ. ಆದರೆ ಹೆಸರಿನಲ್ಲೇನಿದೆ? ಎನ್ನುವಂತೆ ಅವಳ ಹೆಸರು ಲಕ್ಷ್ಮೀ ಆಗಿದ್ದರೂ ಮನೆಯಲ್ಲಿ ತೀರಾ ಬಡತನ. ಅವಿಭಕ್ತ ಕುಟುಂಬವಾದ್ದರಿಂದ ತಂದೆ ತಾಯಿ ಅಜ್ಜಿ ಸೇರಿದಂತೆ ಎಲ್ಲರೂ ಸ್ವಂತ ಹೊಲಮನೆ ಕೆಲಸದೊಂದಿಗೆ ಕೂಲಿ ಕೆಲಸಕ್ಕೂ ಹೋಗುತ್ತಿದ್ದರು. ಮನೆಯ ದನಕರುಗಳ ಜವಾಬ್ದಾರಿ ಈಕೆಗೆ. ಶಾಲೆಗೆ ಅನಿಯಮಿತವಾದ ಹಾಜರಿ. ಅವಳ ತಂದೆ ನಿಂಗಣ್ಣನಿಗೂ ಅಜ್ಜಿ ಕಾಳಮ್ಮನಿಗೂ ಅನೇಕ ಬಾರಿ ತಾಕೀತು ಮಾಡಿದ್ದೆವು. ನಮ್ಮ ಮುಂದೆ ಹ್ಞೂಂಗುಟ್ಟಿ ಮತ್ತದೇ ಕಾಯಕ. ಈಕೆ ಶಾಲೆಗೆ ಹಾಜರಾದಾಗ ಅದೇ ಸಿದ್ಧ ಉತ್ತರ."ಸರ್ ಮನ್ಯಾಗೆಲ್ರೂ ಹೊಲಕ್ಕ ಹೋಗಿದ್ರಿ..ನಾ ದನಕರ ಹೊಡ್ಕೊಂಡ್ ಹೋಗಿದ್ಯರೀ.."
ವಾರಕ್ಕೆ ಎರಡು ಮೂರು ದಿನ ಗೈರಾದರೂ ಲಕ್ಷ್ಮೀಯ ಬುದ್ಧಿಶಕ್ತಿ ಅಸಾಮಾನ್ಯವಾದುದು. ಮರುದಿನ ಶಾಲೆಗೆ ಬಂದಾಗ ಎಲ್ಲವನ್ನೂ ತನ್ನದೇ ಆದ ವೇಗದಲ್ಲಿ ಕಲಿತುಬಿಡುತ್ತಿದ್ದಳು. ಅವಳ ಗ್ರಹಿಕೆ ಎಷ್ಟು ತೀಕ್ಷ್ಣವಿತ್ತೆಂದರೆ ಅನೇಕ ಬಾರಿ ನಮ್ಮ ಸಣ್ತಪ್ಪುಗಳನ್ನು ಕಂಡು ಹಿಡಿದು ಬಿಡುತ್ತಿದ್ದಳು.
ಒಂದು ದಿನ ಗಣಿತ ಬೋಧನೆಯಲ್ಲಿ ವೃತ್ತದ ವಿಸ್ತೀರ್ಣ A= πr^2 ಹೇಗೆ ಬರುತ್ತೆ ಎಂಬುದನ್ನು ನಾನು ವಿವರಿಸುತ್ತಿದ್ದೆ. ವೃತ್ತವನ್ನು ಕೇಂದ್ರದಿಂದ ಪರಿಧಿಗನುಸಾರವಾಗಿ ಸಮನಾದ ತುಂಡು ಮಾಡಿ ಅವನ್ನು ಹಿಂದುಮುಂದಾಗಿ ಜೋಡಿಸಿ ಒಂದು ಆಯತಾಕಾರ ರಚನೆ ಮಾಡಿದಾಗ ಅದರ ಉದ್ದ ವೃತ್ತದ ಅರ್ಧ ಪರಿಧಿಗೂ, ಅಗಲ ವೃತ್ತದ ತ್ರಿಜ್ಯಕ್ಕೂ ಸಮನಾಗಿರುತ್ತದೆ  ಎಂದು ಹೇಳುವಷ್ಟರಲ್ಲಿ ಆಕೆ ಎದ್ದು ನಿಂತು, "ಸರ್ ಮುಂದಿಂದ ನಾ ಹೇಳ್ತೇನ್ರೀ" ಅಂದಳು.
"ಆಯ್ತು ಹೇಳವಾ" ಅಂತಂದೆ. ಆಕೆ ಯಥಾವತ್ತಾಗಿ ಸೂಕ್ತರೀತಿಯಲ್ಲಿ ವಿವರಿಸಿದಾಗ ನನಗೆ ಎಲ್ಲಿಲ್ಲದ ಖುಷಿ ಹಾಗೂ ಆಶ್ಚರ್ಯ. ನಾ ಕೇಳಿದೆ,
"ಲಕ್ಷ್ಮೀ ನಿನಗೆ ಇದೆಲ್ಲಾ ಹೇಗೆ ಗೊತ್ತು?"
"ಸರ್ ನಿ‌ನ್ನೆ ದನಕರ ಹೊಡ್ಕೊಂಡ್ ಹೋದಾಗ್ರೀ ಪುಸ್ತಕ್ ಒಯ್ದಿದ್ನ್ರೀ.. ಅಲ್ಲಿ ನೀವು ಇವತ್ತ ಈ ಪಾಠ ಹೇಳ್ತೀರಂತ ಗೊತ್ತಿತ್ರಿ.. ದನ ಮೇಯೂತನಕ ನಾನೂ ಗಣಿತ ಪಾಠ ಓದ್ಕೊಂಡ್ನಿರಿ.. ಪುಸ್ತಕದಾಗ ನೀವ್ ಹೇಳ್ದಂಗ ಕೊಟ್ಟಾರ್ರೀ.."
ಅಂತಂದಾಗ ನಾನು ಮನಸ್ಸಿನಲ್ಲೇ ಅಂದುಕೊಂಡೆ,
"ನಾ ಹೇಳ್ದಂಗಲ್ಲವಾ..ಅಲ್ಲಿ ಹೇಳ್ದಂಗನಾ ಹೇಳಬೇಕು"
ಆ ಹುಡುಗಿ ಹೀಗೆ ಪಠ್ಯಪುಸ್ತಕವನ್ನ ಮೊದಲೇ ಓದಿಕೊಂಡು ತನಗೆ ಎಷ್ಟು ಅರ್ಥವಾಗುತ್ತೋ ಅಷ್ಟನ್ನು ಎಲ್ಲ ಶಿಕ್ಷಕರೂ ಪಾಠ ಮಾಡುವ ಸಂದರ್ಭದಲ್ಲಿ ಅಭಿವ್ಯಕ್ತಿಸುತ್ತಿದ್ದಳು. ಅವಳು ಹೇಳುವಂತೆ ಅವಳಿಗೆ ದನ ಕರ ಕಾಯುವ ಕೆಲಸ ವಾರದಲ್ಲಿ ಎರಡು ಮೂರು ದಿನ ಖಾಯಮ್ಮಾಗಿತ್ತು. ಈ ನಿಟ್ಟಿನಲ್ಲೇ ಅವಳು ತಾನೂ ಅಂದು ತರಗತಿಯಲ್ಲಿ ಕಲಿಯಬೇಕಿದ್ದ ಪಾಠಗಳಿಗೆ ಸಂಬಂಧಿಸಿದ್ದಂತೆ ಪಠ್ಯಪುಸ್ತಕಗಳನ್ನು ನೀರು ಬುತ್ತಿಯ ಜತೆ ತಪ್ಪದೇ ಒಯ್ಯುತ್ತಿದ್ದಳಂತೆ. ತನಗೆ ಅರ್ಥವಾಗದ ಅಂಶಗಳನ್ನು ಗುರುತಿಸಿ ಮರುದಿನ‌ ತರಗತಿಯಲ್ಲಿ ನಮ್ಮೊಂದಿಗೆ ಚರ್ಚಿಸುತ್ತಿದ್ದಳು. ಈ ಕೌಶಲ ಅವಳಲ್ಲಿ ಹೇಗೆ ಬೆಳೆಯಿತೋ ಗೊತ್ತಿಲ್ಲ.. ನನ್ನ ಅಭಿಪ್ರಾಯದಲ್ಲಿ ನಲಿ ಕಲಿ ಕಲಿಕಾ ವಿಧಾನದ ಕೃಪೆ ಅನ್ನಿಸುತ್ತದೆ. ಅವಳು ಶಾಲೆಗೆ ಬಂದ ದಿನ ಮಾತ್ರ ಕರಾರುವಕ್ಕಾದ ದಿನಚರಿ ಅವಳದ್ದು. ಶಾಲಾವರಣ ಶುಚಿಗೊಳಿಸಿ, ಪ್ರಾರ್ಥನೆಗೆ ಎಲ್ಲರಿಗೂ ನೆರವಾಗಿ ಕೊನೆಯ ಬೆಲ್ಲಿನ ತನಕವೂ ಅವಳು ಮೈಯೆಲ್ಲ ಕಣ್ಣಾಗಿಸಿ ಜವಾಬ್ದಾರಿ ನಿಭಾಯಿಸುತ್ತಿದ್ದಳು. ಅವಳ ಆ ಸಮಯ ಪಾಲನೆ, ಬದ್ಧತೆ,ತರಗತಿಯಲ್ಲಿ ಅವಳ ವಿನಯವಂತಿಕೆ ಕೆಲವು ಸಲ ನನ್ನನ್ನೂ ನನ್ನ ವೃತ್ತಿ ವೈಕಲ್ಯಗಳನ್ನೂ ತಿದ್ದಿದವು. ಮೊದಲೇ ಹೇಳಿದಂತೆ ನನ್ನ ವೃತ್ತಿಪರತೆಯನ್ನು ಗಟ್ಟಿಗೊಳಿಸಲು ಈ ಲಕ್ಷ್ಮೀಯ ನಡೆನುಡಿಗಳೇ ಕಾರಣ. ಒಬ್ಬ 12 ವಯಸ್ಸಿನ ಹುಡುಗಿ ತಾನು ತನ್ನ ಮನೆಯ ಹಾಗೂ ಶೈಕ್ಷಣಿಕ ಒತ್ತಡಗಳನ್ನು ಇಷ್ಟು ಸಮತೋಲಿತವಾಗಿ ನಿಭಾಯಿಸುತ್ತಿದ್ದಾಳೆ ಎಂದರೆ ಶಿಕ್ಷಕರಾದ ನಮಗೇಕೆ ಆ ಬದ್ಧತೆಯಿಲ್ಲ..? ಅಂತ ಅನೇಕ ಬಾರಿ ಅನ್ನಿಸಿದ್ದುಂಟು. ಅವಳ ಕೈಬರಹವೂ ಅಷ್ಟೇ ಸುಂದರ. ಸಹಪಠ್ಯೇತರ ಚಟುವಟಿಕೆಗಳಲ್ಲೂ ಅವಳದ್ದು ಎತ್ತಿದ ಕೈ. ಆಟೋಟಗಳಲ್ಲಿ ಯಾವ ಗಂಡು ಮಕ್ಕಳಿಗೂ ಅವಳೂ ಕಡಿಮೆಯಿರಲಿಲ್ಲ. ಕೆಲವು ಸಲ ನಾನು,
"ಮುಂದಿನ ತಿಂಗಳು ನಾನು, ಗೋಣೆಪ್ಪ ಸರ್ ಹಾಗೂ ಮಂಜುನಾಥ್ ಸರ್ ಇವರೆಲ್ಲ ಬೇರೆ ಊರಿಗೆ ಟ್ರಾನ್ಸ್ಫರ್ ಆಗಿ ಹೋಗ್ತಿದ್ದೀವಿ" ಅಂತಂದಾಗ ಆಕೆ,
"ನೀವೆಲ್ಲಾ ಹೋದ್ರ ನಾ ಸಾಲಿ  ಬಿಟ್ಟಬಿಡತೀನ್ ನೋಡ್ರಿ ಸರ್.."
ಅಂತ ಬೆದರಿಸುತ್ತಿದ್ದಳು‌. ಹೀಗೆ ಅನ್ನುತ್ತಿದ್ದವಳು ಮತ್ತೇ ಎರಡು ಮೂರು ದಿನ ಗಾಯಬ್.
ಆಕೆಯ ಪೋಷಕರಿಗೆ ಅನೇಕಬಾರಿ ಅವಳನ್ನು ಶಾಲೆ ಬಿಡಿಸಿ ದನ ಕರು ಕಾಯಲು ಕಳಿಸಬೇಡಿ ಎಂದು ಹೇಳಿದ್ದಕ್ಕೆ ಅವಳ ಪೋಷಕರು,
"ಏನ್ ಮಾಡೂದ್ ಸರ್..ಮನಿ ಪರಿಸ್ಥಿತಿ ಹಂಗೈತಿ" ಅಂತ ಗೋಗರೆಯುತ್ತಿದ್ದರು. ಆದರೆ ಹಿರಿಯ ತರಗತಿಗೆ ಬಂದಾಗ ಅವಳ ಗೈರು ಕಡಿಮೆಯಾಗತೊಡಗಿತ್ತು.
ಎಂಟನೆಯ ತರಗತಿ ಬರುವ ಹೊತ್ತಿಗೆ ಅವಳ ಮನೆಯ ಪರಿಸ್ಥಿತಿ ಹೇಗಿತ್ತೊ ಗೊತ್ತಿಲ್ಲ.. ನಾನು ಅಲ್ಲಿಂದ ಬೇರೆ ಕಡೆ ಬಂದ ಮೇಲೆ ಅವಳ ಬಗ್ಗೆ ಯಾವ ಮಾಹಿತಿಯೂ ಸಿಗಲಿಲ್ಲ.. ಕೆಲವರನ್ನು ವಿಚಾರಿಸಿದಾಗ ಅವಳಿಗೆ ಶಾಲೆ ಬಿಡಿಸಿದ್ದಾರೆ ಅಂತ ಹೇಳಿದ್ರು. ಎಸ್ಎಸ್ಎಲ್ಸಿಯಲ್ಲಿ  ಚೆನ್ನಾಗಿ ಪರ್ಸೆಂಟೇಜ್ ಮಾಡಿದ್ದಾಳೆ ಆದ್ರೆ  ಮುಂದೆ ಓದೋದು ಬೇಡ ಅಂತ್ಹೇಳಿ ಮದುವೆಗೆ ತಯಾರಿ ನಡೆದಿದೆ ಅಂತ ಇನ್ನೊಬ್ರು ಹೇಳಿದ್ರು. ಬೇರೆ ಊರಲ್ಲಿ ಇದ್ದಾರೆ ಅಂತ ಮತ್ತೊಬ್ರು ಹೇಳಿದ್ರು. ಅವಳೆಲ್ಲೇ ಇರಲಿ ಅವಳು ತನ್ನ ಬದುಕಿಗಂತೂ ಭದ್ರ ನೆಲೆ ಕಂಡುಕೊಳ್ಳುತ್ತಾಳೆ ಎಂಬ ನಂಬಿಕೆಯಿದೆ‌. ಆದ್ರೆ ಹಳ್ಳಿಗಳಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಮೊಟಕುಗೊಳಿಸಿ ಮದುವೆಗೆ ದೂಡುವ ಕೆಟ್ಟ ಸಂಪ್ರದಾಯ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಇಂತಹ ಲಕ್ಷ್ಮೀಯರು ನಮ್ಮಂಥ ಶಿಕ್ಷಕರ ಮನಸ್ಸಲ್ಲಿ ಸದಾ ನೆನಪಾಗಿ ಇರುತ್ತಾರೆ. ನಮ್ಮ ವೃತ್ತಿಪರತೆಗೆ ಮನಸಿನೊಳಗಿಂದಲೇ ಮಾರ್ಗದರ್ಶನ ನೀಡುತ್ತಿರುತ್ತಾರೆ. ನಾವು ಅವರಿಗೆ ಕೆಲ ವರ್ಷಗಳವರೆಗೆ ಮಾತ್ರ ಗುರು. ಆದರೆ ಅವರೂ ನಮಗೆ ನಿರಂತರ ಗುರು.
©ಲೇಖಕರು : ಸಚಿನ್ ಕುಮಾರ ಬ.ಹಿರೇಮಠ

