ಪ್ರಮುಖ ಸಂದೇಶ

ಎಲ್ಲ ಶಿಕ್ಷಕರು ತಮ್ಮ ವರ್ಕ್ ಫ್ರಂ ಹೋಮ್ ಕೆಲಸಗಳನ್ನು ತಮ್ಮ ವೈಯಕ್ತಿಕ ಬ್ಲಾಗ್ ಗೆ ಅಪಲೋಡ್ ಮಾಡುವುದು ಕಡ್ಡಾಯ. ಮುಖ್ಯಶಿಕ್ಷಕರು ತಮ್ಮ ಶಾಲಾ ಬ್ಲಾಗ್ ರಚಿಸಿ ಅದರಲ್ಲಿ ತಮ್ಮ ಶಿಕ್ಷಕರ ಬ್ಲಾಗ್‌ಗಳನ್ನು ಲಿಂಕ್ ಮಾಡುವುದು.

Tuesday, 3 March 2020

ನೂತನ ಸಿ.ಆರ್.ಪಿ ಯಾಗಿ ಹುದ್ದೆಯಲಂಕರಿಸಿದ ಭೀಮಾಶಂಕರ ಬಾಗೇವಾಡಿಯವರಿಗೆ ಸುಸ್ವಾಗತ...











ಇಜೇರಿ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ  ಶ್ರೀ ಭೀಮಾಶಂಕರ ಬಾಗೇವಾಡಿ ಇವರು ದಿ.03/03/2020 ರಿಂದ ತಮ್ಮ ಹುದ್ದೆಗೆ ವರದಿ ಮಾಡಿಕೊಂಡರು. ಶ್ರೀಯುತರು ದಿ.03/04/2008 ರಂದು ಜೇವರ್ಗಿ ತಾಲೂಕಿನ ಯಂಕಂಚಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಯನ್ನಾರಂಭಿಸಿದರು. ಇವರಿಗೆ ಸಮೂಹ ಸಂಪನ್ಮೂಲ ಕೇಂದ್ರ ಇಜೇರಿ ವತಿಯಿಂದ ಹಾರ್ದಿಕ ಸುಸ್ವಾಗತ...









ಇಜೇರಿ ಸಮೂಹ ಸಂಪನ್ಮೂಲ ಕೇಂದ್ರದ ನಿಕಟಪೂರ್ವ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಚಿನ್‌ಕುಮಾರ ಹಿರೇಮಠ ಇವರು ದಿ.12/05/2016 ರಿಂದ ದಿ.10/07/2019 ರ ವರೆಗೆ ಹುದ್ದೆಯಲ್ಲಿದ್ದು ದಿ. 11/07/2019 ರಂದು ಸಹ ಶಿಕ್ಷಕರಾಗಿ ಸರ್ಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆಗೆ ಹಾಜರಾಗಿರುತ್ತಾರೆ. ಸದರಿ ಬ್ಲಾಗ್ ಅನ್ನು ಇವರು ರಚಿಸಿದ್ದು, ಶ್ರೀಯುತರಿಗೆ ಸಮೂಹ ಸಂಪನ್ಮೂಲ ಕೇಂದ್ರ ಇಜೇರಿ ವತಿಯಿಂದ ಆತ್ಮೀಯವಾಗಿ ಬೀಳ್ಕೊಡುತ್ತಿದ್ದೇವೆ.

Thursday, 13 June 2019

ಫೇಸ್‌ಬುಕ್ ಪಾಠಟಿಪ್ಪಣಿ-14 : ಅರಳದ ಹೂವು ಈ ಲಕ್ಷ್ಮಣ...


ತರಗತಿಯೊಳಗೆ ಆತ ಸದಾ ಹಿಂದೆ ಕುಳಿತುಕೊಳ್ಳುತ್ತಿದ್ದ. ಕೆದರಿದ ಕೂದಲುಗಳ ಆಸೆ ಕಂಗಳ ಹುಡುಗ. ತನ್ನನ್ನು ಗದರುವವರ ಜೊತೆ ಬಯಸದೇ ಏಕಾಂಗಿಯಾಗಿರುತ್ತಿದ್ದ ಆತ, ಶಿಕ್ಷಕರೊಂದಿಗೆ ಮಾತ್ರ ಬಹಳವೇ ಆತ್ಮೀಯತೆಯಿಂದ ಇರುತ್ತಿದ್ದ. ಪ್ರತಿ ದಿನವೂ ಶಾಲೆಗೆ ತಪ್ಪದೇ ಬರುತ್ತಿದ್ದನಾದರೂ ತರಗತಿಯ ಚಟುವಟಿಕೆಗಳಲ್ಲಿ ಆತನದ್ದು ಅತೀವ ನಿರಾಸಕ್ತಿ. ನಾಲ್ಕೈದು ಸಲ ಹೇಳಿದಾಗ ಒಂದು ಬಾರಿ ಅವನಿಗೆ ಅರ್ಥವಾಗುತ್ತಿತ್ತು. ನಿಧಾನ ಗತಿಯ ಕಲಿಕೆಯಿರುವ ವಿದ್ಯಾರ್ಥಿ ಅಂತ ಮೇಲೆ ನೋಡಿದರೆ ಗೊತ್ತಾಗುತ್ತಿತ್ತು. ಇಂಥ ವಿದ್ಯಾರ್ಥಿಗಳು ಕೆಲವೇ ಕೆಲವರು ತರಗತಿಗಳಲ್ಲಿದ್ದರೂ ಈತ ಮಾತ್ರ ಅತೀವ ನಿಧಾನಗತಿ ತೋರುತ್ತಿದ್ದ. ಇಂಥವರ ಮೇಲೆ ಕ್ರಿಯಾ ಸಂಶೋಧನೆ ಮಾಡಬೇಕೂಂತ ನಾನು ಸಿದ್ಧನಾದೆ. ನಮ್ಮ ಇಲಾಖೆ ಸೂಚಿಸಿದಂತೆ ಕ್ರಿಯಾ ಸಂಶೋಧನೆಯ ರೂಪುರೇಷೆ ಸಿದ್ಧಗೊಳಿಸಿ ಆತನನ್ನು ಸೂಕ್ಷ್ಮವಾಗಿ ತರಗತಿಯಲ್ಲಿ ಅವಲೋಕಿಸಿದಾಗ ಅವನಿಗೆ ಡಿಸ್ಲೆಕ್ಸಿಯಾ ಎಂಬ ಸಣ್ಣ ಕಲಿಕಾ ನ್ಯೂನತೆ ಇತ್ತು. ನನಗೆ ಆಗ ನೆನಪಾಗಿದ್ದು ಅಮೀರ್ ಖಾನ್ ಅಭಿನಯದ 'ತಾರೆ ಜಮೀನ್ ಪರ್' ಚಲನಚಿತ್ರ. ಇದೊಂದು ಸುಲಭವಾದ ಕಲಿಕಾ ನ್ಯೂನತೆ. ನಾನೂ ಅಮೀರ್ ಖಾನ್ ನಂತೆ ಇವನನ್ನು ಕಡಿಮೆ ಅವಧಿಯಲ್ಲಿ ತಿದ್ದಬಲ್ಲೆ ಎಂದುಕೊಂಡಿದ್ದೆ. ಆದರೆ ಎಲ್ಲವೂ ತಲೆಕೆಳಗಾಯಿತು. ಈತನ ಹಿನ್ನೆಲೆಯೇ ಬೇರೆಯಾಗಿತ್ತು.

ಈತನ ಹೆಸರು ಲಕ್ಷ್ಮಣ. ಈತನ ತಂದೆ ಚಂದಪ್ಪ, ದಿನಗೂಲಿಯವ. ಜಾತಿಯಿಂದ ದಲಿತ. ಇತರರ ಮನೆಯ ಸುಣ್ಣ ಬಣ್ಣ ಮಾಡುವುದರ ಜೊತೆಗೆ ಅಡವಿ ಕೆಲಸ,ಹೊಲದ ಕೆಲಸ ಯಾವುದೇ ಕೆಲಸ ಸಿಕ್ಕರೂ ಅತೀ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದ. ನಾಲ್ಕು ಮಕ್ಕಳಲ್ಲಿ ಲಕ್ಷ್ಮಣ ಎರಡನೆಯವ. ಮನೆಯಲ್ಲಿ ತೀರಾ ಬಡತನ. ಕೆಲವು ಸಲ ದೂರದ ಮುಂಬಯಿಗೆ ಗುಳೇ ಹೋಗಿ ಹೊಟ್ಟೆ ಕಟ್ಟಿಕೊಂಡಿದ್ದುಂಟು. ಹೀಗಿರುವಾಗ ಲಕ್ಷ್ಮಣನೂ ಕೆಲ ಸಲ ಕೂಲಿಗೆ ಹೋಗುತ್ತಿದ್ದುಂಟು. ಆದರೆ ಚಂದಪ್ಪನಿಗೆ ತಿಳಿ ಹೇಳಿದ್ದರಿಂದ ಆತ ಲಕ್ಷ್ಮಣನನ್ನು ರಜೆ ಹೊರತು ಪಡಿಸಿ ಕೂಲಿಗೆ ಕಳಿಸುತ್ತಿರಲಿಲ್ಲ.

ಲಕ್ಷ್ಮಣ ಅಕ್ಷರಗಳನ್ನು ಗುರುತಿಸುವಲ್ಲಿ ಎಡವುತ್ತಿದ್ದ. ಕನ್ನಡದಲ್ಲಿ ಗ,ಸ,ತ,ಡ,ಶ,ಟ, ಮುಂತಾದ ಅಕ್ಷರಗಳು ಈತನ ಬರವಣಿಗೆಯಲ್ಲಿ ಪಾರ್ಶ್ವವಿಪರ್ಯಾಯಕ್ಕೆ ಒಳಪಡುತ್ತಿದ್ದವು. ಇಂಗ್ಲಿಷ್ ಅಕ್ಷರಗಳ ಸ್ಥಿತಿಯಂತೂ ಕನ್ನಡಕ್ಕಿಂತ ಭಿನ್ನವಾಗಿತ್ತು. ಇವನ ಈ ನ್ಯೂನತೆ ಹೋಗಲಾಡಿಸಲು ಕಾಪಿ ಬರಹ ಮಾಡಿಸಬೇಕೆಂದು ಕೊಂಡೆ. ಅದರಂತೆ ನಾನು ಅವನ ಕೈ ಹಿಡಿದೇ ಬರೆಸಲು ಪ್ರಾರಂಭಿಸಿದೆ. ಮೊದಮೊದಲು ಆತ ತುಂಬ ಸಂಕೋಚಪಟ್ಟುಕೊಳ್ಳುತ್ತಿದ್ದ. ಬರಬರುತ್ತ ಸರಾಗವಾಗಿ ಬರೆಯತೊಡಗಿದ‌. ಆದರೂ ನಾನು ಅವನ ಕೈ ಬೆರಳು ಹಿಡಿದಾಗ ಮತ್ತೇ ಆತ ಬೆಪ್ಪಾಗಿ ನೋಡುತ್ತಿದ್ದ.

ಒಂದು ದಿನ ಕಾಪಿ ಪುಸ್ತಕದಲ್ಲಿ ಈತ ತಪ್ಪಾಗಿ ಬರೆಯುತ್ತಿದ್ದ ಅಕ್ಷರಗಳನ್ನು ನಾನು ಅವನ ಕೈಬೆರಳು ಹಿಡಿದು ಬರೆಸಲನುವಾದೆ. ಆಗ ಆತ
"ಸರ್ ನೀವ್ ಸ್ವಾಮಗೋಳ್ರೀ?" ಅಂತ ಅಂದ.
ನಾನು "ಹೌದು" ಅಂದೆ.
"ಸರ್ ಸ್ವಾಮಗೋಳ ನಮ್ಮ ಮಂದೀನ ಮುಟ್ಟಸ್ಕೊಳ್ಳಾಂಗಿಲ್ರಿ" ಅಂದ ಆತ.
ನನಗೆ ಒಂದು ಕ್ಷಣ ಆಶ್ಚರ್ಯ ಗಾಗೂ ತಬ್ಬಿಬ್ಬಾಯಿತು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಂತಹ ವಿಷಣ್ಣ ಭಾವನೆಗಳನ್ನ ಅದ್ಹೇಗೆ ಹುಟ್ಟು ಹಾಕುತ್ತಾರೋ ಗೊತ್ತಿಲ್ಲ..
ಅದಕ್ಕೆ ನಾನು,
"ಲಕ್ಷ್ಮಣ, ಅದೆಲ್ಲ ತಪ್ಪು.. ನಾ ನಿಂಗ ಮುಟ್ಟಿನಿಲ್ಲೊ.. ಏನೂ ತಪ್ಪಿಲ್ಲ..ನಾವೆಲ್ಲ ಮನಷ್ಯಾರು.. ಜಾತಿಗೀತಿ ಏನೂ ಮಾಡಬಾರ್ದು.. ಹಿಂಗೆಲ್ಲ ಇನ್ನೊಮ್ಮೆ ಮಾತಾಡ್ಬಾರ್ದು..ನೀ ಸರಿಯಾಗಿ ಅಕ್ಷರ ಬರೆಯೊದ್ ಮಾತ್ರ ಕಲಿ" ಅಂತ್ಹೇಳಿದೆ. ಅಂದಿನ ಅಶ್ಪೃಶ್ಯತೆ ಇಂದಿಲ್ಲವಾದರೂ ಪಟ್ಟ ಬದ್ಧ ಹಿತಾಸಕ್ತಿಗಳು ಹೇಗೆಲ್ಲಾ ಜಾತಿಜಾತಿಗಳ ನಡುವೆ ವಿಷಮತೆ ಬಿತ್ತುತ್ತಿವೆಯಲ್ಲ ಅಂತ ನೋವೂ ಆಯಿತು. ನನ್ನ ಕ್ರಿಯಾ ಸಂಶೋಧನೆಯ ಫಲವಾಗಿ ಉಳಿದ ವಿದ್ಯಾರ್ಥಿಗಳಿಗೆ ಪರಿಹಾರ ಸಿಕ್ಕಿತಾದರೂ ಲಕ್ಷ್ಮಣ ಮಾತ್ರ ಸವಾಲಾಗಿದ್ದ. ಆದರೆ ಬರಬರುತ್ತ ಲಕ್ಷ್ಮಣ ಎಷ್ಟು ಬದಲಾದನೆಂದರೆ ಎಂಟನೆಯ ತರಗತಿವರೆಗೂ ಇಡೀ ಶಾಲೆಯ ಸ್ವಚ್ಛತೆ, ಭದ್ರತೆ ಅವನದೇ. ಶಾಲಾ ಲೈಬ್ರರಿಯಿಂದ ಪುಸ್ತಕಗಳನ್ನೂ ಓದಲು ಒಯ್ಯುತ್ತಿದ್ದ. ವಿಜ್ಞಾನದಲ್ಲಿನ ಪ್ರತೋಗಗಳಿಗೆ ಉಪಕರಣಗಳನ್ನು ಜೋಡಿಸುತ್ತಿದ್ದ‌. ಓದಿನಲ್ಲಿ ತುಸುವೇ ತುಸು ಪ್ರಗತಿಯಾದರೂ ನಿಧಾನ ಕಲಿಕೆ ಆತನದ್ದಾಗಿತ್ತು.. ಈಗೀಗ ಕೆಲವೇ ಕೆಲವು ಇಂಗ್ಲಿಷ್ ಅಕ್ಷರಗಳನ್ನು ಬರೆಯಲು ಮಾತ್ರ ಅವನು ಹರಸಾಹಸ ಪಡುತ್ತಿದ್ದ. ಜಾತಿ ಬಗ್ಗೆ ಅವನಲ್ಲಿ ಯಾವ ಸಂದೇಹವೂ ಇರಲಿಲ್ಲ. ಶಾಲೆಯಲ್ಲಿ ತನ್ನ ಏಕಾಂಗಿತನ ಕಳೆದುಕೊಂಡು ಎಲ್ಲರೊಂದಿಗೆ ಬೆರೆತು ಆಟವಾಡುತ್ತಿದ್ದ. ತನ್ನ ಕುಟುಂಬದ ಬಗ್ಗೆ ಅತೀವ ಪ್ರೀತಿ ಹೊಂದಿದ್ದ ಆತ "ಸರ್ ನಮ್ಮಪ್ಪ ಭಾಳ ಕುಡಿತಾನ್ರೀ.. ಈ ಸಲ ಮಳಿ ಇಲ್ರಿ..ಬಂಬಯಿಗೋಗ್ಬೇಕು. ಸಾಲ ಮಾಡ್ಯಾಣ್ರಿ..ನಾ ಚಂದ್ ಓದಿ ನೋಕರಿ ಮಾಡ್ತೇನ್ರಿ"
ಅಂತ ಆಗಾಗ ಭಾವುಕನಾಗಿ ಹೇಳುತ್ತಿದ್ದ. ಹಾಗೇ ಆತ ಮಾತನಾಡುವಾಗ ನನಗೆ ನನ್ನ ಬಾಲ್ಯವೇ ಕಣ್ಣಮುಂದೆ ಬರುತ್ತಿತ್ತು. ನಾನು ಶಾಲೆಯಿಂದ ಬೀಳ್ಕೊಡುವಾಗ ಆತ ಪೆಚ್ಚುಮೋರೆ ಮಾಡಿಕೊಂಡಿದ್ದ.
"ಸರ್, ಮತ್ತ ಇಲ್ಲೇ ಬರ್ರಿ ಸರ್" ಅಂತ ಬೀಳ್ಕೊಟ್ಟಿದ್ದ.

