ಆತ ಆಗಿನ್ನೂ 6 ನೆಯ ತರಗತಿ. ಬೇಡರ ಹುಡುಗ. ಸಣ್ಣ ನಗೆಯೊಂದನ್ನ ಸದಾ ತುಟಿಗೆ ಅಂಟಿಸಿಕೊಂಡಿರುತ್ತಿದ್ದ ಹುಡುಗ. ತುಂಬಾ ಚೆನ್ನಾಗಿ ಚಿತ್ರ ಬಿಡಿಸುತ್ತಿದ್ದ.. ಸ್ಮರಣ ಚಿತ್ರ ಅವನಿಗೆ ತುಂಬಾ ಇಷ್ಟ.. ಬರಬರುತ್ತ ಪ್ರಕೃತಿ ಚಿತ್ರಗಳನ್ನು ಇಷ್ಟಪಟ್ಟು ಬಿಡಿಸುತ್ತಿದ್ದ. ಸರಿಯಾಗಿ ವಾಟರ್ ಕಲರ್ ಬಳಸಲು ಬರದಿದ್ದರೂ ಸ್ಕೆಚ್ ಪೆನ್ನುಗಳನ್ನುಪಯೋಗಿಸಿ ಚಿತ್ರ ಬಿಡಿಸುತ್ತಿದ್ದ. ಪಠ್ಯದಲ್ಲೂ ಅಷ್ಟೇ ಬುದ್ಧಿವಂತ. ಗಣಿತದ ಸಮಸ್ಯೆಗಳೆಲ್ಲ ಅವನು ಕಲಿಯುವ ತನಕ ಮಾತ್ರ ಕಬ್ಬಿಣ್ಣದ ಕಡಲೆ.. ಕಲಿತಾದ ಮೇಲೆ ಹುರಿಗಡಲೆ. ನನ್ನ ಬಹುಪಾಲು ಕೆಲಸಗಳಲ್ಲಿ ಸಹಾಯ ಮಾಡುತ್ತಿದ್ದ. ಪ್ರಯೋಗಗಳಿಗೆ ಸಲಕರಣೆಗಳನ್ನು ಜೋಡಿಸುವುದು. ಸಸ್ಯಗಳ ಎಲೆ ಹೂವು ಸಂಗ್ರಹಿಸುವುದು. ವೃತ್ತಪತ್ರಿಕೆಗಳಲ್ಲಿನ ವಿಜ್ಞಾನ ಸಂಗತಿಗಳನ್ನು ಸಂಗ್ರಹಿಸುವುದು ಇತ್ಯಾದಿ.
ಅವನ ಕಲೆಗೆ ಬೆಲೆ ಎಂಬಂತೆ ಆತ ಬಿಡಿಸುತ್ತಿದ್ದ ಚಿತ್ರಗಳನ್ನು ಕರ್ಮವೀರ ವಾರಪತ್ರಿಕೆಯ ಚಿಣ್ಣರ ಚಿತ್ತಾರ ಅಂಕಣಕ್ಕೆ ಕಳುಹಿಸಿಕೊಡುತ್ತಿದ್ದೆ. ಆಗಾಗ ಕೆಲವು ಪ್ರಿಂಟಾದಾಗ ನಮಗೆಲ್ಲ ಹಿಗ್ಗೋ ಹಿಗ್ಗು. ಆ ನಗುಮುಖದ ಹುಡುಗನ ಹೆಸರು #ರವಿ ಅಂತ.