Monday, 22 April 2019

ಫೇಸ್ ಬುಕ್ ಪಾಠ ಟಿಪ್ಪಣಿ-೮ ತಿರುಪತಿ ಸಿದ್ದಪ್ಪ


ಏನಿದು..? ತಿರುಪತಿ ತಿಮ್ಮಪ್ಪ ಬರೆಯುವ ಬದಲು ತಿರುಪತಿ ಸಿದ್ದಪ್ಪ ಎಂದಾಗಿದೆ ಎಂದು ಅಂದಾಜಿಸಬೇಡಿ. ಇಂದು ನಾ ಬರೆಯ ಹೊರಟಿರುವ ನನ್ನ ಅಪರೂಪದ ವಿದ್ಯಾರ್ಥಿ ತಿರುಪತಿ ಸಿದ್ದಪ್ಪನ ಬಗ್ಗೆ. ಈ ವಿದ್ಯಾರ್ಥಿಗೆ ತಿರುಪತಿ ಎಂಬ ಅಡ್ಡ ಹೆಸರು ಬರಲು ಒಂದು ಸೋಜಿಗದ ಕಾರಣವಿದೆ. 2009 ನೆಯ ಇಸವಿ. ಒಂದನೆಯ ತರಗತಿ ಪ್ರವೇಶ ಮಾಡಿಕೊಳ್ಳುವ ಸಮಯದಲ್ಲಿ ಅರ್ಧ ಅಂಗಿಯಲ್ಲಿ ಬಂದ ಪುಟ್ಟ ಹುಡುಗ ಈ ಸಿದ್ದಪ್ಪ, ನೇರವಾಗಿ ಆಫೀಸಿನ ಟೇಬಲ್ಲಿನ ಮೇಲಿದ್ದ ಪೇಪರ್ ವೇಯ್ಟ್ ನೋಡಿ ಅವರಪ್ಪನಿಗೆ "ಅಪ್ಪ ಎಷ್ಟ ದೊಡ್ಡ ಗೋಟಿ(ಗೋಲಿ) ಐತಿ ನೋಡ್.. " ಅಂತ ತನ್ನ ಮುಗ್ಧತೆ ತೋರಿದ್ದ. ದಾಖಲಾತಿ ಪ್ರಕ್ರಿಯೆ ಮುಗಿದು, ತರಗತಿಯಲ್ಲಿ ಇವನನ್ನು ಕಂಡಾಗ ಹಿರಿಯ ತರಗತಿ ವಿದ್ಯಾರ್ಥಿಗಳು "ಸರ್ ಇಂವ ಸುದೀಪ್ ಪಿಚ್ಚರ ತಿರುಪತಿ ಡೈಲಾಗ್ ಹೇಳ್ತಾನ್ರೀ" ಅಂತಂದಾಗ ನಮಗೆಲ್ಲ ಕುತೂಹಲ.
"ಎಲ್ಲಿ ಡೈಲಾಗ್ ಹೇಳೋ" ಎಂದಾಗ ಥೇಟ್ ಸುದೀಪ್ ಅವರಂತೆಯೇ ತಿರುಪತಿ ಸಿನಿಮಾದ ಬಹುಪಾಲು ಡೈಲಾಗ್ ಗಳನ್ನು ನಿರರ್ಗಳವಾಗಿ ಅಭಿನಯಿಸುತ್ತಿದ್ದ‌. ಇವನಲ್ಲಿ ಉತ್ತಮ ಅಭಿನಯ ಕಲೆಯಿದೆ ಎಂಬುದು ಆಗ ಗೊತ್ತಾಗಿ ಅದೇ ವರ್ಷದ ಪ್ರತಿಭಾ ಕಾರಂಜಿಯಲ್ಲಿ ವಿವಿಧ ವಿಭಾಗಗಳಲ್ಲಿ ನಾಲ್ಕಾರು ಪ್ರಶಸ್ತಿ ಪಡೆದ. ಈ ತಿರುಪತಿ ಸಿನೆಮಾ ಸನ್ನಿವೇಶಗಳನ್ನು ನೈಜವಾಗಿ ಅಭಿನಯಿಸುತ್ತಿದ್ದುದರಿಂದಲೇ ಅವನಿಗೆ 'ತಿರುಪತಿ' ಎಂಬ ಅಡ್ಡ ಹೆಸರು ಬಂದದ್ದು.

ತಿರುಪತಿ ಸಿದ್ದಪ್ಪ ಇದೊಂದೇ ಕಾರಣಕ್ಕೆ ನಮ್ಮಿಷ್ಟದ ವಿದ್ಯಾರ್ಥಿ ಅಂತಲ್ಲ. ಅವನಿಂದ ನಾವೂ ಕಲಿತದ್ದೂ ಬಹಳ. ವಿಜ್ಞಾನದ ಶಿಕ್ಷಕನಾದ ನಾನು ನಲಿ ಕಲಿ ಶಿಕ್ಷಕರು ರಜೆಯ ಮೇಲಿದ್ದಾಗ ಆ ತರಗತಿ ಹೋಗಿ ಕೆಲವು ನೀತಿ ಕತೆಗಳನ್ನು, ಶಿಶುಪ್ರಾಸ,ಅಭಿನಯಗೀತೆಗಲಕನ್ನು ಕಲಿಸುತ್ತಿದ್ದೆ.(ನನಗೆ ಆಗ ನಲಿ ಕಲಿ ತರಬೇತಿ ಆಗಿರಲಿಲ್ಲ) ಹೀಗೆ ಕತೆ ಹೇಳುವಾಗ ಮಹಾತ್ಮ ಗಾಂಧಿ ಬಾಲ್ಯದಲ್ಲಿ ಸತ್ಯ ಹರಿಶ್ಚಂದ್ರ ನಾಟಕ ನೋಡಿ ಮುಂದೆಂದೂ ಸುಳ್ಳು ಹೇಳದೇ ಸತ್ಯ ಸಂಧರಾದ ಬಗ್ಗೆ ಹಾಗೂ ನಾವೂ ಸಹ ಎಂದೆಂದಿಗೂ ಸುಳ್ಳು ಹೇಳಬಾರದು ಎಂದು ಹೇಳಿದ್ದೆ. ಇದನ್ನು ಆತ ಎಷ್ಟು ಚೆನ್ನಾಗಿ ಪಾಲಿಸಿದ್ದನೆಂದರೆ ಒಂದು ದಿನ ಮೇಲಾಧಿಕಾರಿಗಳ ಸಂದರ್ಶನ ನೀಡಿದ್ದರು. ಅವರು ತರಗತಿಗೆ ಬಂದಾಗ ಹೋಗಿ ಹೋಗಿ ಇವನನ್ನೇ ಪ್ರಶ್ನಿಸಿದರು.
"ದಿನಾಲೂ ಸರ್ ಗೋಳು ನಿಮ್ ಕ್ಲಾಸಿಗೆ ಬರ್ತಾರಾ?"

"ಗೋಣಪ್ಪ ಸರ್ ಬಿಟ್ಟು ನಮ್ ಕ್ಲಾಸಿಗೆ ಯಾರೂ ಬರಲ್ಲ ಸರ್" ತಿರುಪತಿಯ ಉತ್ತರ..(ನಾನು ವಿಜ್ಞಾನ ಶಿಕ್ಷಕ ಎಂಬುದರ ಅರಿವು ಪಾಪ ಅವನಿಗಿರಲಿಲ್ಲ)

"ನೀ ಎರಡ ಮೂರ ದಿನ ಸಾಲಿಗ್ ಯಾಕ್ ಬಂದಿಲ್ಲ..?"

"ನಮ್ಮಪ್ಪ ಹೊಲಕ್ ಕರಕೊಂಡ್ ಹೋಗಿದ್ರಿ"

"ನೀ ಒಲ್ಲೆನಬೇಕು?"

"ಅಂದ್ನಿರೀ ಆದ್ರ ಹೊಲದಾಗ ಸದಿ(ಕಳೆ) ತೆಗ್ಯೂದೈತಿ. ಆಳ ಇಲ್ಲ..ಯಾಡ್ ದಿನ ಬಾ ಅಂದ್ರಿ ಅದ್ಕ ಹ್ವಾದ್ನಿರಿ"

"ನಿಮ್ಮ ಅಪ್ಪ ಕರದ್ರೂ ಹೊಲಕ್ ಹೋಗಬಾರ್ದು"

"ಮತ್ ಸರ್ ಹೇಳ್ಯಾರ್ರಿ ಅವ್ವ ಅಪ್ಪನ ಮಾತ್ ಕೇಳ್ರಿ, ಅವ್ರಿಗೆ ಸಹಾಯ ಮಾಡ್ರಿ ಅಂತ"

ಹೀಗೆ ಆತನ ಮುಗ್ಧತೆ ಸತ್ಯತೆ ವಿನಯವಂತಿಕೆ ಮುಕ್ತತೆ ನಮಗಿಷ್ಟವಾಗಿತ್ತು. ಕಂಡಿದ್ದನ್ನು ಕಂಡಂತೆಯೇ ಹೇಳುವ ಸ್ವಭಾವ. ಎಂದಿಗೂ ಸುಳ್ಳು ಹೇಳದ ಸತ್ಯಸಂಧತೆ ತಿರುಪತಿಯದ್ದು.

ಬರುಬರುತ್ತ ಆತ ನಾಲ್ಕನೆಯ ತರಗತಿಯಿಂದೀಚಗೆ ಬಹಳ ಚೂಟಿಯಾಗುತ್ತ ಹೋದ. ಹೈಪರ್ ಆ್ಯಕ್ಟಿವಿಟಿ(ಈ ಬಗ್ಗೆ ಮತ್ತೆ  ಯಾವಗಕಾದರೂ ವಿವರಿಸುತ್ತೇನೆ) ಇರುವ ಹುಡುಗನಾಗಿದ್ದ ತಿರುಪತಿ ಎಂದೂ ಬದಲಾಗಲಿಲ್ಲ. ಕುಟುಂಬದ ಜವಾಬ್ದಾರಿಗಳನ್ನೂ ಸಹ ಅರಿತಿದ್ದ ಅವನಿಗೆ ತನ್ನ ತಮ್ಮನನ್ನು ಶಾಲೆಗೆ ಕರೆತರುವ ಜವಾಬ್ದಾರಿ, ತನ್ನ ಓರಗೆಯವರೊಡನೆ ಸಹಕಾರದಿಂದಿದ್ದು ಶಾಲಾ ಪರಿಸರ ಕಾಪಾಡುತ್ತಿದ್ದ.. ಬೇಸಿಗೆ ರಜೆಯಲ್ಲಿ ಗೋ ಕಟ್ಟೆಯಿಂದ ನೀರು ತಂದು ಶಾಲಾವರಣದಲ್ಲಿ ನೆಟ್ಡಿದ್ದ 46 ಗಿಡಗಳಿಗೆ ನೀರುಣಿಸುತ್ತಿದ್ದ(ಬೇಸಿಗೆ ರಜೆಗೆ ತೆರಳಯವ ಮುನ್ನ ಅವನಿಗೆ ವಹಿಸಿಕೊಟ್ಟ ಜವಾಬ್ದಾರಿ ಅದು). ಮನೆಯಲ್ಲಿ ಎಲ್ಲರೂ ಕೂಲಿಗೆ ಹೋದಾಗ ತಮ್ಮಂದಿರಿಗೆ ಊಟ ಮಾಡಿಸಿ ಮತ್ತೇ ತನ್ನೊಂದಿಗೆ ಶಾಲೆಗೆ ಕರೆದುಕೊಂಡು ಬಂದು ತನ್ನ ತೊಡೆಯ ಮೇಲೆ ಅವರನ್ನು ಮಲಗಿಸಿಕೊಂಡೇ ಪಾಠ ಕೇಳುತ್ತಿದ್ದ.  ಒಂದೆರೆಡು ದಿನ ತಿರುಪತಿ ಬರದೇ ಹೋದಲ್ಲಿ ನಮಗೂ ಏನೋ ಕಳಕೊಂಡ ಅನುಭವ. ಇಂಥ ವಿದ್ಯಾರ್ಥಿ 6ನೆಯ ತರಗತಿ ಮೊರಾರ್ಜಿ ದೇಸಾಯಿ ಶಾಲೆಗೆ ಆಯ್ಕೆ ಆಗಿ ಹೋದ. ಮೂರು ವರ್ಷ ಅವನಿಲ್ಲದ ಕ್ಷಣಗಳು ಅಸಹನೀಯ. ತಂದೆ ರೈತ. ಮಗನ ಮೇಲೆ ಅಪಾರವಾದ ಕಾಳಜಿ. "ಸರ್ ನನ್ನ ಮಗ ಚೆಂದ ಓದಾಕತಾನಿಲ್ರಿ?" ಅಂತ ಯಾವಾಗಲೂ ವಿಚಾರಿಸುತ್ತಿದ್ದರು.
ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಆಂಗ್ಲ ಮಾಧ್ಯಮವಿತ್ತು. ಆಗಾಗ ನಮ್ಮ ಶಾಲೆಗೆ ಬಂದು "ಸರ್ ಈ ಪಾಠ ತಿಳ್ಯಾಕತಿಲ್ರೀ..ಸ್ವಲ್ಪ ಹೇಳ್ರಿ" ಅಂತ್ಹೇಳಿ "ಇಂಗ್ಲಿಷ್ ಓದಾಕ ಈಜಿ ಸರ್..ಆದ್ರ ಬರ್ಯಾಕ್ ಕಷ್ಟ ರೀ ಸರ್" ಅಂತಿದ್ದ..

ಈಗ ತಿರುಪತಿ ಸಿದ್ದಪ್ಪ 10 ನೆಯ ಪರೀಕ್ಷೆ ಬರೆದಿದ್ದಾನೆ. ಮೊನ್ನೆ ಹೇಗೋ ನನ್ನ ನಂಬರ್ ತಗೊಂಡು ಕರೆ ಮಾಡಿ ಮಾತಾದ.. ಅವನ ಜತೆ ಮಾತಾಡುತ್ತಲೇ ಕಣ್ಣು ತುಂಬಿ ಬಂದ್ವು.. "ಎಷ್ಟ ಆಗಬಹುದು ಪರ್ಸೆಂಟೇಜ್?" ಅಂತ ಕೇಳಿದೆ.

"ಏನ್ ಸರ್.. ನೀವು ಎಲ್ಲಾರಂಗ ಪರ್ಸೆಂಟೇಜ್  ಕೇಳ್ತೀರಲ್ರಿ ಸರ್.. ನೀವ್ ಹೇಳಿದ ಗಾಂಧಿ ಕತಿ ಮರೆತಿಲ್ರಿ ಸರ್.. ನಾನು ಗಾಂಧೀವಾದಿ.. ಗಾಂಧಿಕಿಂತ 30% ಜಾಸ್ತಿ ತಗೋತಿನಿ ಬಿಡ್ರಿ"
ಅಂದಾಗ ನನಗೆ ಅವನ ಮಾತು ಸತ್ಯ ಅನ್ನಿಸಿತು.. ಫೇಲಾದ ಮಾತ್ರಕ್ಕೆ ಅಥವಾ ಪರ್ಸೆಂಟೇಜ್ ಆಗಲಿಲ್ಲ ಅನ್ನುವ ಕಾರಣಕ್ಕೆ ಬದುಕನ್ನೇ ಬಲಿ ಕೊಡುವವವರ ಮುಂದೆ ಈ ತಿರುಪತಿ ನಿಜಕ್ಕೂ ವಾಸ್ತವದ ಬದುಕನ್ನೇ ಬದುಕುತ್ತಿದ್ದಾನೆ ಅನ್ನಿಸಿ ಸುಮ್ಮನಾದೆ.

©ಲೇಖಕರು: ಸಚಿನ್ ಕುಮಾರ ಬ.ಹಿರೇಮಠ

Tuesday, 16 April 2019

ಫೇಸ್ ಬುಕ್ ಪಾಠಟಿಪ್ಪಣಿ - ೭ ಉದಯ ರವಿ ಬೆಳಗದೇ ಮುಳುಗಿದ್ದ..



