ಅದು ಶಾಲಾ ಪ್ರಾರಂಭೋತ್ಸವ ದಿನ. ಬೆಳಿಗ್ಗೆಯಿಂದಲೇ ಶಾಲೆ ಸಿಂಗರಿಸುವ ಕೆಲಸ ಶುರುವಾಗಿತ್ತು. ಕಿರಿಯ ತರಗತಿಗಳ ವಿದ್ಯಾರ್ಥಿಗಳು ಮಾತ್ರ ನಮ್ಮ ಜತೆ ಅಲಂಕಾರ ಕಾರ್ಯದಲ್ಲಿ ಭಾಗಿಯಾಗಿದ್ದರು. ಮಕ್ಕಳು ಸಹಜವಾಗಿ ಮೊದಲ ದಿನ ತುಸು ಕಡಿಮೆ ಸಂಖ್ಯೆಯಲ್ಲೇ ಹಾಜರಾಗುತ್ತಾರೆ ಅಂತ ನಾವೆಲ್ಲ ಸುಮ್ಮನಾಗಿದ್ದೆವು.. ಆದರೆ ಅಂದಿನ ಪರಿಸ್ಥಿತಿ ಹಾಗಿರಲಿಲ್ಲ.. ನಾವು ನಿರೀಕ್ಷಿಸಿದ್ದಕ್ಕಿಂತ ತೀರಾ ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಜರಿದ್ದರು. ಮುಖ್ಯಗುರುಗಳಾದ ಹರಿಶ್ಚಂದ್ರ ಸರ್ ಅವರು ಗ್ರಾಮದ ಬೀದಿಗಳಲ್ಲಿ ಸಂಚರಿಸಿ ಮಕ್ಕಳನ್ನು ಕರೆತರುವ ತಯಾರಿಯಲ್ಲಿದ್ದರು. ಅಂತೆಯೇ ಕಿರಿಯ ತರಗತಿ ಮಕ್ಕಳೊಂದಿಗೆ ಪ್ರಭಾತಫೇರಿ ಹೋಗಿ ಪಾಲಕರ ಮನವೊಲಿಸಲಾಯಿತಾದರೂ ಹತ್ತ್ಹನ್ನೆರೆಡು ಮಕ್ಕಳು ಮಾತ್ರ ಮೊದಲ ದಿನ ಬಂದರು.
ಹೀಗೆ ಎರಡು ಮೂರು ದಿನಗಳು ಕಳೆದವು. ಪ್ರಾಥಮಿಕ ತರಗತಿಗಳ ಮಕ್ಕಳಿಗಿಂತ ಹಿರಿಯ ತರಗತಿಗಳ ವಿದ್ಯಾರ್ಥಿಗಳೇ ಕಡಿಮೆಯಾಗಿದ್ದು ಒಂದು ಬಗೆಯ ಆತಂಕಕ್ಕೀಡು ಮಾಡಿತ್ತು.. ಅದರಲ್ಲೂ ವಿದ್ಯಾರ್ಥಿನಿಯರ ಸಂಖ್ಯೆಯಂತೂ ತೀರಾ ಗೌಣವಾಗಿತ್ತು.. ಪೋಷಕರ ಮನೆ ಮನೆ ಭೇಟಿ ಮಾಡುವುದೇ ಸರಿಯೆಂದು ನಿರ್ಧರಿಸಿ ಸಂಜೆ ಮನೆ ಮನೆ ಭೇಟಿ ಮಾಡಿದಾಗ ಪಾಲಕರಿಂದ ಬಂದ ಉತ್ತರ ಮಾತ್ರ ಭಯಾನಕವಾಗಿತ್ತು..
"ಯಾಕೆ ನಿಮ್ಮ ಮಗನ ಸಾಲಿಗ್ ಕಳ್ಸಿಲ್ಲ್ರೀ..?" ಅಂತ ನಾವು ಕೇಳಿದಾಗ ಪೋಷಕರು "ಸಾಲಿ ಮಗ್ಗಲದಾಗ ಮಶಾಣ ಐತಲ್ರಿ.. ಅಲ್ಲಿ ಹಗಲಿ ದೆವ್ವ ಐತ್ರಿ..ಮನ್ನೆ ಸತ್ತ ಹೋದ್ ಹುಡುಗಿ ದೆವ್ವ ಆಗಿ ತಿರಗ್ಯಾಡಾಕತಾಳ್ರೀ.. ನಮ್ಮ ಹುಡುಗೂರ ಅಂಜಾಕತಾವ್ರೀ.. ಈ ಕಡಿ ಸಾಲ್ಯಾಗ ಕೂಡಸ್ತಿದ್ರ ಮಾತ್ರ ಕಳಿಸ್ತೀವಿ" ಅಂತಂದರು.
