ಆಗ ನಮ್ಮ ಶಾಲೆಯಲ್ಲಿ 7ನೆಯ ತರಗತಿಯೇ ಕೊನೆಯ ತರಗತಿ. ಬೀಳ್ಕೊಟ್ಟ ಅದೆಷ್ಟು ವಿದ್ಯಾರ್ಥಿಗಳು 8 ನೆಯ ತರಗತಿಗೆಂದು 25 ಕಿ.ಮೀ ದೂರದ ಜೇವರ್ಗಿ ಅಥವಾ ಶಹಾಪೂರಕ್ಕೆ ಹೋಗಿ ಹೈಸ್ಕೂಲು ಶಿಕ್ಷಣ ಮುಂದುವರೆಸಬೇಕಿತ್ತು. 8 ನೆಯ ತರಗತಿಗೆ ಉನ್ನತೀಕರಿಸಲು ಆಡಳಿತಾತ್ಮಕ ಅಡೆತಡೆಗಳಿದ್ದವು. ಹೀಗೆ ಬೀಳ್ಕೊಟ್ಟ ವಿದ್ಯಾರ್ಥಿ ವಿದ್ಯಾರ್ಥಿನಿಯರು ನಮಗೆ ಮತ್ತೇ ಸಿಗುವುದು ಗ್ರಾಮದ ಜಾತ್ರೆಗಳಲ್ಲೋ ಅಥವಾ ಅವರ ಸಂಬಂಧಿಕರ ಮದುವೆಗಳಲ್ಲೋ ಮಾತ್ರ. ತೀರಾ ಅಲ್ಲದಿದ್ದರೂ ಅಪರೂಪವೆಂಬಂತೆ ಕೆಲವು ವಿದ್ಯಾರ್ಥಿಗಳು ಭೇಟಿಯಾಗುತ್ತಿದ್ದುಂಟು. ಆದರೆ ಆಕೆ ಮಾತ್ರ ಎಂದೂ ಭೇಟಿಯಾಗಲಿಲ್ಲ.. ಆಕೆ 7ನೆಯ ತರಗತಿ ಮುಗಿದ ನಂತರ ಸುಮಾರು 3-4 ವರ್ಷ ಗ್ರಾಮದಲ್ಲಿ ಕಾಣಸಿಗಲಿಲ್ಲ. ಅವಳ ತಾಯಿಯವರು ಸಿಕ್ಕಾಗ ವಿಚಾರಿಸಿದಾಗ ಬೆಂಗಳೂರಿನಲ್ಲಿರುವುದಾಗಿ ತಿಳಿಸಿದ್ದರು. ಆಕೆ 7 ನೆಯ ತರಗತಿ ನಂತರ ಶಾಲೆ ಮುಂದುವರೆಸಲಿಲ್ಲ ಎಂಬ ಸಂಗತಿ ತಿಳಿದು ನಮ್ಮ ಶಿಕ್ಷಕರಿಗಂತೂ ತುಂಬಾ ಬೇಜಾರಾಯಿತು. ಅದೇಕೆ ಅವಳನ್ನು ಶಾಲೆ ಬಿಡಿಸಿದಿರಿ ಎಂದು ಅವಳ ತಾಯಿಯಲ್ಲಿ ವಿಚಾರಿಸಿದಾಗ ಅವರು ನೀಡಿದ ಕಾರಣ ಕಾನೂನಾತ್ಮಕವಾಗಿ ಸಮಂಜಸವಲ್ಲದಿದ್ದರೂ ಮಾನವೀಯತೆಯ ನೆಲೆಗಟ್ಟಿನಲ್ಲಿ ಒಪ್ಪಿಕೊಳ್ಳುವಂತಹದ್ದು. ಆ ಕಾರಣ ತಿಳಿಯುವ ಮುನ್ನ ಅವಳ ಕುರಿತು ತಮಗೆ ಹೇಳಲೇ ಬೇಕು..