ಆತ ಆಗಿನ್ನೂ 6 ನೆಯ ತರಗತಿ. ಬೇಡರ ಹುಡುಗ. ಸಣ್ಣ ನಗೆಯೊಂದನ್ನ ಸದಾ ತುಟಿಗೆ ಅಂಟಿಸಿಕೊಂಡಿರುತ್ತಿದ್ದ ಹುಡುಗ. ತುಂಬಾ ಚೆನ್ನಾಗಿ ಚಿತ್ರ ಬಿಡಿಸುತ್ತಿದ್ದ.. ಸ್ಮರಣ ಚಿತ್ರ ಅವನಿಗೆ ತುಂಬಾ ಇಷ್ಟ.. ಬರಬರುತ್ತ ಪ್ರಕೃತಿ ಚಿತ್ರಗಳನ್ನು ಇಷ್ಟಪಟ್ಟು ಬಿಡಿಸುತ್ತಿದ್ದ. ಸರಿಯಾಗಿ ವಾಟರ್ ಕಲರ್ ಬಳಸಲು ಬರದಿದ್ದರೂ ಸ್ಕೆಚ್ ಪೆನ್ನುಗಳನ್ನುಪಯೋಗಿಸಿ ಚಿತ್ರ ಬಿಡಿಸುತ್ತಿದ್ದ. ಪಠ್ಯದಲ್ಲೂ ಅಷ್ಟೇ ಬುದ್ಧಿವಂತ. ಗಣಿತದ ಸಮಸ್ಯೆಗಳೆಲ್ಲ ಅವನು ಕಲಿಯುವ ತನಕ ಮಾತ್ರ ಕಬ್ಬಿಣ್ಣದ ಕಡಲೆ.. ಕಲಿತಾದ ಮೇಲೆ‌ ಹುರಿಗಡಲೆ. ನನ್ನ ಬಹುಪಾಲು ಕೆಲಸಗಳಲ್ಲಿ ಸಹಾಯ ಮಾಡುತ್ತಿದ್ದ. ಪ್ರಯೋಗಗಳಿಗೆ ಸಲಕರಣೆಗಳನ್ನು ಜೋಡಿಸುವುದು. ಸಸ್ಯಗಳ ಎಲೆ ಹೂವು ಸಂಗ್ರಹಿಸುವುದು. ವೃತ್ತಪತ್ರಿಕೆಗಳಲ್ಲಿನ ವಿಜ್ಞಾನ ಸಂಗತಿಗಳನ್ನು ಸಂಗ್ರಹಿಸುವುದು ಇತ್ಯಾದಿ.
ಅವನ ಕಲೆಗೆ ಬೆಲೆ ಎಂಬಂತೆ ಆತ ಬಿಡಿಸುತ್ತಿದ್ದ ಚಿತ್ರಗಳನ್ನು‌ ಕರ್ಮವೀರ ವಾರಪತ್ರಿಕೆಯ ಚಿಣ್ಣರ ಚಿತ್ತಾರ ಅಂಕಣಕ್ಕೆ ಕಳುಹಿಸಿಕೊಡುತ್ತಿದ್ದೆ. ಆಗಾಗ ಕೆಲವು ಪ್ರಿಂಟಾದಾಗ ನಮಗೆಲ್ಲ ಹಿಗ್ಗೋ ಹಿಗ್ಗು. ಆ ನಗುಮುಖದ‌ ಹುಡುಗನ ಹೆಸರು #ರವಿ ಅಂತ.

ಹೀಗೆ ಸದಾ ಚೂಟಿಯಾಗಿದ್ದ ಆ ಹುಡುಗ ಬರಬರುತ್ತ ತುಸು ಒರಟನಾಗುತ್ತ ಹೋದ. ಅವನ ತುಟಿಗಂಟಿರುತ್ತಿದ್ದ ನಗೆ ಮಾಯವಾಯಿತು. ಹದಿಹರೆಯದ ವಿದ್ಯಾರ್ಥಿಗಳಲ್ಲಿ ಸಹಜವಾಗಿ ಕಾಣಿಸುವ Egoism(ಸ್ವಪ್ರತಿಷ್ಠೆ) ಅವನಲ್ಲಿ ತುಸು ಹೆಚ್ಚಾಗಿಯೇ ಇತ್ತು. ವಿನಯವಂತ ವಿದ್ಯಾರ್ಥಿ ಏಕಾಕಿ ಒರಟನಾಗುತ್ತ ಬದಲಾಗುತ್ತ ಬಂದ. ಎದುರು ಉತ್ತರ ನೀಡುವುದು, ಬೇಕಾಬಿಟ್ಟಿ ಮಾತನಾಡುವುದು, ವಿನಾಕಾರಣ ಇತರರೊಂದಿಗೆ ಜಗಳ ಹೀಗೆ ಮುಂದುವರೆದು  ಒಂದು ಸಲ ಅದೇ ತರಗತಿಯ ವಿದ್ಯಾರ್ಥಿನಿಯೊಬ್ಬಳಿಗೆ ಪ್ರೇಮ ಪತ್ರ ಬರೆದ ಎಂಬ ದೂರು ಅವನ ಮೇಲೆ ಬಂತು. ಪ್ರಾಥಮಿಕ ಶಾಲೆ ಮಕ್ಕಳಲ್ಲಿ ಟಿವಿ ಮೊಬೈಲ್ ಮಾಧ್ಯಮಗಳಿಂದಾಗಿ ಈಗೀಗ ಇಂಥ ಹುಚ್ಚು ಆಲೋಚನೆಗಳ ಸಮಷ್ಠಿ(Infatuation) ಅದ್ಹೇಗೋ ಆವರಿಸಿಬಿಡುತ್ತದೆ. ಅವನ ಭಾವನಾತ್ಮಕ ಬದಲಾವಣೆಗಳಿಗೆ ಕಾರಣ ಹುಡುಕುವಷ್ಟು ಸಮಯ ತಾಳ್ಮೆ ನಮ್ಮಲ್ಲಿರಲಿಲ್ಲ. ಹಳ್ಳಿಯಲ್ಲಿ ಇಂಥ ದೂರುಗಳಿಗೆ ತತ್ ಕ್ಷಣವೇ ಪರಿಹಾರ ಸಿಗಬೇಕು.. "ನೀವು ಶಿಕ್ಷೆ ಕೊಡುತ್ತೀರಾ ಇಲ್ಲ ನಾವೇ ಶಿಕ್ಷಿಸಬೇಕಾ" ಅಂತೆಲ್ಲ ಆ ವಿದ್ಯಾರ್ಥಿನಿಯ ಪಾಲಕರು ಕೇಳಿದಾಗ ನಮ್ಮ ಎದುರು ಮೊದಲ ಆಯ್ಕೆ ಮಾತ್ರ ಇತ್ತು.ಶಿಕ್ಷೆ ನೀಡಲಾರದ ಸ್ಥಿತಿ ನಮ್ಮದು. ಆದರೂ ನಮ್ಮ ಶಾಲೆಯಲ್ಲಿನ ನನ್ನ ಇನ್ನೋರ್ವ ಸಹೋದ್ಯೋಗಿಯಾಗಿದ್ದ ಗೋಣೆಪ್ಪ ಸರ್ ಗೆ ಇದು ಸರಿ ಕಾಣಲಿಲ್ಲ. ಕೈಗೆ ಎರಡೇಟು ನೀಡಿಯೇಬಿಟ್ಟರು. ನಮ್ಮ ಮೆಚ್ಚಿನ ವಿದ್ಯಾರ್ಥಿಯಾಗಿದ್ದ ಅವನನ್ನು ಶಿಕ್ಷಿಸುವಾಗ ನಾವೆಲ್ಲ ತುಂಬ  ಸಂಕಟ ಪಟ್ಟೆವು.  ಆತ ಆ ಏಟುಗಳಿಂದ ಸಾಕಷ್ಟು ನೊಂದುಕೊಂಡ. ತಿಳಿಯದೇ ತಪ್ಪಾಗಿದೆ ಮುಂದೆ ಹೀಗೆ ಆಗಲ್ಲ‌ ಎಂದೆಲ್ಲ ಕ್ಷಮೆ ಕೋರಿದ.

ಮುಂದಿನ ಮೂರು ತಿಂಗಳು ತುಂಬ ಬದಲಾದ. ಮತ್ತದೇ ವಿನಯವಂತಿಕೆ, ಸೃಜನಶೀಲತೆ ತನ್ನ ತರಗತಿಯ ವಿದ್ಯಾರ್ಥಿನಿಯರೊಂದಿಗೆ ಸೌಜನ್ಯಯುತ ವರ್ತನೆ. ಹೇಗೆ ಇದೆಲ್ಲ ಅಂತ ನಮಗೆ ಆಶ್ಚರ್ಯ. ಅವನ ಮನೆಗೆ ಯಾವುದೋ ಕಾರ್ಯಕ್ರಮ ನಿಮಿತ್ತ ಭೇಟಿ ಕೊಟ್ಟಾಗ ಗೊತ್ತಾದ ಸಂಗತಿ ಹೀಗಿತ್ತು. ಆತನ ಮನೆಯಲ್ಲಿ ನಿರಂತರವಾಗಿ ತಂದೆ ತಾಯಿಯ ಮಧ್ಯೆ ಜಗಳ. ಅಣ್ಣ ಹಾಗೂ ಅಪ್ಪನ ಮಧ್ಯೆ ಜಗಳ. ಅಣ್ಣ ಹಾಗೂ ಅತ್ತಿಗೆಯ ಮಧ್ಯೆ ಜಗಳ. ಈ ಜಗಳಗಳಿಂದಾಗಿ ಅವನ ಮನೆಯ ವಾತಾವರಣ ಅಸಹ್ಯವಾಗಿತ್ತು. ತನ್ನ ಮನೆಯ ವಾತಾವರಣವನ್ನು ಸರಿಪಡಿಸಲಾಗದ ಅಸಹಾಯಕ‌ಸ್ಥಿತಿ ಆ ಹುಡುಗನದ್ದು. ಅವನಿಗೆ ನೆಮ್ಮದಿ ಸಿಗುತ್ತಿದ್ದುದೇ ಶಾಲೆಯಲ್ಲಿ. ಕೆಲವು ಸಲ ತರಗತಿಯಲ್ಲಿ ಆತ ಅವಮಾನಕ್ಕೊಳಗಾದಾಗ ಅದನ್ನು ಹತ್ತಿಕ್ಕಲು ಅವನು ಸಿಟ್ಟಿಗೇಳುತ್ತಿದ್ದ.‌ಇದೇ ಕ್ರಮೇಣ ಅವನನ್ನ‌ ಋಣಾತ್ಮಕವಾಗಿ ಬದಲಾಯಿಸುತ್ತ ಹೋಗಿತ್ತು. ಮುಂದೆ ಅವನ ಅಣ್ಣ ಅತ್ತಿಗೆ ಬೇರೆ ಕಡೆ ಮನೆ ಮಾಡಿದಾಗ ತುಸು ಇವನಿಗೆ ನಿರಾಳವೆನಿಸಿತ್ತು. ಈ ಮಧ್ಯೆ ಏಟು ತಿಂದು ಬದಲಾಗಿದ್ದ.

ಎಂಟನೆಯ ತರಗತಿ ಇರುವಾಗಲೇ ಅವನ ಅಪ್ಪ ತೀರಿ ಹೋದರು. ಇದೇ ಜಗಳದಿಂದಾಗಿ ಕ್ರಿಮಿನಾಶಕ ಸೇವಿಸಿದ್ದಾಗಿ ಊರಿ‌ನಲ್ಲಿ ಗುಸು ಗುಸು. ಆತನ ತಂದೆಯ ಸಾವು ಅವನನ್ನ ಸಹಜವಾಗಿಯೇ ಅಸುರಕ್ಷಿತನನ್ನಾಗಿ ಮಾಡಿತು. ಮುಂದೆ ಶಾಲೆಯ ಫೀಸು,ಪುಸ್ತಕ ಇತರೆ ಖರ್ಚಿಗೆ ಅವನ ಅಣ್ಣನ‌ ಮೇಲೆ ಅವಲಂಬಿತನಾಗಬೇಕಾಯಿತು. ಅಣ್ಣನ ಸಿಡುಕು ಮಾತುಗಳಿಂದ ಮತ್ತೇ ರವಿ ತನ್ನ ಸೀಮಿತವನ್ನು ಕಳೆದುಕೊಳ್ಳುತ್ತ ಹೋದ. ಹತ್ತನೆಯ ತರಗತಿಯ ಹೊತ್ತಿಗೆ ಅಣ್ಣನಿಗೆ ಹೊಲದಲ್ಲಿ ಸಹಾಯ ಮಾಡುತ್ತ ಇತ್ತ ಎಸ್.ಎಸ್.ಎಲ್.ಸಿ ಪರೀಕ್ಷೆ ಗೆ ಓದಿಕೊಳ್ಳುತ್ತ ಹೋದ.ಪರೀಕ್ಷಯೆನ್ನೂ ಬರೆದ. ಮತ್ತೇ ಪದೇಪದೇ ಜಗಳ, ಅಣ್ಣ,ತಾಯಿ,ಅತ್ತಿಗೆ ಮತ್ತೆ ಜಗಳ ಹೀಗೆ ನಡೆಯಿತು.

"ನಾಡಿದ್ದು ಎಸ್.ಎಸ್ ಎಲ್.ಸಿ  ರಿಸಲ್ಟ್  ರವಿ ಎಲ್ಲೋ?"
ಅಂದಾಗ ಮಾತ್ರ ಆಘಾತಕಾರಿ‌ ಸುದ್ದಿಯೊಂದು ಕಿವಿಗೆ ಬಿತ್ತು.

"ಸರ್ ರವಿ ನಿನ್ನೆ ರಾತ್ರಿಗಿ ಎಣ್ಣಿ(ಕ್ರಿಮಿನಾಶಕ) ಕುಡದಿದ್ರೀ.. ಜೇವರ್ಗಿಗ್ ಹೋಗೂತ್ನ್ಯಾಗ ಹಾದ್ಯಾಗ ಖಲಾಸ್ ಆಗ್ಯಾನ್ರಿ ಮುಂಜಾನೆ ಮಣ್ಣಾತ್ರಿ"

ಅಂತ ಓಣಿ ಹುಡುಗ್ರು ಹೇಳಿದರು. ಮನೆಯಲ್ಲಿ‌ನ ಕಿರಿಕಿರಿಯಿಂದ ರವಿ ಕ್ರಿಮಿನಾಶಕ‌ ಸೇವಿಸಿಬಿಟ್ಟಿದ್ದ. ನಮಗೆಲ್ಲ ಎದೆ ಭಾರವಾಗಿ ಬಡಿದುಕೊಳ್ಳಲಾರಂಭಿಸಿತು. ಕಣ್ಣಾಲಿಗಳಲ್ಲಿ ನೀರು ತುಂಬಿತು. ಇಂದಿನ ವಿದ್ಯಾರ್ಥಿಗಳಿಗೇನಾಗಿದೆ?ಕ್ಷುಲ್ಲಕ ಕಾರಣಗಳಿಗೆ ಸುಂದರ ಬದುಕನ್ನೇ ಬಲಿ ಕೊಡಲು ಇವರಿಗೆ ಅಧಿಕಾರ ನೀಡಿದವರಾರು? ಅಣ್ಣ-ಅತ್ತಿಗೆ, ತಾಯಿ  ಅನಕ್ಷರಸ್ಥರು. ಅವರ ಮಾತುಗಳನ್ನು ಅಷ್ಟು ಮನಸ್ಸಿಗೆ ತೆಗದುಕೊಳ್ಳುವ ಅನಿವಾರ್ಯತೆಯಾದರೂ ಏನು? ಒಂದು ಕುಟುಂಬದಲ್ಲಿನ‌ ಜಗಳಗಳಿಗೆ ಸಾವೇ ಪರಿಹಾರವೆಂಬತ್ತಿದ್ದರೆ ಬದುಕಿಗೇನು‌ ಅರ್ಥ.? ಮಾತಾಡಿ ಏನಾದರೂ ಒಂದು ಪರಿಹಾರ ನೀಡಬಹುದಿತ್ತು. ನಮ್ಮ ಶಿಕ್ಷಣ ಏಕೆ?ಹೇಗೆ?ಎಲ್ಲಿ ಎಡುವುತ್ತಿದೆ? ವಿದ್ಯಾರ್ಥಿಗಳಲ್ಲಿ ಏಕೆ ಈಗಿನ‌ ಶಿಕ್ಷಣ ವಾಸ್ತವ ಪ್ರಜ್ಞೆ ಬೆಳೆಸುತ್ತಿಲ್ಲ?ಅವನ ಸ್ಥಿತಿ ಹೇಗಿತ್ತೋ ಏನೋ ?

ಒಟ್ಟಿನಲ್ಲಿ  ಸದಾ ನಗುವ ಹುಡುಗನ ಮುಖ ಕಮಲ ಬಾಡಿ ಹೋಗಿತ್ತು.ಉದಯ ರವಿ ಬೆಳಗದೇ ಮುಳುಗಿದ್ದ.
ಎರಡು ದಿನಗಳ ನಂತರ ಎಸ್.ಎಸ್.ಎಲ್.ಸಿ ಫಲಿತಾಂಶ ಬಂತು. ರವಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದ. ಬದುಕಿನ ಪರೀಕ್ಷೆಯಲ್ಲಿ ಮಾತ್ರ ಫೇಲಾಗಿದ್ದ.
ಪ್ರತಿ ಸಲ ಎಸ್.ಎಸ್.ಎಲ್.ಸಿ ಫಲಿತಾಂಶ ಬಂದಾಗ ರವಿ ನಮ್ಮಲ್ಲಿ ಹುಟ್ಟುತ್ತಾನೆ.. ಕಣ್ಣ ಹನಿಯೊಂದಿಗೆ ಮುಳುಗುತ್ತಾನೆ..

Tuesday, 9 April 2019

ಫೇಸ್ ಬುಕ್ ಪಾಠ ಟಿಪ್ಪಣಿ-೬ ಭೀಮವ್ವ ಗೌಡಸಾನಿಯೆಂಬ ಮಹಾದಾಯಿ...