ಮೊನ್ನೆ ಅದೇ ಶಾಲೆಯ ನನ್ನ ಸಹೋದ್ಯೋಗಿಗಳು ಭೇಟಿಯಾಗಿ ನಡೆದ ಅವಘಡದ ಬಗ್ಗೆ ಹೇಳಿದಾಗ ನನಗೆ ನಂಬಲಾಗಲಿಲ್ಲ. ಗ್ರಾಮದ ಬಂಧುಗಳ ಮದುವೆಯ ದಿನ  ಮದುವೆಗೆ ಬಂದ ಲಕ್ಷ್ಮಣ ಅಲ್ಲಿಯೇ ನಿಂತು ಅವೈಜ್ಞಾನಿಕ ಕನೆಕ್ಷನ್ ನಿಂದಾಗಿ ಹಿಡಿದ ತಂತಿಯಲ್ಲಿ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ದುರ್ಮರಣಕ್ಕೀಡಾಗ ಸಂಗತಿ ಕೇಳಿ ಎದೆ ಭಾರವಾಯಿತು‌. ಕಣ್ಣುಗಳಿಂದ ಆಶ್ರುಧಾರೆ ತಡೆಯಲಾಗಲಿಲ್ಲ. ದೇವರನ್ನೂ ಕ್ಷಮಿಸಲಾಗಲಿಲ್ಲ.. ಈಗಲೂ ಅನೇಕ ಸಲ ಲಕ್ಷ್ಮಣ ಇನ್ನೂ ಅಲ್ಲಿಯೇ ಆಡಿಕೊಂಡಿದ್ದಾನೆ ಎನ್ನುವಂತೆ ಅನ್ನಿಸುತ್ತದೆ. ಅವನ  ನೆನಪುಗಳ ಮೆರವಣಿಗೆ ಮತ್ತೇ ಮತ್ತೇ ಹೃದಯವನ್ನು ಹನಿಸುತ್ತದೆ...ಅರಳದ ಹೂವಾಗಿ ಲಕ್ಷ್ಮಣ ಸದಾ ನೆನಪಾಗುತ್ತಿದ್ದಾನೆ.

©ಲೇಖಕರು : ಸಚಿನ್‌ಕುಮಾರ ಬ.ಹಿರೇಮಠ

Thursday, 6 June 2019

ಫೇಸ್‌ಬುಕ್ ಪಾಠ ಟಿಪ್ಪಣಿ - 13 ಕಲ್ಲು ಕರಗಿದ ಸಮಯ...



ನಮ್ಮ ಶಾಲೆಯು ಎಲ್ಲ ಶಾಲೆಗಳಂತಲ್ಲ. ನಾವು ಅಂದುಕೊಂಡಂತೆ ಎಲ್ ಆಕಾರದಲ್ಲೋ, ಓ ಆಕಾರದಲ್ಲೋ,ಹೆಚ್ ಆಕಾರದಲ್ಲೋ‌ ಅಥವಾ ಯೂ ಆಕಾರದಲ್ಲೋ ಅಲ್ಲದ ಅಲ್ಲಲ್ಲಿ ಚಿಕ್ಕ ಮಕ್ಕಳು ಗೋಲಿ‌‌ ಆಡುವಾಗ ಜೋಡಿಸಿಟ್ಟ ಗೋಲಿಗಳಂತೆ ಅಲ್ಲೊಂದು ಇಲ್ಲೊಂದು ಇರುವ ತರಗತಿ ಕೋಣೆಗಳು. ಮೂರು ತರಗತಿ ಕೋಣೆಗಳ ನಡುವೆ ಎರಡು ರಥ ಬೀದಿಗಳು. ಉಳಿದ ಮೂರು ತರಗತಿಗಳು 300 ಮೀ ಅಂತರದ ಸ್ಮಶಾನದ ಸಮೀಪ, ಹಳ್ಳದ ದಂಡೆಯ ಮೇಲೆ. ಅಲ್ಲಿಂದಿಲ್ಲಿಗೆ ತಿರುಗಾಡುವುದರೊಳಗೆ ಹೆಚ್ಚು ಕಡಿಮೆ ಐದತ್ತು ನಿಮಿಷ ವ್ಯರ್ಥ. ಮಳೆಗಾಲದಲ್ಲಂತೂ ನಮ್ಮೆಲ್ಲರ ಪಾಡು ಹೇಳತೀರದು. ಅನೇಕ ಸಲ ಮಕ್ಕಳು ಹಾಗೂ ಶಿಕ್ಷಕರು ಜಾರಿ ಬಿದ್ದದ್ದೂ ಉಂಟು. ಪಾಠೋಪಕರಣಗಳನ್ನು ಹೊತ್ತೊಯ್ಯುವ ಸಂದರ್ಭದಲ್ಲಂತೂ ಅಲ್ಲೇ ಮಲಗಿದ್ದ ನಾಯಿಗಳಿಗೆ ಎಕ್ಸ್ಟ್ರಾ ಡ್ಯೂಟಿ. ಹಿಂದೆ ಸರಿಯುತ್ತ ಬೊಗಳಿದ್ದೇ ಬೊಗಳಿದ್ದು. ಅದರ ಮಾಲೀಕ ಮಾತ್ರ ಅದು ಬೊಗಳುವಷ್ಟು  ಹೊತ್ತು ಕಿವುಡನಾಗೇ ಇರುತ್ತಿದ್ದ.
"ನಾಯಿ ಹಿಡಿದು ಕೊಳ್ಳಯ್ಯ.." ಅಂತ ಜೋರಾಗಿ ಕೂಗಿದಾಗ,
"ಅದೇನ್ ಕಡ್ಯಾಂಗಿಲ್ಲ ಬುಡ್ರಿ ಮಾಸ್ತರ್ರ.." ಅಂತ ಹಲ್ಲು ಕಿರಿಯುತ್ತಿದ್ದಾತ. ಆ ಐದತ್ತು ನಿಮಿಷದಲ್ಲಿ ನಮಗಂತೂ ನಖಶಿಖಾಂತ ಕೋಪ.

ಆಗ ಉತ್ತಮ ಮರಗಳಿರುವ, ಶಾಲಾ ತೋಟವಿರುವ ಹಾಗೂ ಉದ್ಯಾನವನವಿರುವ ಶಾಲೆಗಳಿಗೆ ಹಸಿರು ಶಾಲೆ/ಪರಿಸರ ಮಿತ್ರ ಎಂಬ ಪ್ರಶಸ್ತಿ ನೀಡುತ್ತಿದ್ದರು. ನಮ್ಮ ಸಿ.ಆರ್.ಪಿ ಅವರು ಸಂದರ್ಶನ ನೀಡಿದಾಗ "ಶಾಲೆಯಲ್ಲಿ ಸಸಿ ನೆಟ್ಟು ಹೂದೋಟ ಮಾಡಿ" ಎಂದು ಪದೇ ಪದೇ ಹೇಳುತ್ತಿದ್ದರು. ಆದರೆ ಶಾಲಾ ಆಟದ ಮೈದಾನವಿರಲಿಲ್ಲ. ಬೀದಿಯಿರುವ ಶಾಲಾ ಕೋಣೆಗಳ ಮುಂದೆ ಸಸಿ ನೆಡುವಂತಿರಲಿಲ್ಲ. ಒಂದೇ ಕಡೆ ತರಗತಿ ಕೋಣೆಗಳಿದ್ದು ಮುಂದೆ ಒಂದಿಷ್ಟು ಸಸಿ ನೆಡಲು ಜಾಗವಿದ್ದರೂ ಬೇಸಿಗೆ ಕಾಲದಲ್ಲಿ ಅವುಗಳಿಗೆ ನೀರಿರದೆ ಒಣಗಿ ಹೋದ ಪ್ರಸಂಗವನ್ನೊಮ್ಮೆ ನಮ್ಮ ಮುಖ್ಯೋಪಾಧ್ಯಾಯರು ಹೇಳಿದ್ದರು. ಹಾಗೂ ಮುಂದುವರೆದು ಸಸಿಗಳನ್ನು ನೆಟ್ಟು ನಾಲ್ಕಡಿ ಬೆಳೆಸುವ ಹೊತ್ತಿಗೆ ಬೇಸಿಗೆ ರಜೆ ಬರುತ್ತಿತ್ತು.. ರಜೆ ಮುಗಿಸಿ ಬರುವುದರೊಳಗಾಗಿ ಆ ಗಿಡ ನೀರಿಲ್ಲದೆ ಬಾಯಾರಿ ಸಾಯುತ್ತಿತ್ತು  ಅಥವಾ ಅಲ್ಲಿನ ಬಡಪಾಯಿ ದನಕರುಗಳಿಗೆ ಆಹಾರವಾಗಿರುತ್ತಿತ್ತು.

ಇನ್ನೊಂದು ಕಾರಣ ಹೇಳುವುದಾದರೆ ಮೇಲಿನ ಸ್ಮಶಾನದ ಸಮೀಪದ ತರಗತಿ ಕೋಣೆಗಳಿಗೆ ಕಂಪೌಂಡ್ ಇದ್ದರೂ ಅಲ್ಲಿ ಗಿಡ ಬೆಳೆಯಲು ಮಣ್ಣಿಲ್ಲದೆ ಫರ್ಸಿ ಕಲ್ಲುಗಳಿರುವ ಗರ್ಚು ನೆಲ.. ಅಲ್ಲಿ ಸಸಿಗಳು ಗಿಡವಾಗಲು ಸಾಧ್ಯವೇ ಇರಲಿಲ್ಲ.. ನಾವು ಪ್ರತಿ ವರ್ಷ ಜೂನ್ 5 ರ ಒಳಗಾಗಿ ಅರಣ್ಯ ಇಲಾಖೆಯಿಂದ ಐದಾರು ಬೇವು, ಹೊಂಗೆ, ಪೇರಲ ಮುಂತಾದ ಸಸಿಗಳನ್ನು ತಂದು ನೆಟ್ಟು ಬೀಗುತ್ತಿದ್ದೆವು. ಆಗ ನಮ್ಮ ಸಂಭ್ರಮವನ್ನು ಕಂಡ ಅಲ್ಲಿನ ಮಂದಿ,
"ಕಲ್ಲಾಗ ಏನ್ ಗಿಡ ಬೆಳಸ್ತೀರಿ..? ಕೆಳಗ ಗರ್ಚ್ ತುಂಬ್ಯಾದ.. ಅದಕ ಹೇಳೂದ್, ಸ್ಟೇಷನ್ ಮಾಸ್ತರ್ ಗ ನಿದ್ದಿ ಇಲ್ಲ; ಕನ್ನಡ ಸಾಲಿ ಮಾಸ್ತರ್ ಗ ಬುದ್ಧಿ ಇಲ್ಲ ಅಂತ.."
ಹೀಯಾಳಿಸಿದರೋ ಬೈದರೋ ನಮಗಂತೂ ತಿಳಿಲಿಲ್ಲ..ಅದರಲ್ಲಿ ಈ ಗಿಡ ಬೆಳಸಲೇ ಬೇಕು ಅಂತ ಹುಚ್ಚು ಹೊಕ್ಕಿದ್ದು ನಮ್ಮ‌ಹಿರಿಯ ಸಹೋದ್ಯೋಗಿ ಶಿಕ್ಷಕರಾದ ಶ್ರೀ ಗೋಣೆಪ್ಪ ಸರ್ ಗೆ. ಬಾಟನಿ ಓದಿದ್ದ ನನಗೆ ಸಸಿಗಳನ್ನ ಈ ಕಲ್ಲುನೆಲದಲ್ಲಿ ಗಿಡ ಮಾಡುವುದು ಹೇಗೆ ಎಂಬ ಪ್ರ್ಯಾಕ್ಟಿಕಲ್ ಜ್ಞಾನವಿರಲಿಲ್ಲ..

"ಸರ್ ಇದನ್ನ ಇಲ್ಲಿಗೆ ಬಿಡೋಣ್ರಿ.." ಅಂತಂದೆ.
ಅದಕ್ಕ ಗೋಣೆಪ್ಪ ಸರ್ ಅಂದರು,
"ಸರ್ ಮಾಡುವ ಮನಸ್ಸಿದ್ರ ಕಲ್ಲ ಕೂಡ ಕರಗತೈತಿ ಸರ್....ಈ ಸಲ ಸಸಿ ನೆಟ್ಟು ಗಿಡ ಬೆಳಸೋಣ" ಅಂತಂದರು..

ಅಕ್ಟೋಬರ್ ರಜೆಯ ಹೊತ್ತಿಗೆ ಅದೇ ಗರ್ಚುಗಲ್ಲುಗಳಿರುವ ಜಾಗದಲ್ಲಿ ಸಸಿ ನೆಟ್ಟು ಕಾಪಾಡುವ ಕೆಲಸ ಶುರುವಾಯಿತು. ಅವರ ಪ್ರಕಾರ ಈ ಗರ್ಚುಗಲ್ಲುಗಳಿರುವ ನೆಲದಲ್ಲಿ ಗುಂಡಿ ತೋಡಿಚಮಣ್ಣು ಹಾಕಿ ಸಸಿ ನೆಟ್ಟರೆ ಸಸಿಗಳು ಚೆನ್ನಾಗಿ ಬೆಳೆಯುತ್ತವೆ ಎಂಬುದು. ನಾನು ತರಗತಿಯಲ್ಲಿ ಮರಗಿಡಗಳಿಂದ ನಮ್ಮಂತಹ ಜೀವಿಗಳಿಗಾಗುವ ಪ್ರಯೋಜನಗಳು ಹಾಗೂ ಪರಿಸರ  ಸಂರಕ್ಷಣೆಯ ಕುರಿತು ಮಾತಾಗುತ್ತಿದ್ದೆ. ಅಲ್ಲಿಯೇ ಅರಣ್ಯ ಇಲಾಖೆಯಲ್ಲಿ ವಾಚರ್ ಆಗಿ ಕೆಲಸ ಮಾಡುತ್ತಿದ್ದ ಹಿರಿಯರೂ ಆದ ಸಿದ್ದಪ್ಪ ಎಂಬುವವರನ್ನು ಸಂಪರ್ಕಿಸಿ ಸುಮಾರು 50 ಸಸಿಗಳನ್ನು ನೀಡುವಂತೆ ವಿನಂತಿಸಿದೆವು. ಅಕ್ಟೋಬರ್ ಮೊದಲ ವಾರದಲ್ಲಿ ಸಸಿಗಳು ಬಂದವು.ಅವುಗಳಲ್ಲಿ ಹೊಂಗೆ, ಬೇವು, ಪೇರಲ, ಬಾದಾಮಿ, ಸೇವಂತಿಗೆ, ದಾಸವಾಳ ಮುಂತಾದ ಸಸಿಗಳಿದ್ದವು. ಹಿರಿಯ ತರಗತಿ ವಿದ್ಯಾರ್ಥಿಗಳಿಗೆ ನೀರು ತರುವ ಜವಾಬ್ದಾರಿ. ಗೋಣೆಪ್ಪ ಸರ್ ಅವರು ಸ್ವತಃ ಶಾಲಾ ಆವರಣದಲ್ಲಿ 30-35 ಗುಂಡಿ ತೋಡಿದರು. ನಾನು ಹಾಗೂ ನಮ್ಮ ಇನ್ನೊಬ್ಬ ಶಿಕ್ಷಕರಾದ ಶ್ರೀ ಮಂಜುನಾಥ ಅವರು ಪಕ್ಕದ ಹೊಲದಲ್ಲಿರುವ ಮಣ್ಣನ್ನು ಗುಂಡಿಯೊಳಗೆ ಹಾಕಿ ವ್ಯವಸ್ಥೆಗೊಳಿಸಿದೆವು‌. ಹಳೆಯ ವಿದ್ಯಾರ್ಥಿಗಳಿಂದ ಮತ್ತೆ 15-20. ಗುಂಡಿ ತೋಡಿಸಿ ಮಣ್ಣು ಹಾಕಿ ಸಿದ್ಧಗೊಳಿಸಿದೆವು. 50 ಸಸಿ ನೆಟ್ಟೆವು. ಉಳಿದ ವಿದ್ಯಾರ್ಥಿಗಳು ನೀರುಣಿದರು.5,6,7 ವಿದ್ಯಾರ್ಥಿಗಳಿಗೆ ಒಬ್ಬರಿಗೆ ಒಂದು ಸಸಿಯನ್ನು ಗುರುತು ಮಾಡಿ ಅದು ಬಾಡದಂತೆ ಹಾಗೂ ಉತ್ತಮವಾಗಿ ಬೆಳೆಸುವ ಜವಾಬ್ದಾರಿ ನೀಡಲಾಯಿತು. ಬೇಸಿಗೆಯಲ್ಲಿ ಸ್ವತಃ ಗೋಣೆಪ್ಪ ಸರ್ ಅಲ್ಲಿಯೇ ಉಳಿದುಕೊಂಡು ಆ ಎಲ್ಲ ಸಸಿಗಳು ನೀರುಣ್ಣುವಂತೆ ಮಾಡಿದರು. ಮುಂದೆ ಮಳೆಗಾಲದಲ್ಲಿ ಚೆನ್ನಾಗಿ ಮಳೆ ಸುರಿದು ಎರಡನೆಯ ವರ್ಷದಲ್ಲಿ 40 ಸಸಿಗಳು ಚೆನ್ನಾಗಿ ಬೆಳೆಯಲಾರಂಭಿಸಿದವು. ವಿದ್ಯಾರ್ಥಿಗಳೂ ಸಹ ತಮಗೆ ನೀಡಿದಂತ ಸಸಿಗಳನ್ನು ತಮ್ಮದೇ ಎನ್ನುವಂತೆ ಪೋಷಿಸತೊಡಗಿದರು. ಆ ಸಸಿಗಳ ಹಾಗೂ ಅವರ ನಡುವೆ ಒಂದು ಅವಿನಾಭಾವ ಸಂಬಂಧ ಬೆಳೆಯಿತು. ಅದರ ಫಲವೇನೋ ಮೂರು ವರ್ಷದಲ್ಲಿ ಆ ಎಲ್ಲ‌ ಸಸಿಗಳು ನಮ್ಮ ಹೆಗಲಿನವರೆಗೂ ಬೆಳೆದಿದ್ದವು.