ಹೀಗೆ ಸದಾ ಚೂಟಿಯಾಗಿದ್ದ ಆ ಹುಡುಗ ಬರಬರುತ್ತ ತುಸು ಒರಟನಾಗುತ್ತ ಹೋದ. ಅವನ ತುಟಿಗಂಟಿರುತ್ತಿದ್ದ ನಗೆ ಮಾಯವಾಯಿತು. ಹದಿಹರೆಯದ ವಿದ್ಯಾರ್ಥಿಗಳಲ್ಲಿ ಸಹಜವಾಗಿ ಕಾಣಿಸುವ Egoism(ಸ್ವಪ್ರತಿಷ್ಠೆ) ಅವನಲ್ಲಿ ತುಸು ಹೆಚ್ಚಾಗಿಯೇ ಇತ್ತು. ವಿನಯವಂತ ವಿದ್ಯಾರ್ಥಿ ಏಕಾಕಿ ಒರಟನಾಗುತ್ತ ಬದಲಾಗುತ್ತ ಬಂದ. ಎದುರು ಉತ್ತರ ನೀಡುವುದು, ಬೇಕಾಬಿಟ್ಟಿ ಮಾತನಾಡುವುದು, ವಿನಾಕಾರಣ ಇತರರೊಂದಿಗೆ ಜಗಳ ಹೀಗೆ ಮುಂದುವರೆದು ಒಂದು ಸಲ ಅದೇ ತರಗತಿಯ ವಿದ್ಯಾರ್ಥಿನಿಯೊಬ್ಬಳಿಗೆ ಪ್ರೇಮ ಪತ್ರ ಬರೆದ ಎಂಬ ದೂರು ಅವನ ಮೇಲೆ ಬಂತು. ಪ್ರಾಥಮಿಕ ಶಾಲೆ ಮಕ್ಕಳಲ್ಲಿ ಟಿವಿ ಮೊಬೈಲ್ ಮಾಧ್ಯಮಗಳಿಂದಾಗಿ ಈಗೀಗ ಇಂಥ ಹುಚ್ಚು ಆಲೋಚನೆಗಳ ಸಮಷ್ಠಿ(Infatuation) ಅದ್ಹೇಗೋ ಆವರಿಸಿಬಿಡುತ್ತದೆ. ಅವನ ಭಾವನಾತ್ಮಕ ಬದಲಾವಣೆಗಳಿಗೆ ಕಾರಣ ಹುಡುಕುವಷ್ಟು ಸಮಯ ತಾಳ್ಮೆ ನಮ್ಮಲ್ಲಿರಲಿಲ್ಲ. ಹಳ್ಳಿಯಲ್ಲಿ ಇಂಥ ದೂರುಗಳಿಗೆ ತತ್ ಕ್ಷಣವೇ ಪರಿಹಾರ ಸಿಗಬೇಕು.. "ನೀವು ಶಿಕ್ಷೆ ಕೊಡುತ್ತೀರಾ ಇಲ್ಲ ನಾವೇ ಶಿಕ್ಷಿಸಬೇಕಾ" ಅಂತೆಲ್ಲ ಆ ವಿದ್ಯಾರ್ಥಿನಿಯ ಪಾಲಕರು ಕೇಳಿದಾಗ ನಮ್ಮ ಎದುರು ಮೊದಲ ಆಯ್ಕೆ ಮಾತ್ರ ಇತ್ತು.ಶಿಕ್ಷೆ ನೀಡಲಾರದ ಸ್ಥಿತಿ ನಮ್ಮದು. ಆದರೂ ನಮ್ಮ ಶಾಲೆಯಲ್ಲಿನ ನನ್ನ ಇನ್ನೋರ್ವ ಸಹೋದ್ಯೋಗಿಯಾಗಿದ್ದ ಗೋಣೆಪ್ಪ ಸರ್ ಗೆ ಇದು ಸರಿ ಕಾಣಲಿಲ್ಲ. ಕೈಗೆ ಎರಡೇಟು ನೀಡಿಯೇಬಿಟ್ಟರು. ನಮ್ಮ ಮೆಚ್ಚಿನ ವಿದ್ಯಾರ್ಥಿಯಾಗಿದ್ದ ಅವನನ್ನು ಶಿಕ್ಷಿಸುವಾಗ ನಾವೆಲ್ಲ ತುಂಬ ಸಂಕಟ ಪಟ್ಟೆವು. ಆತ ಆ ಏಟುಗಳಿಂದ ಸಾಕಷ್ಟು ನೊಂದುಕೊಂಡ. ತಿಳಿಯದೇ ತಪ್ಪಾಗಿದೆ ಮುಂದೆ ಹೀಗೆ ಆಗಲ್ಲ ಎಂದೆಲ್ಲ ಕ್ಷಮೆ ಕೋರಿದ.