ಆಗ ನಮ್ಮ ಶಾಲೆಯಲ್ಲಿ 7ನೆಯ ತರಗತಿಯೇ ಕೊನೆಯ  ತರಗತಿ. ಬೀಳ್ಕೊಟ್ಟ ಅದೆಷ್ಟು ವಿದ್ಯಾರ್ಥಿಗಳು 8 ನೆಯ ತರಗತಿಗೆಂದು 25 ಕಿ.ಮೀ ದೂರದ ಜೇವರ್ಗಿ ಅಥವಾ ಶಹಾಪೂರಕ್ಕೆ ಹೋಗಿ ಹೈಸ್ಕೂಲು ಶಿಕ್ಷಣ ಮುಂದುವರೆಸಬೇಕಿತ್ತು. 8 ನೆಯ ತರಗತಿಗೆ  ಉನ್ನತೀಕರಿಸಲು ಆಡಳಿತಾತ್ಮಕ ಅಡೆತಡೆಗಳಿದ್ದವು. ಹೀಗೆ ಬೀಳ್ಕೊಟ್ಟ ವಿದ್ಯಾರ್ಥಿ ವಿದ್ಯಾರ್ಥಿನಿಯರು ನಮಗೆ ಮತ್ತೇ ಸಿಗುವುದು ಗ್ರಾಮದ ಜಾತ್ರೆಗಳಲ್ಲೋ‌ ಅಥವಾ ಅವರ ಸಂಬಂಧಿಕರ ಮದುವೆಗಳಲ್ಲೋ‌ ಮಾತ್ರ. ತೀರಾ ಅಲ್ಲದಿದ್ದರೂ ಅಪರೂಪವೆಂಬಂತೆ ಕೆಲವು ವಿದ್ಯಾರ್ಥಿಗಳು ಭೇಟಿಯಾಗುತ್ತಿದ್ದುಂಟು. ಆದರೆ ಆಕೆ ಮಾತ್ರ ಎಂದೂ ಭೇಟಿಯಾಗಲಿಲ್ಲ.. ಆಕೆ‌ 7ನೆಯ ತರಗತಿ ಮುಗಿದ ನಂತರ ಸುಮಾರು 3-4 ವರ್ಷ ಗ್ರಾಮದಲ್ಲಿ ಕಾಣಸಿಗಲಿಲ್ಲ. ಅವಳ ತಾಯಿಯವರು ಸಿಕ್ಕಾಗ ವಿಚಾರಿಸಿದಾಗ ಬೆಂಗಳೂರಿನಲ್ಲಿರುವುದಾಗಿ ತಿಳಿಸಿದ್ದರು. ಆಕೆ 7 ನೆಯ ತರಗತಿ ನಂತರ ಶಾಲೆ ಮುಂದುವರೆಸಲಿಲ್ಲ ಎಂಬ ಸಂಗತಿ ತಿಳಿದು ನಮ್ಮ‌ ಶಿಕ್ಷಕರಿಗಂತೂ ತುಂಬಾ ಬೇಜಾರಾಯಿತು. ಅದೇಕೆ‌ ಅವಳನ್ನು ಶಾಲೆ ಬಿಡಿಸಿದಿರಿ ಎಂದು ಅವಳ ತಾಯಿಯಲ್ಲಿ ವಿಚಾರಿಸಿದಾಗ ಅವರು ನೀಡಿದ ಕಾರಣ ಕಾನೂನಾತ್ಮಕವಾಗಿ ಸಮಂಜಸವಲ್ಲದಿದ್ದರೂ ಮಾನವೀಯತೆಯ ನೆಲೆಗಟ್ಟಿನಲ್ಲಿ ಒಪ್ಪಿಕೊಳ್ಳುವಂತಹದ್ದು. ಆ ಕಾರಣ ತಿಳಿಯುವ ಮುನ್ನ ಅವಳ ಕುರಿತು ತಮಗೆ ಹೇಳಲೇ ಬೇಕು..

ಓದಿನಲ್ಲಿ ಹಾಗೂ ಸಹ ಪಠ್ಯೇತರ ವಿಷಯಗಳಲ್ಲಿ ತುಂಬಾ ಚುರುಕಾಗಿದ್ದ ಆ ಹುಡುಗಿಯ ಹೆಸರು ಭೀಮಬಾಯಿ ಅಂತ.  ಭೀಮಬಾಯಿಯನ್ನು ಮನೆಯಲ್ಲಿ ಪ್ರೀತಿಯಿಂದ ಭೀಮವ್ವ, ಭೀಮವ್ವ ಗೌಡಸಾನಿ‌ ಅಂತ ಕರೆಯುತ್ತಿದ್ದರು. ತರಗತಿಯಲ್ಲಿ ಅವಳದ್ದು ಸದಾ ಪ್ರಶ್ನಿಸುವ ಸ್ವಭಾವ‌. ವಿಜ್ಞಾನ ಹಾಗೂ ಗಣಿತದಲ್ಲಂತೂ ತಣಿಯದ ಆಸಕ್ತಿ. ತೀರಾ ಸಹಜ ವಿನಯತೆ. ತನ್ನದಲ್ಲದ ತಪ್ಪಿಗೆ ಒಪ್ಪದಂತವಳು. ನೇರ ನುಡಿಯ ಮಾತಿನ ಮಲ್ಲಿ.. ಮುತ್ತು ಪೋಣಿಸಿದಂತೆ ಅವಳ ಬರಹ. ಇಂಗ್ಲಿಷ್ ಓದುವುದೆಂದರೆ ಅವಳಿಗಾಗದು. ತನ್ನ ಗೆಳತಿಯರನ್ನೆಲ್ಲ ಎಂದೂ ಬಿಟ್ಟು ಕೊಡದ ಸ್ನೇಹಗಿತ್ತಿ. ತನಗಿಂತ ಚಿಕ್ಕವರಿರುವ ಇತರ ತರಗತಿ ಮಕ್ಕಳ ಮೇಲೆ‌ ಅವಳಿಗೆ ಒಂದು ಬಗೆಯ ಪ್ರೀತಿ. ಯಾರಾದಾರೂ ಜಗಳವಾಡುತ್ತಿದ್ದರೆ ಅಷ್ಟೇ ಪ್ರೀತಿಯಿಂದ ಅವರ ಜಗಳ ಬಿಡಿಸಿ ಅವರನ್ನು ಒಂದು ಮಾಡುವ ಮಾತೃರೂಪದ ಹೃದಯವಂತಿಕೆ ಅವಳದ್ದು. ಹೀಗಾಗಿ ನಮ್ಮ ಶಿಕ್ಷಕರಿಗೆಲ್ಲಾ ಭೀಮವ್ವ ಗೌಡಸಾನಿ‌ ಅಂದರೆ ಅತೀವ ಶಿಷ್ಯ ಪ್ರೇಮ.
ಅವಳು ಮುಂದೆ ಹೈಸ್ಕೂಲಿಗೆ‌ ಸೇರಿ ಕನ್ನಡಕ್ಕೆ 125ಕ್ಕೆ 125 ಅಂಕ‌ ಪಡೀತಾಳೆ. ವಿಜ್ಞಾನ ಹಾಗೂ ಗಣಿತದಲ್ಲಿ‌ 90ರ ಗಡಿ ದಾಟುತ್ತಾಳೆ. ಅವಳ ಇಂಗ್ಲಿಷನ್ನು ಸ್ವಲ್ಪ ತಿದ್ದಬೇಕು ಎಂದು ನಾವು ಲೆಕ್ಕ ಹಾಕುತ್ತಿದ್ದೆವು. ಆದರೆ ವಿಧಿ ಅವಳ ಜೀವನದ ಲೆಕ್ಕವನ್ನೇ ಬದಲಿಸಿತ್ತು.

ಅವಳು ಹೈಸ್ಕೂಲು ಸೇರಬೇಕೆಂದುಕೊಂಡಿರುವಾಗ ಅವಳ ತಂದೆಗೆ ಹುಷಾರಿಲ್ಲದೇ ಅವರ ಆರೈಕೆಯಲ್ಲೇ ಒಂದೂವರೆ ವರ್ಷ ಹಾಳಾಯಿತು. ಮುಂದೆ ಅವಳ ಅಕ್ಕನ ಆಕಸ್ಮಿಕ ಸಾವಿನಿಂದಾಗಿ ಇತ್ತ ಇಡೀ ಕುಟುಂಬವೇ ತತ್ತರಿಸಿತು. ಕಾರಣ ಇನ್ನೂ ಜಗತ್ತು ಅರಿಯದ ಎರಡು ಗಂಡು ಮಕ್ಕಳನ್ನು ಅಗಲಿದ್ದಳು ಅವಳಕ್ಕ. ಈಗ ಆ ಕಂದಮ್ಮಗಳ ಆರೈಕೆ ಹೇಗೆ.? ತಮ್ಮ ಅಳಿಯ ಬೇರೆ ಮದುವೆ ಮಾಡಿಕೊಂಡರೆ ಆ ಮಕ್ಕಳಿಗೆ ಮಲತಾಯಿ ಹೇಗೆ ಪ್ರೀತಿ ಹಂಚಿಯಾಳು? ಆಗ ಅಳಿಯನಿಗೆ ಭೀಮವ್ವ ಗೌಡಸಾನಿಯನ್ನೇ ಕೊಟ್ಟು ಮದುವೆ ಮಾಡಿಬಿಡುವುದೇ ಸರಿ ಎಂದು ಅವಳ ಪೋಷಕರು ತೀರ್ಮಾನಿಸಿಬಿಟ್ಟರು. ಅವಳನ್ನು ವಿಚಾರಿಸಿದಾಗ ಭೀಮವ್ವ ಸಹ ತನ್ನ‌ ಭಾವನನ್ನ ಮದುವೆಯಾಗಲು ಒಪ್ಪಿದ್ದಳು. ಪೋಷಕರ ಒತ್ತಾಯ ಎನ್ನುವದಕ್ಕಿಂತ ಅಕ್ಕನ ಮಕ್ಕಳು ಎನ್ನುವ ಮಾತೃಪ್ರೇಮ‌ ಆ ಭೀಮವ್ವ ಗೌಡಸಾನಿಯಲ್ಲಿ ತನ್ನ ಭಾವನನ್ನೇ ಮದುವೆಯಾಗುವ ಅನಿವಾರ್ಯೆಗೆ ಎಡೆ ಮಾಡಿಕೊಟ್ಟಿತು. ಅಕ್ಕನನ್ನೂ ಅತಿಯಾಗಿ ಹಚ್ಚಿಕೊಂಡಿದ್ದ ಅವಳಿಗೆ  ಅಕ್ಕನ ಮಕ್ಕಳನ್ನು ತಾನಲ್ಲದೇ ಬೇರೆ ಯಾರು ಚೆನ್ನಾಗಿ ನೋಡಿಕೊಳ್ಳಬಲ್ಲರು.?ಎಂಬ ಪ್ರಶ್ನೆ.ಅದಕ್ಕೆ ಉತ್ತರವೂ ತಾನೇ. ಅವಳಿಗೆ ಓದುವಾಸೆ. ಆದರೆ ತನ್ನ ಓದು ತನ್ನ ಅಕ್ಕನ ಮಕ್ಕಳನ್ನು ತಬ್ಬಲಿ ಮಾಡದೇ ಎಂಬ ಸೂಕ್ಷ್ಮಾತಿಸೂಕ್ಷ್ಮ ವಿಚಾರ ಅವಳಲ್ಲಿ ಮಾತ್ರ ಹೊಳೆದಿರಬೇಕು. ದೂರದಲ್ಲಿದ್ದ ನಮಗೆ ಹೋಗಿ ಹೋಗಿ ಈ ಪುಟ್ಟ ಹುಡುಗಿಯನ್ನು ಮೂವತ್ತು ವರ್ಷ ದಾಟಿದವನಿಗೆ ಮದುವೆ ಮಾಡಿಕೊಡುವುದೇ? ಅಲ್ಲದೇ ಇದು ಬಾಲ್ಯ ವಿವಾಹ ಎನಿಸುವುದಿಲ್ಲವೇ? ಯಾರನ್ನೋ ಮೆಚ್ವಿಸಲು ಹೋಗಿ ಇಂಥ ಜಾಣೆ ತನ್ನ ಉಜ್ವಲ ಭವಿಷ್ಯಕ್ಕೆ ಬೆಂಕಿ ಇಟ್ಟುಕೊಳ್ಳುವುದು ಅದೆಷ್ಟು ಸರಿ.? ಎಂದೆಲ್ಲಾ ಅನ್ನಿಸುತ್ತಿತ್ತು. ಈ ವಿಚಾರ ಗೊತ್ತಾದಾಗ ಇದನ್ನ ವಿರೋಧಿಸಿ ಭೀಮವ್ವನ ತಾಯಿ ತಂದೆಗೂ ಮನವೊಲಿಸಲು ಪ್ರಯತ್ನಿಸಿದ್ದೆವು. ಆದರವರು ಅವರ ಪಟ್ಟು ಸಡಿಲಿಸಲಿಲ್ಲ. ಕೊನೆಗೆ ನಮಗೆ ಗೊತ್ತಾಗದಂತೆ ದೂರದಲ್ಲೆಲ್ಲೋ ಹೋಗಿ ಮದುವೆ ಮಾಡಿ ಬಿಟ್ಟಿದ್ದರು. ವಯಸ್ಸು ಚಿಕ್ಕದಿದ್ದರೂ ಅವಳ ಮಾತೃಪ್ರೇಮ ಮಾತ್ರ ಅಸಮಾನ. ನಾಲ್ಕೈದು ವರ್ಷಗಳಲ್ಲಿ ತನ್ನ ಅಕ್ಕನ ಮಕ್ಕಳನ್ನು ತನ್ನ ಮಕ್ಕಳಂತೆ ಸಲುಹಿ ಅವರು ಪ್ರೈಮರಿ ಶಾಲೆಗೆ ಹೋಗುವ ತನಕ ತನ್ನ ಬಸಿರನ್ನ ಮುಂದೂಡಿ ಈಗ ಕಳೆದರೆಡು ವರ್ಷಗಳ ಕೆಳಗೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇವಳ ಈ ಎಲ್ಲ ನಿರ್ಧಾರ ವಯಸ್ಸಿಗೆ ಮೀರಿದ್ದು.

ಈಗ ಭೀಮವ್ವ ಗೌಡಸಾನಿ ಬೆಂಗಳೂರಿನಂತಹ ದೊಡ್ಡ ಶಹರದಲ್ಲಿ ತನ್ನಕ್ಕನ ಎರಡೂ ಮಕ್ಕಳನ್ನು ಶಾಲೆಗೆ ಕಳುಹಿಸಿ ಕರೆತರುತ್ತಾಳೆ.ಅವರಿಗೆ ಓದು ಬರಹ ಕಲಿಸುತ್ತಾಳೆ. ಅನೌಪಚಾರಿಕವಾಗಿ ಸಾಕಷ್ಟು ಓದಿಕೊಂಡಿದ್ದಾಳೆ. ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತಾಳೆ.ಆ ಮಕ್ಕಳೂ ಸಹ ತಮ್ಮ ತಂಗಿಯನ್ನೂ ಇವಳಷ್ಟೇ ಪ್ರೀತಿಸುತ್ತವೆ. ಆ ಮಕ್ಕಳು ತಮ್ಮ ತಾಯಿಯ ಮುಖವನ್ನ ಈ ಭೀಮವ್ವ ಗೌಡಸಾನಿಯಲ್ಲಿ ಕಾಣುತ್ತವೆ.

ಬಹುಶಃ ನಾವು ಶಿಕ್ಷಕರು ತರಗತಿಯಲ್ಲಿ ಇಷ್ಟು ಚೆನ್ನಾಗಿ ಜೀವನ ಶಿಕ್ಷಣ ನೀಡಲಾರೆವು. ಹೆಣ್ಣಿನ ಶಕ್ತಿ ಎಂಥದ್ದು ಎಂಬುದು ನಾಲ್ಕು ಗೋಡೆಯ ತರಗತಿ ನಮಗೆ ಕಲಿಸಲಾರದು. ಒಂದೊಂದು ವಿದ್ಯಾರ್ಥಿ ತನ್ನೊಳಗಿನ ಆತ್ಮ ಸ್ಥೈರ್ಯವನ್ನ ಕಲಿತ ಶಿಕ್ಷಣದೊಂದಿಗೆ ಬದುಕಿನಲ್ಲಿ ಅಳವಡಿಸಿಕೊಳ್ಳುವುದನ್ನ ಕಲಿತಾಗ ಮಾತ್ರ ಶಿಕ್ಷಣ ಮೌಲಿಕವಾಗುತ್ತದೆ. ಭೀಮವ್ವ ಗೌಡಸಾನಿ ನಮಗೆ ಅಂಥ ಪಾಠವೊಂದನ್ನ‌ ಕಲಿಸಿ ನಿಂತಿದ್ದಾಳೆ. ಈಗ ಅವಳನ್ನ ನೋಡದೇ ವರ್ಷಗಳೇ ಕಳೆದಿವೆ. ಈ ಸಲ  ಗ್ರಾಮದ ಜಾತ್ರೆಗೆ ಬರುವ ಆ ಮುದ್ದು ಹುಡುಗಿಯ ಮುಖದಲ್ಲಿನ ಮಾತೃಪ್ರೇಮದ ನಿರೀಕ್ಷೆಯಲ್ಲಿದ್ದೇನೆ.