ಇದರ ತಾತ್ಪರ್ಯ ಇಷ್ಟೇ. ಶಿಕ್ಷಕರು ಯಾವುದೇ ಒಂದು ಕಾರ್ಯವನ್ನು ಮನಸಾಪೂರ್ವಕ ಮಾಡಿದಲ್ಲಿ ಆ ಕಾರ್ಯ ಎಷ್ಟೇ ಕಠಿಣವಿದ್ದರೂ ಹೂ ಎತ್ತಿದಷ್ಟೇ ಸರಳ. ಪರಿಸರ ಕಾಳಜಿ ಈಗಿನ ತುರ್ತು. ಮಕ್ಕಳಿಗೆ ಪರಿಸರ ಪ್ರಜ್ಞೆ, ಪರಿಸರ ಪ್ರೀತಿ ಬೆಳೆಸಿ ಅವರು ಆ ಪರಿಸರದೊಂದಿಗೆ ಹೇಗೆ ಹೊಂದಿಕೊಂಡು ಹೋಗಬೇಕೆಂಬುದನ್ನು ಪಾಠದ ಭಾಗವಾಗಿಯೇ ಕಲಿಸಬೇಕು. ವನಮಹೋತ್ಸವ, ವನ ಭೋಜನ, ಶೈಕ್ಷಣಿಕ ಪ್ರವಾಸದಂತಹ ನೈಜ ಅನುಭವ ನೀಡಿದರೆ ಆ ವಿದ್ಯಾರ್ಥಿ ನಿಜವಾಗಲೂ ಪರಿಸರವನ್ನು ಪ್ರೀತಿಸಲಾರಂಭಿಸುತ್ತಾನೆ. ಹೀಗೆ ವಿದ್ಯಾರ್ಥಿಗಳಲ್ಲಿ ನೈಜ ಅನುಭವದ ಮೂಲಕ ಹುಟ್ಟುವ ಆಸಕ್ತಿ,ಆ ಆಸಕ್ತಿ ಹುಟ್ಟಿಸುವ ಪ್ರೀತಿ ಇದೆಯಲ್ಲ,ಅದು ಅಸಾಧ್ಯವನ್ನು ಸಾಧ್ಯವಾಗಿಸುತ್ತದೆ. 40 ಗಿಡಗಳಿಂದ ನಮ್ಮ ಶಾಲೆ ಸದಾಕಾಲ ಕಂಗೊಳಿಸತೊಡಗಿತು. ಕೆಲ ದಿನಗಳ ನಂತರ ಮಾನ್ಯ ಬಿ.ಇ.ಓ ಅವರು ಸಂದರ್ಶಿಸಿ ಮೆಚ್ಚುಗೆ ಕೂಡ ವ್ಯಕ್ತಪಡಿಸಿದರು. ಪರಿಸರ ಮಿತ್ರ ಪ್ರಶಸ್ತಿ ಪಡೆಯುವ ಮಟ್ಟಿಗೆ ನಮ್ಮ ಶಾಲೆ ಬದಲಾಗಲಿಲ್ಲ. ಆದರೆ ಪ್ರೀತಿಯಿಂದ ಬೆಳೆಸಿದ ಆ ಸಸಿಗಳ ಹಾಗೂ ನಮ್ಮ ವಿದ್ಯಾರ್ಥಿಗಳ ನಡುವೆ ಯಾವುದೇ ವ್ಯತ್ಯಾಸ ತೋರಲಿಲ್ಲ‌‌..ಕಲಿಸಲು ಹೋಗಿ ಕಲಿತಿದ್ದಾಯಿತು.ರಾಷ್ಟ್ರ ಕವಿ ಜಿ.ಎಸ್.ಎಸ್ ಅವರ ಕವಿತೆಯಲ್ಲಿನ ಈ ಸಾಲು ಸದಾ ನಮ್ಮನ್ನು ಕಾಡಬೇಕು..ಪ್ರೀತಿ ಇಲ್ಲದ ಮೇಲೆ ಹೂವು ಅರಳಿತು ಹೇಗೆ..? ಮುಂದುವರೆದು
ಕಲ್ಲು ಕರಗಿತು ಹೇಗೆ..?

©ಲೇಖಕರು : ಸಚಿನ್ ಕುಮಾರ ಬ.ಹಿರೇಮಠ

ಫೇಸ್‌ಬುಕ್ ಪಾಠಟಿಪ್ಪಣಿ - 12 ಮತ್ತೆ ಶುರುವಾಯಿತು ಶಾಲಾ ಶ್ರದ್ಧಾ ವಾಚನಾಲಯ




ಶಾಲೆಗಳಲ್ಲಿ ಪೂರಕ ಓದಿಗಾಗಿ ಗ್ರಂಥಾಲಯವಿರಬೇಕು ಎಂಬುದು ಈ ಹಿಂದೆ ಎನ್.ಸಿ.ಎಫ್ ಆಶಯಗಳಲ್ಲೊಂದಾಗಿತ್ತು. ಅದರಂತೆ ಆರ್.ಟಿ.ಇ ಕಾಯ್ದೆ ಅನುಸಾರ ಪ್ರತಿ ಶಾಲೆಯಲ್ಲಿ ಕಡ್ಡಾಯವಾಗಿ ಒಂದು ಗ್ರಂಥಾಲಯವಿರಬೇಕು. ನಮ್ಮ ರಾಜ್ಯದ ಬಹುತೇಕ ಶಾಲೆಗಳಲ್ಲಿ ಗ್ರಂಥಾಲಯ ಸಕ್ರಿಯವಾಗಿದೆ. ಆದರೆ ಸರ್ಕಾರಿ ಶಾಲೆಗಳ ವಿಷಯಕ್ಕೆ ಬಂದಾಗ ಸ್ವಲ್ಪ ಯೋಚಿಸುವಂತಾಗಿದೆ. ಗ್ರಂಥಾಲಯ ಮಾಹಿತಿ ಕೇಳಿದಾಗ ಇದ್ದೂ ಇಲ್ಲದಂತೆ ಅಥವಾ ಇಲ್ಲದೆಯೂ ಇದ್ದಂತೆ ಮಾಹಿತಿ ನೀಡಲಾಗುತ್ತದೆ. ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ ನನಗೆ ಸರಿಯಾಗಿ ನೆನಪಿದೆ. ನಮಗೆ ಪುಸ್ತಕಗಳನ್ನು ಮನೆಗೆ ಓದಲು ಕೊಡುತ್ತಿದ್ದರು. ಒಬ್ಬ ಶಿಕ್ಷಕರು ನಿಯಮಿತವಾಗಿ ಈ ಪ್ರಕ್ರಿಯೆಯನ್ನು ನಿರ್ವಹಿಸುತ್ತಿದ್ದರು. ಹಾಗೇ ನಾವು ಪಡೆದುಕೊಂಡ ಪುಸ್ತಕಗಳಲ್ಲಿ ಬಹುಪಾಲು ರಾಷ್ಟ್ರ ನಾಯಕರ ಜೀವನ ಚರಿತ್ರೆಗಳಾಗಿರುತ್ತಿದ್ದವು. ಉಳಿದಂತೆ ಕತೆ ಪುಸ್ತಕಗಳು. ಸದ್ಯ ನಮ್ಮ ಸರ್ಕಾರಿ ಶಾಲೆಗಳಲ್ಲಿ ಗ್ರಂಥಾಲಯದ ಸದ್ಬಳಕೆಯನ್ನು ಸಾರುವ 'ತೆಗೆ ಪುಸ್ತಕ ಹೊರಗೆ' ಎಂಬ ಇಪ್ಪತ್ತು ಅಂಶಗಳ ಕಾರ್ಯಕ್ರಮಗಳಲ್ಲೊಂದಾಗ ಅಂಶವು ಮಾಸಿ ಹೋಗಿದೆ‌.

ಇದಕ್ಕೆ ಕಾರಣಗಳೂ ಉಂಟು. ಸ್ಥಳಾವಕಾಶದ ಕೊರತೆ. ಏಕೋಪಾಧ್ಯಯ ಶಾಲೆಗಳಿರುವುದು. ಕಾರ್ಯಬಾಹುಳ್ಯದ ಒತ್ತಡ, ನಿರ್ವಹಣೆಯ ಅರಿವಿಲ್ಲದಿರುವುದು ಇತ್ಯಾದಿ. ಆದರೆ ಪರಿಣಾಮಕಾರಿ ಅನುಷ್ಠಾನ  ಎಂತಹ ಬದಲಾವಣೆ ತರಬಲ್ಲುದು ಎಂಬುದು ಊಹೆಗೂ ನಿಲುಕದ್ದು. ನಮ್ಮ ಶಾಲೆಯ ಕತೆಯೂ ಹೀಗೆ ಆಗಿತ್ತು. ಸ್ಥಳಾವಕಾಶದ ಕೊರತೆ ಇರುವ ಕಾರಣ ಸುಮಾರು ಪುಸ್ತಕಗಳನ್ನು ಒಂದು ಅಲ್ಮೇರಾದಲ್ಲಿ ಭದ್ರವಾಗಿಡಲಾಗಿತ್ತು. ಮುಖ್ಯಗುರುಗಳ ಸುಪರ್ದಿಯಲ್ಲಿದ್ದ ಪುಸ್ತಕಗಳು ವರುಷಗಳ ವರೆಗೂ ಧೂಳುಂಡಿದ್ದವು. 2012 ರಲ್ಲಿ ಶಿಕ್ಷಣ ಇಲಾಖೆ ಶಾಲಾ ಶ್ರದ್ಧಾ ವಾಚನಾಲಯ ಎಂಬ ವಿಶಿಷ್ಠ ಕಾರ್ಯಕ್ರಮ ಪರಿಚಯಿಸುವುದರ ಮೂಲಕ ಶಾಲೆಗಳಲ್ಲಿನ ಗ್ರಂಥಾಲಯಗಳಿಗೆ ಮರು ಜೀವ ನೀಡಿತ್ತು. ಈ ನಿಟ್ಟಿನಲ್ಲಿ ನಮ್ಮ ಮುಖ್ಯಗುರುಗಳ ಗ್ರಂಥಾಲಯ ನಿರ್ವಹಣೆಯನ್ನು ನನಗೆ ವಹಿಸಿಕೊಟ್ಟರು. ಮೊದಲಬಾರಿಗೆ ಗ್ರಂಥಾಲಯ ನಿರ್ವಹಣಾ ವಹಿ ಜೀವ ಪಡೆಯಿತು.

ಗ್ರಂಥಾಲಯ ಪುಸ್ತಕ ಖರೀದಿಗಾಗಿ ಸರ್ವ ಶಿಕ್ಷಣ ಅಭಿಯಾನದಡಿಯಲ್ಲಿ ಪ್ರತಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ 10,000 ರೂ ಗಳ ಅನುದಾನ ಜಮೆ ಮಾಡಲಾಗಿತ್ತು. ಎಸ್.ಡಿ.ಎಂ.ಸಿ ಅವರ ಅನುಮೋದನೆಯಿಂದಿಗೆ ಒಂದು ದಿನ ಕಲಬುರಗಿಯ  ವಿವಿಧ ಪುಸ್ತಕ ಮಳಿಗೆಗಳನ್ನು ಸಂಪರ್ಕಿಸಿ ನಾವು ಕೊಳ್ಳಲು ಬಯಸಿದ್ದ ಪುಸ್ತಕಗಳ ಪಟ್ಟಿ ನೀಡಲಾಯಿತು. ಭಾಗಶಃ ಲಭ್ಯವಿರುವ ಮಳಿಗೆಯಿಂದ ಸುಮಾರು 1000 ಪುಸ್ತಕಗಳನ್ನು ಖರೀದಿಸಲಾಯಿತು. ಒಂದು ಭಾನುವಾರ ಎಲ್ಲ ಶಿಕ್ಷಕರು ಹಾಗೂ 7 ನೆಯ ತರಗತಿ ವಿದ್ಯಾರ್ಥಿಗಳ ಸೇರಿ ಎಲ್ಲ ಪುಸ್ತಕಗಳನ್ನು ಕ್ಷೇತ್ರದನುಸಾರ ಪ್ರತ್ಯೇಕಿಸಿದೆವು.

ಕಥಾ ಪುಸ್ತಕಗಳು
ಪ್ರಬಂಧಗಳು
ಜೀವನ ಚರಿತ್ರೆಗಳು
ಕವಿತೆ ಸಂಕಲನಗಳು
ಕಾಮಿಕ್ಸ್
ವಿಜ್ಞಾನ ಬರಹಗಳು
ಇಂಗ್ಲಿಷ್ ಗ್ರಾಮರ್
ಆರೋಗ್ಯ ಪುಸ್ರಕಗಳು
ವಚನ ಸಂಗ್ರಹ
ನುಡಿಮುತ್ತುಗಳು
ಸಂದರ್ಭ ಸೇವೆ ಪುಸ್ತಕಗಳು

ಹೀಗೆ ವಿಭಾಗಿಸಿ ಇದ್ದ ಒಂದೇ ಒಂದು ಅಲ್ಮೇರಾದಲ್ಲಿ ಜೋಡಿಸಿಡಲಾಯಿತು. ಇದರಿಂದ ದೊಡ್ಡ ದೊಡ್ಡ ಗ್ರಂಥಾಲಯಗಳಲ್ಲಿ ಹೇಗೆ ಕೃತಿ ವಿಂಗಡಣೆಯಾಗುತ್ತದೆ ಎಂಬುದನ್ನು ವಿದ್ಯಾರ್ಥಿಗಳು ಅರಿತುಕೊಂಡಂತಾಯಿತು. ಸಂದರ್ಭ ಸೇವೆ ಪುಸ್ತಕಗಳನ್ನು ಹೊರತು ಪಡಿಸಿ ಉಳಿದ ಪುಸ್ತಕಗಳನ್ನು ಮಕ್ಕಳಿಗೆ ಓದಲು ನೀಡುವ ನಿರ್ಧಾರ ಮಾಡಲಾಯಿತು. ಪ್ರತಿ ಸೋಮವಾರ ನಾಲ್ಕನೆಯ ತರಗತಿ ವಿದ್ಯಾರ್ಥಿಗಳಿಗೆ,ಮಂಗಳವಾರ ಐದನೆಯ ತರಗತಿ ವಿದ್ಯಾರ್ಥಿಗಳಿಗೆ ಹೀಗೆ ಶುಕ್ರವಾರದ ವರೆಗೂ ವಿವಿಧ ತರಗತಿಗೆ ಪುಸ್ತಕ ನೀಡುವುದು. ಅಲ್ಲಿಂದ ಒಂದು ವಾರದ ವರಗೆ ಓದಿ ಮರಳಿಸಲು ಸೂಚಿಸಲಾಯಿತು. ಶನಿವಾರ ತಾವು ಓದಿದ ಪುಸ್ತಕದ ಮೇಲೆ ಚರ್ಚೆ ಮಾಡುವ ಅವಕಾಶ.ಪುಸ್ತಕ ಮರಳಿ ನೀಡುವಾಗ ಆ ಪುಸ್ತಕದ ಕುರಿತಾದ ಮೆಚ್ಚುಗೆ/ವಿಮರ್ಶೆ ರೂಪದ ಬರೆಹವನ್ನು ವಿದ್ಯಾರ್ಥಿಗಳು ನೀಡಬೇಕಿತ್ತು.  ಇದರಿಂದ ವಿದ್ಯಾರ್ಥಿಗಳ ವರ್ತನೆ ಕೂಡ ಬದಲಾಗತೊಡಗಿತು. ಏನೂ ಓದಲಾಗದ ವಿದ್ಯಾರ್ಥಿಗಳು ಪ್ರಯತ್ನವಾದಿಗಳಾದರು. ಓದಿದವರು ಅಭಿಪ್ರಾಯ ವ್ಯಕ್ತಪಡಿಸ ತೊಡಗಿದರು. ಇದೆಲ್ಲದರ ಪರಿಣಾಮ ನಾವು ನಮ್ಮ ಶಾಲೆಯಿಂದ ಚಿಣ್ಣರ ಚಿತ್ತಾರ ಎಂಬ ಮಾಸಪತ್ರಿಕೆ ಹಾಗೂ ಇಂಚರ ಎಂಬ ಗೋಡೆ ಪತ್ರಿಕೆ ತಯಾರಿಸಲು ಸಾಧ್ಯವಾಯಿತು. ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಓದಿಕೊಳ್ಳಲು ಪ್ರತ್ಯೇಕವಾದ ಗ್ರಂಥಾಲಯ ಇಲ್ಲ. ಆದರೆ ಮುಖ್ಯಗುರುಗಳ ಕೊಠಡಿಯ ಒಂದು ಭಾಗದಲ್ಲಿ ಈ ಪುಸ್ತಕ ಕೊಡು ಕೊಳ್ಳುವಿಕೆ ಹಾಗೂ ಓದು ಆರಂಭವಾಗಿತ್ತು. ಪ್ರಾಥಮಿಕ ಹಂತದ ವಿದ್ಯಾರ್ಥಿಗಳಿಗೆ ಕತೆ ಮತ್ತು ಕಾಮಿಕ್ಸ್ ಇಷ್ಟವಾದರೆ ಹಿರಿಯ ಪ್ರಾಥಮಿಕ ಹಂತದ ವಿದ್ಯಾರ್ಥಿಗಳಿಗೆ ಜೀವನ ಚರಿತ್ರೆ ಹಾಗೂ ಪ್ರಬಂಧಗಳು ಇಷ್ಟವಾಗುತ್ತಿದ್ದವು. ನಾನು ರಜೆಯಲ್ಲಿದ್ದಾಗ ವಿದ್ಯಾರ್ಥಿ ಮಂತ್ರಿಮಂಡಲದ ಮಂತ್ರಿಯೊಬ್ಬ ಹಿರಿಯ ಶಿಕ್ಷಕರ ಸಹಾಯದೊಂದಿಗೆ ಗ್ರಂಥ ವಿತರಣಾ ವಹಿಯ ನಿರ್ವಹಣೆ ಮಾಡುತ್ತಿದ್ದ. ಓದುವ ಕಲೆಯ ಬಗ್ಗೆ ಪ್ರತಿ ವಾರ ಚರ್ಚೆಯಾಗುತ್ತಿತ್ತು. ತೀರಾ ಓದಲು ಬಾರದ ವಿದ್ಯಾರ್ಥಿಗಳಿಗೆ ಅಕ್ಷರ ಫೌಂಡೇಷನ್ನಿನವರು ಸರಬುರಾಜು ಮಾಡಿದ್ದ ಓದುವೆ ನಾನು ಎಂಬ ಕಲಿಕಾ ಕಾರ್ಡ್ ಗಳನ್ನು ನೀಡಿ ಓದಿಸಲಾಗುತ್ತಿತ್ತು. ಮುಂದುವರೆದು ಗ್ರಾಮದಲ್ಲಿನ ಮಾಜಿ ವಿದ್ಯಾರ್ಥಿಗಳಿಗೂ ಹಾಗೂ ಕೆಲ ಗ್ರಾಮದ ಯುವಕರಿಗೂ ನಮ್ಮ ಶಾಲಾ ಗ್ರಂಥಾಲಯ ಸದ್ಬಳಕೆಯಾಗತೊಡಗಿತು. ದಿನ ನಿತ್ಯ ಎರಡು ತರಹದ ನಿಯತಕಾಲಿಕೆಗಳು, ಬಾಲ ವಿಜ್ಞಾನ, ಜೀವನ ಶಿಕ್ಷಣ, ಶಿಕ್ಷಣ ವಾರ್ತೆ,ಶಿಕ್ಷಣ ಶಿಲ್ಪಿ ಮುಂತಾದ ಮಾಸಪತ್ರಿಕೆಗಳು ನಮ್ಮ ಶಾಲಾ ಗ್ರಂಥಾಲಯದಲ್ಲಿದ್ದವು.