ಓದಿನಲ್ಲಿ ಹಾಗೂ ಸಹ ಪಠ್ಯೇತರ ವಿಷಯಗಳಲ್ಲಿ ತುಂಬಾ ಚುರುಕಾಗಿದ್ದ ಆ ಹುಡುಗಿಯ ಹೆಸರು ಭೀಮಬಾಯಿ ಅಂತ. ಭೀಮಬಾಯಿಯನ್ನು ಮನೆಯಲ್ಲಿ ಪ್ರೀತಿಯಿಂದ ಭೀಮವ್ವ, ಭೀಮವ್ವ ಗೌಡಸಾನಿ ಅಂತ ಕರೆಯುತ್ತಿದ್ದರು. ತರಗತಿಯಲ್ಲಿ ಅವಳದ್ದು ಸದಾ ಪ್ರಶ್ನಿಸುವ ಸ್ವಭಾವ. ವಿಜ್ಞಾನ ಹಾಗೂ ಗಣಿತದಲ್ಲಂತೂ ತಣಿಯದ ಆಸಕ್ತಿ. ತೀರಾ ಸಹಜ ವಿನಯತೆ. ತನ್ನದಲ್ಲದ ತಪ್ಪಿಗೆ ಒಪ್ಪದಂತವಳು. ನೇರ ನುಡಿಯ ಮಾತಿನ ಮಲ್ಲಿ.. ಮುತ್ತು ಪೋಣಿಸಿದಂತೆ ಅವಳ ಬರಹ. ಇಂಗ್ಲಿಷ್ ಓದುವುದೆಂದರೆ ಅವಳಿಗಾಗದು. ತನ್ನ ಗೆಳತಿಯರನ್ನೆಲ್ಲ ಎಂದೂ ಬಿಟ್ಟು ಕೊಡದ ಸ್ನೇಹಗಿತ್ತಿ. ತನಗಿಂತ ಚಿಕ್ಕವರಿರುವ ಇತರ ತರಗತಿ ಮಕ್ಕಳ ಮೇಲೆ ಅವಳಿಗೆ ಒಂದು ಬಗೆಯ ಪ್ರೀತಿ. ಯಾರಾದಾರೂ ಜಗಳವಾಡುತ್ತಿದ್ದರೆ ಅಷ್ಟೇ ಪ್ರೀತಿಯಿಂದ ಅವರ ಜಗಳ ಬಿಡಿಸಿ ಅವರನ್ನು ಒಂದು ಮಾಡುವ ಮಾತೃರೂಪದ ಹೃದಯವಂತಿಕೆ ಅವಳದ್ದು. ಹೀಗಾಗಿ ನಮ್ಮ ಶಿಕ್ಷಕರಿಗೆಲ್ಲಾ ಭೀಮವ್ವ ಗೌಡಸಾನಿ ಅಂದರೆ ಅತೀವ ಶಿಷ್ಯ ಪ್ರೇಮ.
ಅವಳು ಮುಂದೆ ಹೈಸ್ಕೂಲಿಗೆ ಸೇರಿ ಕನ್ನಡಕ್ಕೆ 125ಕ್ಕೆ 125 ಅಂಕ ಪಡೀತಾಳೆ. ವಿಜ್ಞಾನ ಹಾಗೂ ಗಣಿತದಲ್ಲಿ 90ರ ಗಡಿ ದಾಟುತ್ತಾಳೆ. ಅವಳ ಇಂಗ್ಲಿಷನ್ನು ಸ್ವಲ್ಪ ತಿದ್ದಬೇಕು ಎಂದು ನಾವು ಲೆಕ್ಕ ಹಾಕುತ್ತಿದ್ದೆವು. ಆದರೆ ವಿಧಿ ಅವಳ ಜೀವನದ ಲೆಕ್ಕವನ್ನೇ ಬದಲಿಸಿತ್ತು.