©ಲೇಖಕರು : ಸಚಿನ್ ಕುಮಾರ ಬ.ಹಿರೇಮಠ

ಫೇಸ್ ಬುಕ್ ಪಾಠ ಟಿಪ್ಪಣಿ-೫ ನಾ ಕಂಡ ಮಲ್ಲೇಶಿ...

ಅದು 2008 ನೆಯ ಇಸವಿ. ನನ್ನ ಶಿಕ್ಷಕ ವೃತ್ತಿಯ ಎರಡನೆಯ ವರ್ಷ. ಆರನೆಯ ತರಗತಿಯಲ್ಲೊಬ್ಬ ಅಸಾಧಾರಣ ವಿದ್ಯಾರ್ಥಿ..ತುಂಬಾ ವಿಧೇಯ. ಬುದ್ಧಿವಂತ ಕೂಡ. ಮಲ್ಲೇಶಿ ಅಂತ ಅವನ ಹೆಸರು. ತರಗತಿಯ ಪಾಠಗಳನ್ನು ಏಕಾಗ್ರತೆಯಿಂದ ಕೇಳುತ್ತಿದ್ದ. ಓದು,ಬರೆಹ ಕೂಡ ಅಷ್ಟೇ ವ್ಯವಸ್ಥಿತ. ಆದರೆ ಅವನ ಮುಖದಲ್ಲಿ ನಗುವಿಗೆ ಒಂದಷ್ಟೂ ಜಾಗವಿರಲಿಲ್ಲ.. ಅವನ ನಗುವಿಗಾಗಿ ತಿಂಗಳುಗಟ್ಟಲೇ ಕಾಯಬೇಕಿತ್ತು‌. ಪಾಠಬೋಧನೆಯ ಮಧ್ಯೆ ಜೋಕ್ ಹೇಳಿದರೂ ಅವನ ತುಟಿಗಳು ಮಂದಹಾಸ ಮಾತ್ರ ಬೀರುತ್ತಿದ್ದವು. "ಯಾಕೋ ನಗಾಂಗೇ ಇಲ್ಲಲೋ?" ಅಂತ ಕೇಳಿದಾಗಲೂ ಅದೇ ಮಂದಹಾಸ ಅವನ ಉತ್ತರವಿರುತ್ತಿತ್ತು.

ಶಾಲೆಯಿಂದ ಸುಮಾರು ಒಂದು ಕಿಲೋಮೀಟರ್ ಅಂತರದಲ್ಲಿ ಅವನ ಮನೆ. ವಾರಿ(ಎತ್ತರದ ಜಾಗ) ಮ್ಯಾಗಿನ ಮನೆಗಳಿಂದ ಬರುತ್ತಿದ್ದ ಬಹಳಷ್ಟು  ಜನ ವಿದ್ಯಾರ್ಥಿಗಳಲ್ಲಿ ಇವನೂ ಒಬ್ಬ. ಅವನ ನೋಟ್ ಪುಸ್ತಕಗಳನ್ನೊಮ್ಮೆ ನೋಡಬೇಕು. ಹಳೆಯ ನೋಟ್ ಪುಸ್ತಕದಲ್ಲಿ ಉಳಿದ ಕೆಲವು ಖಾಲಿ ಪುಟಗಳನ್ನು  ಜೋಡಿಸಿ ದಾರದಿಂದ ಹೊಲಿದು ಮಾಡಿದ(ಬೈಂಡಿಂಗ್) ನೋಟ್ ಪುಸ್ತಕ. ಅವು ನಿಜಕ್ಕೂ ನನ್ನ ಬಾಲ್ಯವನ್ನೇ ನೆನೆಸುವಂತಿದ್ದವು‌. ಬಟ್ಟೆಗಳಲ್ಲಿ ಅಲ್ಲಲ್ಲಿ ಹರಿದ ರೀತಿ.  ಅವನ ಹಾಜರಾತಿ ನಿಯಮಿತವಾಗಿರುತ್ತಿದ್ದಾರೂ ಕೆಲವು ಸಲ ಎರಡು ಮೂರು ದಿನಗಳ ಮಟ್ಟಿಗೆ ಗೈರಾಗುತ್ತಿದ್ದ.  ತರಗತಿಯಲ್ಲಿ ಗೈರಾಗಲು ಕಾರಣ ಕೇಳಿದಾಗ ಏನನ್ನೂ ಹೇಳದೇ ಮುಂದಕ್ಕೆ ಕೈ ಚಾಚುತ್ತಿದ್ದ. ಅಲ್ಲಿ ಅವನು ತನ್ನ ನಿಜವಾದ ತಪ್ಪಿಗಾಗಿ ಕೈ ಚಾಚುತ್ತಿದ್ದನೋ ಅಥವಾ ತಾನು ನೀಡದ ಕಾರಣಕ್ಕೆ ಬದಲಿ ಕೈ ಚಾಚುತ್ತಿದ್ದನೋ ಗೊತ್ತಾಗುತ್ತಿರಲಿಲ್ಲ. ಹಾಗೇ ಕೈ ಚಾಚುವಾಗ ಅವನ ಮುಖದಲ್ಲಿ ತನ್ನ ತಪ್ಪಿಲ್ಲ ಎಂಬ ವಿಶ್ವಾಸ ಮೂಡುತ್ತಿತ್ತು. ನಮಗೆ ಅವನನ್ನು ಶಿಕ್ಷಿಸುವ ಮನಸ್ಸಾಗುತ್ತಿರಲಿಲ್ಲ..

ಮಕ್ಕಳ ಗಣತಿಗೆಂದು ಒಂದು ಸಲ ಅವನ ಮನೆಗೆ ಭೇಟಿ ನೀಡುವ ಪ್ರಸಂಗ ಬಂದಿತು. ಡಿಸೆಂಬರ್ ತಿಂಗಳು. ಇವನು ಆ ದಿನ ಶಾಲೆಗೆ ಗೈರಾಗಿದ್ದ. ಗಣತಿ ನಿಮಿತ್ತ ಇವನ ಮನೆಗೆ ಹೋದಾಗ ಇವನ ತಾಯಿಗೆ ಹುಷಾರಿಲ್ಲದ್ದು ತಿಳಿಯಿತು. ಸಾಧಾರಣ ಪರಸಿ ಮನೆ. ಎರಡೇ ಕೋಣೆಗಳು. ಮಲ್ಲೇಶಿಯ ಗೈರಿನ ಬಗ್ಗೆ ವಿಚಾರಿಸಿದಾಗ ಆ ತಾಯಿ ಹೀಗೆ ವಿವರಿಸಿದಳು.

"ಮಲ್ಲೇಶಿಯ ಅಪ್ಪ ಮಲ್ಲೇಶಿಯ ತಂಗಿ ಹುಟ್ಟಿದ ವರ್ಸದಾಗ ಜಡ್ಡ ಬಂದ ತೀರಕೊಂಡರಿ. ವ್ಯವಸಾಯಕ್ಕ ತುಸು ಹೊಲಾ ಐತ್ರಿ ಖರೇ ಅದನ್ನ ಉತ್ತಿ ಬಿತ್ತಲಾಕ ಆಗದ ಸಂಬಂಧಿಕರೊಬ್ಬರಿಗೆ ಪಾಲಿಗೆ ಕೊಟ್ಟೇವ್ರಿ. ಅವ್ರಂತೂ ಈಗೀಗ ಬೆಳೀ ಇಲ್ಲ ಅಂತ ಏನೂ ಕೊಟ್ಟೇ ಇಲ್ರಿ..ದೊಡ್ಡ ಮಗ ಕೂಲಿ ಕೆಲಸ ಮಾಡುತ್ತಾನ್ ಖರೇ ಜವಾಬ್ದಾರಿ ಇಲ್ಲರಿ.ಮನಿಗೆ ಕೊಡೂದ್ಕಿಂತ ಇಸ್ಕೊಳ್ಳೋದ ಜಾಸ್ತಿ. ಇನ್ನೂ ಮಲ್ಲೇಶಿ ಹಾಗೂ ಅವನ ತಂಗಿ ಸಾಲಿಗ್ ಹೊಕ್ಕಾರ್ರಿ. ಅವರ ಸಲುವಾಗೇ  ನಾ ಕೂಲಿಗೆ ಹೋಗೂದು ಅನಿವಾರ್ಯರಿ. ನನಗೂ ಈಗೀಗ ಆರಾಮ ತಪ್ಪಾತೇತ್ರಿ.. ನಾ ಹಾಸಿಗೆ ಹಿಡಿದಾಗ ನನ್ನ ಮಲ್ಲೇಶಿ ಎರಡು ಮೂರು ದಿನ ಕೂಲಿಗೆ ಹೊಕ್ಕಾಣ್ರಿ. ನಾ ಬ್ಯಾಡ ಅಂದರೂ ಕೇಳಲ್ಲರಿ..ಅದಕ್ಕೆ ಅಂವ ಚೆನ್ನಾಗಿ ಓದಿ ನಿಮ್ಮಂಗ ಆಪೀಸರ್ ಆಗ್ಬೇಕ್ರಿ" ಅಂತ ದುಃಖಿಸತೊಡಗಿದಳು ಆ ತಾಯಿ.

12 ವರ್ಷದ ಹುಡುಗನಿಗೆ ಸಂಸಾರದ ಬಗ್ಗೆ ಅದೆಷ್ಟು ಜವಾಬ್ದಾರಿ. ಅಷ್ಟು ಬಡತನದ ನಡುವೆ ಅವನ ಮುಖದಲ್ಲಿ ನಗು ಅದ್ಹೇಗೆ ಸಿಕ್ಕೀತು? ಅವನು ಚಾಚುತ್ತಿದ್ದ ಕೈ ಅವನ ಅಸಲಿಯತ್ತನ್ನು ವಿವರಿಸದೇ 'ಹೊಡೆದು ಬಿಡಿ, ದೊಡ್ಡ ನೋವಿನ ಮುಂದೆ ಈ ಛಡಿಯೇಟು ಏನು ಮಹಾ' ಎಂದೆನ್ನುವಂತಿತ್ತು. ನನ್ನ ಕಣ್ಣಾಲಿಗಳಂತೂ ತುಂಬಿ ಬಂದವು. ಅವನ ಸೂಕ್ಷ್ಮ ಬುದ್ಧಿ ಶಿಕ್ಷಕರಾದ ನಮ್ಮ ಮುಂದೆ ಮಹಾನ್ ಎನ್ನಿಸಿತು.

ಒಂದಿನ ಅವನನ್ನ ಎದುರಿಗೆ ಕೂಡಿಸಿ ಹೇಳಿದ್ದೆ,
"ನಿನಗೆ ಏನಾದ್ರೂ ಬೇಕಾದ್ರ ಕೇಳು ಮಲ್ಲೇಶಿ" ಅಂತ. ಆದರೆ ಆತ ನನಗಿಂತ ನಮ್ಮ ಇನ್ನೊಬ್ಬ ಶಿಕ್ಷಕರಾದ ಗೋಣೆಪ್ಪ ಅವರ ಜೊತೆ ಮುಕ್ತವಾಗಿ ಮಾತನಾಡುತ್ತಿದ್ದ. ಅವರ ಅಪ್ಪಟ ಶಿಷ್ಯ ಕೂಡ. ತರಗತಿಯ ಒಳಗಿನಿಂದ ನಮ್ಮ ವಿದ್ಯಾರ್ಥಿಗಳನ್ನು ಅರಿತುಕೊಳ್ಳವುದಕ್ಕಿಂತ ತರಗತಿ ಹೊರಗಿನಿಂದ ಅರಿತುಕೊಂಡರೆ ಅದಕ್ಕೆ ಹೆಚ್ಚು ಮಹತ್ವ.

ಈಗ ಮಲ್ಲೇಶಿ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಬಿ.ಎ ಮುಗಿಸಿ ಸ್ನಾತಕೋತ್ತರ ಪದವಿ ಓದುತ್ತಿದ್ದಾನೆ. ಮನೆಯ ಪರಿಸ್ಥಿತಿ ತಕ್ಕಮಟ್ಟಿಗೆ ಸುಧಾರಿಸಿದೆ.ಫೇಸ್ ಬುಕ್ ನಲ್ಲಿ ಆಗಾಗ ಮಾತಾಗುತ್ತಾನೆ. ಅವನ ಮುಖದಲ್ಲಿ  ಮಾತ್ರ ಗೆದ್ದೇ ಗೆಲ್ಲುತ್ತೇನೆಂಬ ಮಂದಹಾಸ ಇನ್ನೂ ಇದೆ. ಮಿಸ್ ಯೂ ಮಲ್ಲೇಶಿ.

Monday, 8 April 2019

ಫೇಸ್ ಬುಕ್ ಪಾಠಟಿಪ್ಪಣಿ-೪ ಮೀನಾ ಮೊಸಳಿ ಆದ ಕತೆ...

ಅಂದು ಇಜೇರಿಯಲ್ಲಿ ಕಾರ್ಯಕ್ರಮ. ಎಂದಿನಂತೆ ಶಾಲೆಯ ಮುಂದೆ ಟಂ ಟಂ ಕಾಯುತ್ತಿತ್ತು. 6 ಮತ್ತು 7 ನೆಯ ತರಗತಿಯ ವಿದ್ಯಾರ್ಥಿನಿಯರನ್ನು ಒಟ್ಟುಗೂಡಿಸಿ ಅವರನ್ನು ಅಲ್ಲಿನ ಕಾರ್ಯಕ್ರಮಕ್ಕೆ ಸಿದ್ಧಗೊಳಿಸಿ ಕರೆದುಕೊಂಡು ಹೋಗಬೇಕಿತ್ತು. ಶಾಲೆಯಿಂದ ಹೊರಟ‌ ಟಂ ಟಂ ಗ್ರಾಮದ ಬೀದಿಗಳನ್ನು ಸೀಳಿಕೊಂಡು ಹೊರಟಿತು.
"ಸರ್ ಛಾಯಾ ಬಂದಿಲ್ರೀ..." ಅಂತ ಪ್ರಿಯಾಂಕ ಎಂಬ ವಿದ್ಯಾರ್ಥಿನಿ ಎಚ್ಚರಿಸಿದಾಗ ಆ  ವಿದ್ಯಾರ್ಥಿನಿಯ ಮನೆ ತುಸು ದೂರವಿದ್ದುದರಿಂದ ಗ್ರಾಮದ ಬಸ್ ಸ್ಟಾಪ್ ಬಳಿ ಟಂ ಟಂ ಅವಳಿಗಾಗಿ ಕಾಯತೊಡಗಿತ್ತು. ನಾನು ತುಸು ದೂರ ಅವಳ ಮನೆಯತ್ತ ನಡೆದು ಆ ವಿದ್ಯಾರ್ಥಿನಿಯನ್ನು ಕರೆದು ಬೇಗ ಬರುವಂತೆ ಹೇಳಿ ಟಂ ಟಂ ಹತ್ತಿರ ಬಂದೆ. ಆಗ ಅಲ್ಲಿದ್ದ ವ್ಯಕ್ತಿಯೊಬ್ಬರು ಟಂ ಟಂ ಬಳಿ ಬಂದರು. ಆ ವ್ಯಕ್ತಿ ನಮ್ಮ ಶಾಲೆಯಲ್ಲಿನ ವಿದ್ಯಾರ್ಥಿಯೊಬ್ಬನ ತಂದೆಯಾಗಿದ್ದರು. ಸಹಜವಾಗಿ ಅವರನ್ನ ಮಾತಾಡಿಸಿದಾಗ ಆ ವ್ಯಕ್ತಿ ತುಸು ಅಸಮಾಧಾನದಿಂದಲೇ ಮಾತಿಗಿಳಿದರು.

"ಎಲ್ಲಿಗಿ ಹೊಂಟೀರಿ‌ ಸರ್?" ಅಂತಂದರು ಆ ವ್ಯಕ್ತಿ..

"ಇಜೇರಿಗೆ ಹೊಂಟಿವ್ರೀ.." ಅಂದೆ.

"ಏನ್ ಅದು ಮ್ಯಾಲ ಮ್ಯಾಲ ಇಜೇರಿಗೆ ಹೋಗೋದು.. ? ಒಂದ್ ತಿಂಗ್ಳಾತು ನೋಡಾಕತೇನಿ.. ಎರಡ್ಮೂರ್ ದಿನಕ್ ನಾಕೈದು ಹೆಣ್ಣ ಚುಕ್ಕೋಳ್ನ(ಚುಕ್ಕೋಳು=ಮಕ್ಕಳು) ಕರ್ಕೊಂಡ್ ತಿರ್ಗೇ ತಿರ್ಗ್ತೀರಿ. ಹೆಣ್  ಚುಕ್ಕೋಳ್ನ ದೊಡ್ಡು ಅದಾವ್.. ಗಂಡ್ ಚುಕ್ಕೋಳ್ನ ಕರ್ಕೊಂಡ್ ಹೋಗಾಕ್ ಬ್ಯಾಡಂತಾರನ್ ಹೆಡ್ ಮಾಸ್ತರ್...?" ಅವರ ಧ್ವನಿ ಏರುತಲಿತ್ತು.. ಅವರ ಏರುಧ್ವನಿಗೆ ಬಸ್ ಸ್ಟಾಪಿನಲ್ಲಿದ್ದ ಏಳೆಂಟು ಜನ ಜಮಾಯಿಸಿದರು. ಅಲ್ಲಿನ ಬಹಳಷ್ಟು ಜನ ನನ್ನ ಪರವಾಗಿಯೇ
"ಸಾಲಿ ಕಾರ್ಯಕ್ರಮ ಇರ್ತಾವ.. ಯಾವ್ ಮುಂದ್ ಇರ್ತಾವ್ ಅವ್ರನ್ ಕರದಕೊಂಡ್ ಹೊಕ್ಕಾರೋ ತಿಪ್ಪಣ್ಣ.. ಅದೆಲ್ಲ ಏನ್ ಕೇಳ್ತಿ?" ಅಂತ ಅಂದರೂ ಆತ ಮಾತ್ರ ಕೇಳಲಿಲ್ಲ.