ಮುಂದಿನ ಮೂರು ತಿಂಗಳು ತುಂಬ ಬದಲಾದ. ಮತ್ತದೇ ವಿನಯವಂತಿಕೆ, ಸೃಜನಶೀಲತೆ ತನ್ನ ತರಗತಿಯ ವಿದ್ಯಾರ್ಥಿನಿಯರೊಂದಿಗೆ ಸೌಜನ್ಯಯುತ ವರ್ತನೆ. ಹೇಗೆ ಇದೆಲ್ಲ ಅಂತ ನಮಗೆ ಆಶ್ಚರ್ಯ. ಅವನ ಮನೆಗೆ ಯಾವುದೋ ಕಾರ್ಯಕ್ರಮ ನಿಮಿತ್ತ ಭೇಟಿ ಕೊಟ್ಟಾಗ ಗೊತ್ತಾದ ಸಂಗತಿ ಹೀಗಿತ್ತು. ಆತನ ಮನೆಯಲ್ಲಿ ನಿರಂತರವಾಗಿ ತಂದೆ ತಾಯಿಯ ಮಧ್ಯೆ ಜಗಳ. ಅಣ್ಣ ಹಾಗೂ ಅಪ್ಪನ ಮಧ್ಯೆ ಜಗಳ. ಅಣ್ಣ ಹಾಗೂ ಅತ್ತಿಗೆಯ ಮಧ್ಯೆ ಜಗಳ. ಈ ಜಗಳಗಳಿಂದಾಗಿ ಅವನ ಮನೆಯ ವಾತಾವರಣ ಅಸಹ್ಯವಾಗಿತ್ತು. ತನ್ನ ಮನೆಯ ವಾತಾವರಣವನ್ನು ಸರಿಪಡಿಸಲಾಗದ ಅಸಹಾಯಕಸ್ಥಿತಿ ಆ ಹುಡುಗನದ್ದು. ಅವನಿಗೆ ನೆಮ್ಮದಿ ಸಿಗುತ್ತಿದ್ದುದೇ ಶಾಲೆಯಲ್ಲಿ. ಕೆಲವು ಸಲ ತರಗತಿಯಲ್ಲಿ ಆತ ಅವಮಾನಕ್ಕೊಳಗಾದಾಗ ಅದನ್ನು ಹತ್ತಿಕ್ಕಲು ಅವನು ಸಿಟ್ಟಿಗೇಳುತ್ತಿದ್ದ.ಇದೇ ಕ್ರಮೇಣ ಅವನನ್ನ ಋಣಾತ್ಮಕವಾಗಿ ಬದಲಾಯಿಸುತ್ತ ಹೋಗಿತ್ತು. ಮುಂದೆ ಅವನ ಅಣ್ಣ ಅತ್ತಿಗೆ ಬೇರೆ ಕಡೆ ಮನೆ ಮಾಡಿದಾಗ ತುಸು ಇವನಿಗೆ ನಿರಾಳವೆನಿಸಿತ್ತು. ಈ ಮಧ್ಯೆ ಏಟು ತಿಂದು ಬದಲಾಗಿದ್ದ.
ಎಂಟನೆಯ ತರಗತಿ ಇರುವಾಗಲೇ ಅವನ ಅಪ್ಪ ತೀರಿ ಹೋದರು. ಇದೇ ಜಗಳದಿಂದಾಗಿ ಕ್ರಿಮಿನಾಶಕ ಸೇವಿಸಿದ್ದಾಗಿ ಊರಿನಲ್ಲಿ ಗುಸು ಗುಸು. ಆತನ ತಂದೆಯ ಸಾವು ಅವನನ್ನ ಸಹಜವಾಗಿಯೇ ಅಸುರಕ್ಷಿತನನ್ನಾಗಿ ಮಾಡಿತು. ಮುಂದೆ ಶಾಲೆಯ ಫೀಸು,ಪುಸ್ತಕ ಇತರೆ ಖರ್ಚಿಗೆ ಅವನ ಅಣ್ಣನ ಮೇಲೆ ಅವಲಂಬಿತನಾಗಬೇಕಾಯಿತು. ಅಣ್ಣನ ಸಿಡುಕು ಮಾತುಗಳಿಂದ ಮತ್ತೇ ರವಿ ತನ್ನ ಸೀಮಿತವನ್ನು ಕಳೆದುಕೊಳ್ಳುತ್ತ ಹೋದ. ಹತ್ತನೆಯ ತರಗತಿಯ ಹೊತ್ತಿಗೆ ಅಣ್ಣನಿಗೆ ಹೊಲದಲ್ಲಿ ಸಹಾಯ ಮಾಡುತ್ತ ಇತ್ತ ಎಸ್.ಎಸ್.ಎಲ್.ಸಿ ಪರೀಕ್ಷೆ ಗೆ ಓದಿಕೊಳ್ಳುತ್ತ ಹೋದ.ಪರೀಕ್ಷಯೆನ್ನೂ ಬರೆದ. ಮತ್ತೇ ಪದೇಪದೇ ಜಗಳ, ಅಣ್ಣ,ತಾಯಿ,ಅತ್ತಿಗೆ ಮತ್ತೆ ಜಗಳ ಹೀಗೆ ನಡೆಯಿತು.
"ನಾಡಿದ್ದು ಎಸ್.ಎಸ್ ಎಲ್.ಸಿ ರಿಸಲ್ಟ್ ರವಿ ಎಲ್ಲೋ?"