ಅವಳು ಹೈಸ್ಕೂಲು ಸೇರಬೇಕೆಂದುಕೊಂಡಿರುವಾಗ ಅವಳ ತಂದೆಗೆ ಹುಷಾರಿಲ್ಲದೇ ಅವರ ಆರೈಕೆಯಲ್ಲೇ ಒಂದೂವರೆ ವರ್ಷ ಹಾಳಾಯಿತು. ಮುಂದೆ ಅವಳ ಅಕ್ಕನ ಆಕಸ್ಮಿಕ ಸಾವಿನಿಂದಾಗಿ ಇತ್ತ ಇಡೀ ಕುಟುಂಬವೇ ತತ್ತರಿಸಿತು. ಕಾರಣ ಇನ್ನೂ ಜಗತ್ತು ಅರಿಯದ ಎರಡು ಗಂಡು ಮಕ್ಕಳನ್ನು ಅಗಲಿದ್ದಳು ಅವಳಕ್ಕ. ಈಗ ಆ ಕಂದಮ್ಮಗಳ ಆರೈಕೆ ಹೇಗೆ.? ತಮ್ಮ ಅಳಿಯ ಬೇರೆ ಮದುವೆ ಮಾಡಿಕೊಂಡರೆ ಆ ಮಕ್ಕಳಿಗೆ ಮಲತಾಯಿ ಹೇಗೆ ಪ್ರೀತಿ ಹಂಚಿಯಾಳು? ಆಗ ಅಳಿಯನಿಗೆ ಭೀಮವ್ವ ಗೌಡಸಾನಿಯನ್ನೇ ಕೊಟ್ಟು ಮದುವೆ ಮಾಡಿಬಿಡುವುದೇ ಸರಿ ಎಂದು ಅವಳ ಪೋಷಕರು ತೀರ್ಮಾನಿಸಿಬಿಟ್ಟರು. ಅವಳನ್ನು ವಿಚಾರಿಸಿದಾಗ ಭೀಮವ್ವ ಸಹ ತನ್ನ ಭಾವನನ್ನ ಮದುವೆಯಾಗಲು ಒಪ್ಪಿದ್ದಳು. ಪೋಷಕರ ಒತ್ತಾಯ ಎನ್ನುವದಕ್ಕಿಂತ ಅಕ್ಕನ ಮಕ್ಕಳು ಎನ್ನುವ ಮಾತೃಪ್ರೇಮ ಆ ಭೀಮವ್ವ ಗೌಡಸಾನಿಯಲ್ಲಿ ತನ್ನ ಭಾವನನ್ನೇ ಮದುವೆಯಾಗುವ ಅನಿವಾರ್ಯೆಗೆ ಎಡೆ ಮಾಡಿಕೊಟ್ಟಿತು. ಅಕ್ಕನನ್ನೂ ಅತಿಯಾಗಿ ಹಚ್ಚಿಕೊಂಡಿದ್ದ ಅವಳಿಗೆ ಅಕ್ಕನ ಮಕ್ಕಳನ್ನು ತಾನಲ್ಲದೇ ಬೇರೆ ಯಾರು ಚೆನ್ನಾಗಿ ನೋಡಿಕೊಳ್ಳಬಲ್ಲರು.?ಎಂಬ ಪ್ರಶ್ನೆ.ಅದಕ್ಕೆ ಉತ್ತರವೂ ತಾನೇ. ಅವಳಿಗೆ ಓದುವಾಸೆ. ಆದರೆ ತನ್ನ ಓದು ತನ್ನ ಅಕ್ಕನ ಮಕ್ಕಳನ್ನು ತಬ್ಬಲಿ ಮಾಡದೇ ಎಂಬ ಸೂಕ್ಷ್ಮಾತಿಸೂಕ್ಷ್ಮ ವಿಚಾರ ಅವಳಲ್ಲಿ ಮಾತ್ರ ಹೊಳೆದಿರಬೇಕು. ದೂರದಲ್ಲಿದ್ದ ನಮಗೆ ಹೋಗಿ ಹೋಗಿ ಈ ಪುಟ್ಟ ಹುಡುಗಿಯನ್ನು ಮೂವತ್ತು ವರ್ಷ ದಾಟಿದವನಿಗೆ ಮದುವೆ ಮಾಡಿಕೊಡುವುದೇ? ಅಲ್ಲದೇ ಇದು ಬಾಲ್ಯ ವಿವಾಹ ಎನಿಸುವುದಿಲ್ಲವೇ? ಯಾರನ್ನೋ ಮೆಚ್ವಿಸಲು ಹೋಗಿ ಇಂಥ ಜಾಣೆ ತನ್ನ ಉಜ್ವಲ ಭವಿಷ್ಯಕ್ಕೆ ಬೆಂಕಿ ಇಟ್ಟುಕೊಳ್ಳುವುದು ಅದೆಷ್ಟು ಸರಿ.? ಎಂದೆಲ್ಲಾ ಅನ್ನಿಸುತ್ತಿತ್ತು. ಈ ವಿಚಾರ ಗೊತ್ತಾದಾಗ ಇದನ್ನ ವಿರೋಧಿಸಿ ಭೀಮವ್ವನ ತಾಯಿ ತಂದೆಗೂ ಮನವೊಲಿಸಲು ಪ್ರಯತ್ನಿಸಿದ್ದೆವು. ಆದರವರು ಅವರ ಪಟ್ಟು ಸಡಿಲಿಸಲಿಲ್ಲ. ಕೊನೆಗೆ ನಮಗೆ ಗೊತ್ತಾಗದಂತೆ ದೂರದಲ್ಲೆಲ್ಲೋ ಹೋಗಿ ಮದುವೆ ಮಾಡಿ ಬಿಟ್ಟಿದ್ದರು. ವಯಸ್ಸು ಚಿಕ್ಕದಿದ್ದರೂ ಅವಳ ಮಾತೃಪ್ರೇಮ ಮಾತ್ರ ಅಸಮಾನ. ನಾಲ್ಕೈದು ವರ್ಷಗಳಲ್ಲಿ ತನ್ನ ಅಕ್ಕನ ಮಕ್ಕಳನ್ನು ತನ್ನ ಮಕ್ಕಳಂತೆ ಸಲುಹಿ ಅವರು ಪ್ರೈಮರಿ ಶಾಲೆಗೆ ಹೋಗುವ ತನಕ ತನ್ನ ಬಸಿರನ್ನ ಮುಂದೂಡಿ ಈಗ ಕಳೆದರೆಡು ವರ್ಷಗಳ ಕೆಳಗೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇವಳ ಈ ಎಲ್ಲ ನಿರ್ಧಾರ ವಯಸ್ಸಿಗೆ ಮೀರಿದ್ದು.
