ತರಗತಿಯೊಳಗೆ ಆತ ಸದಾ ಹಿಂದೆ ಕುಳಿತುಕೊಳ್ಳುತ್ತಿದ್ದ. ಕೆದರಿದ ಕೂದಲುಗಳ ಆಸೆ ಕಂಗಳ ಹುಡುಗ. ತನ್ನನ್ನು ಗದರುವವರ ಜೊತೆ ಬಯಸದೇ ಏಕಾಂಗಿಯಾಗಿರುತ್ತಿದ್ದ ಆತ, ಶಿಕ್ಷಕರೊಂದಿಗೆ ಮಾತ್ರ ಬಹಳವೇ ಆತ್ಮೀಯತೆಯಿಂದ ಇರುತ್ತಿದ್ದ. ಪ್ರತಿ ದಿನವೂ ಶಾಲೆಗೆ ತಪ್ಪದೇ ಬರುತ್ತಿದ್ದನಾದರೂ ತರಗತಿಯ ಚಟುವಟಿಕೆಗಳಲ್ಲಿ ಆತನದ್ದು ಅತೀವ ನಿರಾಸಕ್ತಿ. ನಾಲ್ಕೈದು ಸಲ ಹೇಳಿದಾಗ ಒಂದು ಬಾರಿ ಅವನಿಗೆ ಅರ್ಥವಾಗುತ್ತಿತ್ತು. ನಿಧಾನ ಗತಿಯ ಕಲಿಕೆಯಿರುವ ವಿದ್ಯಾರ್ಥಿ ಅಂತ ಮೇಲೆ ನೋಡಿದರೆ ಗೊತ್ತಾಗುತ್ತಿತ್ತು. ಇಂಥ ವಿದ್ಯಾರ್ಥಿಗಳು ಕೆಲವೇ ಕೆಲವರು ತರಗತಿಗಳಲ್ಲಿದ್ದರೂ ಈತ ಮಾತ್ರ ಅತೀವ ನಿಧಾನಗತಿ ತೋರುತ್ತಿದ್ದ. ಇಂಥವರ ಮೇಲೆ ಕ್ರಿಯಾ ಸಂಶೋಧನೆ ಮಾಡಬೇಕೂಂತ ನಾನು ಸಿದ್ಧನಾದೆ. ನಮ್ಮ ಇಲಾಖೆ ಸೂಚಿಸಿದಂತೆ ಕ್ರಿಯಾ ಸಂಶೋಧನೆಯ ರೂಪುರೇಷೆ ಸಿದ್ಧಗೊಳಿಸಿ ಆತನನ್ನು ಸೂಕ್ಷ್ಮವಾಗಿ ತರಗತಿಯಲ್ಲಿ ಅವಲೋಕಿಸಿದಾಗ ಅವನಿಗೆ ಡಿಸ್ಲೆಕ್ಸಿಯಾ ಎಂಬ ಸಣ್ಣ ಕಲಿಕಾ ನ್ಯೂನತೆ ಇತ್ತು. ನನಗೆ ಆಗ ನೆನಪಾಗಿದ್ದು ಅಮೀರ್ ಖಾನ್ ಅಭಿನಯದ 'ತಾರೆ ಜಮೀನ್ ಪರ್' ಚಲನಚಿತ್ರ. ಇದೊಂದು ಸುಲಭವಾದ ಕಲಿಕಾ ನ್ಯೂನತೆ. ನಾನೂ ಅಮೀರ್ ಖಾನ್ ನಂತೆ ಇವನನ್ನು ಕಡಿಮೆ ಅವಧಿಯಲ್ಲಿ ತಿದ್ದಬಲ್ಲೆ ಎಂದುಕೊಂಡಿದ್ದೆ. ಆದರೆ ಎಲ್ಲವೂ ತಲೆಕೆಳಗಾಯಿತು. ಈತನ ಹಿನ್ನೆಲೆಯೇ ಬೇರೆಯಾಗಿತ್ತು.