ಇಲ್ಲಿ ಹೇಳುವುದಿಷ್ಟೆ. ನಾವು ಶಿಕ್ಷಕರು ಮಕ್ಕಳ ಓದಿಗೆ ಒಂದು ವೇದಿಕೆ ಸೃಷ್ಟಿ ಮಾಡಿಕೊಟ್ಟರೆ ಸಾಕು. ವಿದ್ಯಾರ್ಥಿಗಳು ಸರಾಗವಾಗಿ ಸಾಗಿಬಿಡುತ್ತಾರೆ. ಒಂದಿಷ್ಟು ಸಮಯ ಹೊಂದಾಣಿಕೆ ಮಾಡಿಕೊಂಡು ಇಂತಹ ಕಾರ್ಯಕ್ರಮಗಳನ್ನು ಜೀವಂತವಾಗಿಟ್ಟರೆ ಬಹಳ ಪರಿಣಾಮಕಾರಿ ಫಲಿತಾಂಶ ಪಢಯಬಹುದಾಗಿದೆ.  ಬಹಳಷ್ಟು ಸಲ ಪ್ರಯತ್ನಗಳು ಫಲ ನೀಡುವುದಿಲ್ಲ. ಆದರೆ ನಂಬಿ ಕೆಟ್ಟವರಿಲ್ಲ..

@ಲೇಖಕರು : ಸಚಿನ್ ಕುಮಾರ ಹಿರೇಮಠ

Wednesday, 29 May 2019

ಶಾಲಾ ಪ್ರಾರಂಭದ ಶೈಕ್ಷಣಿಕ ದಾಖಲೆಗಳು

ಆತ್ಮೀಯ ಎಲ್ಲ ಶಿಕ್ಷಕ ಮಿತ್ರರೇ
 ೨೦೧೯-೨೦ ನೇ ಸಾಲಿನ ಪ್ರಾರಂಭದಲ್ಲಿ ಶಿಕ್ಷಕರು /ಪ್ರಧಾನ ಗುರುಗಳು ತಯಾರಿಸಿ ಕೊಳ್ಳಬೇಕಾದ ಶೈಕ್ಷಣಿಕ ದಾಖಲೆಗಳ ಪಟ್ಟಿ ನೀಡಲಾಗಿದೆ . ಈ ಎಲ್ಲ ದಾಖಲೆಗಳನ್ನು ತಯಾರಿಸಿಕೊಂಡು ಪ್ರಧಾನ ಗುರುಗಳು ಪರಿಶೀಲಿಸಿ ಸಹಿ ಮಾಡಬೇಕು . ಮಿಂಚಿನ ಸಂಚಾರದ ಸಮಯದಲ್ಲಿ ಎಲ್ಲ ಅಧಿಕಾರಿಗಳು ಈ ದಾಖಲೆಗಳನ್ನು ಕಡ್ಡಾಯವಾಗಿ ಪರಿಶೀಲಿಸುತ್ತಾರೆ .
೧) ವೇಳಾಪಟ್ಟಿ (ತರಗತಿ ವೇಳಾಪಟ್ಟಿ , ಶಾಲಾ ವೇಳಾಪಟ್ಟಿ , ಶಿಕ್ಷಕರ ವೇಳಾಪಟ್ಟಿ )
೨) ಶಿಕ್ಷಕರ ಪರಿಚಯ ಪಟ
 ೩)ಮಕ್ಕಳ ಪರಿಚಯ ಪಟ
೪)ಮಾಹೆವಾರು ಅಭ್ಯಾಸ ಅಂದಾಜು ಪತ್ರಿಕೆ
೫)ವಾರ್ಷಿಕ ಅಭ್ಯಾಸ ಅಂದಾಜು ಪತ್ರಿಕೆ
೬)ತರಗತಿವಾರು ಮಕ್ಕಳ ಹಾಜರಿ ಪುಸ್ತಕ
೭)ಶಿಕ್ಷಕರ ದಿನಚರಿ
೮)ಪ್ರಧಾನ ಗುರುಗಳ ದಿನಚರಿ
೯)ಸಹ ಶಿಕ್ಷಕರ ಪಾಠ ಬೋಧನೆ ವೀಕ್ಷಣಾ ವಹಿ
೧೦)ಶಿಕ್ಷಕರಿಗೆ /ಮಕ್ಕಳಿಗೆ ಸೂಚನೆ /ಜ್ಞಾಪನ ನೀಡುವ ಪುಸ್ತಕ
೧೧)ವಾರ್ಷಿಕ ಕ್ರಿಯಾ ಯೋಜನೆ
೧೨)ಶಾಲಾ ಪಂಚಾಂಗ
೧೩)ಶಾಲಾ ಶೈಕ್ಷಣಿಕ ಯೋಜನೆ
೧೪)ಶಾಲಾ ಅಭಿವೃದ್ಧಿ ಯೋಜನೆ
೧೫)ಶಾಲಾ ಸಂಸ್ಥಾ ಯೋಜನೆ
೧೬)ಸೇತುಬಂಧ ವಹಿ (ಪೂರ್ವ ಪರೀಕ್ಷೆ  /ಸಾಫಲ್ಯ ಪರೀಕ್ಷೆ )
೧೭)ಪರಿಹಾರ ಬೋಧನೆ ವಹಿ
೧೯)ವಿವಿಧ ಶಾಲಾ ಸಂಘಗಳ ಮಾಹಿತಿ
೨೦)ವಾರಕ್ಕೊಂದು ವಿಜ್ಞಾನ ಪ್ರಯೋಗ ಪುಸ್ತಕ
೨೧)ವಿದ್ಯಾರ್ಥಿ ಕೃತಿ ಸಂಪುಟ
೨೨)ನಲಿ ಕಲಿ ದಿನಚರಿ ,ಪ್ರಗತಿ ನೋಟ ,ಹವಾಮಾನ ನಕ್ಷೆ, ನಲಿಕಲಿ ಸಂದರ್ಶನ ಪುಸ್ತಕ
೨೩)ರೇಡಿಯೋ ಪಾಠದ ಪುಸ್ತಕ
೨೪)ಅವಶ್ಯಕ ಇತರೆ ಎಲ್ಲ ದಾಖಲೆಗಳು



Monday, 13 May 2019

ಫೇಸ್ ಬುಕ್ ಪಾಠಟಿಪ್ಪಣಿ-11 ಬೋರೆ ಹಣ್ಣಿನ ಕಳ್ಳರು...


ಹಳ್ಳಿಯ ಸರ್ಕಾರಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಮ್ಮಂತಹ ಶಿಕ್ಷಕರಿಗೆ ಅನೇಕ ಅನುಕೂಲಗಳಿವೆ. ಹಳ್ಳಿಗಳಲ್ಲಿನ ಜನರು ನಮ್ಮೊಂದಿಗೆ ವ್ಯವಹರಿಸುವಾಗ ಪ್ರತಿಫಲಾಪೇಕ್ಷೆ ಇಲ್ಲದೇ ಮುಕ್ತವಾಗಿ ಮಾತಾಗುತ್ತಾರೆ. ದೇವರ ಮುಂದೆ ನಿವೇದಿಸಿಕೊಳ್ಳುವಂತೆ ಎಲ್ಲವನ್ನೂ ನಮ್ಮೊಂದಿಗೆ ಹಂಚಿಕೊಳ್ಳುತ್ತಾರೆ‌. ಹಿರಿ ಮಗಳ ಚೊಚ್ಚಲ ಬಾಣಂತನವನ್ನು ಅಮೂಲಾಗ್ರವಾಗಿ ವಿವರಿಸುವುದರೊಂದಿಗೆ ನಮ್ಮ ಕುಲ ಗೋತ್ರದ ವರೆಗೂ ವಿಚಾರಿಸಿ ವಧು ವರಾನ್ವೇಷಣೆ ಕೂಡ ಮಾಡುತ್ತಾರೆ.
ತಾವು ಬೆಳೆದ ಫಸಲಿನಲ್ಲಿ ಒಂದಿಷ್ಟು ನೀಡಿ ದಾನಶೂರತನ ಮೆರೆಯುತ್ತಾರೆ. ತಮ್ಮ ಮನೆಯ ಶುಭಸಮಾರಂಭಗಳಿಗೆ ಜಾತ್ರೆ ಜಾಗರಣೆಗಳಿಗೆ ನಮ್ಮನ್ನು ಆಹ್ವಾನಿಸಿ ಆದರಿಸುತ್ತಾರೆ. ನಮ್ಮ ಮನೆಯ ಸಮಾರಂಭಗಳಿಗೂ ಗಾಡಿ ಕಟ್ಟಿ(ಮಾಡಿ)ಕೊಂಡು ಆಗಮಿಸಿ ಆಶೀರ್ವದಿಸುತ್ತಾರೆ.
'ಪಾಪ..! ಸಿಟಿಲಿ ಬೆಳೆದವರು.. ಹೊಲಪಲ ಗೊತ್ತಿಲ್ಲ..ತುಸು ಕಾಳು ಕಡಿ, ಹಣ್ಣು ಕಾಯಿ,ಹಾಲು-ಹೈನು ತಿನ್ನಲಿ' ಅಂತ ಹಾರೈಸುತ್ತಾರೆ. ಹೀಗಾಗಿ ಹಳ್ಳಿಮೇಷ್ಟ್ರುಗಳಿಗೆ ಗ್ರಾಮದ ಜನರಿಂದ  ತುಸು ಪಾರುಪತ್ಯ ಜಾಸ್ತಿನೇ.

ಹೀಗಿರುವಾಗ ನಮ್ಮ ಶಾಲೆಯ ಮುಂದಿ‌ನ ಹೊಲದಲ್ಲಿ ಒಂದು ಬೋರೆ ಹಣ್ಣಿನ(ಬಾರಿ ಕಾಯಿ) ಗಿಡವಿತ್ತು. ಕೆಲ ವಿದ್ಯಾರ್ಥಿಗಳು ಮಧ್ಯಾಹ್ನ ಊಟ ಮುಗಿಸಿ ಆ ಗಿಡಕ್ಕೆ ಕಲ್ಲು ಬೀರಿ ಹಣ್ಣುಗಳನ್ನು ಜೇಬಿನಲ್ಲಿಳಿಸಿ ಶಾಲೆಗೆ ಹಾಜರಾಗುತ್ತಿದ್ದರು. ತರಗತಿ ಪ್ರಾರಂಭದ ಮುನ್ನ ಅವರು ತಿಂದ ಬೋರೆ ಹಣ್ಣುಗಳು ತನ್ನ ತಿರುಳು ಕಳೆದುಕೊಂಡು ಬೀಜವಾಗಿ ಬೆಂಚಿನ ಅಂಚಿಗೋ, ಬೆಂಚಿನ ಸುತ್ತಲೋ ಬಿದ್ದಿರುತ್ತಿದ್ದವು. ಬೆಳಿಗ್ಗೆ ಅವನ್ನು ಗುಡಿಸಲು ಬೇರೆ ವಿದ್ಯಾರ್ಥಿಗಳು(ಅಥವಾ ಅದೇ ವಿದ್ಯಾರ್ಥಿಗಳು) ಹರಸಾಹಸ ಪಡುತ್ತಿದ್ದರು. ಎಷ್ಟು ಸಲ ಹೇಳಿದರೂ ಬೈದರೂ ಇದು ಮಾತ್ರ ಬದಲಾಗಲಿಲ್ಲ.. ಕೊನೆಗೆ ಕಿಟಕಿಯಾಚೆ ಎಸೆಯಲು ಹೋಗಿ ಮತ್ತೊಬ್ಬರ ಬೆಂಚಿನ ಸುತ್ತಲೂ ಬೀಳುತ್ತಿದ್ದವು. ಇದರಿಂದ ಬರಬರುತ್ತ ತರಗತಿ ಪ್ರಕ್ರಿಯೆಗೆ ತೊಂದರೆಯಾಗತೊಡಗಿತು. ಅಲ್ಲದೇ ಹೊಲದ ಮಾಲೀಕರೂ ಸಹ ಪದೇ ಪದೇ ತಾಕೀತು ಮಾಡಲಾರಂಭಿಸಿದರು. "ನೀವು ಮಾಸ್ತರಿಕಿ ಮಾಡ್ತಿದ್ದೀರೋ ಇಲ್ಲ ನಿದ್ದಿ ಮಾಡ್ತಿದ್ದೀರೋ. ಚುಕ್ಕೋಳು ಹೊಲಕ್ ಬಂದ ಗಿಡ ಎಲ್ಲ ಹಾಳ ಮಾಡಾತಾರ" ಅಂತ ನಮಗೇ ಬೈದು ಹೋಗುತ್ತಿದ್ದರು.

"ನಿಮಗ ಬೇಕಾದ್ರ ಹೇಳ್ರಿ ನಾವ ಕಿತ್ತಿ ಕೊಡ್ತೇವ್..ಆದ್ರ ಎಲ್ಲ ಚುಕ್ಕೋಳನ ಬಿಡಬ್ಯಾಡ್ರಿ" ಅಂತ ಅವರ ಅಂಬೋಣ. ಹೀಗಾಗಿ  ಒಂದು ನಿಯಮ ಮಾಡಲಾಯಿತು. ಊಟದ ಅವಧಿಯಲ್ಲಿ ಮಾತ್ರ ಬೋರೆ ಹಣ್ಣು ತಿನ್ನುವುದು ಮತ್ತು ತರಗತಿ ಕೋಣೆಯಲ್ಲಿ ಒಂದೂ ಬೀಜ  ಉಳಿಯದಂತೆ ಸ್ವಚ್ಛಗೊಳಿಸುವುದು. ಕೆಲವೇ ವಿದ್ಯಾರ್ಥಿಗಳು ಹೊಲದ ಮಾಲೀಕರಿಂದ ಹಣ್ಣು ಪಡೆದು ಅದರಲ್ಲೇ ನಾಲ್ಕಾರು ಹಣ್ಣುಗಳನ್ನು ತರಗತಿಯ ಇತರ ವಿದ್ಯಾರ್ಥಿಗಳಿಗೂ ಹಾಗೂ ಕೆಲ ಹಣ್ಣುಗಳನ್ನು ಶಿಕ್ಷಕರಿಗೂ ನೀಡಿ ತಿನ್ನುವುದು. ಏಕೆಂದರೆ ಇದರಿಂದ ಎಲ್ಲ ವಿದ್ಯಾರ್ಥಿಗಳೂ ಬೋರೆ ಹಣ್ಣಿನ ಗಿಡಕ್ಕೆ ಹೋಗಿ ತರಲೆ ಮಾಡುವುದು ತಪ್ಪುತ್ತಿತ್ತು.

ಆದರೆ ಮುಂದಿನ ವಾರದಲ್ಲಿ ಎಲ್ಲವೂ ತಲೆಕೆಳಗಾಯಿತು‌. ಕೆಲ ವಿದ್ಯಾರ್ಥಿಗಳು ಸೀದಾ ಹೋಗಿ "ನಮ್ಮ ಸರ್ರಿಗೆ ಬಾರಿಕಾಯಿ ಬೇಕಂತ್ರಿ..ಛೋಲೋ ಹಣ್ಣನೂ ಆರಿಸಿ ತೊಗೋತೀವ್ರಿ" ಅಂತ ಮಾಲೀಕರಿಗೆ ಹೇಳಿ ಅರ್ಧ ಕೆಜಿ ವರೆಗೆ ಬೋರೆ ಹಣ್ಣು ತಂದು ಎಲ್ಲವನ್ನೂ ತಾವೇ ತಿಂದು ಖಾಲಿ ಮಾಡಲು ಶುರು ಮಾಡಿದರು. ನಾವು ಆಗಾಗ ಆ ಮಾಲೀಕ ಕಂಡಾಗ "ಏನ್ರೀ ಈಗೇನ್ ತೊಂದ್ರಿಲ್ಲಲ..?" ಅಂತಂದಾಗ ಆ ಮಾಲೀಕ "ಹೇ.. ಚುಕ್ಕೋಳ ಭಾಳ ಶಾಣ್ಯಾ ಆಗ್ಯಾವ್ರೀ.. ಮೊದ್ಲಿನ್ಹಂಗ್ ಈಗ ಎಲ್ಲಾರು ಬರೂದಿಲ್ಲ..ಅಂದ್ಹಂಗ ನಮ್ಮ ಬಾರಿ ಕಾಯಿ ಹೆಂಗದಾವ್ರೀ?" ಅಂತಂದ್ರು. ನಾವು "ನಾವೇನು ತಿಂದಿಲ್ಲ..ಚುಕ್ಕೋಳ ಬಂದ್ರ ನಾಕ್ ಹಣ್ಣ ಕೊಡ್ರಿ.. ನಮಗೇನ್ ಬ್ಯಾಡ್ರಿ" ಅಂತಂದೆ.

"ಅರೇ‌‌.. ನೀವs ಹೇಳಿರೆಂತ ದಿನ ಬಂದ ಒಯ್ತಾರಲ್ರೀ.. ನಿಮಗs ಕೊಟ್ಟಿಲ್ಲೇನ್ರೀ" ಆತ ಅಂದ.