ಇದೇನಪ್ಪ.. ಈ ವ್ಯಕ್ತಿ ನಾನು ಈ ವಿದ್ಯಾರ್ಥಿನಿಯರನ್ನ ನನ್ನ ಮನೆಯ ಕೆಲಸಕ್ಕೆ ಕರೆದುಕೊಂಡು ಹೋಗ್ತಿದ್ದೀನಿ ಅನ್ನೋ ಥರ ಮಾತಾಡ್ತಿದ್ದಾನೆ ಅಂತ ಸಿಟ್ಟು ಬಂತು. ನಾನು ಮುಂದುವರೆದು  "ಅದು ಹಂಗಲ್ರೀ, ಮೀನಾ ಅಂತ..." ಎನ್ನುವುದನ್ನು ವಿವರಿಸುವ ಮೊದಲೇ ಆತ
"ಏನ್ ಮೀನಾ ಮಸಳಿ.. ಏಯ್, ಎಲ್ಲಾರು ತೆಳಗಿಳಿರಿ.. ನಡ್ರಿ ಸಾಲಿಕಡೇ..ನಿಮ್ಮವ್ವ ನಿಮ್ಮಪ್ಪ ಏನೂ ಕೇಳಾಂಗಿಲ್ಲೇನ್?" ಅಂತ ಆಟಾಟೋಪಾಗಿ ಎಲ್ಲ ವಿದ್ಯಾರ್ಥಿಯರನ್ನ ಬೆದರಿಸಿ ಟಂ ಟಂ ದಿಂದ ಕೆಳಗಿಳಿಸಿ ಶಾಲೆ ಕಡೆ ಕಳಿಸಿದರು. ಹೆದರಿದ ಆ ವಿದ್ಯಾರ್ಥಿನಿಯರು ಶಾಲೆ ಕಡೆಗೆ ನಡೆದರು. ಅದೇ ಟಂ ಟಂ ದಲ್ಲಿ ಆತ ನನ್ನ ಜೊತೆ ಶಾಲೆಗೆ ಬಂದರು. ಶಾಲೆಯಲ್ಲಿ ಇದೇ ವಿಷಯ ಪ್ರಸ್ತಾಪಿಸಿ ಹೆಡ್ ಮಾಸ್ತರಿಗೂ ಬೈಯಲಾರಂಭಿಸಿದರು. ಅವರ ಮಾತುಗಳಿಂದ ಹೆಡ್ ಮಾಸ್ತರೂ ಸಹ ಸುಮ್ಮನಾದರು. ಅವರು ನಮ್ಮ‌ಶಿಕ್ಷಕರ ಮಾತನ್ನು ಕೇಳುವ ಪರಿಸ್ಥಿಯಲ್ಲಿರಲಿಲ್ಲ. ಇತ್ತ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಿಂದ ಬೇಗನೇ ಕಾರ್ಯಕ್ರಮಕ್ಕೆ ಹಾಜರಾಗಲು ಕರೆ ಬರುತ್ತಿತ್ತು.

ಬರೋಬ್ಬರಿ ಹದಿನೈದು ನಿಮಿಷಗಳ ನಂತರ ಆತ ಸ್ವಲ್ಪ ಕೂಲಾಗಿ ಹೆಡ್ ಮಾಸ್ತರ್ ರೂಮಿನ ಗೋಡೆಗಳ ಮೇಲೆ ಕಣ್ಣಾಡಿಸಿದ. ಅಲ್ಲಿ ಮೀನಾ ತಂಡ ಎಂಬ ಪಟ್ಟಿ ನೋಡಿ
"ಏನ್ ಆಗಳೆ ಮೀನಾ ಅಂದ್ರಿ..ಇದ ಏನ್ ಮೀನಾ.. ಏನ್ ಇದು?" ಅಂತಂದ..

ಆಗ ನಮ್ಮ ಹೆಡ್ ಮಾಸ್ತರ ವಿವರಿಸತೊಡಗಿದರು.
ಮೀನಾ ಎಂಬ ಕಾಲ್ಪನಿಕ ಹುಡುಗಿ ಶಾಲಾ ಶಿಕ್ಷಣದಿಂದ ಕೆಲ ದಿನ ಮಟ್ಟಿಗೆ ವಂಚಿತಳಾಗಿ ಮನೆಯಲ್ಲಿರುತ್ತಾಳೆ. ಆಗ ಅವಳ ತಮ್ಮ ಹಾಗೂ ಅವಳು ಸಾಕಿದ ಗಿಳಿ ಮಿಟ್ಟು ಶಾಲೆಗೆ ಹೋಗಿ ತಾವು ಕಲಿತ ವಿಷಯವನ್ನು ಮೀನಾಳಿಗೆ ಕಲಿಸುತ್ತಾರೆ. ಇದರಿಂದ ಮೀನಾ ಸ್ವಯಂ ಕಲಿಯುತ್ತಿರುವಾಗ ಅವಳ ಶಿಕ್ಷಕರೊಬ್ಬರು ಬಂದು ಅವಳನ್ನು ಪುನಃ ಶಾಲೆಗೆ ದಾಖಲಿಸುವಂತೆ ಮಾಡುತ್ತಾರೆ. ಇದರಿಂದ ಮತ್ತೇ ಶಾಲೆಗೆ ಹೋಗಲಾರಂಭಿಸಿ ತನ್ನ ಸುತ್ತಮುತ್ತಲಿನ ಜನರನ್ನೆಲ್ಲ ಮೀನಾ ಸುಶಿಕ್ಷಿತರನ್ನಾಗಿ ಮಾಡುತ್ತಾಳೆ. ಇದೇ ರೀತಿ ನಮ್ಮ ಶಿಕ್ಷಣ ಇಲಾಖೆ ಪ್ರಾಥಮಿಕ ಹಂತದಲ್ಲಿಯೇ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮ(National Programme for Education of Girls at Elementary Level) ಅಡಿಯಲ್ಲಿ ಪ್ರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 15 ಜನ ಸದಸ್ಯರಿರುವಂತೆ ಮೀನಾ ತಂಡ ರಚಿಸಿ ಅದರಲ್ಲಿ6,7,8 ತರಗತಿಯ 5 ಜನ ವಿದ್ಯಾರ್ಥಿಗಳು ಹಾಗೂ ಉಳಿದ 10 ಜನ ವಿದ್ಯಾರ್ಥಿನಿಯರು ಇರುವಂತೆ ತಂಡ ರಚಿಸಿ ಅವರಿಗೆ ಶಾಲಾ ಮಟ್ಟದಲ್ಲಿ, ಕ್ಲಸ್ಟರ್ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ ಜೀವನ ಕೌಶಲಗಳು ಹಾಗೂ ಹೆಣ್ಣು ಮಕ್ಕಳಿಗಾಗಿಯೇ ಸಬಲೀಕರಣ ಚಟುವಟಿಕೆಗಳನ್ನು  ಹಮ್ಮಿಕೊಂಡು ಅದರಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಇಲಾಖೆ ಪುರಸ್ಕರಿಸುತ್ತದೆ. ಹೊಲಿಗೆ ತರಬೇತಿ, ಎಂಬ್ರಾಯಿಡರಿ,ವಿವಿಧ ಗೃಹಾಧಾರಿತ ಗುಡಿ ಕೈಗಾರಿಕೆಗಳ ತರಬೇತಿ ನೀಡುತ್ತದೆ. ನಮ್ಮ ಶಾಲೆಯಲ್ಲಿ ಮಹಿಳಾ ಶಿಕ್ಷಕರಿರದ ಕಾರಣ ನಮ್ಮಲ್ಲಿಯೇ  ಒಬ್ಬರಿಗೆ ಈ ಜವಾಬ್ದಾರಿ ವಹಿಸಲಾಗಿದೆ" ಎಂದು ವಿವರವಾಗಿ ಅವರಿಗೆ ತಿಳಿಸಿದರು.

ಆಗ ನಾನು ನಮ್ಮ ಶಾಲೆಯಲ್ಲಿ ಮೀನಾ ತಂಡದ ವಿದ್ಯಾರ್ಥಿ ವಿದ್ಯಾರ್ಥಿನಿಯರು ತಯಾರು ಮಾಡಿದ್ದ ಊದು ಬತ್ತಿ, ಸೋಪಿ‌ನ ಪುಡಿ, ಚಿಪ್ಸ್ ಪ್ಯಾಕೆಟ್ ಹಾಗೂ ಕರಿಬೇವಿನ ತೈಲ ಮುಂದಾದವನ್ನು ತೋರಿಸಿದಾಗ ಅವರಿಗೆ ಆ ಕಾರ್ಯಕ್ರಮದ ಅರಿವಾಯಿತು. ಅಂದೇ ಅವರು ನಮ್ಮ ಜೊತೆ ಕ್ಲಸ್ಟರ್ ಮಟ್ಟದ ಮೀನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಂಡರು.
"ಸರ್ ಸರ್ಕಾರ ಹೆಣ್ಣ ಚುಕ್ಕೋಳಿಗೆ ಇಷ್ಟೆಲ್ಲ ಅವಕಾಶ ಮಾಡೇತಲ್ರಿ.. ಪಾಪ ..ನಿಮಗೆಲ್ಲ ಗೊತ್ತಿಲ್ದ ಬೈದಿನ್ರಿ ತಪ್ಪ ತಿಳಕೋಬ್ತಾಡ್ರಿ.." ಅಂತಂದಾಗ ಜಗತ್ತನ್ನೇ ಗೆದ್ದ ಖುಷಿ ನಮ್ಮದಾಗಿತ್ತು..

"ನಾವು ಶಿಕ್ಷಕರು.. ನಿಮ್ಮ ಮಕ್ಕಳಿಗೆ ಕಲಸಾಕ ಬಂದೇವ್ರಿ.. ಹಾಳಮಾಡಾಕ್ ಅಲ್ಲ..ನಮ್ಮ ಮ್ಯಾಲ ನಂಬಿಕೆ ಇಡ್ರೀಪಾ..ನೀವು ಓದಿದಾವ್ರು..ನೀವ ಹಿಂಗಂದ್ರ ಹೆಂಗ್ರೀ?" ಅಂತ ಅಂದಾಗ ಅವರ ಕಣ್ಣಲ್ಲಿ ಪಶ್ಚಾತಾಪದ ಹೊಳಪಿತ್ತು..

ಈಗ ಆ ತಿಪ್ಪಣ್ಣನ 4 ಮಕ್ಕಳಲ್ಲಿ ಇಬ್ಬರು ಇಂಜಿನಿಯರಿಂಗ್ ಓದ್ತಿದ್ದಾರೆ, ಒಬ್ಬ ಬಿಎಸ್ಸಿ ಅಗ್ರಿ, ಇನ್ನೊಬ್ಬ ಪಿಯೂ ಸೈನ್ಸ್.. ಇವರೆಲ್ಲ..ಅದೇ ಮೀನಾ ತಂಡದಲ್ಲಿದ್ದ ಗಂಡು ಚುಕ್ಕೋಳು..

ಫೇಸ್ ಬುಕ್ ಪಾಠ ಟಿಪ್ಪಣಿ- ೩ ಹಗಲಿ ದೆವ್ವದ ಕಥೆ...


ಅದು ಶಾಲಾ ಪ್ರಾರಂಭೋತ್ಸವ ದಿನ. ಬೆಳಿಗ್ಗೆಯಿಂದಲೇ ಶಾಲೆ ಸಿಂಗರಿಸುವ ಕೆಲಸ ಶುರುವಾಗಿತ್ತು. ಕಿರಿಯ ತರಗತಿಗಳ ವಿದ್ಯಾರ್ಥಿಗಳು ಮಾತ್ರ ನಮ್ಮ ಜತೆ ಅಲಂಕಾರ ಕಾರ್ಯದಲ್ಲಿ ಭಾಗಿಯಾಗಿದ್ದರು. ಮಕ್ಕಳು ಸಹಜವಾಗಿ ಮೊದಲ ದಿನ ತುಸು ಕಡಿಮೆ ಸಂಖ್ಯೆಯಲ್ಲೇ ಹಾಜರಾಗುತ್ತಾರೆ ಅಂತ ನಾವೆಲ್ಲ ಸುಮ್ಮನಾಗಿದ್ದೆವು.. ಆದರೆ ಅಂದಿನ ಪರಿಸ್ಥಿತಿ ಹಾಗಿರಲಿಲ್ಲ.. ನಾವು ನಿರೀಕ್ಷಿಸಿದ್ದಕ್ಕಿಂತ ತೀರಾ ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಜರಿದ್ದರು. ಮುಖ್ಯಗುರುಗಳಾದ ಹರಿಶ್ಚಂದ್ರ ಸರ್ ಅವರು ಗ್ರಾಮದ ಬೀದಿಗಳಲ್ಲಿ ಸಂಚರಿಸಿ ಮಕ್ಕಳನ್ನು ಕರೆತರುವ‌ ತಯಾರಿಯಲ್ಲಿದ್ದರು. ಅಂತೆಯೇ ಕಿರಿಯ ತರಗತಿ ಮಕ್ಕಳೊಂದಿಗೆ ಪ್ರಭಾತಫೇರಿ ಹೋಗಿ ಪಾಲಕರ‌ ಮನವೊಲಿಸಲಾಯಿತಾದರೂ ಹತ್ತ್ಹನ್ನೆರೆಡು ಮಕ್ಕಳು ಮಾತ್ರ ಮೊದಲ ದಿನ ಬಂದರು.

ಹೀಗೆ ಎರಡು ಮೂರು ದಿನಗಳು ಕಳೆದವು. ಪ್ರಾಥಮಿಕ‌ ತರಗತಿಗಳ ಮಕ್ಕಳಿಗಿಂತ ಹಿರಿಯ ತರಗತಿಗಳ ವಿದ್ಯಾರ್ಥಿಗಳೇ ಕಡಿಮೆಯಾಗಿದ್ದು ಒಂದು ಬಗೆಯ ಆತಂಕಕ್ಕೀಡು ಮಾಡಿತ್ತು.. ಅದರಲ್ಲೂ ವಿದ್ಯಾರ್ಥಿನಿಯರ ಸಂಖ್ಯೆಯಂತೂ ತೀರಾ ಗೌಣವಾಗಿತ್ತು.. ಪೋಷಕರ ಮನೆ ಮನೆ ಭೇಟಿ ಮಾಡುವುದೇ ಸರಿಯೆಂದು ನಿರ್ಧರಿಸಿ ಸಂಜೆ ಮನೆ ಮನೆ ಭೇಟಿ ಮಾಡಿದಾಗ ಪಾಲಕರಿಂದ ಬಂದ ಉತ್ತರ ಮಾತ್ರ ಭಯಾನಕವಾಗಿತ್ತು..

"ಯಾಕೆ ನಿಮ್ಮ ಮಗನ ಸಾಲಿಗ್ ಕಳ್ಸಿಲ್ಲ್ರೀ..?" ಅಂತ ನಾವು ಕೇಳಿದಾಗ ಪೋಷಕರು "ಸಾಲಿ ಮಗ್ಗಲದಾಗ ಮಶಾಣ‌ ಐತಲ್ರಿ.. ಅಲ್ಲಿ ಹಗಲಿ ದೆವ್ವ‌ ಐತ್ರಿ..ಮನ್ನೆ ಸತ್ತ ಹೋದ್ ಹುಡುಗಿ ದೆವ್ವ ಆಗಿ ತಿರಗ್ಯಾಡಾಕತಾಳ್ರೀ.. ನಮ್ಮ ಹುಡುಗೂರ ಅಂಜಾಕತಾವ್ರೀ.. ಈ ಕಡಿ ಸಾಲ್ಯಾಗ ಕೂಡಸ್ತಿದ್ರ ಮಾತ್ರ ಕಳಿಸ್ತೀವಿ" ಅಂತಂದರು.