ಈತನ ಹೆಸರು ಲಕ್ಷ್ಮಣ. ಈತನ ತಂದೆ ಚಂದಪ್ಪ, ದಿನಗೂಲಿಯವ. ಜಾತಿಯಿಂದ ದಲಿತ. ಇತರರ ಮನೆಯ ಸುಣ್ಣ ಬಣ್ಣ ಮಾಡುವುದರ ಜೊತೆಗೆ ಅಡವಿ ಕೆಲಸ,ಹೊಲದ ಕೆಲಸ ಯಾವುದೇ ಕೆಲಸ ಸಿಕ್ಕರೂ ಅತೀ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದ. ನಾಲ್ಕು ಮಕ್ಕಳಲ್ಲಿ ಲಕ್ಷ್ಮಣ ಎರಡನೆಯವ. ಮನೆಯಲ್ಲಿ ತೀರಾ ಬಡತನ. ಕೆಲವು ಸಲ ದೂರದ ಮುಂಬಯಿಗೆ ಗುಳೇ ಹೋಗಿ ಹೊಟ್ಟೆ ಕಟ್ಟಿಕೊಂಡಿದ್ದುಂಟು. ಹೀಗಿರುವಾಗ ಲಕ್ಷ್ಮಣನೂ ಕೆಲ ಸಲ ಕೂಲಿಗೆ ಹೋಗುತ್ತಿದ್ದುಂಟು. ಆದರೆ ಚಂದಪ್ಪನಿಗೆ ತಿಳಿ ಹೇಳಿದ್ದರಿಂದ ಆತ ಲಕ್ಷ್ಮಣನನ್ನು ರಜೆ ಹೊರತು ಪಡಿಸಿ ಕೂಲಿಗೆ ಕಳಿಸುತ್ತಿರಲಿಲ್ಲ.
ಲಕ್ಷ್ಮಣ ಅಕ್ಷರಗಳನ್ನು ಗುರುತಿಸುವಲ್ಲಿ ಎಡವುತ್ತಿದ್ದ. ಕನ್ನಡದಲ್ಲಿ ಗ,ಸ,ತ,ಡ,ಶ,ಟ, ಮುಂತಾದ ಅಕ್ಷರಗಳು ಈತನ ಬರವಣಿಗೆಯಲ್ಲಿ ಪಾರ್ಶ್ವವಿಪರ್ಯಾಯಕ್ಕೆ ಒಳಪಡುತ್ತಿದ್ದವು. ಇಂಗ್ಲಿಷ್ ಅಕ್ಷರಗಳ ಸ್ಥಿತಿಯಂತೂ ಕನ್ನಡಕ್ಕಿಂತ ಭಿನ್ನವಾಗಿತ್ತು. ಇವನ ಈ ನ್ಯೂನತೆ ಹೋಗಲಾಡಿಸಲು ಕಾಪಿ ಬರಹ ಮಾಡಿಸಬೇಕೆಂದು ಕೊಂಡೆ. ಅದರಂತೆ ನಾನು ಅವನ ಕೈ ಹಿಡಿದೇ ಬರೆಸಲು ಪ್ರಾರಂಭಿಸಿದೆ. ಮೊದಮೊದಲು ಆತ ತುಂಬ ಸಂಕೋಚಪಟ್ಟುಕೊಳ್ಳುತ್ತಿದ್ದ. ಬರಬರುತ್ತ ಸರಾಗವಾಗಿ ಬರೆಯತೊಡಗಿದ. ಆದರೂ ನಾನು ಅವನ ಕೈ ಬೆರಳು ಹಿಡಿದಾಗ ಮತ್ತೇ ಆತ ಬೆಪ್ಪಾಗಿ ನೋಡುತ್ತಿದ್ದ.
ಒಂದು ದಿನ ಕಾಪಿ ಪುಸ್ತಕದಲ್ಲಿ ಈತ ತಪ್ಪಾಗಿ ಬರೆಯುತ್ತಿದ್ದ ಅಕ್ಷರಗಳನ್ನು ನಾನು ಅವನ ಕೈಬೆರಳು ಹಿಡಿದು ಬರೆಸಲನುವಾದೆ. ಆಗ ಆತ
"ಸರ್ ನೀವ್ ಸ್ವಾಮಗೋಳ್ರೀ?" ಅಂತ ಅಂದ.
ನಾನು "ಹೌದು" ಅಂದೆ.
