ಏನಿದು..? ತಿರುಪತಿ ತಿಮ್ಮಪ್ಪ ಬರೆಯುವ ಬದಲು ತಿರುಪತಿ ಸಿದ್ದಪ್ಪ ಎಂದಾಗಿದೆ ಎಂದು ಅಂದಾಜಿಸಬೇಡಿ. ಇಂದು ನಾ ಬರೆಯ ಹೊರಟಿರುವ ನನ್ನ ಅಪರೂಪದ ವಿದ್ಯಾರ್ಥಿ ತಿರುಪತಿ ಸಿದ್ದಪ್ಪನ ಬಗ್ಗೆ. ಈ ವಿದ್ಯಾರ್ಥಿಗೆ ತಿರುಪತಿ ಎಂಬ ಅಡ್ಡ ಹೆಸರು ಬರಲು ಒಂದು ಸೋಜಿಗದ ಕಾರಣವಿದೆ. 2009 ನೆಯ ಇಸವಿ. ಒಂದನೆಯ ತರಗತಿ ಪ್ರವೇಶ ಮಾಡಿಕೊಳ್ಳುವ ಸಮಯದಲ್ಲಿ ಅರ್ಧ ಅಂಗಿಯಲ್ಲಿ ಬಂದ ಪುಟ್ಟ ಹುಡುಗ ಈ ಸಿದ್ದಪ್ಪ, ನೇರವಾಗಿ ಆಫೀಸಿನ ಟೇಬಲ್ಲಿನ ಮೇಲಿದ್ದ ಪೇಪರ್ ವೇಯ್ಟ್ ನೋಡಿ ಅವರಪ್ಪನಿಗೆ "ಅಪ್ಪ ಎಷ್ಟ ದೊಡ್ಡ ಗೋಟಿ(ಗೋಲಿ) ಐತಿ ನೋಡ್.. " ಅಂತ ತನ್ನ ಮುಗ್ಧತೆ ತೋರಿದ್ದ. ದಾಖಲಾತಿ ಪ್ರಕ್ರಿಯೆ ಮುಗಿದು, ತರಗತಿಯಲ್ಲಿ ಇವನನ್ನು ಕಂಡಾಗ ಹಿರಿಯ ತರಗತಿ ವಿದ್ಯಾರ್ಥಿಗಳು "ಸರ್ ಇಂವ ಸುದೀಪ್ ಪಿಚ್ಚರ ತಿರುಪತಿ ಡೈಲಾಗ್ ಹೇಳ್ತಾನ್ರೀ" ಅಂತಂದಾಗ ನಮಗೆಲ್ಲ ಕುತೂಹಲ.
"ಎಲ್ಲಿ ಡೈಲಾಗ್ ಹೇಳೋ" ಎಂದಾಗ ಥೇಟ್ ಸುದೀಪ್ ಅವರಂತೆಯೇ ತಿರುಪತಿ ಸಿನಿಮಾದ ಬಹುಪಾಲು ಡೈಲಾಗ್ ಗಳನ್ನು ನಿರರ್ಗಳವಾಗಿ ಅಭಿನಯಿಸುತ್ತಿದ್ದ. ಇವನಲ್ಲಿ ಉತ್ತಮ ಅಭಿನಯ ಕಲೆಯಿದೆ ಎಂಬುದು ಆಗ ಗೊತ್ತಾಗಿ ಅದೇ ವರ್ಷದ ಪ್ರತಿಭಾ ಕಾರಂಜಿಯಲ್ಲಿ ವಿವಿಧ ವಿಭಾಗಗಳಲ್ಲಿ ನಾಲ್ಕಾರು ಪ್ರಶಸ್ತಿ ಪಡೆದ. ಈ ತಿರುಪತಿ ಸಿನೆಮಾ ಸನ್ನಿವೇಶಗಳನ್ನು ನೈಜವಾಗಿ ಅಭಿನಯಿಸುತ್ತಿದ್ದುದರಿಂದಲೇ ಅವನಿಗೆ 'ತಿರುಪತಿ' ಎಂಬ ಅಡ್ಡ ಹೆಸರು ಬಂದದ್ದು.