ಜಾಗದ ಸಮಸ್ಯೆಯಿಂದಾಗಿ  ಸ್ಮಶಾಣದ‌ ಸಮೀಪ ಎರಡು ಶಾಲಾ‌ಕೋಣೆಗಳಿದ್ದವು. ಅಲ್ಲಿ ಕಳೆದ ವಾರದಲ್ಲಿ ಒಬ್ಬ ಹೆಣ್ಣು ಮಗಳು ಯಾವುದೋ ಕಾಯಿಲೆಗೆ ತುತ್ತಾಗಿ ಅಸುನೀಗಿದ್ದಳು. ಕಾಯಿಲೆಯಿಂದ ಮೃತಳಾದಳು ಎನ್ನುವ ಕಾರಣಕ್ಕೆ‌ ಶವ ಹೂಳದೇ ಬೆಂಕಿ ಇಟ್ಟಿದ್ದರು. ಈಗ ಅವಳು ರಾತ್ರಿ ಯಾರನ್ನೂ ಕಾಡದೇ ಹಗಲಿನಲ್ಲಿ ಆ ಕಡೆ ಹೋದವರಿಗೆ ಸುಟ್ಟ ಕಟ್ಟಿಗೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ ಹಾಗೂ ತೆವಳುತ್ತ ತೆವಳುತ್ತ ಸಮೀಪಿಸುತ್ತಾಳೆ ಎಂದು ಅವರು ಸವಿವರವಾಗಿ ವಿವರಿಸಿದರು.

"ನೀವಲ್ಲಿ ಹೋಗಿ ನೋಡಿದಿರಾ?" ಅಂತ ಕೇಳಿದ್ದಕ್ಕೆ "ಅಲ್ಲೇನ್ ಹೋಗ್ತೀರಿ ಸರ್..ಇಲ್ಲೇ ಮ್ಯಾಲ ಭಾಳೋತನ ನಿಂತ ನೋಡ್ರಿ ಕಾಣ್ತದ" ಅಂದ್ರು.

ಆದರೆ ನಮ್ಮಲ್ಲಿ ಹುಟ್ಟುಕೊಂಡ ಪ್ರಶ್ನೆ ನಿಜವಾಗಲೂ ದೆವ್ವಗಳು ಇವೆಯಾ? ಮನುಷ್ಯರೊಂದಿಗೆ ಮಾತನಾಡುತ್ತವಾ? ಮನುಷ್ಯರಿಗೆ ಕಾಣುತ್ತವಾ? ಅಂತ. ರಾಜಶೇಖರ ಭೂಸನೂರಮಠ ಅವರು ಸ್ಮಶಾಣಗಳಲ್ಲಿ ಹೋಗಿ ದೆವ್ವಗಳ ಧ್ವನಿ ರೆಕಾರ್ಡಿಂಗ್ ಮಾಡಿದ್ದರ ಬಗ್ಗೆ ಯಾವುದೋ ಅವರ ಕೃತಿಯೊಂದರಲ್ಲಿ ಓದಿದ್ದ ನೆನಪು. ವಿಜಯಪುರದ ಸಾಠ್ ಖಬ್ರ ನಲ್ಲೂ ಈ ಥರದ ಅನುಭವಗಳಾಗಿದ್ದರೂ ಸಹ ದೆವ್ವಗಳಿರುತ್ತವೆ ಎಂದು ನಂಬುವುದು ವಿಜ್ಞಾನದ ವಿದ್ಯಾರ್ಥಿಯಾಗಿ ನನಗೆ ಸರಿದೋರಲಿಲ್ಲ. ನಮ್ಮ‌ ಸಹಶಿಕ್ಷಕರಾದ ಗೋಣೆಪ್ಪ, ಮಂಜುನಾಥ ಸೇರಿ ಹಗಲಿನಲ್ಲಿಯೇ ಆ ದೆವ್ವ ಕಾಣುವ ಜಾಗದತ್ತ ಹೋಗುವ ತಯಾರಿ ಮಾಡಲಾಯಿತು. ಮುಂದೆ ನಡೆಯುತ್ತ ಹೋದಂತೆ ನಮಗೂ ಧೈರ್ಯ ಸಾಲದಾಯಿತು.. ಹಿಂದೆ ದೂರದಲ್ಲಿದ್ದ ವಿದ್ಯಾರ್ಥಿಗಳು "ಸರ್  ಬ್ಯಾಡ್ ಬರ್ರಿ..." ಅಂತ ಕೂಗುತ್ತಿದ್ದರು. ಅವರು ಕೂಗಿದಷ್ಟು ನಮಗೆ ಹೆದರಿಕೆ ಹೆಚ್ಚಾಗುತ್ತಿತ್ತು.. ಆ ಜಾಗೆಯಲ್ಲಿ ನಾವು ಮೂರು ಜನ ಬಿಟ್ಟರೆ ಬೇರಾರೂ ಇಲ್ಲ. ಸುತ್ತೆಲ್ಲ ನೀರವ ಮೌನ. ಮುಂದೆ ಬರಡಾದ ಸ್ಮಶಾಣ. ಜೋರಾದ ಗಾಳಿ ಬೀಸತೊಡಗಿತು. ಹೆಣ ಸುಟ್ಟ ಜಾಗೆಯಲ್ಲಿನ ಸುಟ್ಟ ಕಟ್ಟಿಗೆ ಅಲುಗಾಡುತ್ತಿತ್ತು. ಆ ಕಟ್ಟಿಗೆ ಒಂದು ಮರದ ಕಾಂಡವಾಗಿದ್ದು ಅದರಿಂದ ಹೊರಟ ಎರಡು ಶಾಖೆಗಳು  ಥೇಟ ಮಾನವನ  ದೇಹದಿಂದ. ಹೊರಟ ಕೈಗಳಂತೆ  ತೋರುತ್ತಿತ್ತು. ಅದು ಅಲುಗಾಡುವ ರೀತಿ ಒಂದು ದೇಹ‌ ಬಿದ್ದು ಅಲುಗಾಡುವ ರೀತಿಯಲ್ಲೇ ಇತ್ತು. ಗಾಳಿ ಬೀಸಿದಂತೆ ಅಲುಗಾಟ ಜಾಸ್ತಿಯಾಗುತ್ತಿತ್ತು.. ಗಾಳಿ ಬೀಸುವಿಕೆ‌ ಕಡಿಮೆಯಾದಾಗ ಅಲುಗಾಟ ಇಲ್ಲದೇ ನಿಶ್ಚಲವಾಗುತ್ತಿತ್ತು.
ಸುಟ್ಟ ಕಟ್ಟಿಗೆಯು ಮಾನವಾಕೃತಿಯಲ್ಲಿದ್ದು ಗಾಳಿಯಿಂದಾಗಿ ಅಲುಗಾಡುವುದು    ಒಂದು ದೇಹ ಅಲುಗಾಡುವ ಭ್ರಮೆಯನ್ನುಂಟು ಮಾಡುತ್ತಿತ್ತು.. ಹತ್ತಿರಕ್ಕೆ ಹೋದಾಗ ಅದೊಂದು ಕಟ್ಟಿಗೆಯಾಗಿ ತೋರುತ್ತಿತ್ತು.

ಆ ಕಟ್ಟಿಗೆಯನ್ನು ಹಿಡಿದು ದೂರದಲ್ಲಿದ್ದ ವಿದ್ಯಾರ್ಥಿಗಳಿಗೆ ಎತ್ತಿ‌ ತೋರಿಸಿ ಹಗಲಿ ದೆವ್ವ ಸತ್ತಿತೆಂದು ಅದನ್ನು ಮುರಿದು ಅಲ್ಲಿಯೇ ಬಿಸಾಡಿ ಬಂದಾಯಿತು.

ಇನ್ನು ಆ ಹುಡುಗಿ ದೆವ್ವವಾಗಿದ್ದಾಳೆ‌ ಅನ್ನುವುದಕ್ಕೆ ಸಾಕ್ಷಿ ಊರವರ ಬಳಿ ಇರಲಿಲ್ಲ.ಆ ಜಾಗೆಯಲ್ಲಿದ್ದು ಕೊಂಡು ತೆವಳುತ್ತಿದ್ದಾಳೆ ಎಂಬ ಭ್ರಮೆ ಊರಿನವರಲ್ಲಿದ್ದುದರಿಂದ ಅದನ್ನು  ಕೇಳಿಸಿಕೊಂಡ ಹಿರಿಯ ತರಗತಿ ಮಕ್ಕಳು ಶಾಲೆಗೆ ಹೋದರೆ ಯಾರೂ ಇಲ್ಲದಿದ್ದಾಗ ಹಗಲಿ ದೆವ್ವ ಹಿಡಿಯುತ್ತದೆ ಎಂಬ ಭಯ ಸಹಜವಾಗಿ ಅವರನ್ನು ಶಾಲೆಯಿಂದ ದೂರ ಮಾಡಿತ್ತು. ನಮಗೆ ಅಷ್ಟು ಭಯ ಎನ್ನಿಸಿದ್ದ ಆ ಕಟ್ಟಿಗೆ ಪಾಪ ಪುಟ್ಟ ಮಕ್ಕಳನ್ನ ಹೆದರಿಸದೇ ಇದ್ದೀತೆ?

ಭಯ ಎನ್ನುವುದು ಎಂತಹ ಆತ್ಮ‌ವಿಶ್ವಾಸವನ್ನೂ ಕುಂದಿಸುತ್ತದೆ. ನಮ್ಮ ಕಲಿಕಾ ಪ್ರಕ್ರಿಯೆಗೆ ಇದನ್ನು ಅನ್ವಯಿಸಿ ನೋಡಿದರೆ ಭಯದಿಂದ ಕಲಿಕೆ ಸಾಧ್ಯವಾಗಲಾರದು. ಶಿಕ್ಷಕರ‌ ಭಯ, ಪೋಷಕರ ಭಯ, ಸುತ್ತಲಿನ ಪರಿಸರದಲ್ಲಿನ ಭಯ ಸಹಜವಾಗಿ ಕಲಿಕೆಗೆ ತೊಡಕಾಗುತ್ತದೆ. ಅದೇ ನಿರ್ಭಯ ವಾತಾವರಣದಲ್ಲಿ ಗರಿಷ್ಠ ಕಲಿಕೆಯುಂಟಾಗುತ್ತದೆ. ಭಯ ಮುಕ್ತ ವಾತಾವರಣ ಉತ್ತಮ ಕಲಿಕೆಯ ಮರುಪೂರಣ.  ಏನಂತೀರಾ?

ಫೇಸ್ ಬುಕ್ ಪಾಠ ಟಿಪ್ಪಣಿ-೨ ಮಾರ್ತಾಂಡನೆಂಬ ಸೂರ್ಯನ ಕತೆ...


ನಾಲ್ಕನೆಯ ತರಗತಿಯಲ್ಲಿ ನಡೆದ ಸಂಗತಿ. ನಿಧಾನ ಗತಿಯ ಕಲಿಕೆಯ ಮಕ್ಕಳನು ಬೇರೆ ವಿಧಾನಗಳಿಂದ ಅಭ್ಯಾಸ ಮಾಡಿಸಬೇಕೆನ್ನುವುದು ಇಲಾಖೆಯ ಕಾರ್ಯಕ್ರಮಗಳಲ್ಲೊಂದಾಗಿತ್ತು. ಮಾರ್ತಾಂಡ ಎಂಬ ವಿದ್ಯಾರ್ಥಿ ನನ್ನ ಬಲು ಕಾಡಿದ ವಿದ್ಯಾರ್ಥಿ.. ನಾಲ್ಕನೆಯ ತರಗತಿಗೆ ಬಂದಿದ್ದರೂ ಮೂಲಾಕ್ಷರಗಳ ಪರಿಚಯವಿಲ್ಲದ ಬರೆಯಲು ಓದಲು ಬಹಳ ತೊಂದರೆಯನ್ನನುಭವಿಸುತ್ತಿದ್ದ ಹುಡುಗ. ಎಂಥೆಂಥ ವಿದ್ಯಾರ್ಥಿಗಳು ಸಲೀಸಾಗಿ ಕನಿಷ್ಠ ಮಟ್ಟದಲ್ಲಾದರೂ ಅಕ್ಷರಗಳನ್ನು ಬರೆಯಲು ಕಲಿಯುತ್ತಿದ್ದರೂ ಈತ ಮಾತ್ರ ಅಯೋಮಯ. ಬೆನ್ನಿಗೆ ಬಾರಿಸುವಷ್ಟು ಕೋಪ ಬರುತ್ತಿತ್ತಾದರೂ‌ ಏನೂ ಪರಿಹಾರ ಸಿಗಲಿಲ್ಲ. ಶಾಲೆಗೆ ಅರ್ಧ ಗಂಟೆ ತಡ ಮಾಡಿ ಬರುತ್ತಿದ್ದ ಈತ ತರಗತಿಯೊಳಗೆ ತುಟಿ ಪಿಟಿಕ್ಕೆನ್ನುತ್ತಿರಲಿಲ್ಲ. ಪಾಠ ಮಾಡುವಾಗ ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದನಾದರೂ ಪ್ರತಿ ಸ್ಪಂದನೆ ಎನ್ನುವುದು ಅವನ್ನಲ್ಲಿರಲಿಲ್ಲ..ನಾನೂ ತುಸು ಸಿಟ್ಟಿಗೆದ್ದು ಬೈದರೆ ಕಣ್ಣು ಹನಿಗಟ್ಟುತ್ತಿದ್ದವು. ಆದರೆ ಪಾಪ ಅವನ‌ ಸಮಸ್ಯೆಯೇ ಬೇರೆ ಇತ್ತು.

ಗಣತಿಗೆಂದು ಅವನ ಮನೆಗೆ ಭೇಟಿ ನೀಡಿದಾಗ ಅವನ ಮೂಲ ಸಮಸ್ಯೆ ಅರ್ಥವಾಯಿತು. ಅವನದು ಪುಟ್ಟ ಕುಟುಂಬ. ಅದರಲ್ಲಿ ಅಜ್ಜಿ,ತಂದೆ ತಾಯಿ, ಅಕ್ಕ ಹಾಗೂ ಇವನ ಪುಟ್ಟ ತಂಗಿ. ತಂದೆಗೆ ಪಾರ್ಶ್ವವಾಯು ಹೊಡೆದು ತಿಂಗಳಾಗಿತ್ತು. ಇವನ ತಾಯಿ ಹಾಗೂ ಅಜ್ಜಿ ದಿನನಿತ್ಯ ಕೂಲಿಗೆ ತೆರಳಬೇಕಿತ್ತು. ಅಕ್ಕ ಹಾಗೂ ಇವನೂ ಇಬ್ಬರೂ ಶಾಲೆಗೆ ಬರುವಾಗ ಪುಟ್ಟ ತಂಗಿಯನ್ನೂ ಹೊತ್ತು ತರಬೇಕಿತ್ತು. ಎಷ್ಟೋ ಸಲ ನಾವೆಲ್ಲ ಶಿಕ್ಷಕರು 'ಪುಟ್ಟ ಮಕ್ಕಳನ್ನ ಶಾಲೆಗೆ ತರಬೇಡಿ' ಅಂತ ತಾಕೀತು ಮಾಡಿದ್ದೆವು. ಹಾಗಿದ್ದಾಗ ಒಮ್ಮೊಮ್ಮೆ ಅಕ್ಕ ಶಾಲೆ ಬಿಡುತ್ತಿದ್ದಳು. ಒಮ್ಮೊಮ್ಮೆ ಈತ ಶಾಲೆಗೆ ಚಕ್ಕರ್  ಹಾಕುತ್ತಿದ್ದ.. ತಂದೆಯ ವೈದ್ಯೋಪಚಾರಕ್ಕೆ ತಾಯಿ ಹಾಗೂ ಅಜ್ಜಿ ದುಡಿದರೆ ಮಕ್ಕಳದು ಈ ಪಾಡು. ಬೆಳಗ್ಗೆ 9 ಕ್ಕೆ ಕೂಲಿಗೆ ಹೋದನಂತರ ತಂದೆಗೆ ಈ ಅಕ್ಕ ತಮ್ಮ ಊಟ ಮಾಡಿಸಿ ಮಾತ್ರೆ ನುಂಗಿಸಿ ಶಾಲೆಗೆ  ಬರಬೇಕಿತ್ತು.. ಮಧ್ಯಾಹ್ನ ಊಟಕ್ಕೆ ಬಿಟ್ಟಾಗಲೂ ಸಹ ಇವರಿಬ್ಬರೂ ಒಂದರೆ ಘಳಿಗೆ ತಂದೆಯನ್ನು ಉಪಚರಿಸಿ ಬರುತ್ತಿದ್ದರು. ಪರಿಸ್ಥಿತಿ ಹೀಗಿರುವಾಗ ಆತ ಕಲಿಯುವುದಾದರೂ ಹೇಗೆ? ಇಂಥ  ವಿಷಣ್ಣ ಪರಿಸ್ಥಿತಿಯಲ್ಲಿ ಆತ ಹೇಗೆ ಸಂತೋಷವಾಗಿ ಕಲಿಯಬಲ್ಲ?
ಮನೆಯ ಪರಿಸ್ಥಿತಿ ಹೀಗಾದರೆ ಮಾರ್ತಾಂಡ ನಿಧಾನ ಗತಿ ಕಲಿಕೆ ಇರುವ ಹುಡುಗ. ಆಗಿನಿಂದ ಅವನಿಗೆಂದೇ ತುಸು ಹೆಚ್ಚೇ ಅಭ್ಯಾಸ ನಾವು ಮಾಡಬೇಕಿತ್ತು. ಅವನ ಕನ್ನಡ ಕಲಿಕೆಗೆ ಕಾಪಿ ಬರಹ ಪುಸ್ತಕ, ಫ್ಲ್ಯಾಷ್ ಕಾರ್ಡ್ ಇತರೆ ಕಲಿಕೋಪಕರಣ ತಯಾರಿಸಿ ಅವನಿಗೆ ಮೂಲಾಕ್ಷರ ಕಲಿಸುವಷ್ಟರಲ್ಲಿ ಆತ ಐದನೆ ತರಗತಿ ಮುಗಿಸಿದ್ದ.. ಬರಬರುತ್ತ ವಿಶೇಷ ಆಸಕ್ತಿ ವಹಿಸಿ ಕಲಿಯ ತೊಡಗಿದ.. ಪದ ವಾಕ್ಯ ಓದಲು ಕಲಿತ. ಉತ್ತಮವಾಗಿ ಪ್ರತಿ ಸ್ಪಂದಿಸತೊಡಗಿದ.. ಈ ನಡುವೆ ಅವನ ತಂದೆ ತೀರಿಕೊಂಡರು. ನೋವಿನ ನಡುವೆಯೂ ಶಾಲೆಗೆ ನಿಯಮಿತವಾಗಿ ಬರತೊಡಗಿದ. "ಏನೋ ದಿನ್ನ ಸಾಲಿಗ ಬರಾಕತ್ತಿ..?" ಅಂತ ಅಂದಾಗ "ಗೋಣೆಪ್ಪ ಸರ್ ಮತ್ತ ನೀವೂ ಈಗ ಬೈಯಾಂಗಿಲ್ಲಲ್ರಿ ಅದ್ಕ"ಅಂತಂದ..
ಅವನಿಗೆ ಕಲಿಸಲಿಕ್ಕೆ ಹೋಗಿ ನಾವ್ ಕಲಿತದ್ದು ವಿದ್ಯಾರ್ಥಿಗಳ ಪ್ರ್ಯಾಕ್ಟಿಕಲ್ ಹಾಗೂ ಕ್ಲಿನಿಕಲ್ ಸೈಕಾಲಜೀ. ಸಿಟ್ಟು, ಶಿಕ್ಷೆ ಹಾಗೂ ನಿಂದನೆ ಶಿಕ್ಷಕರನ್ನು ಅವರ ವಿದ್ಯಾರ್ಥಿಗಳಿಂದ ದೂರ‌ ಮಾಡುತ್ತವೆ. ಅಷ್ಟೇ ಅಲ್ಲ ವಿದ್ಯಾರ್ಥಿಗಳನ್ನು ನಕಾರಾತ್ಮವಾಗಿ ಕುಗ್ಗಿಸುತ್ತವೆ. ಸಮಸ್ಯೆಗೆ ಮೂಲ ಹುಡುಕುವುದರಿಂದ ವಿದ್ಯಾರ್ಥಿಗಳ ಅರ್ಧ ಸಮಸ್ಯೆಯನ್ನು ಪರಿಹರಿಸಬಹುದು. ಆತನ ಮನೆಗೆ ಭೇಟಿ ನೀಡಿ ಅವನ ನೈಜ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವವರೆಗೂ  ಮಾರ್ತಾಂಡನ ಕಣ್ಣುಗಳಲ್ಲಿನ ಕಣ್ಣೀರು ನನಗೆ ಅರ್ಥವಾಗಿರಲಿಲ್ಲ.