ನಮಗೆ  ಈಗ ಎಲ್ಲ ಅರ್ಥವಾಗತೊಡಗಿತು. ನಮ್ಮ ಹೆಸರು ಹೇಳಿ ಇವರು ದಿನಾ ಬೋರೆಹಣ್ಣು ಅಧಿಕೃತವಾಗಿ ಕದಿಯುತ್ತಿದ್ದಾರೆ ಅಂತ. ನಿಯಮಗಳು ಇರುವುದೇ ಉಲ್ಲಂಘಿಸುವುದಕ್ಕೆ ಎಂಬ ಆಂಗ್ಲ ಸೂಕ್ತಿಯಂತೆ ಈ ತರಲೆ ವಿದ್ಯಾರ್ಥಿಗಳು ನಮ್ಮ ಹೆಸರು ಹೇಳಿ ತಾವು ಹಣ್ಣು ತಿಂದು ತೇಗುತ್ತಿದ್ದರು. ಸದ್ಯದ ಪರಿಸ್ಥಿತಿಯೂ ಹಾಗೇ ಇದೆ. ಯಾರದೋ ಹೆಸರು ಹೇಳಿ ತಮ್ಮ ಕೆಲಸ ಮುಗಿಸಿಕೊಂಡು ಹೋಗುವ ಜನ‌ ಒಂದು ಕಡೆ. ಯಾರ ಹೆಸರಿನ  ಹಂಗಿಲ್ಲದೇ ಬದುಕುವ ಜನ ಇನ್ನೊಂದು ಕಡೆ‌. ಶಾಲೆಯ ಕೆಲ ನಿಯಮಗಳು ವಿದ್ಯಾರ್ಥಿಗಳನ್ನು ಸಂಪೂರ್ಣವಾಗಿ ಕಟ್ಟಿಹಾಕಲಾರವು. ಅವರ ಪ್ರಕಾರ ಅವರ ಆಸೆಯನ್ನು ಈಡೇರಿಸಿಕೊಳ್ಳಲು ನಮ್ಮ ಹೆಸರು ಸಹಾಯ ಮಾಡಿತಷ್ಟೇ. ನಮ್ಮ ಪ್ರಕಾರ ಅವರು ಬೋರೆ ಹಣ್ಣಿನ ಕಳ್ಳರು. ಅವರ ಪ್ರಕಾರ ಬೋರೆ ಹಣ್ಣು ತಿನ್ನಲೋಸುಗ ಒಂದು ರಕ್ಷಣಾತ್ಮಕ ಕಲೆಯ ಕಲಾಕಾರರು.

ಇಷ್ಟೆಲ್ಲ ಗೊತ್ತಾದ ಮೇಲೂ ನಾವು ಅವರನ್ನು ಬೈಯಲಿಲ್ಲ.. ಏಕೆಂದರೆ ಬಾಲ್ಯದ ಸವಿಗಳಲ್ಲೊಂದು ಅಪರೂಪ ಎಂಬ ಈ ಕಳ್ಳತನ ಇರಲೇಬೇಕು. ಕದ್ದು ತಿಂದರೂ ಮುದ್ದು ಮನಸಿನ ಮಕ್ಕಳ ಬೈಯ್ಯುವದಾದರೂ ಹೇಗೆ.? ನಾವೇನೂ ಕದ್ದಿಲ್ವ..? ಹೋಳಿ ಹುಣ್ಣಿಮೆಯಲ್ಲಿ ಕಾಮಣ್ಣನ ದಹಿಸಲು ಓಣಿಯ ಕುರುಳು ಕಟ್ಟಿಗೆ ಕದ್ದಿದ್ದೇವೆ. ಪಕ್ಕದ ಗೆಳೆಯನ ಉತ್ತರ ಪತ್ರಿಕೆಯಿಂದ ಉತ್ತರಗಳನ್ನು ಕದ್ದಿದ್ದೇವೆ. ಯಾರೂ ಇಲ್ಲದನ್ನೂ ಗಮನಿಸಿ ಕಡಲೆ ಸೊಪ್ಪು(ಸುಲಿಗಾಯಿ) ಕದ್ದಿದ್ದೇವೆ. ಆದರೆ ಆರೋಪ ನಮ್ಮ ಮೇಲಿಲ್ಲ.. ಬಂದರೂ ಕೇಳಲ್ಲ..ಹಾಗೇ ಶಾಲಾ ಜೀವನ. ಆದರೆ ನಮ್ಮ ಹೆಸರು ಹೇಳಿ ನಮಗೂ ಕೊಡದೇ ಎಲ್ಲ ಬೋರೆ ಹಣ್ಣು ತಿಂದ ಬೋರೆ ಹಣ್ಣಿನ ಕಳ್ಳರನ್ನು ಕ್ಷಮಿಸಬೇಕೆ? ಬೇಡವೇ? ಗೊತ್ತಾಗುತ್ತಿಲ್ಲ..

©ಲೇಖಕರು :ಸಚಿನ್ ಕುಮಾರ ಬ.ಹಿರೇಮಠ

Sunday, 12 May 2019

ಫೇಸ್ ಬುಕ್ ಪಾಠಟಿಪ್ಪಣಿ-೧೦ ಮನಸೊಂದಿದ್ದರೆ ಮಾರ್ಗವೂ ಉಂಟು...


ಶೈಕ್ಷಣಿಕ ಕ್ಷೇತ್ರದಲ್ಲಿ ಪಾಠಬೋಧನಾ ವಿಧಾನಗಳ ಜ್ಞಾನ(ಪೆಡಗಾಜಿ) ಅತ್ಯಂತ ಪ್ರಮುಖವಾದುದು. ಅದೇ ರೀತಿ ಪಠ್ಯದಲ್ಲಿನ ಪಠ್ಯವಸ್ತುವನ್ನು ವಿದ್ಯಾರ್ಥಿಗಳು ಸ್ವೀಕರಿಸುವಲ್ಲಿ ಈ ಪಾಠ ಬೋಧನಾ ವಿಧಾನ ಯಥೇಚ್ಛವಾಗಿ ಪ್ರಭಾವ ಬೀರಬಲ್ಲುದು. ಸದ್ಯದ‌ ಪರಿಸ್ಥಿತಿಯಲ್ಲಿ ಶಿಕ್ಷಕರಿಗೆ ಬೇಕಾಗಿದ್ದು TPACK. ಈಗಿನ ಬಿ.ಇಡಿಯಲ್ಲಿ ಇದರ ಪ್ರಾಮುಖ್ಯತೆಯನ್ನು ಸಾಮಾನ್ಯವಾಗಿ ಪ್ರಶಿಕ್ಷಣಾರ್ಥಿಗಳಿಗೆ ಕಲಿಸುತ್ತಾರೆ. ಇದನ್ನು ತಿಳಿಯುವ ಮುನ್ನ ಮೊದಲಿನಿಂದ ಮೂಲಭೂತ ಅಂಶಗಳನ್ನು ಸರಳವಾಗಿ ತಿಳಿದುಕೊಳ್ಳೋಣ.
 ಶಿಕ್ಷಕನಿಗೆ ಮೊದಲು ಪಠ್ಯವಸ್ತುವಿನ ಜ್ಞಾನ ಇರಬೇಕು.ಇದನ್ನೇ ನಾವು Content Knowledge(CK) ಅಂತ ಕರೀತೇವೆ. ಅಂದರೆ ಕಲಿಸಬೇಕಾದ ವಿಷಯದ ಬಗ್ಗೆ ಸಂಪೂರ್ಣ ಜ್ಞಾನವಿರಬೇಕು. ಬರುಬರುತ್ತ ಇದು ಬದಲಾಯಿತು. ಪಠ್ಯವಸ್ತುವಿನ ಬಗ್ಗೆ ಜ್ಞಾನವಿದ್ದರೆ ಸಾಲದು. ಪಾಠಬೋಧನಾ ಜ್ಞಾನದೊಂದಿಗೆ ಪಠ್ಯವಸ್ತ್ತು ಜ್ಞಾನವಿರಬೇಕು.ಅಂದರೆ ಪಠ್ಯವಸ್ತುವನ್ನು ಯಾವ ಕಲಿಕಾ ವಿಧಾನಗಳ ಮೂಲಕ ಕಲಿಸಬೇಕೆಂಬುದರ ಬಗೆಗಿನ ಜ್ಞಾನ.  ಇದನ್ನೇ ನಾವು ಇಂಗ್ಲಿಷ್ನಲ್ಲಿ Pedagogical And Content Knowledge (PACK) ಎನ್ನುತ್ತೇವೆ. ಶೈಕ್ಷಣಿಕ ಸ್ಥಿತಿ ಗತಿ ಬದಲಾದಂತೆ ಇದೂ ಕೂಡ ಬರಬರುತ್ತ ಬದಲಾಯಿತು. ತಂತ್ರಜ್ಞಾನಾಧಾರಿತ ಪಾಠಬೋಧನಾ ಜ್ಞಾನಾಧಾರಿತ ಹಾಗೂ ಪಠ್ಯವಸ್ತು ಜ್ಞಾನವಿರುವ ವ್ಯವಸ್ಥೆ ಜಾರಿಯಾಯಿತು. ಪಾಠೋಬೋಧನಾ ಕಲಿಕಾ ವಿಧಾನಗಳಲ್ಲಿ ವ್ಯಾಪಕವಾಗಿ ತಂತ್ರಜ್ಞಾನದ ಬಳಕೆಯಾಗತೊಡಗಿತು. ಕಪ್ಪುಹಲಗೆಗಳೆಲ್ಲ ಶ್ವೇತ ಹಲಗೆ,ಹಸಿರು ಹಲಗೆಗಳಾದವು. ರೇಡಿಯೋ ಪಾಠಗಳು, ಟಿವಿ ಪಾಠಗಳು ತರಗತಿ ಕೋಣೆಗೆ ಲಗ್ಗೆ ಇಟ್ಟವು. ಕಂಪ್ಯೂಟರ್ ಹಾಗೂ ಮೈಕ್ರೋಫೋನ್ ಗಳು ತರಗತಿಯಲ್ಲಿ ವಿಜೃಂಭಿಸಲಾರಂಭಿಸಿದವು. ಪ್ರೊಜೆಕ್ಟರ್ ಗಳು ಜಗತ್ತನ್ನೇ ತರಗತಿಯ ಗೋಡೆಗಳ ಮೇಲೆ ತೋರಲಾರಂಭಿಸಿಸವು.  ಇದನ್ನೇ ನಾವು ಇಂಗ್ಲಿಷ್ನಲ್ಲಿ Technological Pedagogical And Content Knowledge(TPACK) ಅಂತ ಕರೀತೇವೆ.

ಹೀಗೆ ಮುಂದುವರೆದ TPACK ಅನ್ನು ನಮ್ಮ ಸರ್ಕಾರಿ ಶಾಲೆಗಳಲ್ಲಿ ಅಳವಡಿಸಿಕೊಳ್ಳುವುದು ತೀರಾ ದುರ್ಲಭದ ಮಾತಾಗಿತ್ತು. ಶಿಕ್ಷಕ ಅದೇ ಕಪ್ಪು ಹಲಗೆಯ ಮೇಲೆ ಪುಡಿಯಾಡುವ ಸೀಮೆಸುಣ್ಣ ಬಳಸಿ ಬಳಸಿ ಊಟದ ಹೊತ್ತಿಗೆ ಎರಡೆರೆಡು ಚೊಂಬು ನೀರು ಹೊಯ್ದುಕೊಳ್ಳಬೇಕಾಗಿತ್ತು. ಚಿತ್ರಪಟವನ್ನೋ ಅಥವಾ ಮಾರುದ್ದ ಮ್ಯಾಪ್ ಗಳನ್ನು ಬಳಸಿ ಭೂತಗನ್ನಡಿ ಬಳಸಿ ದೇಶ ಹುಡುಕಬೇಕಿತ್ತು. ಅಮೂರ್ತ ಪರಿಕಲ್ಪನೆಗಳ ಜಾಡಿನಲ್ಲಿರುವ ಗಣಿತ- ವಿಜ್ಞಾನ ವಿಷಯ ಬೋಧನೆಯಲ್ಲಿ ಶಿಕ್ಷಕ ಲಭ್ಯ ವಸ್ತುಗಳನ್ನ ಬಳಸಿ ಪಾಠಮಾಡುವಾಗ ಬಹಳ ಹೈರಾಣಾಗುತ್ತಿತ್ತು. ಈಗ ಎಲ್ಲವೂ ಬದಲಾಗುತ್ತಿದೆ. ಸೀಮಿತವಾಗಿ ಶಾಲೆಗಳಲ್ಲಿ ಹಸಿರು ಮತ್ತು ಶ್ವೇತ ಹಲಗೆಗಳು ರಾರಾಜಿಸುತ್ತಿವೆ. ದಾನಿಗಳಿಂದ ಹಾಗೂ ಸ್ವಂತ ಖರ್ಚಿನಲ್ಲೇ ಅನೇಕ ಜನ ಶಿಕ್ಷಕರು ಪಾಠೋಪಕರಣಗಳನ್ನು ತಯಾರಿಸುತ್ತಿದ್ದಾರೆ. ಕಂಪ್ಯೂಟರ್ ಪ್ರೊಜೆಕ್ಟರ್ ಬಳಸಿ ಒಂದು ಕೋಣೆಯನ್ನು ಸ್ಮಾರ್ಟ್ ಕ್ಲಾಸ್ ಮಾಡಿದ್ದಾರೆ. ಅನೇಕ ಆ್ಯಪ್ ಗಳನ್ನು ಬಳಸಿ ಅಂತರ್ಕ್ರಿಯಾತ್ಮಕ ಪಠ್ಯವಸ್ತುವನ್ನು ಅಳವಡಿಸಿಕೊಂಡಿದ್ದಾರೆ. ಇಷ್ಟೆಲ್ಲ ಯಾಕೆ ಬರೆಯಬೇಕಾಯಿತು ಎಂದರೆ ಅದು 2011ರ ಇಸವಿ. ನನ್ನ ಆತ್ಮೀಯ ಶಿಕ್ಷಕ ಮಿತ್ರರಾದ‌ ಸಂಗನಗೌಡ ಎಂಬುವರು ತಮ್ಮ ಕಿರಿಯ ಪ್ರಾಥಮಿಕ  ಶಾಲೆಗೆ ಮೂರು ಕಂಪ್ಯೂಟರ್ ಗಳನ್ನು ಇನ್ಫೋಸಿಸ್ ಪ್ರತಿಷ್ಠಾನದಿಂದ ದಾನವಾಗಿ ಪಡೆದುಕೊಂಡು ಮಕ್ಕಳಿಗೆ ಕಂಪ್ಯೂಟರ್ ಕಲಿಸಲಾರಂಭಿಸಿದ್ದರು. ನಾನೂ ಯಾಕೆ ಹೀಗೆ ಮಾಡಬಾರದು ಅಂತ ಅನ್ನಿಸಿತು.ನನ್ನ ಸಹೋದ್ಯೋಗಿಯಾಗಿದ್ದ ಗೋಣೆಪ್ಪ ಹಾಗೂ ಮಂಜುನಾಥ ಇವರ ಜತೆ ಚರ್ಚಿಸಿದಾಗ ಅವರೂ ಒಪ್ಪಿದರು. ಈ ಮೊದಲು ಗ್ರಾಮದ ದಾನಿಗಳಿಂದ ಒಂದು ಕಂಪ್ಯೂಟರ್ ಪಡೆಯಬೇಕೆಂಬ ಪ್ರಯತ್ನ ವಿಫಲವಾಗಿತ್ತು. ಇನ್ಫೋಸಿಸ್ ಮೇಲ್ ಗೆ ನಮ್ಮ ಶಾಲೆಯ ವಿವರವನ್ನು ಹಾಕಿ ವಿನಂತಿ ಪತ್ರ ಮೇಲ್ ಮಾಡಿದೆ. ಮೂರು ತಿಂಗಳಾದರೂ ಆ ಕಡೆಯಿಂದ ಪ್ರತ್ಯುತ್ತರ ಬರಲೇ ಇಲ್ಲ. ತುಂಬಾ ಬೇಜಾರಾಯಿತು. ಪದೇ ಪದೇ ಮೇಲ್ ಮಾಡಿದೆ. ಕೊನೆಗೊಂದು ದಿನ ಆ ಕಡೆಯಿಂದ ಮೇಲ್ ಬಂತು.

ಕೆಲವು ಷರತ್ತುಗಳ ಮೇರೆಗೆ ಜುಲೈ2013 ರಲ್ಲಿ ನಮ್ಮ ಶಾಲೆಗೆ 3 ಕಂಪ್ಯೂಟರ್ ಗಳು ಬಂದವು. ನಾವೆಲ್ಲ ಶಿಕ್ಷಕರು ಸೇರಿ ಪ್ರಿಂಟರ್ ,ಟೇಬಲ್ ತಂದೆವು. ನವ್ಹೆಂಬರ್ ತಿಂಗಳಿನಿಂದ ಕಂಪ್ಯೂಟರ್ ಬೇಸಿಕ್ ಕಲಿಸಲು ಶುರು ಮಾಡಿದೆವು. ಯ್ಯೂ ಟ್ಯೂಬಿನ ವಿಡಿಯೋಗಳ ಮೂಲಕ ನಮ್ಮ ಪಾಠ ಬೋಧನೆ ನಡೆಯತೊಡಗಿತು. ಮಕ್ಕಳ ಹಾಜರಾತಿ ಹೆಚ್ಚತೊಡಗಿತು. ವಿದ್ಯಾರ್ಥಿಗಳಲ್ಲಿ ಸಹಪಾಠಿ ಕಲಿಕೆಯಿಂದಾಗಿ ಬಹಳಷ್ಟು ಬದಲಾವಣೆಯಾಯಿತು. ಗೂಗಲ್ ಮ್ಯಾಪ್ ಮೂಲಕ ನಕಾಶೆ ಬೋಧನೆ ಸರಳವಾಯಿತು. ಅಮೂರ್ತ ಪರಿಕಲ್ಪನೆಗಳು ಕಂಪ್ಯೂಟರ್ ನ ವಿಡಿಯೋಗಳಿಂದಾಗಿ ಮಕ್ಕಳಿಗೆ ಮನಮುಟ್ಟುವಂತೆ ಅರ್ಥವಾಗತೊಡಗಿದವು.  ಪ್ರೊಜೆಕ್ಟರ್ ತಂದು ಸ್ಮಾರ್ಟ್ ಕ್ಲಾಸ್ ಮಾಡುವ ಕನಸೊಂದು ಹಣದ ಕೊರತೆಯಿಂದಾಗಿ ಅಲ್ಲೇ ನಿಂತಿತು.(ನಾನು ಸಿ.ಆರ್.ಪಿ ಆಗಿ ಆಯ್ಕೆಯಾದ ಮೇಲೆ ಆ ಶಾಲೆಯಿಂದ ಬೇರೆ ಕಡೆ ನಿಯುಕ್ತಿ ಹೊಂದಬೇಕಾಯಿತು)

ಮುಂದೊಂದು ದಿನ ನಮ್ಮಲ್ಲೂ ಸ್ಮಾರ್ಟ್ ಕ್ಲಾಸ್ ಆಗುತ್ತದೆ ಎಂಬ ನಿರೀಕ್ಷೆ ಇದೆ. ಬದಲಾವಣೆಗಳು ನಿಧಾನವಾದರೂ  ಪ್ರಧಾನವಾಗಿರಬೇಕು. ನಾವು ಶಿಕ್ಷಕರು ಮನಸ್ಸು ಮಾಡಿದರೆ ಜಗತ್ತನ್ನು ಅಂಗೈಲಿ ತೋರಿಸಬಹುದು. ಗ್ರಾಮದವರ ಸಹಕಾರವಿದ್ದರಂತೂ ನಮ್ಮ ಮುಂದೆ ಯಾವುದೂ ಅಸಾಧ್ಯವಲ್ಲ. ಈಗಿನ ಸಂದರ್ಭದಲ್ಲಿ ನಮ್ಮನ್ನು ನಾವು ಇಂದೀಕರಿಸಿಕೊಳ್ಳದಿದ್ದರೆ ಜಗತ್ತು ನಮ್ಮನ್ನು ನಿರ್ಲಕ್ಷಿಸುತ್ತದೆ. ನಮ್ಮ ಜೇವರ್ಗಿ ತಾಲೂಕಿನಲ್ಲಿನ ಕೆಲ ಶಿಕ್ಷಕ ಮಿತ್ರರು ನಿಜಕ್ಕೂ ತಮ್ಮ ಶಾಲೆಗಳನ್ನು ಸ್ಮಾರ್ಟ್ ಶಾಲೆಗಳಾಗಿ ಮಾಡಿದ್ದಾರೆ. ಅವರ ಯಶೋಗಾಥೆ ಬಗ್ಗೆ ಮತ್ತೇ ಮಾತಾಗುತ್ತೇನೆ. ಇದೇ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಸಹ ಅಜೀಂ ಪ್ರೇಮ್ ಜೀ ಪ್ರತಿಷ್ಠಾನದ ಸಹಯೋಗದೊಂದಿಗೆ ಶಾಲಾ ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮ ಆಯೋಜಿಸಿ ಮುಖ್ಯಗುರುಗಳಿಗೆ ತರಬೇತಿ ನೀಡಿತ್ತು. ಎಷ್ಟೋ ಕಡೆ ಭೌತಿಕ,ಶೈಕ್ಷಣಿಕ ಹಾಗೂ ಆರ್ಥಿಕ  ಸಂಪನ್ಮೂಲಗಳು ಹರಿದು ಬಂದವು. ಕೆಲವು ಕಡೆ ಯಶಸ್ಸು ದಕ್ಕಲಿಲ್ಲ.