ತಿರುಪತಿ ಸಿದ್ದಪ್ಪ ಇದೊಂದೇ ಕಾರಣಕ್ಕೆ ನಮ್ಮಿಷ್ಟದ ವಿದ್ಯಾರ್ಥಿ ಅಂತಲ್ಲ. ಅವನಿಂದ ನಾವೂ ಕಲಿತದ್ದೂ ಬಹಳ. ವಿಜ್ಞಾನದ ಶಿಕ್ಷಕನಾದ ನಾನು ನಲಿ ಕಲಿ ಶಿಕ್ಷಕರು ರಜೆಯ ಮೇಲಿದ್ದಾಗ ಆ ತರಗತಿ ಹೋಗಿ ಕೆಲವು ನೀತಿ ಕತೆಗಳನ್ನು, ಶಿಶುಪ್ರಾಸ,ಅಭಿನಯಗೀತೆಗಲಕನ್ನು ಕಲಿಸುತ್ತಿದ್ದೆ.(ನನಗೆ ಆಗ ನಲಿ ಕಲಿ ತರಬೇತಿ ಆಗಿರಲಿಲ್ಲ) ಹೀಗೆ ಕತೆ ಹೇಳುವಾಗ ಮಹಾತ್ಮ ಗಾಂಧಿ ಬಾಲ್ಯದಲ್ಲಿ ಸತ್ಯ ಹರಿಶ್ಚಂದ್ರ ನಾಟಕ ನೋಡಿ ಮುಂದೆಂದೂ ಸುಳ್ಳು ಹೇಳದೇ ಸತ್ಯ ಸಂಧರಾದ ಬಗ್ಗೆ ಹಾಗೂ ನಾವೂ ಸಹ ಎಂದೆಂದಿಗೂ ಸುಳ್ಳು ಹೇಳಬಾರದು ಎಂದು ಹೇಳಿದ್ದೆ. ಇದನ್ನು ಆತ ಎಷ್ಟು ಚೆನ್ನಾಗಿ ಪಾಲಿಸಿದ್ದನೆಂದರೆ ಒಂದು ದಿನ ಮೇಲಾಧಿಕಾರಿಗಳ ಸಂದರ್ಶನ ನೀಡಿದ್ದರು. ಅವರು ತರಗತಿಗೆ ಬಂದಾಗ ಹೋಗಿ ಹೋಗಿ ಇವನನ್ನೇ ಪ್ರಶ್ನಿಸಿದರು.
"ದಿನಾಲೂ ಸರ್ ಗೋಳು ನಿಮ್ ಕ್ಲಾಸಿಗೆ ಬರ್ತಾರಾ?"
"ಗೋಣಪ್ಪ ಸರ್ ಬಿಟ್ಟು ನಮ್ ಕ್ಲಾಸಿಗೆ ಯಾರೂ ಬರಲ್ಲ ಸರ್" ತಿರುಪತಿಯ ಉತ್ತರ..(ನಾನು ವಿಜ್ಞಾನ ಶಿಕ್ಷಕ ಎಂಬುದರ ಅರಿವು ಪಾಪ ಅವನಿಗಿರಲಿಲ್ಲ)
"ನೀ ಎರಡ ಮೂರ ದಿನ ಸಾಲಿಗ್ ಯಾಕ್ ಬಂದಿಲ್ಲ..?"
"ನಮ್ಮಪ್ಪ ಹೊಲಕ್ ಕರಕೊಂಡ್ ಹೋಗಿದ್ರಿ"
"ನೀ ಒಲ್ಲೆನಬೇಕು?"