ಈಗ ಭೀಮವ್ವ ಗೌಡಸಾನಿ ಬೆಂಗಳೂರಿನಂತಹ ದೊಡ್ಡ ಶಹರದಲ್ಲಿ ತನ್ನಕ್ಕನ ಎರಡೂ ಮಕ್ಕಳನ್ನು ಶಾಲೆಗೆ ಕಳುಹಿಸಿ ಕರೆತರುತ್ತಾಳೆ.ಅವರಿಗೆ ಓದು ಬರಹ ಕಲಿಸುತ್ತಾಳೆ. ಅನೌಪಚಾರಿಕವಾಗಿ ಸಾಕಷ್ಟು ಓದಿಕೊಂಡಿದ್ದಾಳೆ. ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತಾಳೆ.ಆ ಮಕ್ಕಳೂ ಸಹ ತಮ್ಮ ತಂಗಿಯನ್ನೂ ಇವಳಷ್ಟೇ ಪ್ರೀತಿಸುತ್ತವೆ. ಆ ಮಕ್ಕಳು ತಮ್ಮ ತಾಯಿಯ ಮುಖವನ್ನ ಈ ಭೀಮವ್ವ ಗೌಡಸಾನಿಯಲ್ಲಿ ಕಾಣುತ್ತವೆ.
ಬಹುಶಃ ನಾವು ಶಿಕ್ಷಕರು ತರಗತಿಯಲ್ಲಿ ಇಷ್ಟು ಚೆನ್ನಾಗಿ ಜೀವನ ಶಿಕ್ಷಣ ನೀಡಲಾರೆವು. ಹೆಣ್ಣಿನ ಶಕ್ತಿ ಎಂಥದ್ದು ಎಂಬುದು ನಾಲ್ಕು ಗೋಡೆಯ ತರಗತಿ ನಮಗೆ ಕಲಿಸಲಾರದು. ಒಂದೊಂದು ವಿದ್ಯಾರ್ಥಿ ತನ್ನೊಳಗಿನ ಆತ್ಮ ಸ್ಥೈರ್ಯವನ್ನ ಕಲಿತ ಶಿಕ್ಷಣದೊಂದಿಗೆ ಬದುಕಿನಲ್ಲಿ ಅಳವಡಿಸಿಕೊಳ್ಳುವುದನ್ನ ಕಲಿತಾಗ ಮಾತ್ರ ಶಿಕ್ಷಣ ಮೌಲಿಕವಾಗುತ್ತದೆ. ಭೀಮವ್ವ ಗೌಡಸಾನಿ ನಮಗೆ ಅಂಥ ಪಾಠವೊಂದನ್ನ ಕಲಿಸಿ ನಿಂತಿದ್ದಾಳೆ. ಈಗ ಅವಳನ್ನ ನೋಡದೇ ವರ್ಷಗಳೇ ಕಳೆದಿವೆ. ಈ ಸಲ ಗ್ರಾಮದ ಜಾತ್ರೆಗೆ ಬರುವ ಆ ಮುದ್ದು ಹುಡುಗಿಯ ಮುಖದಲ್ಲಿನ ಮಾತೃಪ್ರೇಮದ ನಿರೀಕ್ಷೆಯಲ್ಲಿದ್ದೇನೆ.
©ಲೇಖಕರು : ಸಚಿನ್ ಕುಮಾರ ಬ.ಹಿರೇಮಠ
No comments:
Post a Comment