"ಆಗದು ಎಂದು ಕೈ ಕಟ್ಟಿ ಕುಳಿತರೆ
ಸಾಗದು ಕೆಲಸವು ಮುಂದೆ
ಮನಸೊಂದಿದ್ದರೆ ಮಾರ್ಗವೂ ಉಂಟು
ಕೆಚ್ಚೆದೆ ಇರಬೇಕೆಂದೆಂದೂ"

ಎಂಬ ಗೀತೆಯಂತೆ  ಒಟ್ಟಿನಲ್ಲಿ ಹೇಳುವುದಾದರೆ ಎಲ್ಲದಕ್ಕೂ ಮನಸ್ಸು ಮಾಡಬೇಕು. ಒಂದು ಸುಂದರ ನಾಳೆಯ ನಿರ್ಮಾಣ ಕಾರ್ಯ ಶಿಕ್ಷಕ ಗುರುತರವಾದ ಜವಾಬ್ದಾರಿಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಅದು ಅನಿವಾರ್ಯವೂ ಆಗಿದೆ.. ಹೌದಲ್ಲವೇ?

©ಲೇಖಕರು : ಸಚಿನ್ ಕುಮಾರ ಬ‌.ಹಿರೇಮಠ

Tuesday, 30 April 2019

ಫೇಸ್ ಬುಕ್ ಪಾಠಟಿಪ್ಪಣಿ-೯ : ಲಕ್ಷ್ಮೀ ಎಂಬ ಗೋಪಾಲಕಿ


ಆ ಪುಟ್ಟ ಹುಡುಗಿಯ ಮುದ್ದು ಮುಖ ಈಗಲೂ ನೆನಪಿದೆ. ಬಹುಶಃ ಅವಳ ಭೇಟಿ ನನ್ನ ವೃತ್ತಿ ಬದುಕಿನ ಮಹತ್ತರ ತಿರುವಿಗೆ ಕಾರಣ ಎಂದರೂ ತಪ್ಪಾಗಲಾರದು. ನಲಿ ಕಲಿ ತರಗತಿಗೆ ದಾಖಲಾದಾಗ ಅಷ್ಟೇನೂ ಹಚ್ಚಿಕೊಳ್ಳದ ಅವಳು ಹಿರಿಯ ತರಗತಿಗೆ ಬಂದಾಗ ಗುರು ಶಿಷ್ಯ ಸಂಪ್ರದಾಯಕ್ಕೆ ಅವಳೊಂದು ಹೊಸ ಭಾಷ್ಯ ಬರೆದು ಹೋಗಿದ್ದಳು.
ಅವಳ ಹೆಸರು ಲಕ್ಷ್ಮೀ. ಸಾಕ್ಷಾತ್ ಶ್ರೀ ಲಕ್ಷ್ಮೀಯ ಕಳೆ ಮುಖದಲ್ಲಿ. ಆದರೆ ಹೆಸರಿನಲ್ಲೇನಿದೆ? ಎನ್ನುವಂತೆ ಅವಳ ಹೆಸರು ಲಕ್ಷ್ಮೀ ಆಗಿದ್ದರೂ ಮನೆಯಲ್ಲಿ ತೀರಾ ಬಡತನ. ಅವಿಭಕ್ತ ಕುಟುಂಬವಾದ್ದರಿಂದ ತಂದೆ ತಾಯಿ ಅಜ್ಜಿ ಸೇರಿದಂತೆ ಎಲ್ಲರೂ ಸ್ವಂತ ಹೊಲಮನೆ ಕೆಲಸದೊಂದಿಗೆ ಕೂಲಿ ಕೆಲಸಕ್ಕೂ ಹೋಗುತ್ತಿದ್ದರು. ಮನೆಯ ದನಕರುಗಳ ಜವಾಬ್ದಾರಿ ಈಕೆಗೆ. ಶಾಲೆಗೆ ಅನಿಯಮಿತವಾದ ಹಾಜರಿ. ಅವಳ ತಂದೆ ನಿಂಗಣ್ಣನಿಗೂ ಅಜ್ಜಿ ಕಾಳಮ್ಮನಿಗೂ ಅನೇಕ ಬಾರಿ ತಾಕೀತು ಮಾಡಿದ್ದೆವು. ನಮ್ಮ ಮುಂದೆ ಹ್ಞೂಂಗುಟ್ಟಿ ಮತ್ತದೇ ಕಾಯಕ. ಈಕೆ ಶಾಲೆಗೆ ಹಾಜರಾದಾಗ ಅದೇ ಸಿದ್ಧ ಉತ್ತರ."ಸರ್ ಮನ್ಯಾಗೆಲ್ರೂ ಹೊಲಕ್ಕ ಹೋಗಿದ್ರಿ..ನಾ ದನಕರ ಹೊಡ್ಕೊಂಡ್ ಹೋಗಿದ್ಯರೀ.."
ವಾರಕ್ಕೆ ಎರಡು ಮೂರು ದಿನ ಗೈರಾದರೂ ಲಕ್ಷ್ಮೀಯ ಬುದ್ಧಿಶಕ್ತಿ ಅಸಾಮಾನ್ಯವಾದುದು. ಮರುದಿನ ಶಾಲೆಗೆ ಬಂದಾಗ ಎಲ್ಲವನ್ನೂ ತನ್ನದೇ ಆದ ವೇಗದಲ್ಲಿ ಕಲಿತುಬಿಡುತ್ತಿದ್ದಳು. ಅವಳ ಗ್ರಹಿಕೆ ಎಷ್ಟು ತೀಕ್ಷ್ಣವಿತ್ತೆಂದರೆ ಅನೇಕ ಬಾರಿ ನಮ್ಮ ಸಣ್ತಪ್ಪುಗಳನ್ನು ಕಂಡು ಹಿಡಿದು ಬಿಡುತ್ತಿದ್ದಳು.
ಒಂದು ದಿನ ಗಣಿತ ಬೋಧನೆಯಲ್ಲಿ ವೃತ್ತದ ವಿಸ್ತೀರ್ಣ A= πr^2 ಹೇಗೆ ಬರುತ್ತೆ ಎಂಬುದನ್ನು ನಾನು ವಿವರಿಸುತ್ತಿದ್ದೆ. ವೃತ್ತವನ್ನು ಕೇಂದ್ರದಿಂದ ಪರಿಧಿಗನುಸಾರವಾಗಿ ಸಮನಾದ ತುಂಡು ಮಾಡಿ ಅವನ್ನು ಹಿಂದುಮುಂದಾಗಿ ಜೋಡಿಸಿ ಒಂದು ಆಯತಾಕಾರ ರಚನೆ ಮಾಡಿದಾಗ ಅದರ ಉದ್ದ ವೃತ್ತದ ಅರ್ಧ ಪರಿಧಿಗೂ, ಅಗಲ ವೃತ್ತದ ತ್ರಿಜ್ಯಕ್ಕೂ ಸಮನಾಗಿರುತ್ತದೆ  ಎಂದು ಹೇಳುವಷ್ಟರಲ್ಲಿ ಆಕೆ ಎದ್ದು ನಿಂತು, "ಸರ್ ಮುಂದಿಂದ ನಾ ಹೇಳ್ತೇನ್ರೀ" ಅಂದಳು.
"ಆಯ್ತು ಹೇಳವಾ" ಅಂತಂದೆ. ಆಕೆ ಯಥಾವತ್ತಾಗಿ ಸೂಕ್ತರೀತಿಯಲ್ಲಿ ವಿವರಿಸಿದಾಗ ನನಗೆ ಎಲ್ಲಿಲ್ಲದ ಖುಷಿ ಹಾಗೂ ಆಶ್ಚರ್ಯ. ನಾ ಕೇಳಿದೆ,
"ಲಕ್ಷ್ಮೀ ನಿನಗೆ ಇದೆಲ್ಲಾ ಹೇಗೆ ಗೊತ್ತು?"
"ಸರ್ ನಿ‌ನ್ನೆ ದನಕರ ಹೊಡ್ಕೊಂಡ್ ಹೋದಾಗ್ರೀ ಪುಸ್ತಕ್ ಒಯ್ದಿದ್ನ್ರೀ.. ಅಲ್ಲಿ ನೀವು ಇವತ್ತ ಈ ಪಾಠ ಹೇಳ್ತೀರಂತ ಗೊತ್ತಿತ್ರಿ.. ದನ ಮೇಯೂತನಕ ನಾನೂ ಗಣಿತ ಪಾಠ ಓದ್ಕೊಂಡ್ನಿರಿ.. ಪುಸ್ತಕದಾಗ ನೀವ್ ಹೇಳ್ದಂಗ ಕೊಟ್ಟಾರ್ರೀ.."
ಅಂತಂದಾಗ ನಾನು ಮನಸ್ಸಿನಲ್ಲೇ ಅಂದುಕೊಂಡೆ,
"ನಾ ಹೇಳ್ದಂಗಲ್ಲವಾ..ಅಲ್ಲಿ ಹೇಳ್ದಂಗನಾ ಹೇಳಬೇಕು"
ಆ ಹುಡುಗಿ ಹೀಗೆ ಪಠ್ಯಪುಸ್ತಕವನ್ನ ಮೊದಲೇ ಓದಿಕೊಂಡು ತನಗೆ ಎಷ್ಟು ಅರ್ಥವಾಗುತ್ತೋ ಅಷ್ಟನ್ನು ಎಲ್ಲ ಶಿಕ್ಷಕರೂ ಪಾಠ ಮಾಡುವ ಸಂದರ್ಭದಲ್ಲಿ ಅಭಿವ್ಯಕ್ತಿಸುತ್ತಿದ್ದಳು. ಅವಳು ಹೇಳುವಂತೆ ಅವಳಿಗೆ ದನ ಕರ ಕಾಯುವ ಕೆಲಸ ವಾರದಲ್ಲಿ ಎರಡು ಮೂರು ದಿನ ಖಾಯಮ್ಮಾಗಿತ್ತು. ಈ ನಿಟ್ಟಿನಲ್ಲೇ ಅವಳು ತಾನೂ ಅಂದು ತರಗತಿಯಲ್ಲಿ ಕಲಿಯಬೇಕಿದ್ದ ಪಾಠಗಳಿಗೆ ಸಂಬಂಧಿಸಿದ್ದಂತೆ ಪಠ್ಯಪುಸ್ತಕಗಳನ್ನು ನೀರು ಬುತ್ತಿಯ ಜತೆ ತಪ್ಪದೇ ಒಯ್ಯುತ್ತಿದ್ದಳಂತೆ. ತನಗೆ ಅರ್ಥವಾಗದ ಅಂಶಗಳನ್ನು ಗುರುತಿಸಿ ಮರುದಿನ‌ ತರಗತಿಯಲ್ಲಿ ನಮ್ಮೊಂದಿಗೆ ಚರ್ಚಿಸುತ್ತಿದ್ದಳು. ಈ ಕೌಶಲ ಅವಳಲ್ಲಿ ಹೇಗೆ ಬೆಳೆಯಿತೋ ಗೊತ್ತಿಲ್ಲ.. ನನ್ನ ಅಭಿಪ್ರಾಯದಲ್ಲಿ ನಲಿ ಕಲಿ ಕಲಿಕಾ ವಿಧಾನದ ಕೃಪೆ ಅನ್ನಿಸುತ್ತದೆ. ಅವಳು ಶಾಲೆಗೆ ಬಂದ ದಿನ ಮಾತ್ರ ಕರಾರುವಕ್ಕಾದ ದಿನಚರಿ ಅವಳದ್ದು. ಶಾಲಾವರಣ ಶುಚಿಗೊಳಿಸಿ, ಪ್ರಾರ್ಥನೆಗೆ ಎಲ್ಲರಿಗೂ ನೆರವಾಗಿ ಕೊನೆಯ ಬೆಲ್ಲಿನ ತನಕವೂ ಅವಳು ಮೈಯೆಲ್ಲ ಕಣ್ಣಾಗಿಸಿ ಜವಾಬ್ದಾರಿ ನಿಭಾಯಿಸುತ್ತಿದ್ದಳು. ಅವಳ ಆ ಸಮಯ ಪಾಲನೆ, ಬದ್ಧತೆ,ತರಗತಿಯಲ್ಲಿ ಅವಳ ವಿನಯವಂತಿಕೆ ಕೆಲವು ಸಲ ನನ್ನನ್ನೂ ನನ್ನ ವೃತ್ತಿ ವೈಕಲ್ಯಗಳನ್ನೂ ತಿದ್ದಿದವು. ಮೊದಲೇ ಹೇಳಿದಂತೆ ನನ್ನ ವೃತ್ತಿಪರತೆಯನ್ನು ಗಟ್ಟಿಗೊಳಿಸಲು ಈ ಲಕ್ಷ್ಮೀಯ ನಡೆನುಡಿಗಳೇ ಕಾರಣ. ಒಬ್ಬ 12 ವಯಸ್ಸಿನ ಹುಡುಗಿ ತಾನು ತನ್ನ ಮನೆಯ ಹಾಗೂ ಶೈಕ್ಷಣಿಕ ಒತ್ತಡಗಳನ್ನು ಇಷ್ಟು ಸಮತೋಲಿತವಾಗಿ ನಿಭಾಯಿಸುತ್ತಿದ್ದಾಳೆ ಎಂದರೆ ಶಿಕ್ಷಕರಾದ ನಮಗೇಕೆ ಆ ಬದ್ಧತೆಯಿಲ್ಲ..? ಅಂತ ಅನೇಕ ಬಾರಿ ಅನ್ನಿಸಿದ್ದುಂಟು. ಅವಳ ಕೈಬರಹವೂ ಅಷ್ಟೇ ಸುಂದರ. ಸಹಪಠ್ಯೇತರ ಚಟುವಟಿಕೆಗಳಲ್ಲೂ ಅವಳದ್ದು ಎತ್ತಿದ ಕೈ. ಆಟೋಟಗಳಲ್ಲಿ ಯಾವ ಗಂಡು ಮಕ್ಕಳಿಗೂ ಅವಳೂ ಕಡಿಮೆಯಿರಲಿಲ್ಲ. ಕೆಲವು ಸಲ ನಾನು,
"ಮುಂದಿನ ತಿಂಗಳು ನಾನು, ಗೋಣೆಪ್ಪ ಸರ್ ಹಾಗೂ ಮಂಜುನಾಥ್ ಸರ್ ಇವರೆಲ್ಲ ಬೇರೆ ಊರಿಗೆ ಟ್ರಾನ್ಸ್ಫರ್ ಆಗಿ ಹೋಗ್ತಿದ್ದೀವಿ" ಅಂತಂದಾಗ ಆಕೆ,
"ನೀವೆಲ್ಲಾ ಹೋದ್ರ ನಾ ಸಾಲಿ  ಬಿಟ್ಟಬಿಡತೀನ್ ನೋಡ್ರಿ ಸರ್.."
ಅಂತ ಬೆದರಿಸುತ್ತಿದ್ದಳು‌. ಹೀಗೆ ಅನ್ನುತ್ತಿದ್ದವಳು ಮತ್ತೇ ಎರಡು ಮೂರು ದಿನ ಗಾಯಬ್.
ಆಕೆಯ ಪೋಷಕರಿಗೆ ಅನೇಕಬಾರಿ ಅವಳನ್ನು ಶಾಲೆ ಬಿಡಿಸಿ ದನ ಕರು ಕಾಯಲು ಕಳಿಸಬೇಡಿ ಎಂದು ಹೇಳಿದ್ದಕ್ಕೆ ಅವಳ ಪೋಷಕರು,
"ಏನ್ ಮಾಡೂದ್ ಸರ್..ಮನಿ ಪರಿಸ್ಥಿತಿ ಹಂಗೈತಿ" ಅಂತ ಗೋಗರೆಯುತ್ತಿದ್ದರು. ಆದರೆ ಹಿರಿಯ ತರಗತಿಗೆ ಬಂದಾಗ ಅವಳ ಗೈರು ಕಡಿಮೆಯಾಗತೊಡಗಿತ್ತು.
ಎಂಟನೆಯ ತರಗತಿ ಬರುವ ಹೊತ್ತಿಗೆ ಅವಳ ಮನೆಯ ಪರಿಸ್ಥಿತಿ ಹೇಗಿತ್ತೊ ಗೊತ್ತಿಲ್ಲ.. ನಾನು ಅಲ್ಲಿಂದ ಬೇರೆ ಕಡೆ ಬಂದ ಮೇಲೆ ಅವಳ ಬಗ್ಗೆ ಯಾವ ಮಾಹಿತಿಯೂ ಸಿಗಲಿಲ್ಲ.. ಕೆಲವರನ್ನು ವಿಚಾರಿಸಿದಾಗ ಅವಳಿಗೆ ಶಾಲೆ ಬಿಡಿಸಿದ್ದಾರೆ ಅಂತ ಹೇಳಿದ್ರು. ಎಸ್ಎಸ್ಎಲ್ಸಿಯಲ್ಲಿ  ಚೆನ್ನಾಗಿ ಪರ್ಸೆಂಟೇಜ್ ಮಾಡಿದ್ದಾಳೆ ಆದ್ರೆ  ಮುಂದೆ ಓದೋದು ಬೇಡ ಅಂತ್ಹೇಳಿ ಮದುವೆಗೆ ತಯಾರಿ ನಡೆದಿದೆ ಅಂತ ಇನ್ನೊಬ್ರು ಹೇಳಿದ್ರು. ಬೇರೆ ಊರಲ್ಲಿ ಇದ್ದಾರೆ ಅಂತ ಮತ್ತೊಬ್ರು ಹೇಳಿದ್ರು. ಅವಳೆಲ್ಲೇ ಇರಲಿ ಅವಳು ತನ್ನ ಬದುಕಿಗಂತೂ ಭದ್ರ ನೆಲೆ ಕಂಡುಕೊಳ್ಳುತ್ತಾಳೆ ಎಂಬ ನಂಬಿಕೆಯಿದೆ‌. ಆದ್ರೆ ಹಳ್ಳಿಗಳಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಮೊಟಕುಗೊಳಿಸಿ ಮದುವೆಗೆ ದೂಡುವ ಕೆಟ್ಟ ಸಂಪ್ರದಾಯ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಇಂತಹ ಲಕ್ಷ್ಮೀಯರು ನಮ್ಮಂಥ ಶಿಕ್ಷಕರ ಮನಸ್ಸಲ್ಲಿ ಸದಾ ನೆನಪಾಗಿ ಇರುತ್ತಾರೆ. ನಮ್ಮ ವೃತ್ತಿಪರತೆಗೆ ಮನಸಿನೊಳಗಿಂದಲೇ ಮಾರ್ಗದರ್ಶನ ನೀಡುತ್ತಿರುತ್ತಾರೆ. ನಾವು ಅವರಿಗೆ ಕೆಲ ವರ್ಷಗಳವರೆಗೆ ಮಾತ್ರ ಗುರು. ಆದರೆ ಅವರೂ ನಮಗೆ ನಿರಂತರ ಗುರು.
©ಲೇಖಕರು : ಸಚಿನ್ ಕುಮಾರ ಬ.ಹಿರೇಮಠ