"ಅಂದ್ನಿರೀ ಆದ್ರ ಹೊಲದಾಗ ಸದಿ(ಕಳೆ) ತೆಗ್ಯೂದೈತಿ. ಆಳ ಇಲ್ಲ..ಯಾಡ್ ದಿನ ಬಾ ಅಂದ್ರಿ ಅದ್ಕ ಹ್ವಾದ್ನಿರಿ"
"ನಿಮ್ಮ ಅಪ್ಪ ಕರದ್ರೂ ಹೊಲಕ್ ಹೋಗಬಾರ್ದು"
"ಮತ್ ಸರ್ ಹೇಳ್ಯಾರ್ರಿ ಅವ್ವ ಅಪ್ಪನ ಮಾತ್ ಕೇಳ್ರಿ, ಅವ್ರಿಗೆ ಸಹಾಯ ಮಾಡ್ರಿ ಅಂತ"
ಹೀಗೆ ಆತನ ಮುಗ್ಧತೆ ಸತ್ಯತೆ ವಿನಯವಂತಿಕೆ ಮುಕ್ತತೆ ನಮಗಿಷ್ಟವಾಗಿತ್ತು. ಕಂಡಿದ್ದನ್ನು ಕಂಡಂತೆಯೇ ಹೇಳುವ ಸ್ವಭಾವ. ಎಂದಿಗೂ ಸುಳ್ಳು ಹೇಳದ ಸತ್ಯಸಂಧತೆ ತಿರುಪತಿಯದ್ದು.
ಬರುಬರುತ್ತ ಆತ ನಾಲ್ಕನೆಯ ತರಗತಿಯಿಂದೀಚಗೆ ಬಹಳ ಚೂಟಿಯಾಗುತ್ತ ಹೋದ. ಹೈಪರ್ ಆ್ಯಕ್ಟಿವಿಟಿ(ಈ ಬಗ್ಗೆ ಮತ್ತೆ ಯಾವಗಕಾದರೂ ವಿವರಿಸುತ್ತೇನೆ) ಇರುವ ಹುಡುಗನಾಗಿದ್ದ ತಿರುಪತಿ ಎಂದೂ ಬದಲಾಗಲಿಲ್ಲ. ಕುಟುಂಬದ ಜವಾಬ್ದಾರಿಗಳನ್ನೂ ಸಹ ಅರಿತಿದ್ದ ಅವನಿಗೆ ತನ್ನ ತಮ್ಮನನ್ನು ಶಾಲೆಗೆ ಕರೆತರುವ ಜವಾಬ್ದಾರಿ, ತನ್ನ ಓರಗೆಯವರೊಡನೆ ಸಹಕಾರದಿಂದಿದ್ದು ಶಾಲಾ ಪರಿಸರ ಕಾಪಾಡುತ್ತಿದ್ದ.. ಬೇಸಿಗೆ ರಜೆಯಲ್ಲಿ ಗೋ ಕಟ್ಟೆಯಿಂದ ನೀರು ತಂದು ಶಾಲಾವರಣದಲ್ಲಿ ನೆಟ್ಡಿದ್ದ 46 ಗಿಡಗಳಿಗೆ ನೀರುಣಿಸುತ್ತಿದ್ದ(ಬೇಸಿಗೆ ರಜೆಗೆ ತೆರಳಯವ ಮುನ್ನ ಅವನಿಗೆ ವಹಿಸಿಕೊಟ್ಟ ಜವಾಬ್ದಾರಿ ಅದು). ಮನೆಯಲ್ಲಿ ಎಲ್ಲರೂ ಕೂಲಿಗೆ ಹೋದಾಗ ತಮ್ಮಂದಿರಿಗೆ ಊಟ ಮಾಡಿಸಿ ಮತ್ತೇ ತನ್ನೊಂದಿಗೆ ಶಾಲೆಗೆ ಕರೆದುಕೊಂಡು ಬಂದು ತನ್ನ ತೊಡೆಯ ಮೇಲೆ ಅವರನ್ನು ಮಲಗಿಸಿಕೊಂಡೇ ಪಾಠ ಕೇಳುತ್ತಿದ್ದ. ಒಂದೆರೆಡು ದಿನ ತಿರುಪತಿ ಬರದೇ ಹೋದಲ್ಲಿ ನಮಗೂ ಏನೋ ಕಳಕೊಂಡ ಅನುಭವ. ಇಂಥ ವಿದ್ಯಾರ್ಥಿ 6ನೆಯ ತರಗತಿ ಮೊರಾರ್ಜಿ ದೇಸಾಯಿ ಶಾಲೆಗೆ ಆಯ್ಕೆ ಆಗಿ ಹೋದ. ಮೂರು ವರ್ಷ ಅವನಿಲ್ಲದ ಕ್ಷಣಗಳು ಅಸಹನೀಯ. ತಂದೆ ರೈತ. ಮಗನ ಮೇಲೆ ಅಪಾರವಾದ ಕಾಳಜಿ. "ಸರ್ ನನ್ನ ಮಗ ಚೆಂದ ಓದಾಕತಾನಿಲ್ರಿ?" ಅಂತ ಯಾವಾಗಲೂ ವಿಚಾರಿಸುತ್ತಿದ್ದರು.
ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಆಂಗ್ಲ ಮಾಧ್ಯಮವಿತ್ತು. ಆಗಾಗ ನಮ್ಮ ಶಾಲೆಗೆ ಬಂದು "ಸರ್ ಈ ಪಾಠ ತಿಳ್ಯಾಕತಿಲ್ರೀ..ಸ್ವಲ್ಪ ಹೇಳ್ರಿ" ಅಂತ್ಹೇಳಿ "ಇಂಗ್ಲಿಷ್ ಓದಾಕ ಈಜಿ ಸರ್..ಆದ್ರ ಬರ್ಯಾಕ್ ಕಷ್ಟ ರೀ ಸರ್" ಅಂತಿದ್ದ..
ಈಗ ತಿರುಪತಿ ಸಿದ್ದಪ್ಪ 10 ನೆಯ ಪರೀಕ್ಷೆ ಬರೆದಿದ್ದಾನೆ. ಮೊನ್ನೆ ಹೇಗೋ ನನ್ನ ನಂಬರ್ ತಗೊಂಡು ಕರೆ ಮಾಡಿ ಮಾತಾದ.. ಅವನ ಜತೆ ಮಾತಾಡುತ್ತಲೇ ಕಣ್ಣು ತುಂಬಿ ಬಂದ್ವು.. "ಎಷ್ಟ ಆಗಬಹುದು ಪರ್ಸೆಂಟೇಜ್?" ಅಂತ ಕೇಳಿದೆ.
"ಏನ್ ಸರ್.. ನೀವು ಎಲ್ಲಾರಂಗ ಪರ್ಸೆಂಟೇಜ್ ಕೇಳ್ತೀರಲ್ರಿ ಸರ್.. ನೀವ್ ಹೇಳಿದ ಗಾಂಧಿ ಕತಿ ಮರೆತಿಲ್ರಿ ಸರ್.. ನಾನು ಗಾಂಧೀವಾದಿ.. ಗಾಂಧಿಕಿಂತ 30% ಜಾಸ್ತಿ ತಗೋತಿನಿ ಬಿಡ್ರಿ"
ಅಂದಾಗ ನನಗೆ ಅವನ ಮಾತು ಸತ್ಯ ಅನ್ನಿಸಿತು.. ಫೇಲಾದ ಮಾತ್ರಕ್ಕೆ ಅಥವಾ ಪರ್ಸೆಂಟೇಜ್ ಆಗಲಿಲ್ಲ ಅನ್ನುವ ಕಾರಣಕ್ಕೆ ಬದುಕನ್ನೇ ಬಲಿ ಕೊಡುವವವರ ಮುಂದೆ ಈ ತಿರುಪತಿ ನಿಜಕ್ಕೂ ವಾಸ್ತವದ ಬದುಕನ್ನೇ ಬದುಕುತ್ತಿದ್ದಾನೆ ಅನ್ನಿಸಿ ಸುಮ್ಮನಾದೆ.
©ಲೇಖಕರು: ಸಚಿನ್ ಕುಮಾರ ಬ.ಹಿರೇಮಠ
No comments:
Post a Comment