ಜಾಗದ ಸಮಸ್ಯೆಯಿಂದಾಗಿ ಸ್ಮಶಾಣದ ಸಮೀಪ ಎರಡು ಶಾಲಾಕೋಣೆಗಳಿದ್ದವು. ಅಲ್ಲಿ ಕಳೆದ ವಾರದಲ್ಲಿ ಒಬ್ಬ ಹೆಣ್ಣು ಮಗಳು ಯಾವುದೋ ಕಾಯಿಲೆಗೆ ತುತ್ತಾಗಿ ಅಸುನೀಗಿದ್ದಳು. ಕಾಯಿಲೆಯಿಂದ ಮೃತಳಾದಳು ಎನ್ನುವ ಕಾರಣಕ್ಕೆ ಶವ ಹೂಳದೇ ಬೆಂಕಿ ಇಟ್ಟಿದ್ದರು. ಈಗ ಅವಳು ರಾತ್ರಿ ಯಾರನ್ನೂ ಕಾಡದೇ ಹಗಲಿನಲ್ಲಿ ಆ ಕಡೆ ಹೋದವರಿಗೆ ಸುಟ್ಟ ಕಟ್ಟಿಗೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ ಹಾಗೂ ತೆವಳುತ್ತ ತೆವಳುತ್ತ ಸಮೀಪಿಸುತ್ತಾಳೆ ಎಂದು ಅವರು ಸವಿವರವಾಗಿ ವಿವರಿಸಿದರು.
"ನೀವಲ್ಲಿ ಹೋಗಿ ನೋಡಿದಿರಾ?" ಅಂತ ಕೇಳಿದ್ದಕ್ಕೆ "ಅಲ್ಲೇನ್ ಹೋಗ್ತೀರಿ ಸರ್..ಇಲ್ಲೇ ಮ್ಯಾಲ ಭಾಳೋತನ ನಿಂತ ನೋಡ್ರಿ ಕಾಣ್ತದ" ಅಂದ್ರು.
ಆದರೆ ನಮ್ಮಲ್ಲಿ ಹುಟ್ಟುಕೊಂಡ ಪ್ರಶ್ನೆ ನಿಜವಾಗಲೂ ದೆವ್ವಗಳು ಇವೆಯಾ? ಮನುಷ್ಯರೊಂದಿಗೆ ಮಾತನಾಡುತ್ತವಾ? ಮನುಷ್ಯರಿಗೆ ಕಾಣುತ್ತವಾ? ಅಂತ. ರಾಜಶೇಖರ ಭೂಸನೂರಮಠ ಅವರು ಸ್ಮಶಾಣಗಳಲ್ಲಿ ಹೋಗಿ ದೆವ್ವಗಳ ಧ್ವನಿ ರೆಕಾರ್ಡಿಂಗ್ ಮಾಡಿದ್ದರ ಬಗ್ಗೆ ಯಾವುದೋ ಅವರ ಕೃತಿಯೊಂದರಲ್ಲಿ ಓದಿದ್ದ ನೆನಪು. ವಿಜಯಪುರದ ಸಾಠ್ ಖಬ್ರ ನಲ್ಲೂ ಈ ಥರದ ಅನುಭವಗಳಾಗಿದ್ದರೂ ಸಹ ದೆವ್ವಗಳಿರುತ್ತವೆ ಎಂದು ನಂಬುವುದು ವಿಜ್ಞಾನದ ವಿದ್ಯಾರ್ಥಿಯಾಗಿ ನನಗೆ ಸರಿದೋರಲಿಲ್ಲ. ನಮ್ಮ ಸಹಶಿಕ್ಷಕರಾದ ಗೋಣೆಪ್ಪ, ಮಂಜುನಾಥ ಸೇರಿ ಹಗಲಿನಲ್ಲಿಯೇ ಆ ದೆವ್ವ ಕಾಣುವ ಜಾಗದತ್ತ ಹೋಗುವ ತಯಾರಿ ಮಾಡಲಾಯಿತು. ಮುಂದೆ ನಡೆಯುತ್ತ ಹೋದಂತೆ ನಮಗೂ ಧೈರ್ಯ ಸಾಲದಾಯಿತು.. ಹಿಂದೆ ದೂರದಲ್ಲಿದ್ದ ವಿದ್ಯಾರ್ಥಿಗಳು "ಸರ್ ಬ್ಯಾಡ್ ಬರ್ರಿ..." ಅಂತ ಕೂಗುತ್ತಿದ್ದರು. ಅವರು ಕೂಗಿದಷ್ಟು ನಮಗೆ ಹೆದರಿಕೆ ಹೆಚ್ಚಾಗುತ್ತಿತ್ತು.. ಆ ಜಾಗೆಯಲ್ಲಿ ನಾವು ಮೂರು ಜನ ಬಿಟ್ಟರೆ ಬೇರಾರೂ ಇಲ್ಲ. ಸುತ್ತೆಲ್ಲ ನೀರವ ಮೌನ. ಮುಂದೆ ಬರಡಾದ ಸ್ಮಶಾಣ. ಜೋರಾದ ಗಾಳಿ ಬೀಸತೊಡಗಿತು. ಹೆಣ ಸುಟ್ಟ ಜಾಗೆಯಲ್ಲಿನ ಸುಟ್ಟ ಕಟ್ಟಿಗೆ ಅಲುಗಾಡುತ್ತಿತ್ತು. ಆ ಕಟ್ಟಿಗೆ ಒಂದು ಮರದ ಕಾಂಡವಾಗಿದ್ದು ಅದರಿಂದ ಹೊರಟ ಎರಡು ಶಾಖೆಗಳು ಥೇಟ ಮಾನವನ ದೇಹದಿಂದ. ಹೊರಟ ಕೈಗಳಂತೆ ತೋರುತ್ತಿತ್ತು. ಅದು ಅಲುಗಾಡುವ ರೀತಿ ಒಂದು ದೇಹ ಬಿದ್ದು ಅಲುಗಾಡುವ ರೀತಿಯಲ್ಲೇ ಇತ್ತು. ಗಾಳಿ ಬೀಸಿದಂತೆ ಅಲುಗಾಟ ಜಾಸ್ತಿಯಾಗುತ್ತಿತ್ತು.. ಗಾಳಿ ಬೀಸುವಿಕೆ ಕಡಿಮೆಯಾದಾಗ ಅಲುಗಾಟ ಇಲ್ಲದೇ ನಿಶ್ಚಲವಾಗುತ್ತಿತ್ತು.