Monday, 22 April 2019

ಫೇಸ್ ಬುಕ್ ಪಾಠ ಟಿಪ್ಪಣಿ-೮ ತಿರುಪತಿ ಸಿದ್ದಪ್ಪ


ಏನಿದು..? ತಿರುಪತಿ ತಿಮ್ಮಪ್ಪ ಬರೆಯುವ ಬದಲು ತಿರುಪತಿ ಸಿದ್ದಪ್ಪ ಎಂದಾಗಿದೆ ಎಂದು ಅಂದಾಜಿಸಬೇಡಿ. ಇಂದು ನಾ ಬರೆಯ ಹೊರಟಿರುವ ನನ್ನ ಅಪರೂಪದ ವಿದ್ಯಾರ್ಥಿ ತಿರುಪತಿ ಸಿದ್ದಪ್ಪನ ಬಗ್ಗೆ. ಈ ವಿದ್ಯಾರ್ಥಿಗೆ ತಿರುಪತಿ ಎಂಬ ಅಡ್ಡ ಹೆಸರು ಬರಲು ಒಂದು ಸೋಜಿಗದ ಕಾರಣವಿದೆ. 2009 ನೆಯ ಇಸವಿ. ಒಂದನೆಯ ತರಗತಿ ಪ್ರವೇಶ ಮಾಡಿಕೊಳ್ಳುವ ಸಮಯದಲ್ಲಿ ಅರ್ಧ ಅಂಗಿಯಲ್ಲಿ ಬಂದ ಪುಟ್ಟ ಹುಡುಗ ಈ ಸಿದ್ದಪ್ಪ, ನೇರವಾಗಿ ಆಫೀಸಿನ ಟೇಬಲ್ಲಿನ ಮೇಲಿದ್ದ ಪೇಪರ್ ವೇಯ್ಟ್ ನೋಡಿ ಅವರಪ್ಪನಿಗೆ "ಅಪ್ಪ ಎಷ್ಟ ದೊಡ್ಡ ಗೋಟಿ(ಗೋಲಿ) ಐತಿ ನೋಡ್.. " ಅಂತ ತನ್ನ ಮುಗ್ಧತೆ ತೋರಿದ್ದ. ದಾಖಲಾತಿ ಪ್ರಕ್ರಿಯೆ ಮುಗಿದು, ತರಗತಿಯಲ್ಲಿ ಇವನನ್ನು ಕಂಡಾಗ ಹಿರಿಯ ತರಗತಿ ವಿದ್ಯಾರ್ಥಿಗಳು "ಸರ್ ಇಂವ ಸುದೀಪ್ ಪಿಚ್ಚರ ತಿರುಪತಿ ಡೈಲಾಗ್ ಹೇಳ್ತಾನ್ರೀ" ಅಂತಂದಾಗ ನಮಗೆಲ್ಲ ಕುತೂಹಲ.
"ಎಲ್ಲಿ ಡೈಲಾಗ್ ಹೇಳೋ" ಎಂದಾಗ ಥೇಟ್ ಸುದೀಪ್ ಅವರಂತೆಯೇ ತಿರುಪತಿ ಸಿನಿಮಾದ ಬಹುಪಾಲು ಡೈಲಾಗ್ ಗಳನ್ನು ನಿರರ್ಗಳವಾಗಿ ಅಭಿನಯಿಸುತ್ತಿದ್ದ‌. ಇವನಲ್ಲಿ ಉತ್ತಮ ಅಭಿನಯ ಕಲೆಯಿದೆ ಎಂಬುದು ಆಗ ಗೊತ್ತಾಗಿ ಅದೇ ವರ್ಷದ ಪ್ರತಿಭಾ ಕಾರಂಜಿಯಲ್ಲಿ ವಿವಿಧ ವಿಭಾಗಗಳಲ್ಲಿ ನಾಲ್ಕಾರು ಪ್ರಶಸ್ತಿ ಪಡೆದ. ಈ ತಿರುಪತಿ ಸಿನೆಮಾ ಸನ್ನಿವೇಶಗಳನ್ನು ನೈಜವಾಗಿ ಅಭಿನಯಿಸುತ್ತಿದ್ದುದರಿಂದಲೇ ಅವನಿಗೆ 'ತಿರುಪತಿ' ಎಂಬ ಅಡ್ಡ ಹೆಸರು ಬಂದದ್ದು.

ತಿರುಪತಿ ಸಿದ್ದಪ್ಪ ಇದೊಂದೇ ಕಾರಣಕ್ಕೆ ನಮ್ಮಿಷ್ಟದ ವಿದ್ಯಾರ್ಥಿ ಅಂತಲ್ಲ. ಅವನಿಂದ ನಾವೂ ಕಲಿತದ್ದೂ ಬಹಳ. ವಿಜ್ಞಾನದ ಶಿಕ್ಷಕನಾದ ನಾನು ನಲಿ ಕಲಿ ಶಿಕ್ಷಕರು ರಜೆಯ ಮೇಲಿದ್ದಾಗ ಆ ತರಗತಿ ಹೋಗಿ ಕೆಲವು ನೀತಿ ಕತೆಗಳನ್ನು, ಶಿಶುಪ್ರಾಸ,ಅಭಿನಯಗೀತೆಗಲಕನ್ನು ಕಲಿಸುತ್ತಿದ್ದೆ.(ನನಗೆ ಆಗ ನಲಿ ಕಲಿ ತರಬೇತಿ ಆಗಿರಲಿಲ್ಲ) ಹೀಗೆ ಕತೆ ಹೇಳುವಾಗ ಮಹಾತ್ಮ ಗಾಂಧಿ ಬಾಲ್ಯದಲ್ಲಿ ಸತ್ಯ ಹರಿಶ್ಚಂದ್ರ ನಾಟಕ ನೋಡಿ ಮುಂದೆಂದೂ ಸುಳ್ಳು ಹೇಳದೇ ಸತ್ಯ ಸಂಧರಾದ ಬಗ್ಗೆ ಹಾಗೂ ನಾವೂ ಸಹ ಎಂದೆಂದಿಗೂ ಸುಳ್ಳು ಹೇಳಬಾರದು ಎಂದು ಹೇಳಿದ್ದೆ. ಇದನ್ನು ಆತ ಎಷ್ಟು ಚೆನ್ನಾಗಿ ಪಾಲಿಸಿದ್ದನೆಂದರೆ ಒಂದು ದಿನ ಮೇಲಾಧಿಕಾರಿಗಳ ಸಂದರ್ಶನ ನೀಡಿದ್ದರು. ಅವರು ತರಗತಿಗೆ ಬಂದಾಗ ಹೋಗಿ ಹೋಗಿ ಇವನನ್ನೇ ಪ್ರಶ್ನಿಸಿದರು.
"ದಿನಾಲೂ ಸರ್ ಗೋಳು ನಿಮ್ ಕ್ಲಾಸಿಗೆ ಬರ್ತಾರಾ?"

"ಗೋಣಪ್ಪ ಸರ್ ಬಿಟ್ಟು ನಮ್ ಕ್ಲಾಸಿಗೆ ಯಾರೂ ಬರಲ್ಲ ಸರ್" ತಿರುಪತಿಯ ಉತ್ತರ..(ನಾನು ವಿಜ್ಞಾನ ಶಿಕ್ಷಕ ಎಂಬುದರ ಅರಿವು ಪಾಪ ಅವನಿಗಿರಲಿಲ್ಲ)

"ನೀ ಎರಡ ಮೂರ ದಿನ ಸಾಲಿಗ್ ಯಾಕ್ ಬಂದಿಲ್ಲ..?"

"ನಮ್ಮಪ್ಪ ಹೊಲಕ್ ಕರಕೊಂಡ್ ಹೋಗಿದ್ರಿ"

"ನೀ ಒಲ್ಲೆನಬೇಕು?"

"ಅಂದ್ನಿರೀ ಆದ್ರ ಹೊಲದಾಗ ಸದಿ(ಕಳೆ) ತೆಗ್ಯೂದೈತಿ. ಆಳ ಇಲ್ಲ..ಯಾಡ್ ದಿನ ಬಾ ಅಂದ್ರಿ ಅದ್ಕ ಹ್ವಾದ್ನಿರಿ"

"ನಿಮ್ಮ ಅಪ್ಪ ಕರದ್ರೂ ಹೊಲಕ್ ಹೋಗಬಾರ್ದು"

"ಮತ್ ಸರ್ ಹೇಳ್ಯಾರ್ರಿ ಅವ್ವ ಅಪ್ಪನ ಮಾತ್ ಕೇಳ್ರಿ, ಅವ್ರಿಗೆ ಸಹಾಯ ಮಾಡ್ರಿ ಅಂತ"

ಹೀಗೆ ಆತನ ಮುಗ್ಧತೆ ಸತ್ಯತೆ ವಿನಯವಂತಿಕೆ ಮುಕ್ತತೆ ನಮಗಿಷ್ಟವಾಗಿತ್ತು. ಕಂಡಿದ್ದನ್ನು ಕಂಡಂತೆಯೇ ಹೇಳುವ ಸ್ವಭಾವ. ಎಂದಿಗೂ ಸುಳ್ಳು ಹೇಳದ ಸತ್ಯಸಂಧತೆ ತಿರುಪತಿಯದ್ದು.

ಬರುಬರುತ್ತ ಆತ ನಾಲ್ಕನೆಯ ತರಗತಿಯಿಂದೀಚಗೆ ಬಹಳ ಚೂಟಿಯಾಗುತ್ತ ಹೋದ. ಹೈಪರ್ ಆ್ಯಕ್ಟಿವಿಟಿ(ಈ ಬಗ್ಗೆ ಮತ್ತೆ  ಯಾವಗಕಾದರೂ ವಿವರಿಸುತ್ತೇನೆ) ಇರುವ ಹುಡುಗನಾಗಿದ್ದ ತಿರುಪತಿ ಎಂದೂ ಬದಲಾಗಲಿಲ್ಲ. ಕುಟುಂಬದ ಜವಾಬ್ದಾರಿಗಳನ್ನೂ ಸಹ ಅರಿತಿದ್ದ ಅವನಿಗೆ ತನ್ನ ತಮ್ಮನನ್ನು ಶಾಲೆಗೆ ಕರೆತರುವ ಜವಾಬ್ದಾರಿ, ತನ್ನ ಓರಗೆಯವರೊಡನೆ ಸಹಕಾರದಿಂದಿದ್ದು ಶಾಲಾ ಪರಿಸರ ಕಾಪಾಡುತ್ತಿದ್ದ.. ಬೇಸಿಗೆ ರಜೆಯಲ್ಲಿ ಗೋ ಕಟ್ಟೆಯಿಂದ ನೀರು ತಂದು ಶಾಲಾವರಣದಲ್ಲಿ ನೆಟ್ಡಿದ್ದ 46 ಗಿಡಗಳಿಗೆ ನೀರುಣಿಸುತ್ತಿದ್ದ(ಬೇಸಿಗೆ ರಜೆಗೆ ತೆರಳಯವ ಮುನ್ನ ಅವನಿಗೆ ವಹಿಸಿಕೊಟ್ಟ ಜವಾಬ್ದಾರಿ ಅದು). ಮನೆಯಲ್ಲಿ ಎಲ್ಲರೂ ಕೂಲಿಗೆ ಹೋದಾಗ ತಮ್ಮಂದಿರಿಗೆ ಊಟ ಮಾಡಿಸಿ ಮತ್ತೇ ತನ್ನೊಂದಿಗೆ ಶಾಲೆಗೆ ಕರೆದುಕೊಂಡು ಬಂದು ತನ್ನ ತೊಡೆಯ ಮೇಲೆ ಅವರನ್ನು ಮಲಗಿಸಿಕೊಂಡೇ ಪಾಠ ಕೇಳುತ್ತಿದ್ದ.  ಒಂದೆರೆಡು ದಿನ ತಿರುಪತಿ ಬರದೇ ಹೋದಲ್ಲಿ ನಮಗೂ ಏನೋ ಕಳಕೊಂಡ ಅನುಭವ. ಇಂಥ ವಿದ್ಯಾರ್ಥಿ 6ನೆಯ ತರಗತಿ ಮೊರಾರ್ಜಿ ದೇಸಾಯಿ ಶಾಲೆಗೆ ಆಯ್ಕೆ ಆಗಿ ಹೋದ. ಮೂರು ವರ್ಷ ಅವನಿಲ್ಲದ ಕ್ಷಣಗಳು ಅಸಹನೀಯ. ತಂದೆ ರೈತ. ಮಗನ ಮೇಲೆ ಅಪಾರವಾದ ಕಾಳಜಿ. "ಸರ್ ನನ್ನ ಮಗ ಚೆಂದ ಓದಾಕತಾನಿಲ್ರಿ?" ಅಂತ ಯಾವಾಗಲೂ ವಿಚಾರಿಸುತ್ತಿದ್ದರು.
ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಆಂಗ್ಲ ಮಾಧ್ಯಮವಿತ್ತು. ಆಗಾಗ ನಮ್ಮ ಶಾಲೆಗೆ ಬಂದು "ಸರ್ ಈ ಪಾಠ ತಿಳ್ಯಾಕತಿಲ್ರೀ..ಸ್ವಲ್ಪ ಹೇಳ್ರಿ" ಅಂತ್ಹೇಳಿ "ಇಂಗ್ಲಿಷ್ ಓದಾಕ ಈಜಿ ಸರ್..ಆದ್ರ ಬರ್ಯಾಕ್ ಕಷ್ಟ ರೀ ಸರ್" ಅಂತಿದ್ದ..

ಈಗ ತಿರುಪತಿ ಸಿದ್ದಪ್ಪ 10 ನೆಯ ಪರೀಕ್ಷೆ ಬರೆದಿದ್ದಾನೆ. ಮೊನ್ನೆ ಹೇಗೋ ನನ್ನ ನಂಬರ್ ತಗೊಂಡು ಕರೆ ಮಾಡಿ ಮಾತಾದ.. ಅವನ ಜತೆ ಮಾತಾಡುತ್ತಲೇ ಕಣ್ಣು ತುಂಬಿ ಬಂದ್ವು.. "ಎಷ್ಟ ಆಗಬಹುದು ಪರ್ಸೆಂಟೇಜ್?" ಅಂತ ಕೇಳಿದೆ.

"ಏನ್ ಸರ್.. ನೀವು ಎಲ್ಲಾರಂಗ ಪರ್ಸೆಂಟೇಜ್  ಕೇಳ್ತೀರಲ್ರಿ ಸರ್.. ನೀವ್ ಹೇಳಿದ ಗಾಂಧಿ ಕತಿ ಮರೆತಿಲ್ರಿ ಸರ್.. ನಾನು ಗಾಂಧೀವಾದಿ.. ಗಾಂಧಿಕಿಂತ 30% ಜಾಸ್ತಿ ತಗೋತಿನಿ ಬಿಡ್ರಿ"
ಅಂದಾಗ ನನಗೆ ಅವನ ಮಾತು ಸತ್ಯ ಅನ್ನಿಸಿತು.. ಫೇಲಾದ ಮಾತ್ರಕ್ಕೆ ಅಥವಾ ಪರ್ಸೆಂಟೇಜ್ ಆಗಲಿಲ್ಲ ಅನ್ನುವ ಕಾರಣಕ್ಕೆ ಬದುಕನ್ನೇ ಬಲಿ ಕೊಡುವವವರ ಮುಂದೆ ಈ ತಿರುಪತಿ ನಿಜಕ್ಕೂ ವಾಸ್ತವದ ಬದುಕನ್ನೇ ಬದುಕುತ್ತಿದ್ದಾನೆ ಅನ್ನಿಸಿ ಸುಮ್ಮನಾದೆ.