"ಸರ್ ಸ್ವಾಮಗೋಳ ನಮ್ಮ ಮಂದೀನ ಮುಟ್ಟಸ್ಕೊಳ್ಳಾಂಗಿಲ್ರಿ" ಅಂದ ಆತ.
ನನಗೆ ಒಂದು ಕ್ಷಣ ಆಶ್ಚರ್ಯ ಗಾಗೂ ತಬ್ಬಿಬ್ಬಾಯಿತು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಂತಹ ವಿಷಣ್ಣ ಭಾವನೆಗಳನ್ನ ಅದ್ಹೇಗೆ ಹುಟ್ಟು ಹಾಕುತ್ತಾರೋ ಗೊತ್ತಿಲ್ಲ..
ಅದಕ್ಕೆ ನಾನು,
"ಲಕ್ಷ್ಮಣ, ಅದೆಲ್ಲ ತಪ್ಪು.. ನಾ ನಿಂಗ ಮುಟ್ಟಿನಿಲ್ಲೊ.. ಏನೂ ತಪ್ಪಿಲ್ಲ..ನಾವೆಲ್ಲ ಮನಷ್ಯಾರು.. ಜಾತಿಗೀತಿ ಏನೂ ಮಾಡಬಾರ್ದು.. ಹಿಂಗೆಲ್ಲ ಇನ್ನೊಮ್ಮೆ ಮಾತಾಡ್ಬಾರ್ದು..ನೀ ಸರಿಯಾಗಿ ಅಕ್ಷರ ಬರೆಯೊದ್ ಮಾತ್ರ ಕಲಿ" ಅಂತ್ಹೇಳಿದೆ. ಅಂದಿನ ಅಶ್ಪೃಶ್ಯತೆ ಇಂದಿಲ್ಲವಾದರೂ ಪಟ್ಟ ಬದ್ಧ ಹಿತಾಸಕ್ತಿಗಳು ಹೇಗೆಲ್ಲಾ ಜಾತಿಜಾತಿಗಳ ನಡುವೆ ವಿಷಮತೆ ಬಿತ್ತುತ್ತಿವೆಯಲ್ಲ ಅಂತ ನೋವೂ ಆಯಿತು. ನನ್ನ ಕ್ರಿಯಾ ಸಂಶೋಧನೆಯ ಫಲವಾಗಿ ಉಳಿದ ವಿದ್ಯಾರ್ಥಿಗಳಿಗೆ ಪರಿಹಾರ ಸಿಕ್ಕಿತಾದರೂ ಲಕ್ಷ್ಮಣ ಮಾತ್ರ ಸವಾಲಾಗಿದ್ದ. ಆದರೆ ಬರಬರುತ್ತ ಲಕ್ಷ್ಮಣ ಎಷ್ಟು ಬದಲಾದನೆಂದರೆ ಎಂಟನೆಯ ತರಗತಿವರೆಗೂ ಇಡೀ ಶಾಲೆಯ ಸ್ವಚ್ಛತೆ, ಭದ್ರತೆ ಅವನದೇ. ಶಾಲಾ ಲೈಬ್ರರಿಯಿಂದ ಪುಸ್ತಕಗಳನ್ನೂ ಓದಲು ಒಯ್ಯುತ್ತಿದ್ದ. ವಿಜ್ಞಾನದಲ್ಲಿನ ಪ್ರತೋಗಗಳಿಗೆ ಉಪಕರಣಗಳನ್ನು ಜೋಡಿಸುತ್ತಿದ್ದ. ಓದಿನಲ್ಲಿ ತುಸುವೇ ತುಸು ಪ್ರಗತಿಯಾದರೂ ನಿಧಾನ ಕಲಿಕೆ ಆತನದ್ದಾಗಿತ್ತು.. ಈಗೀಗ ಕೆಲವೇ ಕೆಲವು ಇಂಗ್ಲಿಷ್ ಅಕ್ಷರಗಳನ್ನು ಬರೆಯಲು ಮಾತ್ರ ಅವನು ಹರಸಾಹಸ ಪಡುತ್ತಿದ್ದ. ಜಾತಿ ಬಗ್ಗೆ ಅವನಲ್ಲಿ ಯಾವ ಸಂದೇಹವೂ ಇರಲಿಲ್ಲ. ಶಾಲೆಯಲ್ಲಿ ತನ್ನ ಏಕಾಂಗಿತನ ಕಳೆದುಕೊಂಡು ಎಲ್ಲರೊಂದಿಗೆ ಬೆರೆತು ಆಟವಾಡುತ್ತಿದ್ದ. ತನ್ನ ಕುಟುಂಬದ ಬಗ್ಗೆ ಅತೀವ ಪ್ರೀತಿ ಹೊಂದಿದ್ದ ಆತ "ಸರ್ ನಮ್ಮಪ್ಪ ಭಾಳ ಕುಡಿತಾನ್ರೀ.. ಈ ಸಲ ಮಳಿ ಇಲ್ರಿ..ಬಂಬಯಿಗೋಗ್ಬೇಕು. ಸಾಲ ಮಾಡ್ಯಾಣ್ರಿ..ನಾ ಚಂದ್ ಓದಿ ನೋಕರಿ ಮಾಡ್ತೇನ್ರಿ"
ಅಂತ ಆಗಾಗ ಭಾವುಕನಾಗಿ ಹೇಳುತ್ತಿದ್ದ. ಹಾಗೇ ಆತ ಮಾತನಾಡುವಾಗ ನನಗೆ ನನ್ನ ಬಾಲ್ಯವೇ ಕಣ್ಣಮುಂದೆ ಬರುತ್ತಿತ್ತು. ನಾನು ಶಾಲೆಯಿಂದ ಬೀಳ್ಕೊಡುವಾಗ ಆತ ಪೆಚ್ಚುಮೋರೆ ಮಾಡಿಕೊಂಡಿದ್ದ.
"ಸರ್, ಮತ್ತ ಇಲ್ಲೇ ಬರ್ರಿ ಸರ್" ಅಂತ ಬೀಳ್ಕೊಟ್ಟಿದ್ದ.
ಮೊನ್ನೆ ಅದೇ ಶಾಲೆಯ ನನ್ನ ಸಹೋದ್ಯೋಗಿಗಳು ಭೇಟಿಯಾಗಿ ನಡೆದ ಅವಘಡದ ಬಗ್ಗೆ ಹೇಳಿದಾಗ ನನಗೆ ನಂಬಲಾಗಲಿಲ್ಲ. ಗ್ರಾಮದ ಬಂಧುಗಳ ಮದುವೆಯ ದಿನ ಮದುವೆಗೆ ಬಂದ ಲಕ್ಷ್ಮಣ ಅಲ್ಲಿಯೇ ನಿಂತು ಅವೈಜ್ಞಾನಿಕ ಕನೆಕ್ಷನ್ ನಿಂದಾಗಿ ಹಿಡಿದ ತಂತಿಯಲ್ಲಿ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ದುರ್ಮರಣಕ್ಕೀಡಾಗ ಸಂಗತಿ ಕೇಳಿ ಎದೆ ಭಾರವಾಯಿತು. ಕಣ್ಣುಗಳಿಂದ ಆಶ್ರುಧಾರೆ ತಡೆಯಲಾಗಲಿಲ್ಲ. ದೇವರನ್ನೂ ಕ್ಷಮಿಸಲಾಗಲಿಲ್ಲ.. ಈಗಲೂ ಅನೇಕ ಸಲ ಲಕ್ಷ್ಮಣ ಇನ್ನೂ ಅಲ್ಲಿಯೇ ಆಡಿಕೊಂಡಿದ್ದಾನೆ ಎನ್ನುವಂತೆ ಅನ್ನಿಸುತ್ತದೆ. ಅವನ ನೆನಪುಗಳ ಮೆರವಣಿಗೆ ಮತ್ತೇ ಮತ್ತೇ ಹೃದಯವನ್ನು ಹನಿಸುತ್ತದೆ...ಅರಳದ ಹೂವಾಗಿ ಲಕ್ಷ್ಮಣ ಸದಾ ನೆನಪಾಗುತ್ತಿದ್ದಾನೆ.
©ಲೇಖಕರು : ಸಚಿನ್‌ಕುಮಾರ ಬ.ಹಿರೇಮಠ