ಸುಟ್ಟ ಕಟ್ಟಿಗೆಯು ಮಾನವಾಕೃತಿಯಲ್ಲಿದ್ದು ಗಾಳಿಯಿಂದಾಗಿ ಅಲುಗಾಡುವುದು ಒಂದು ದೇಹ ಅಲುಗಾಡುವ ಭ್ರಮೆಯನ್ನುಂಟು ಮಾಡುತ್ತಿತ್ತು.. ಹತ್ತಿರಕ್ಕೆ ಹೋದಾಗ ಅದೊಂದು ಕಟ್ಟಿಗೆಯಾಗಿ ತೋರುತ್ತಿತ್ತು.
ಆ ಕಟ್ಟಿಗೆಯನ್ನು ಹಿಡಿದು ದೂರದಲ್ಲಿದ್ದ ವಿದ್ಯಾರ್ಥಿಗಳಿಗೆ ಎತ್ತಿ ತೋರಿಸಿ ಹಗಲಿ ದೆವ್ವ ಸತ್ತಿತೆಂದು ಅದನ್ನು ಮುರಿದು ಅಲ್ಲಿಯೇ ಬಿಸಾಡಿ ಬಂದಾಯಿತು.
ಇನ್ನು ಆ ಹುಡುಗಿ ದೆವ್ವವಾಗಿದ್ದಾಳೆ ಅನ್ನುವುದಕ್ಕೆ ಸಾಕ್ಷಿ ಊರವರ ಬಳಿ ಇರಲಿಲ್ಲ.ಆ ಜಾಗೆಯಲ್ಲಿದ್ದು ಕೊಂಡು ತೆವಳುತ್ತಿದ್ದಾಳೆ ಎಂಬ ಭ್ರಮೆ ಊರಿನವರಲ್ಲಿದ್ದುದರಿಂದ ಅದನ್ನು ಕೇಳಿಸಿಕೊಂಡ ಹಿರಿಯ ತರಗತಿ ಮಕ್ಕಳು ಶಾಲೆಗೆ ಹೋದರೆ ಯಾರೂ ಇಲ್ಲದಿದ್ದಾಗ ಹಗಲಿ ದೆವ್ವ ಹಿಡಿಯುತ್ತದೆ ಎಂಬ ಭಯ ಸಹಜವಾಗಿ ಅವರನ್ನು ಶಾಲೆಯಿಂದ ದೂರ ಮಾಡಿತ್ತು. ನಮಗೆ ಅಷ್ಟು ಭಯ ಎನ್ನಿಸಿದ್ದ ಆ ಕಟ್ಟಿಗೆ ಪಾಪ ಪುಟ್ಟ ಮಕ್ಕಳನ್ನ ಹೆದರಿಸದೇ ಇದ್ದೀತೆ?
ಭಯ ಎನ್ನುವುದು ಎಂತಹ ಆತ್ಮವಿಶ್ವಾಸವನ್ನೂ ಕುಂದಿಸುತ್ತದೆ. ನಮ್ಮ ಕಲಿಕಾ ಪ್ರಕ್ರಿಯೆಗೆ ಇದನ್ನು ಅನ್ವಯಿಸಿ ನೋಡಿದರೆ ಭಯದಿಂದ ಕಲಿಕೆ ಸಾಧ್ಯವಾಗಲಾರದು. ಶಿಕ್ಷಕರ ಭಯ, ಪೋಷಕರ ಭಯ, ಸುತ್ತಲಿನ ಪರಿಸರದಲ್ಲಿನ ಭಯ ಸಹಜವಾಗಿ ಕಲಿಕೆಗೆ ತೊಡಕಾಗುತ್ತದೆ. ಅದೇ ನಿರ್ಭಯ ವಾತಾವರಣದಲ್ಲಿ ಗರಿಷ್ಠ ಕಲಿಕೆಯುಂಟಾಗುತ್ತದೆ. ಭಯ ಮುಕ್ತ ವಾತಾವರಣ ಉತ್ತಮ ಕಲಿಕೆಯ ಮರುಪೂರಣ. ಏನಂತೀರಾ?
No comments:
Post a Comment