©ಲೇಖಕರು: ಸಚಿನ್ ಕುಮಾರ ಬ.ಹಿರೇಮಠ

Tuesday, 16 April 2019

ಫೇಸ್ ಬುಕ್ ಪಾಠಟಿಪ್ಪಣಿ - ೭ ಉದಯ ರವಿ ಬೆಳಗದೇ ಮುಳುಗಿದ್ದ..



ಆತ ಆಗಿನ್ನೂ 6 ನೆಯ ತರಗತಿ. ಬೇಡರ ಹುಡುಗ. ಸಣ್ಣ ನಗೆಯೊಂದನ್ನ ಸದಾ ತುಟಿಗೆ ಅಂಟಿಸಿಕೊಂಡಿರುತ್ತಿದ್ದ ಹುಡುಗ. ತುಂಬಾ ಚೆನ್ನಾಗಿ ಚಿತ್ರ ಬಿಡಿಸುತ್ತಿದ್ದ.. ಸ್ಮರಣ ಚಿತ್ರ ಅವನಿಗೆ ತುಂಬಾ ಇಷ್ಟ.. ಬರಬರುತ್ತ ಪ್ರಕೃತಿ ಚಿತ್ರಗಳನ್ನು ಇಷ್ಟಪಟ್ಟು ಬಿಡಿಸುತ್ತಿದ್ದ. ಸರಿಯಾಗಿ ವಾಟರ್ ಕಲರ್ ಬಳಸಲು ಬರದಿದ್ದರೂ ಸ್ಕೆಚ್ ಪೆನ್ನುಗಳನ್ನುಪಯೋಗಿಸಿ ಚಿತ್ರ ಬಿಡಿಸುತ್ತಿದ್ದ. ಪಠ್ಯದಲ್ಲೂ ಅಷ್ಟೇ ಬುದ್ಧಿವಂತ. ಗಣಿತದ ಸಮಸ್ಯೆಗಳೆಲ್ಲ ಅವನು ಕಲಿಯುವ ತನಕ ಮಾತ್ರ ಕಬ್ಬಿಣ್ಣದ ಕಡಲೆ.. ಕಲಿತಾದ ಮೇಲೆ‌ ಹುರಿಗಡಲೆ. ನನ್ನ ಬಹುಪಾಲು ಕೆಲಸಗಳಲ್ಲಿ ಸಹಾಯ ಮಾಡುತ್ತಿದ್ದ. ಪ್ರಯೋಗಗಳಿಗೆ ಸಲಕರಣೆಗಳನ್ನು ಜೋಡಿಸುವುದು. ಸಸ್ಯಗಳ ಎಲೆ ಹೂವು ಸಂಗ್ರಹಿಸುವುದು. ವೃತ್ತಪತ್ರಿಕೆಗಳಲ್ಲಿನ ವಿಜ್ಞಾನ ಸಂಗತಿಗಳನ್ನು ಸಂಗ್ರಹಿಸುವುದು ಇತ್ಯಾದಿ.
ಅವನ ಕಲೆಗೆ ಬೆಲೆ ಎಂಬಂತೆ ಆತ ಬಿಡಿಸುತ್ತಿದ್ದ ಚಿತ್ರಗಳನ್ನು‌ ಕರ್ಮವೀರ ವಾರಪತ್ರಿಕೆಯ ಚಿಣ್ಣರ ಚಿತ್ತಾರ ಅಂಕಣಕ್ಕೆ ಕಳುಹಿಸಿಕೊಡುತ್ತಿದ್ದೆ. ಆಗಾಗ ಕೆಲವು ಪ್ರಿಂಟಾದಾಗ ನಮಗೆಲ್ಲ ಹಿಗ್ಗೋ ಹಿಗ್ಗು. ಆ ನಗುಮುಖದ‌ ಹುಡುಗನ ಹೆಸರು #ರವಿ ಅಂತ.

ಹೀಗೆ ಸದಾ ಚೂಟಿಯಾಗಿದ್ದ ಆ ಹುಡುಗ ಬರಬರುತ್ತ ತುಸು ಒರಟನಾಗುತ್ತ ಹೋದ. ಅವನ ತುಟಿಗಂಟಿರುತ್ತಿದ್ದ ನಗೆ ಮಾಯವಾಯಿತು. ಹದಿಹರೆಯದ ವಿದ್ಯಾರ್ಥಿಗಳಲ್ಲಿ ಸಹಜವಾಗಿ ಕಾಣಿಸುವ Egoism(ಸ್ವಪ್ರತಿಷ್ಠೆ) ಅವನಲ್ಲಿ ತುಸು ಹೆಚ್ಚಾಗಿಯೇ ಇತ್ತು. ವಿನಯವಂತ ವಿದ್ಯಾರ್ಥಿ ಏಕಾಕಿ ಒರಟನಾಗುತ್ತ ಬದಲಾಗುತ್ತ ಬಂದ. ಎದುರು ಉತ್ತರ ನೀಡುವುದು, ಬೇಕಾಬಿಟ್ಟಿ ಮಾತನಾಡುವುದು, ವಿನಾಕಾರಣ ಇತರರೊಂದಿಗೆ ಜಗಳ ಹೀಗೆ ಮುಂದುವರೆದು  ಒಂದು ಸಲ ಅದೇ ತರಗತಿಯ ವಿದ್ಯಾರ್ಥಿನಿಯೊಬ್ಬಳಿಗೆ ಪ್ರೇಮ ಪತ್ರ ಬರೆದ ಎಂಬ ದೂರು ಅವನ ಮೇಲೆ ಬಂತು. ಪ್ರಾಥಮಿಕ ಶಾಲೆ ಮಕ್ಕಳಲ್ಲಿ ಟಿವಿ ಮೊಬೈಲ್ ಮಾಧ್ಯಮಗಳಿಂದಾಗಿ ಈಗೀಗ ಇಂಥ ಹುಚ್ಚು ಆಲೋಚನೆಗಳ ಸಮಷ್ಠಿ(Infatuation) ಅದ್ಹೇಗೋ ಆವರಿಸಿಬಿಡುತ್ತದೆ. ಅವನ ಭಾವನಾತ್ಮಕ ಬದಲಾವಣೆಗಳಿಗೆ ಕಾರಣ ಹುಡುಕುವಷ್ಟು ಸಮಯ ತಾಳ್ಮೆ ನಮ್ಮಲ್ಲಿರಲಿಲ್ಲ. ಹಳ್ಳಿಯಲ್ಲಿ ಇಂಥ ದೂರುಗಳಿಗೆ ತತ್ ಕ್ಷಣವೇ ಪರಿಹಾರ ಸಿಗಬೇಕು.. "ನೀವು ಶಿಕ್ಷೆ ಕೊಡುತ್ತೀರಾ ಇಲ್ಲ ನಾವೇ ಶಿಕ್ಷಿಸಬೇಕಾ" ಅಂತೆಲ್ಲ ಆ ವಿದ್ಯಾರ್ಥಿನಿಯ ಪಾಲಕರು ಕೇಳಿದಾಗ ನಮ್ಮ ಎದುರು ಮೊದಲ ಆಯ್ಕೆ ಮಾತ್ರ ಇತ್ತು.ಶಿಕ್ಷೆ ನೀಡಲಾರದ ಸ್ಥಿತಿ ನಮ್ಮದು. ಆದರೂ ನಮ್ಮ ಶಾಲೆಯಲ್ಲಿನ ನನ್ನ ಇನ್ನೋರ್ವ ಸಹೋದ್ಯೋಗಿಯಾಗಿದ್ದ ಗೋಣೆಪ್ಪ ಸರ್ ಗೆ ಇದು ಸರಿ ಕಾಣಲಿಲ್ಲ. ಕೈಗೆ ಎರಡೇಟು ನೀಡಿಯೇಬಿಟ್ಟರು. ನಮ್ಮ ಮೆಚ್ಚಿನ ವಿದ್ಯಾರ್ಥಿಯಾಗಿದ್ದ ಅವನನ್ನು ಶಿಕ್ಷಿಸುವಾಗ ನಾವೆಲ್ಲ ತುಂಬ  ಸಂಕಟ ಪಟ್ಟೆವು.  ಆತ ಆ ಏಟುಗಳಿಂದ ಸಾಕಷ್ಟು ನೊಂದುಕೊಂಡ. ತಿಳಿಯದೇ ತಪ್ಪಾಗಿದೆ ಮುಂದೆ ಹೀಗೆ ಆಗಲ್ಲ‌ ಎಂದೆಲ್ಲ ಕ್ಷಮೆ ಕೋರಿದ.

ಮುಂದಿನ ಮೂರು ತಿಂಗಳು ತುಂಬ ಬದಲಾದ. ಮತ್ತದೇ ವಿನಯವಂತಿಕೆ, ಸೃಜನಶೀಲತೆ ತನ್ನ ತರಗತಿಯ ವಿದ್ಯಾರ್ಥಿನಿಯರೊಂದಿಗೆ ಸೌಜನ್ಯಯುತ ವರ್ತನೆ. ಹೇಗೆ ಇದೆಲ್ಲ ಅಂತ ನಮಗೆ ಆಶ್ಚರ್ಯ. ಅವನ ಮನೆಗೆ ಯಾವುದೋ ಕಾರ್ಯಕ್ರಮ ನಿಮಿತ್ತ ಭೇಟಿ ಕೊಟ್ಟಾಗ ಗೊತ್ತಾದ ಸಂಗತಿ ಹೀಗಿತ್ತು. ಆತನ ಮನೆಯಲ್ಲಿ ನಿರಂತರವಾಗಿ ತಂದೆ ತಾಯಿಯ ಮಧ್ಯೆ ಜಗಳ. ಅಣ್ಣ ಹಾಗೂ ಅಪ್ಪನ ಮಧ್ಯೆ ಜಗಳ. ಅಣ್ಣ ಹಾಗೂ ಅತ್ತಿಗೆಯ ಮಧ್ಯೆ ಜಗಳ. ಈ ಜಗಳಗಳಿಂದಾಗಿ ಅವನ ಮನೆಯ ವಾತಾವರಣ ಅಸಹ್ಯವಾಗಿತ್ತು. ತನ್ನ ಮನೆಯ ವಾತಾವರಣವನ್ನು ಸರಿಪಡಿಸಲಾಗದ ಅಸಹಾಯಕ‌ಸ್ಥಿತಿ ಆ ಹುಡುಗನದ್ದು. ಅವನಿಗೆ ನೆಮ್ಮದಿ ಸಿಗುತ್ತಿದ್ದುದೇ ಶಾಲೆಯಲ್ಲಿ. ಕೆಲವು ಸಲ ತರಗತಿಯಲ್ಲಿ ಆತ ಅವಮಾನಕ್ಕೊಳಗಾದಾಗ ಅದನ್ನು ಹತ್ತಿಕ್ಕಲು ಅವನು ಸಿಟ್ಟಿಗೇಳುತ್ತಿದ್ದ.‌ಇದೇ ಕ್ರಮೇಣ ಅವನನ್ನ‌ ಋಣಾತ್ಮಕವಾಗಿ ಬದಲಾಯಿಸುತ್ತ ಹೋಗಿತ್ತು. ಮುಂದೆ ಅವನ ಅಣ್ಣ ಅತ್ತಿಗೆ ಬೇರೆ ಕಡೆ ಮನೆ ಮಾಡಿದಾಗ ತುಸು ಇವನಿಗೆ ನಿರಾಳವೆನಿಸಿತ್ತು. ಈ ಮಧ್ಯೆ ಏಟು ತಿಂದು ಬದಲಾಗಿದ್ದ.

ಎಂಟನೆಯ ತರಗತಿ ಇರುವಾಗಲೇ ಅವನ ಅಪ್ಪ ತೀರಿ ಹೋದರು. ಇದೇ ಜಗಳದಿಂದಾಗಿ ಕ್ರಿಮಿನಾಶಕ ಸೇವಿಸಿದ್ದಾಗಿ ಊರಿ‌ನಲ್ಲಿ ಗುಸು ಗುಸು. ಆತನ ತಂದೆಯ ಸಾವು ಅವನನ್ನ ಸಹಜವಾಗಿಯೇ ಅಸುರಕ್ಷಿತನನ್ನಾಗಿ ಮಾಡಿತು. ಮುಂದೆ ಶಾಲೆಯ ಫೀಸು,ಪುಸ್ತಕ ಇತರೆ ಖರ್ಚಿಗೆ ಅವನ ಅಣ್ಣನ‌ ಮೇಲೆ ಅವಲಂಬಿತನಾಗಬೇಕಾಯಿತು. ಅಣ್ಣನ ಸಿಡುಕು ಮಾತುಗಳಿಂದ ಮತ್ತೇ ರವಿ ತನ್ನ ಸೀಮಿತವನ್ನು ಕಳೆದುಕೊಳ್ಳುತ್ತ ಹೋದ. ಹತ್ತನೆಯ ತರಗತಿಯ ಹೊತ್ತಿಗೆ ಅಣ್ಣನಿಗೆ ಹೊಲದಲ್ಲಿ ಸಹಾಯ ಮಾಡುತ್ತ ಇತ್ತ ಎಸ್.ಎಸ್.ಎಲ್.ಸಿ ಪರೀಕ್ಷೆ ಗೆ ಓದಿಕೊಳ್ಳುತ್ತ ಹೋದ.ಪರೀಕ್ಷಯೆನ್ನೂ ಬರೆದ. ಮತ್ತೇ ಪದೇಪದೇ ಜಗಳ, ಅಣ್ಣ,ತಾಯಿ,ಅತ್ತಿಗೆ ಮತ್ತೆ ಜಗಳ ಹೀಗೆ ನಡೆಯಿತು.

"ನಾಡಿದ್ದು ಎಸ್.ಎಸ್ ಎಲ್.ಸಿ  ರಿಸಲ್ಟ್  ರವಿ ಎಲ್ಲೋ?"
ಅಂದಾಗ ಮಾತ್ರ ಆಘಾತಕಾರಿ‌ ಸುದ್ದಿಯೊಂದು ಕಿವಿಗೆ ಬಿತ್ತು.

"ಸರ್ ರವಿ ನಿನ್ನೆ ರಾತ್ರಿಗಿ ಎಣ್ಣಿ(ಕ್ರಿಮಿನಾಶಕ) ಕುಡದಿದ್ರೀ.. ಜೇವರ್ಗಿಗ್ ಹೋಗೂತ್ನ್ಯಾಗ ಹಾದ್ಯಾಗ ಖಲಾಸ್ ಆಗ್ಯಾನ್ರಿ ಮುಂಜಾನೆ ಮಣ್ಣಾತ್ರಿ"

ಅಂತ ಓಣಿ ಹುಡುಗ್ರು ಹೇಳಿದರು. ಮನೆಯಲ್ಲಿ‌ನ ಕಿರಿಕಿರಿಯಿಂದ ರವಿ ಕ್ರಿಮಿನಾಶಕ‌ ಸೇವಿಸಿಬಿಟ್ಟಿದ್ದ. ನಮಗೆಲ್ಲ ಎದೆ ಭಾರವಾಗಿ ಬಡಿದುಕೊಳ್ಳಲಾರಂಭಿಸಿತು. ಕಣ್ಣಾಲಿಗಳಲ್ಲಿ ನೀರು ತುಂಬಿತು. ಇಂದಿನ ವಿದ್ಯಾರ್ಥಿಗಳಿಗೇನಾಗಿದೆ?ಕ್ಷುಲ್ಲಕ ಕಾರಣಗಳಿಗೆ ಸುಂದರ ಬದುಕನ್ನೇ ಬಲಿ ಕೊಡಲು ಇವರಿಗೆ ಅಧಿಕಾರ ನೀಡಿದವರಾರು? ಅಣ್ಣ-ಅತ್ತಿಗೆ, ತಾಯಿ  ಅನಕ್ಷರಸ್ಥರು. ಅವರ ಮಾತುಗಳನ್ನು ಅಷ್ಟು ಮನಸ್ಸಿಗೆ ತೆಗದುಕೊಳ್ಳುವ ಅನಿವಾರ್ಯತೆಯಾದರೂ ಏನು? ಒಂದು ಕುಟುಂಬದಲ್ಲಿನ‌ ಜಗಳಗಳಿಗೆ ಸಾವೇ ಪರಿಹಾರವೆಂಬತ್ತಿದ್ದರೆ ಬದುಕಿಗೇನು‌ ಅರ್ಥ.? ಮಾತಾಡಿ ಏನಾದರೂ ಒಂದು ಪರಿಹಾರ ನೀಡಬಹುದಿತ್ತು. ನಮ್ಮ ಶಿಕ್ಷಣ ಏಕೆ?ಹೇಗೆ?ಎಲ್ಲಿ ಎಡುವುತ್ತಿದೆ? ವಿದ್ಯಾರ್ಥಿಗಳಲ್ಲಿ ಏಕೆ ಈಗಿನ‌ ಶಿಕ್ಷಣ ವಾಸ್ತವ ಪ್ರಜ್ಞೆ ಬೆಳೆಸುತ್ತಿಲ್ಲ?ಅವನ ಸ್ಥಿತಿ ಹೇಗಿತ್ತೋ ಏನೋ ?

ಒಟ್ಟಿನಲ್ಲಿ  ಸದಾ ನಗುವ ಹುಡುಗನ ಮುಖ ಕಮಲ ಬಾಡಿ ಹೋಗಿತ್ತು.ಉದಯ ರವಿ ಬೆಳಗದೇ ಮುಳುಗಿದ್ದ.
ಎರಡು ದಿನಗಳ ನಂತರ ಎಸ್.ಎಸ್.ಎಲ್.ಸಿ ಫಲಿತಾಂಶ ಬಂತು. ರವಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದ. ಬದುಕಿನ ಪರೀಕ್ಷೆಯಲ್ಲಿ ಮಾತ್ರ ಫೇಲಾಗಿದ್ದ.
ಪ್ರತಿ ಸಲ ಎಸ್.ಎಸ್.ಎಲ್.ಸಿ ಫಲಿತಾಂಶ ಬಂದಾಗ ರವಿ ನಮ್ಮಲ್ಲಿ ಹುಟ್ಟುತ್ತಾನೆ.. ಕಣ್ಣ ಹನಿಯೊಂದಿಗೆ ಮುಳುಗುತ್ತಾನೆ..