ಅಂದಾಗ ಮಾತ್ರ ಆಘಾತಕಾರಿ ಸುದ್ದಿಯೊಂದು ಕಿವಿಗೆ ಬಿತ್ತು.
"ಸರ್ ರವಿ ನಿನ್ನೆ ರಾತ್ರಿಗಿ ಎಣ್ಣಿ(ಕ್ರಿಮಿನಾಶಕ) ಕುಡದಿದ್ರೀ.. ಜೇವರ್ಗಿಗ್ ಹೋಗೂತ್ನ್ಯಾಗ ಹಾದ್ಯಾಗ ಖಲಾಸ್ ಆಗ್ಯಾನ್ರಿ ಮುಂಜಾನೆ ಮಣ್ಣಾತ್ರಿ"
ಅಂತ ಓಣಿ ಹುಡುಗ್ರು ಹೇಳಿದರು. ಮನೆಯಲ್ಲಿನ ಕಿರಿಕಿರಿಯಿಂದ ರವಿ ಕ್ರಿಮಿನಾಶಕ ಸೇವಿಸಿಬಿಟ್ಟಿದ್ದ. ನಮಗೆಲ್ಲ ಎದೆ ಭಾರವಾಗಿ ಬಡಿದುಕೊಳ್ಳಲಾರಂಭಿಸಿತು. ಕಣ್ಣಾಲಿಗಳಲ್ಲಿ ನೀರು ತುಂಬಿತು. ಇಂದಿನ ವಿದ್ಯಾರ್ಥಿಗಳಿಗೇನಾಗಿದೆ?ಕ್ಷುಲ್ಲಕ ಕಾರಣಗಳಿಗೆ ಸುಂದರ ಬದುಕನ್ನೇ ಬಲಿ ಕೊಡಲು ಇವರಿಗೆ ಅಧಿಕಾರ ನೀಡಿದವರಾರು? ಅಣ್ಣ-ಅತ್ತಿಗೆ, ತಾಯಿ ಅನಕ್ಷರಸ್ಥರು. ಅವರ ಮಾತುಗಳನ್ನು ಅಷ್ಟು ಮನಸ್ಸಿಗೆ ತೆಗದುಕೊಳ್ಳುವ ಅನಿವಾರ್ಯತೆಯಾದರೂ ಏನು? ಒಂದು ಕುಟುಂಬದಲ್ಲಿನ ಜಗಳಗಳಿಗೆ ಸಾವೇ ಪರಿಹಾರವೆಂಬತ್ತಿದ್ದರೆ ಬದುಕಿಗೇನು ಅರ್ಥ.? ಮಾತಾಡಿ ಏನಾದರೂ ಒಂದು ಪರಿಹಾರ ನೀಡಬಹುದಿತ್ತು. ನಮ್ಮ ಶಿಕ್ಷಣ ಏಕೆ?ಹೇಗೆ?ಎಲ್ಲಿ ಎಡುವುತ್ತಿದೆ? ವಿದ್ಯಾರ್ಥಿಗಳಲ್ಲಿ ಏಕೆ ಈಗಿನ ಶಿಕ್ಷಣ ವಾಸ್ತವ ಪ್ರಜ್ಞೆ ಬೆಳೆಸುತ್ತಿಲ್ಲ?ಅವನ ಸ್ಥಿತಿ ಹೇಗಿತ್ತೋ ಏನೋ ?
ಒಟ್ಟಿನಲ್ಲಿ ಸದಾ ನಗುವ ಹುಡುಗನ ಮುಖ ಕಮಲ ಬಾಡಿ ಹೋಗಿತ್ತು.ಉದಯ ರವಿ ಬೆಳಗದೇ ಮುಳುಗಿದ್ದ.
ಎರಡು ದಿನಗಳ ನಂತರ ಎಸ್.ಎಸ್.ಎಲ್.ಸಿ ಫಲಿತಾಂಶ ಬಂತು. ರವಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದ. ಬದುಕಿನ ಪರೀಕ್ಷೆಯಲ್ಲಿ ಮಾತ್ರ ಫೇಲಾಗಿದ್ದ.
ಪ್ರತಿ ಸಲ ಎಸ್.ಎಸ್.ಎಲ್.ಸಿ ಫಲಿತಾಂಶ ಬಂದಾಗ ರವಿ ನಮ್ಮಲ್ಲಿ ಹುಟ್ಟುತ್ತಾನೆ.. ಕಣ್ಣ ಹನಿಯೊಂದಿಗೆ ಮುಳುಗುತ್ತಾನೆ..
No comments:
Post a Comment