ಶಿಕ್ಷಕರಾದ ನಾವು ನಮ್ಮ ವಿದ್ಯಾರ್ಥಿಗಳನ್ನು ಅರ್ಥ ಮಾಡಿಕೊಳ್ಳುವುದನ್ನು ಕಲಿಯಬೇಕು. ಒಂದು ಮಗುವಿನ ನಿಧಾನ ಕಲಿಕೆಗೆ ಆತನ ಪರಿಸರ ಬಹು ಮುಖ್ಯವಾಗಿ ಪ್ರಭಾವಿಸಿರುತ್ತದೆ.

ಈಗಲೂ ಆತನ ಆ ಮುಖ ನನಗೆ ನೆನಪಿದೆ. ಈಗ ಆತನ ಎಲ್ಲಿದ್ದಾನೋ ಗೊತ್ತಿಲ್ಲ.. ಮಾರ್ತಾಂಡ ಎಂದರೆ ಸೂರ್ಯ ಎಂದರ್ಥ.  ಸೂರ್ಯನನ್ನು ಕಂಡಾಗ ಮಾರ್ತಾಂಡ ನೆನಪಾಗುತ್ತಾನೆ. ಕಣ್ಣ ಹನಿಯಾಗಿ ಇಳಿದು ಹೋಗುತ್ತಾನೆ.

ಫೇಸ್ ಬುಕ್ ಪಾಠ ಟಿಪ್ಪಣಿ - ೧ ಉಗುರು ಕತ್ತರಿ ಮತ್ತು ಮಕ್ಕಳು...

ಹೊಸ ನೇಮಕಾತಿಯಾಗಿ ಬಂದಾಗ ಆದ ಖುಷಿ ಅಷ್ಟಿಷ್ಟಲ್ಲ..ಹೆಮ್ಮೆಯ ಜತೆಗೆ ಒಂದು ಬಗೆಯ ಅಹಂ ಕೂಡ. ಜೀವನಕ್ಕೊಂದು ಆಧಾರ ಸಿಕ್ಕಿತು ಅಂತಲೋ, ಬಯಸಿದ ವೃತ್ತಿ ಕೈಗೆಟುಕಿತು ಅಂತಲೋ ಅಂತೂ ಇಂತೂ ಶಿಕ್ಷಕನಾದೆ ಎಂಬ ಧನ್ಯತಾ ಭಾವ ಸಹ. ಅಂದುಕೊಂಡಂತೆ ಸಿಕ್ಕಿದ ಹಿರಿಯ ಪ್ರಾಥಮಿಕ ಶಾಲೆ. ಹಳ್ಳಿಯ ಬದುಕಿನ ಮುಂಬೆಳಗಿನ ಅನುಭವ.ಮೊದಲ ತರಗತಿಯಂತೂ ಹೇಳತೀರದು. ಮಕ್ಕಳ ಎದುರು ಮಕ್ಕಳಾಗಿ ಕಲಿಸಬೇಕು, ಮಕ್ಕಳ ಮನೋವಿಜ್ಞಾನ, ಬೋಧನಾ ಕಲಿಕಾ ವಿಧಾನ ಇವೆಲ್ಲ ವಿಜ್ಞಾನ ವಿರ್ದ್ಯಾರ್ಥಿಯಾದ ನನಗೆ ಅಷ್ಟಕ್ಕಷ್ಟೆ. ವಿದ್ಯಾರ್ಥಿಗಳ ಅರ್ಧಂಬರ್ಧ ಉಡುಗೆ. ಹಿರಿಯ ಪ್ರಾಥಮಿಕ ತರಗತಿಯಿದ್ದರೂ ನೋಟ್ ಪುಸ್ತಕದ ಬದಲು ಪಾಟಿಯನ್ನೇ ಅನುಸರಿಸಿ ತಂದ ವಿದ್ಯಾರ್ಥಿಗಳು. ಪೆನ್ನು ಪೇಪರ್ರಿನ ಅರಿವು ಕಡಿಮೆಯೇ. ವರ್ಷಕ್ಕೆ ಮೂರು ಬಾರಿ ಮಾತ್ರ ಪೇಪರಿನ ಮೇಲೆ ಬರೆಯುತ್ತಿದ್ದ ಸಂಪ್ರದಾಯ. ಕಾರಣ ಕೇಳಿದರೆ ಕಡು ಬಡತನದ ಜವಾಬು. ಇಂಥ ವಿದ್ಯಾರ್ಥಿಗಳನ್ನು ಇಂದಿನ ಕಾನ್ವೆಂಟ್ ಮಾದರಿಯಲ್ಲಿ ಬದಲಾಯಿಸಬೇಕೆಂಬುದು ನನ್ನ ಆಗಿನ ಏಕೈಕ ಯೋಚನೆಯಾಗಿತ್ತು. ಕೇವಲ ತರಗತಿ ಅನುಭವವಿದ್ದ ನನಗೆ ಆ ಹಳ್ಳಿ ಬದುಕಿನ ಜತೆ ಮೇಳೈಸಿಕೊಂಡ ಶೈಕ್ಷಣಿಕ ಮನೋವಿಜ್ಞಾನ ಅರ್ಥವಾಗುವುದು ತಡವಾಯಿತು.

ಬದಲಾವಣೆಯ ಬ್ರಾಕೆಟ್ಟಿನಲ್ಲಿ ಬರೆದಿಟ್ಟುಕೊಂಡ ಬಹಳಷ್ಟು ಸಂಗತಿಗಳಲ್ಲಿ ನಾನು ಮೊದಲು ಆಯ್ಕೆ ಮಾಡಿಕೊಂಡಿದ್ದು ಮಕ್ಕಳ ವೈಯಕ್ತಿಕ ಸ್ವಚ್ಛತೆಯ ಬಗ್ಗೆ.ಒಂದು ದಿನ ನನ್ನ ತರಗತಿಯ ಎಲ್ಲ ವಿದ್ಯಾರ್ಥಿಗಳ ಉಗುರುಗಳನ್ನು ನೀಟಾಗಿ ಕತ್ತರಿಸಿ ಅದರ ಮಹತ್ವ ತಿಳಿಸಿದೆ. ನೇಲ್ ಕಟರ್ ನೋಡದೇ ಇದ್ದ ಆ ಮಕ್ಕಳು ಮುಂದಿನ ಊರ ಜಾತ್ರೆಯಲ್ಲಿ ಬಂದುದ್ದ ಸಾದಾ ಉಗುರುಗತ್ತರಿಗಳನ್ನು ಕೊಂಡುಕೊಂಡಿದ್ದು ನನಗೆ ಖುಷಿ ನೀಡಿತ್ತು. ಹಲವು ಪೋಷಕರು ಈ ಬಗ್ಗೆ ಖುಷಿ ಪಟ್ಟರೇ ಕೆಲವು ಪೋಷಕರು " ಮಾಸ್ತರ್ ಕಲಸಾಕ್ ಬಂದಾನ ಏನ್ ಉಗುರ್ ಕತ್ರಸಾಕ್ ಬಂದಾನ?"  ಅಂತಾನೂ ಅಂದ್ರು. ಆಗಿನಿಂದ ತರಗತಿಯಲ್ಲಿ ಉಗುರು ಕತ್ತರಿಸುವಿಕೆ ನಿಂತಿತು. ಬಟ್ಟೆಯ ಬಗೆಗೆ ಹಾಗೂ ತಕಲೆಗೂದಲ ಬಗ್ಗೆ ತಿಳಿಸಿ ದಿನ ನಿತ್ಯದ ಸ್ನಾನ, ಒಗೆದ ಬಟ್ಟೆಗಳು ಹಾಗೂ ತಲೆಗೂದಲ ಆರೈಕೆ ಬಗ್ಗೆ ಒಂದಿನ ಪಿರಿಯಡ್ ನಲ್ಲಿ ತಿಳಿಸಿದೆ. ಸ್ಕೂಲ್ ಯುನಿಫಾರಂ ಪ್ರತಿ ಎರಡು ದಿನಕ್ಕೊಮ್ಮೆ ಒಗೆದು ಉಟ್ಟುಕೊಂಡು ಬರುವಂತೆ ಮಾತಾಯಿತು. ತಲೆಗೂದಲಿಗೆ ರಿಬ್ಬಿನ್ ಹೋಗಲಿ, ರಬ್ಬರ್ ಬ್ಯಾಂಡ್ ಹಾಕಿಕೊಂಡು ಬರುವುದನ್ನು ರೂಢಿ ಮಾಡಿಸಲಾತಯಿತು. ಇದಕ್ಕೆ ನನ್ನ ಸಹೋದ್ಯೋಗಿ ಶಿಕ್ಷಕರು ಸಹಕಾರ ನೀಡಿದಾಗ ಕ್ಲಾಸಿನ ಎಂಟ್ಹತ್ತು ಹುಡುಗಿಯರು ಬದಲಾದದ್ದು ಖುಷಿ ನೀಡಿತು. ಮುಂದೆ ಈ ಬದಲಾವಣೆಗೂ ಎಲ್ಲಿ ಪಾಲಕರು ಶಾಲೆಗೆ ಬರುತ್ತಾರೋ ಅಂದುಕೊಂದಿದ್ವಿ..ಪುಣ್ಯಕ್ಕೆ ಯಾರೂ ಬರಲಿಲ್ಲ..

ದಿನನಿತ್ಯ ಸ್ನಾನ, ಒಗೆದ ಬಟ್ಟೆ, ಉಗುರು ಕತ್ತಿರಿಸಿಕೊಳ್ಳುವಿಕೆ ಹಾಗೂ ತಲೆಗೂದಲ ಸ್ವಚ್ಛತೆಯಿಂದಾಗಿ ನಮ್ಮ‌ ಶಾಲಾ ಮಕ್ಕಳು ಎಂದಿಗಿಂತ ಸುಂದರವಾಗಿ ಕಾಣತೊಡಗಿದ್ದರು. ಆದರೂ ಈ ಬದಲಾವಣೆಯ ಬಗ್ಗೆ ಟೀಕೆ ಟಿಪ್ಪಣಿಗಳು ಆಗಾಗ ಹೆಡ್ ಮಾಸ್ತರರ ಕಿವಿಗೆ ತಾಗುತ್ತಿದ್ದವು. ತಾಕೀತು - ತಕರಾರು ನಡಯುತ್ತ ಹೋದವು..
ಆದರೆ ಮಕ್ಕಳ ಆ ಸುಂದರ ನಗುವಿನ ಮುಂದೆ ಇವೆಲ್ಲ ಮಾಸಿ ಹೋದದ್ದು ಮರೆಯಲಾರದ್ದು..

ಮತ್ತೆ ಬರೆಯುತ್ತೇನೆ..

Wednesday, 3 April 2019

ಸಮೂಹ ಸಂಪನ್ಮೂಲ ಕೇಂದ್ರ ಕಟ್ಟಡದ ರಿಪೇರಿ









ಸಮೂಹ ಸಂಪನ್ಮೂಲ ಕೇಂದ್ರ ಇಜೇರಿ..2010 ರಿಂದಲೂ ಳಸಲಸಾಧ್ಯವಾದ ರೀತಿಯಲ್ಲಿ ಬಾಗಿಲು ಕಿಟಕಿಗಳನ್ನು ಮುರಿದುಕೊಂಡು ಬಿದ್ದಿದ್ದ ಕಟ್ಟಡಕ್ಕೆ ಈಗ ಮರುಜೀವ ಸಿಕ್ಕಂತಾಗಿದೆ. 2016ರಿಂದಲೂ ಈ ಸಂಪನ್ಮೂಲ ಕೇಂದ್ರಕ್ಕೆ ಮರುಚಾಲನೆ ನೀಡಬೇಕೆಂದುಕೊಂಡರೂ ಯಾವುದೋ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ಸದ್ಯ ಈ ಕಟ್ಟಡಕ್ಕೆ ಹೊಸ ಬಾಗಿಲು ಕೂಡಿಸಲಾಗಿದೆ. ಒಳಗಡೆ ಗುಡ್ಡೆಯಾಗಿ ಬಿದ್ದಿದ್ದ ಕಸಕೊಳಕನ್ನು ಸ್ವಚ್ಛ ಮಾಡಿಸಲಾಗಿದೆ. ಇನ್ನು ಸಣ್ಣ ಪುಟ್ಟ ರಿಪೇರಿ ಹಾಗೂ ಸುಣ್ಣ ಬಣ್ಣ ಬಾಕಿ ಇದೆ. ಇದಕ್ಕೆ ನನಗೆ ಸಿಗುವ ಸಿ.ಜಿ ಸಾಕಾಗುವುದಿಲ್ಲ.. ಆದರೂ ನನ್ನ ಕ್ಲಸ್ಟರ್ ವ್ಯಾಪ್ತಿಯ ಮುಖ್ಯಗುರುಗಳ ಸಹಕಾರ ಕೋರಿದ್ದೇನೆ. ಕೆಲವೇ ದಿನಗಳಲ್ಲಿ ಎಂದಿನಂತೆ ಸಮೂಹ ಸಂಪನ್ಮೂಲ ಕೇಂದ್ರ ಕಚೇರಿ ಒಳ್ಳೆಯ ಸಂಪನ್ಮೂಲ ಕೇಂದ್ರವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದೇನೆ..

ಸಹಕರಿಸಿದ ಎಲ್ಲ ಮುಖ್ಯಗುರುಗಳಿಗೂ ಶಿಕ್ಷಕರಿಗೂ ಧನ್ಯವಾದಗಳು..